ತಪ್ಪಾಯ್ತು ತಿದ್ಕೋತೀವಿ
ಮೈಸೂರಿನಿಂದ ನ್ಯಾಯವಾದಿಗಳಾದ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- 'ಅ.25ರ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ಮೈಸೂರಿನ ಕೊ.ಸು. ನರಸಿಂಹಮೂರ್ತಿಯವರು ಬರೆದ ಪತ್ರ ಪ್ರಕಟವಾಗಿದೆ. ಅ.13ರ ಮೈಸೂರು ಆವೃತ್ತಿಯ ಮುಖಪುಟದಲ್ಲಿ 'ಅಂಬಾರಿ ಗಜಪಡೆಗೆ ವಿಶೇಷ ಕುಸುರೆ' ಶೀರ್ಷಿಕೆಯಲ್ಲಿ ಬಳಸಿದ 'ಕುಸುರೆ' ಪದದ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.'
'ಕೊ.ಸು. ನರಸಿಂಹಮೂರ್ತಿ ಅವರ ಪ್ರಕಾರ 'ಕುಶಲ ಕೈಕೆಲಸಗಳಿಂದ ರಚಿಸುವ ಕಲೆಗೆ ಕುಸರಿ ಕಲೆ ಎನ್ನುತ್ತಾರೆ. ಕುಸುರು ಪದ ಕೂಡ ಇದನ್ನೇ ಹೇಳುತ್ತದಂತೆ. ಕುಸುರೆ ಪದ ಪ್ರಯೋಗ ಸರಿಯಿಲ್ಲವಂತೆ. ಇದಕ್ಕೆ ಆಧಾರ ಕಸಾಪದ ಸಂಕ್ಷಿಪ್ತ ನಿಘಂಟು ಪುಟ 227-1935ರ ಅವೃತ್ತಿಯನ್ನು ನೋಡಬಹುದು' ಎಂದಿದ್ದರು.'
'ಪಾಪ ಕೊ.ಸು.ನರಸಿಂಹಮೂರ್ತಿಯವರು ಎಷ್ಟೊಂದು ಸರ್ಕಸ್ ಮಾಡಿದ್ದಾರೆ. ಆದರೆ ಅವರು ಅ.13ರ 'ಕನ್ನಡಪ್ರಭ'ವನ್ನು ಪೂರ್ವಗ್ರಹ ಪೀಡಿತರಾಗಿ ನೋಡಿದ್ದಾರೆಯೇ ಹೊರತು ಓದಿಲ್ಲ. ಇದು ಸತ್ಯ. ಅವರು ಶೀರ್ಷಿಕೆ ಮಾತ್ರ ಓದಿದ್ದಾರೆ. ಜೊತೆಗೆ ಆನೆ ಚಿತ್ರ ನೋಡಿದ್ದಾರೆ. ಸುದ್ದಿಯನ್ನೇ ಓದಿಲ್ಲ. ಇದು ನೂರಕ್ಕೆ ನೂರು ಸತ್ಯ. ಏಕೆಂದರೆ ಕೊ.ಸು. ನರಸಿಂಹಮೂರ್ತಿಯವರು ಆನೆಯ ಚಿತ್ರ ಮತ್ತು ಸುದ್ದಿಯ ಶೀರ್ಷಿಕೆ ನೋಡಿದ ತಕ್ಷಣ ಆ ಸುದ್ದಿ ಆನೆಯ ಮೈಮೇಲೆ ಬರೆದ ಚಿತ್ರಕ್ಕೆ ಸಂಬಂಧಿಸಿದ್ದು ಎಂದು ಅಪಾರ್ಥಮಾಡಿಕೊಂಡು, ಪೋಸ್ಟ್ಕಾರ್ಡ್ ತೆಗೆದುಕೊಂಡು ತಕ್ಷಣ ಪತ್ರ ಗೀಚಿದ್ದಾರೆ. ತಪ್ಪುಮಾಡಿದ್ದಾರೆ. ಮುನ್ನುಡಿ-ಬೆನ್ನುಡಿ ಓದಿ ವಿಮರ್ಶೆ ಬರೆಯುವ ವಿಮರ್ಶಕರಂತೆ ಅವರು ಪತ್ರ ಬರೆದಿದ್ದಾರೆ.'
'ಬಿ. ಶೇಖರ ಗೋಪಿನಾಥಂ ಬರೆದ ಆ ಸುದ್ದಿಯನ್ನು ಕೊ.ಸು. ನರಸಿಂಹಮೂರ್ತಿಯವರು ಓದಿದ್ದರೆ, ಅವರು ದಾರಿತಪ್ಪುತ್ತಿರಲಿಲ್ಲ. ಅಲ್ಲಿ 'ಕುಸುರೆ' ಅಂದರೆ ಕುಸುರಿ ಕಲೆಯಲ್ಲ. 'ಕುಸುರೆ' ಅಂದರೆ ಗರಿಕೆ ಹುಲ್ಲಿನಲ್ಲಿ ಗ್ಲುಕೋಸ್ ಪೌಡರ್, ಅವಲಕ್ಕಿ, ಬೆಲ್ಲ, ತೆಂಗಿನಕಾಯಿ ತುರಿಕಟ್ಟಿ, ಉಂಡೆ ಆಕಾರದಲ್ಲಿ ಸಿದ್ಧಪಡಿಸಲಾಗುವ ವಿಶೇಷ ಆಹಾರ.'
'ಕನ್ನಡಪ್ರಭದಿಂದ ತಪ್ಪಾಗಿಲ್ಲ. ತಪ್ಪು ಮಾಡಿರುವುದು ಕೊ.ಸು. ನರಸಿಂಹಮೂರ್ತಿಯವರು. ತಿದ್ದಿಕೊಳ್ಳಬೇಕಾದವರೂ ಅವರೇ. ಪೂರ್ವಗ್ರಹಪೀಡಿತರಾಗಿ ಪತ್ರಿಕೆ ನೋಡಿದ ಕೊ.ಸು.ನ, ಕಸಾಪದ ಸಂಕ್ಷಿಪ್ತ ನಿಘಂಟನ್ನು ಓದುವ ಬದಲು ಅ.13ರ ಸುದ್ದಿಯನ್ನು ಮನಸ್ಸಿಟ್ಟು, ಸಹೃದಯದಿಂದ ಓದಿದ್ದರೆ ಬಹುಶಃ ಪತ್ರ ಬರೆಯುತ್ತಿರಲಿಲ್ಲ. ತಾವೇ ತಪ್ಪು ಮಾಡಿ ಆ ತಪ್ಪನ್ನು 'ಕನ್ನಡಪ್ರಭ'ಕ್ಕೆ ಹೊರಿಸಿದ್ದಾರೆ. ಈ ತಪ್ಪಿಗಾಗಿ ಕೊ.ಸು. ನರಸಿಂಹಮೂರ್ತಿಯವರಿಗೆ ಅ.13ರ ಪತ್ರಿಕೆಯನ್ನು ತೆರೆದು, ಓದಿ, ತಪ್ಪನ್ನು ತಿದ್ದಿಕೊಳ್ಳುವ ಶಿಕ್ಷೆ ವಿಧಿಸಬಹುದಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು' ಎಂದಿದ್ದಾರೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

