ಅಜ್ಜಿಯ ಸಾವು ಒರೆಸಿತು ನೋವು
ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಒಂದು ತುತ್ತಿಗೂ ಪರದಾಡುವ ಸ್ಥಿತಿಯಲ್ಲಿ ಮನೆಯ ಹಿರಿಯಜ್ಜಿಯ ಸಾವು. ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲದೆ ಊರ ಗೌಡರ ಬಳಿ ಹೋದಾಗ ಮಗನನ್ನು ದುಡಿಮೆಗೆ ಬಿಟ್ಟರೆ ಮಾತ್ರ ಐದುನೂರು ರುಪಾಯಿ ಕೊಡುವುದಾಗಿ ಖಡಾಖಂಡಿತವಾಗಿ ನುಡಿದದ್ದನ್ನು ಕೇಳಿದ ಬಾಲಕ ತುಂಬಾ ನೊಂದುಕೊಂಡ. ಐದುನೂರು ರು. ತೀರಿಸಲು ಗೌಡರ ಮನೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಬಿಡುವಿಲ್ಲದೆ ಅನೇಕ ತಿಂಗಳುಗಳ ಕಾಲ ದುಡಿದದ್ದಾಯಿತು. ಈ ಸಂದರ್ಭದಲ್ಲಿ ಅನುಭವಿಸಿದ ಅವಮಾನ, ಅಮಾನವೀಯ ನಡವಳಿಕೆ ಆ ಬಾಲಕನ ಮೇಲೆ ಅಗಾಧ ಪರಿಣಾಮ ಬೀರಿತು. ತನ್ನ ಪರಿಸ್ಥಿತಿ ಇನ್ನಾರಿಗೂ ಬರಬಾರದು ಎಂದುಕೊಂಡ. ತಾನು ದೊಡ್ಡವನಾದ ಮೇಲೆ ಚೆನ್ನಾಗಿ ದುಡಿದು ಸಂಪಾದಿಸಿದ ಹಣದಿಂದ ತನ್ನ ಹಾಗೇ ಕಷ್ಟಪಡುವ ಜನರಿಗೇನಾದರೂ ಮಾಡಬೇಕೆಂಬ ಛಲ ಬಂತು. ಓದಿದ್ದು ಸ್ವಲ್ಪವಾದರೂ ತನ್ನ ಬುದ್ಧಿಶಕ್ತಿಯಿಂದ ಕಷ್ಟಪಟ್ಟು ದುಡಿದು ಹಣ ಸಂಪಾದಿಸಿ, ನೊಂದವರ ಕಣ್ಣೀರು ಒರೆಸುವ ಕಾಯಕಕ್ಕೆ ಮುಂದಾದ. ಇದೊಂದು ಅಜ್ಜಿ ಕಥೆಯಲ್ಲ. ತರೀಕೆರೆ ತಾಲೂಕು ಹುಣಸಘಟ್ಟದ ಹಿಂದುಳಿದ ವರ್ಗದ ಬಡ ಕುಟುಂಬದಿಂದ ಬಂದ ಗೋಪಿಕೃಷ್ಣ ಅವರ ಜೀವನಗಾಥೆ. ಸಂಪಾದಿಸಿದ ಹಣದಲ್ಲಿ ಕೆಲಭಾಗವನ್ನು ಸಮಾಜ ಸೇವೆಗೆ ಮೀಸಲಾಗಿಟ್ಟಿದ್ದಾರೆ. ಇಂದಿಗೂ ತಾಲೂಕಿನ ಯಾವುದೇ ಹಳ್ಳಿಯಲ್ಲಿ ಸಾವಾದರೂ ಅಲ್ಲಿ ಗೋಪಿಕೃಷ್ಣ ಅವರ ಸೇವೆ ಇದ್ದೇ ಇದೆ.
ಸಾವು ಉಂಟಾದ ಬಗ್ಗೆ ಪೋನ್ ಕರೆಬಂದರೆ ಸಾಕು, ಆ ಕುಟುಂಬಕ್ಕೆ ಅಂತ್ಯಸಂಸ್ಕಾರಕ್ಕಾಗಿ ಸೂಕ್ತ ಹಣಕಾಸಿನ ನೆರವನ್ನು ತಕ್ಷಣ ನೀಡುವ ಈತ ಕಳೆದ ಎಂಟು ವರ್ಷಗಳಿಂದ ಹೀಗೆ ಅಸಂಖ್ಯಾತ ಬಡವರಿಗೆ ಸೇವೆ ಮಾಡುತ್ತಾ ಬಂದಿದ್ದಾನೆ. ಪ್ರಸ್ತುತ ಚಿತ್ರದುರ್ಗದಲ್ಲಿ ನಲೆಸಿರುವ ಗೋಪಿಕೃಷ್ಣ ತನ್ನ ತವರು ತಾಲೂಕಿನ ಬಡಜನರಿಗೆ ಸೇವೆ ಸಲ್ಲಿಸುತ್ತಿದ್ದು ಜನರ ಪ್ರೀತಿ ಗಳಿಸಿದ್ದಾನೆ. ಅಲ್ಲದೆ ಬಡಕುಟುಂಬದ ವಿವಾಹಕ್ಕೆ, ಮನೆಕಟ್ಟಿಸಲು, ವೈದ್ಯಕೀಯ ಚಿಕಿತ್ಸೆಗಾಗಿ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್, ಸಮವಸ್ತ್ರ ಮುಂತಾದ ಪರಿಕರಗಳನ್ನು ನೀಡಲು, ಅನಾಥ ವೃದ್ಧರಿಗೆ ನೆರವು ಹೀಗೆ ಹತ್ತು ಹಲವು ರೀತಿಯಲ್ಲಿ ನೆರವಾಗುತ್ತಿದ್ದಾನೆ. ಎಷ್ಟೋ ಜನರಿಗೆ ಆಟೋರಿಕ್ಷಾ ಕೊಡಿಸಿ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾನೆ.
ಈ ಸೇವೆಯನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿರುವ ಈ ಯುವಕ ತನ್ನ ಸ್ವಂತ ದುಡಿಮೆಯಿಂದ ಅನೇಕ ಉದ್ಯಮಗಳನ್ನು ಸ್ಥಾಪಿಸಿ, ಅದರಲ್ಲಿ ಯಶಸ್ವಿಯಾಗಿ ಸಾಕಷ್ಟು ಹಣ ಗಳಿಸಿದ್ದಾನೆ. ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ನೀಡುವ ಈತನ ನಿರ್ಧಾರದಿಂದ ಅನೇಕ ಕುಟುಂಬಗಳು ಗೌರವಯುತ ಜೀವನ ನಡೆಸುವಂತಾಗಿದೆ. ಸಹಾಯ ಪಡೆದು ಮನದುಂಬಿ ಹರಸುವ ನಾಲ್ಕು ಮಾತುಗಳೇ ತನಗೆ ಸ್ಫೂರ್ತಿ ನೀಡುತ್ತಿವೆ ಎಂದು ಹೇಳುವ ಗೋಪಿಕೃಷ್ಣ ಅವರ ಸೇವೆ ಇತರರಿಗೆ ಮಾರ್ಗದರ್ಶಿಯಾಗಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

