ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಎಸ್‌ಡಿಎಂ ಕಾಲೇಜು ಉಜಿರೆಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಶೋಭಾ ವಗ್ಗರ್ ಪತ್ರ ಬರೆಯುತ್ತಾರೆ, 'ಶಶಿಧರ ಮೇಟಿ ಅವರ ಬರಹದಲ್ಲಿ ಪ್ರಕಟಗೊಂಡ 'ಬಳ್ಳಾರಿಯಲ್ಲಿ ಬಾಂಗ್ಲಾದೇಶದ ಬಾಲಕಿಯರ ಮಾರಾಟ ಜಾಲ' ಎನ್ನುವುದು ಶೋಚನೀಯ ಸಂಗತಿ. ಹಣದ ವ್ಯಾಮೋಹದಿಂದ ದಲಿತ ಮಹಿಳೆಯರನ್ನು 20- 30 ಸಾವಿರಕ್ಕೂ ಮಾರಾಟ ಮಾಡುತ್ತಿರುವುದು ಹೆಣ್ಣು ಕುಲಕ್ಕೆ ಕಳಂಕ ತಂದೊಡ್ಡುತ್ತಿದೆ. ಹೆಣ್ಣಿನ ಮಾನವನ್ನು ಬರೀ ಹಣದ ಅಳತೆಪಟ್ಟಿ ಇಟ್ಟು ಮಾಪನ ಮಾಡುವುದು ಎಷ್ಟು ಸರಿ?' ಎಂದಿದ್ದಾರೆ.
ಮೈಸೂರಿನ ಬಿ.ಕೆ.ಶ್ರೀಕಾಂತ್ ಅವರು ಪತ್ರ ಕಳುಹಿಸಿದ್ದಾರೆ. 'ಆ.19ರ 9ನೇ ಪುಟದಲ್ಲಿ(ರಾಜ್ಯ) 'ಆಲೂಗಡ್ಡೆ ಬೆಳೆಗಾರರಿಗೆ ಅಂಗಮಾರಿ' ಎಂದು ದಪ್ಪ ಅಕ್ಷರದಲ್ಲಿ ಶೀರ್ಷಿಕೆ ನೀಡಿದ್ದೀರಿ. ಅಂದರೆ ಬೆಳೆಗಾರನಾದ ರೈತನಿಗೇ ಅಂಗಮಾರಿ ರೋಗ ಬಂದಿದೆ ಎಂದ ಮೇಲೆ ಏನು ಮಾಡೋಕೆ ಆಗುತ್ತೆ? ಆಲೂಗಡ್ಡೆ ಬೆಳೆಗೆ ಬರಬೇಕಾಗಿದ್ದು, ಶೀರ್ಷಿಕೆ ಹಾಗೂ ವಿವರಣೆಯಲ್ಲಿ ಆಲೂಗೆಡ್ಡೆ ಎಂದು ಮುದ್ರಿತವಾಗಿದೆ. ಇದು ದೋಷವೋ? ಅಥವಾ ಎರಡನ್ನೂ ಉಪಯೋಗಿಸಬಹುದೋ ಗೊತ್ತಿಲ್ಲ! ಅದೇ ಶೀರ್ಷಿಕೆಯ ವಿವರಣೆಯಲ್ಲಿ ಆಲೂಗೆಡ್ಡೆ ಬೆಳೆಯುವ ಜಿಲ್ಲೆಗಳಲ್ಲಿ 'ಚಿಕ್ಕ ಬಳ್ಳಾಪುರು' ಎಂದಿದೆ. ಅದು ಚಿಕ್ಕಬಳ್ಳಾಪುರ ಎಂದಿರಬೇಕಿತ್ತು.'
'ಆ.20ರ ಪತ್ರಿಕೆಯ ಮುಖಪುಟದಲ್ಲೇ ಒಂದು ಪ್ರಮಾದ ಆಗಿದೆ (ತಪ್ಪಲ್ಲ!) 'ರೈಲಿಗೆ 28 ಬಲಿ' ಶೀರ್ಷಿಕೆಯ ವಿವರಣೆಯಲ್ಲಿ 'ಧಮಾರ ಘಾಟ್ ಸಮೀಪದ ಹೆಸರಾಂತ ಕತ್ಯಾನಿಸ್ಥಾನ್ ದೇವಸ್ಥಾನದಲ್ಲಿ 'ಶ್ರಾವಣ ಮಾಸದ ಕೊನೆಯ ಸೋಮವಾರ ಈಶ್ವರನಿಗೆ ಜಲಾಭಿಷೇಕ ಮಾಡಲು......' ಎಂಬ ವಿವರಣೆ ಇದೆ. ಆದರೆ ಸೆ.2 ಕೊನೆಯ ಶ್ರಾವಣ ಸೋಮವಾರವಲ್ಲವೇ?'
'ಅದೇ ದಿನದ ಪುಟ 8ರಲ್ಲಿ(ರಾಜ್ಯ), 'ಇಂದು ಹಲವು ರೈಲುಗಳ ಸಂಚಾರ ರದ್ದು' ಶೀರ್ಷಿಕೆಯಲ್ಲಿ ಬೆಂಗಳೂರು-ಮೈಸೂರು-ಬೆಂಗಳೂರು ರಾಜ್ಯರಾಣಿ ಎಕ್ಸ್‌ಪ್ರೆಸ್, ಮೈಸೂರು-ಯಶವಂತಪುರ-ಮೈಸೂರು ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದುಪಡಿಸಲವಾಗಿದೆ ಎಂದು ಪ್ರಕಟವಾಗಿದೆ. ಇದನ್ನು ಓದಿ ಈ ರೈಲುಗಳು ಇನ್ನು ಬರುವುದೇ ಇಲ್ಲ ಎಂದು ಹೆದರಿದ್ದಾರೆ' ಎಂದು ಶ್ರೀಕಾಂತ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕೆಯಲ್ಲಿನ ತಪ್ಪುಗಳನ್ನು ಗಮನಿಸುವುದು ಒಳ್ಳೆಯದು. ಆದರೆ ವಾಕ್ಯಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಗುಣ ಬೆಳೆಸಿಕೊಂಡರೆ ಒಳಿತು. ಅಲ್ಲಿ ಬಾಂಗ್ಲಾದೇಶದ ಬಾಲಕಿ ಎಂದು ಬರೆಯಲಾಗಿದೆಯೇ ಹೊರತು ದಲಿತ ಮಹಿಳೆ ಎಂದು ಎಲ್ಲಿಯೂ ಹೇಳಿಲ್ಲ. ವಿಚಾರಕ್ಕೆ ಸಂಬಂಧಿಸಿ ಸೆ.3ರ ಇದೇ ಅಂಕಣದಲ್ಲಿ ಉತ್ತರ ನೀಡಲಾಗಿದೆ. ಪತ್ರಿಕೆಯು ಯಾವುದೇ ಮಹಿಳೆ ಅಥವಾ ಪುರುಷರಿಗೆ ಅಳತೆಪಟ್ಟಿ ಇಟ್ಟು ಮಾಪನ ಮಾಡಿಲ್ಲ. ಬಳ್ಳಾರಿಯಲ್ಲಿ ನಡೆದ ಒಂದು ಅಮಾನವೀಯ ಘಟನೆಯ ಬಗ್ಗೆ ಪತ್ರಿಕೆ ಬೆಳಕು ಚೆಲ್ಲಿದೆಯಷ್ಟೆ.

 ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.