ಮಹಿಳೆಯರ ಮಾನ ಸಂರಕ್ಷಣೆ
ಮಹಿಳೆಯರನ್ನು ಚಲನ ಚಿತ್ರಗಳಲ್ಲಿ, ಜಾಹಿರಾತು ಮಾಧ್ಯಮದಲ್ಲಿ ಟಿ.ವಿ. ಕಾರ್ಯಕ್ರಮಗಳಲ್ಲಿ ತೀರ ಅಶ್ಲೀಲವಾಗಿ ಪ್ರದರ್ಶಿಸಿ, ಕೆಟ್ಟ ಅಭಿರುಚಿಯನ್ನು ಜನರಲ್ಲಿ ಬೆಳೆಸುವುದು ಹಾಗೂ ಆ ದಂಧೆಯಿಂದ ಹಣ ಗಳಿಸುವ "ವ್ಯವಹಾರವನ್ನು" ಪ್ರಾಯಶಃ ದೇಶದಲ್ಲಿ ಯಾರೂ ಸಹಿಸಬಾರದು.
ಸೃಜನಶೀಲ ಕಲಾ ಪ್ರಪಂಚದಲ್ಲಿ ಅಶ್ಲೀಲತೆಯ ಪ್ರದರ್ಶನವನ್ನು ನಿಷೇಧಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಮೊಟಕು ಮಾಡಿದಂತೆ ಆದೀತು ಎನ್ನುವ ವಾದ ಬೇರೆ. ಜಾಹಿರಾತಿಗಾಗಿ, ಪ್ರಚೋದನೆಗಾಗಿ, ಮಹಿಳೆಯರ ಅಂಗ ಸೌಷ್ಠವವನ್ನು ದುರುಪಯೋಗಪಡಿಸಿಕೊಳ್ಳುವುದು ಬೇರೆ. ಇವೆರಡೂ ಬೇರೆ ಬೇರೆ ವಿಷಯಗಳು. ಒಂದಕ್ಕೆ ಇನ್ನೊಂದನ್ನು ಗಂಟು ಹಾಕಿ ಸ್ತ್ರೀ ಕುಲವನ್ನೇ ಅಶ್ಲೀಲ ಪ್ರದರ್ಶನಕ್ಕೆ ಬಳಸಿಕೊಳ್ಳುವುದನ್ನು ಸಮರ್ಥಿಸುವುದು ಧೂರ್ತತನ. ಈಗಾಗಲೇ ಮಹಿಳೆಯರನ್ನು ಅಶ್ಲೀಲ ರೀತಿಯಲ್ಲಿ ಕಾಣುವಂತೆ ಬಿಂಬಿಸುವುದನ್ನು ನಿಷೇಧಿಸುವ ಕಾನೂನಿದೆ. ಆದರೆ ಅದು ಜಾರಿಯಾಗುವುದಕ್ಕೆ ಬಗೆ ಬಗೆಯ ಅಡೆತಡೆಗಳಿವೆ.
ಮೂಲಭೂತವಾಗಿ ಅಶ್ಲೀಲತೆ ಎಂದರೇನು? ಅದನ್ನು ನಿರ್ಧರಿಸುವವರು ಯಾರು? ಎನ್ನುವ ಪ್ರಶ್ನೆಗಳಿಗೆ ಸಿಗುವ ಉತ್ತರಗಳಲ್ಲಿ ವಿಪರೀತವಾದ ವೈರುಧ್ಯಗಳಿರುವುದೇ ಮುಖ್ಯವಾಗಿ ಈ ಕಾನೂನು ಜಾರಿಗೆ ಬರುವುದಕ್ಕೆ ಅಡ್ಡಿಯಾಗಿರುವುದು. ದಶಕಗಳ ಹಿಂದೆ, ಚಲನ ಚಿತ್ರಗಳಲ್ಲಿ ಚುಂಬನದ ಪ್ರದರ್ಶನ ಕುರಿತಂತೆ, ರಾಜ್ಖೋಸ್ಲಾ ಅವರ ವರದಿ ಸಾಕಷ್ಟು ವಾದ-ವಿವಾದವನ್ನು ಸೃಷ್ಟಿಸಿತ್ತು. ರಾಜ್ ಖೋಸ್ಲಾ ಅವರು ಚಲನ ಚಿತ್ರ ಪ್ರದರ್ಶನ ಹಾಗೂ ನೈತಿಕತೆ, ಸಾಮಾಜಿಕ ಪ್ರಜ್ಞೆ, ಸಮುದಾಯದ ಸ್ವಾಸ್ಥ್ಯ ಕುರಿತಂತೆ "ಸೆನ್ಸಾರ್ ಷಿಪ್" ವಿಚಾರದಲ್ಲಿ ನೀಡಿದ ವರದಿಯಲ್ಲಿ ಚುಂಬನದ ದೃಶ್ಯಗಳ ಪ್ರದರ್ಶನ ಪ್ರಸ್ತಾಪವಿದ್ದದ್ದು ಒಂದೇ ಒಂದು ಪ್ಯಾರಾದಲ್ಲಿ.
ಆದರೆ ಆ ಪ್ಯಾರಾ ಬಿಟ್ಟು, ರಾಜ್ ಖೋಸ್ಲಾ ಅವರ ವರದಿಯ ಇತರ ಅಂಶಗಳು ಹೆಚ್ಚು ಚರ್ಚೆಯಾಗಲೇ ಇಲ್ಲ. ಕಾಲ ಕ್ರಮೇಣ ಜನ ಅದನ್ನು ಮರೆತೇ ಬಿಟ್ಟರು. ಈಗಾಗಲೇ ಈ ವಿಚಾರದಲ್ಲಿ ಕೆಲವು ಹೈಕೋರ್ಟ್ಗಳು ನೀಡಿದ ತೀರ್ಪಿನಲ್ಲಿ ಚಲನಚಿತ್ರ ಪ್ರದರ್ಶನದ ಸಂಬಂಧದಲ್ಲಿ ವಿಶೇಷ ಕಾಯಿದೆಯ ಮೂಲಕ ರಚನೆಯಾದ ಸೆನ್ಸಾರ್ ಬೋರ್ಡ್ ಇರುವುದರಿಂದ ಆ ವಿಚಾರದಲ್ಲಿ ಇತರರು ತಲೆ ಕೆಡಿಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಲಾಗಿದೆ. ಆದರೂ ರಾಜ್ಯ ಸರ್ಕಾರದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಕಾಯಿದೆಯನ್ನು ಜಾರಿಗೆ ತರಲು ನಿಯಮಗಳನ್ನು ರಚಿಸಲು ಹೊರಟಿದ್ದಾರೆ.
ಈ ವಿಚಾರದಲ್ಲಿ ಇದು ಇನ್ನೊಂದು ಹೆಜ್ಜೆ. ರಾಜ್ಯ ಸರ್ಕಾರದ ಈ ಪ್ರಯತ್ನ ಯಶಸ್ವಿಯಾದರೆ, ಹಲವು ಜನವರ್ಗಗಳು ನಿಟ್ಟುಸಿರು ಬಿಡಬಹುದು. ಆದರೆ ಅಂತಿಮ ತೀರ್ಪು ಪ್ರಕಟವಾಗಬೇಕಾದ್ದು ನ್ಯಾಯಾಲಯಗಳಲ್ಲೇ.
ಮಂಗಳವಾರ ಸಚಿವ ಜಯಚಂದ್ರ ಅವರು ಪ್ರಕಟಿಸಿರುವ ಇನ್ನೊಂದು ಮಹತ್ವದ ವಿಷಯ ಎಂದರೆ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಶೂನ್ಯ ಸಹನೆ ನಿಯಮವನ್ನು ಜಾರಿಗೆ ತರುವುದು. ದೆಹಲಿಯ ಯುವತಿಯ ಪ್ರಕರಣ, ಬೆಂಗಳೂರಿನ ಲಾ ಸ್ಕೂಲ್ ವಿದ್ಯಾರ್ಥಿನಿಯ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯಗಳು ಕೆಲವೇ ತಿಂಗಳಲ್ಲೇ ತನಿಖೆ, ವಿಚಾರಣೆಯನ್ನು ಮುಗಿಸಿ ಆಪಾದಿತರನ್ನು ಶಿಕ್ಷೆಗೆ ಗುರಿಪಡಿಸುವ ಹಂತವನ್ನು ತಲುಪಿದ ಉದಾಹರಣೆಯನ್ನಿಟ್ಟುಕೊಂಡು ರಾಜ್ಯ ಸರ್ಕಾರ ಈ ಅಪರಾಧಗಳ ವಿಚಾರಣೆಗೆ ಹತ್ತು ವಿಶೇಷ ನ್ಯಾಯಾಲಯಗಳನ್ನು ರಚಿಸುವ ನಿರ್ಧಾರ ಮೆಚ್ಚುವಂತಹದ್ದೇ.
ಈ ವಿಶೇಷ ನ್ಯಾಯಾಲಯಗಳ ಸ್ಥಾಪನೆಯಾಗಿ, ಈಗಾಗಲೇ ಅದರ ಪರಿಣಾಮ ಜನರ ಕಣ್ಣಿಗೆ ಬೀಳುವಂತೆ ಆಗಿರಬೇಕಾಗಿತ್ತು. ಸರ್ಕಾರ ಈ ವಿಷಯದಲ್ಲಿ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ. ಮಹಿಳೆಯರು ಕೆಲಸ ಮಾಡುವ ಕಾರ್ಯಾಲಯಗಳು, ಕಾರ್ಖಾನೆಗಳು ಹಾಗೂ ಇತರ ಕಡೆಗಳಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುವುದರ ವಿರುದ್ಧದ ನಿಯಮಗಳ ಉಲ್ಲಂಘನೆಯ ಪ್ರಕರಣಗಳೂ ಈ ವಿಶೇಷ ನ್ಯಾಯಾಲಯಗಳಲ್ಲೇ ವಿಚಾರಣೆಗೆ ಬರುವುದು ಸೂಕ್ತ. ಆದರೆ ಈ ಎಲ್ಲ ಕಾಯಿದೆ, ನಿಯಮಗಳೂ ಮಧ್ಯಮ ವರ್ಗ ಹಾಗೂ ಮೇಲ್ವರ್ಗಗಳಿಗೇ ಅನುಕೂಲವಾಗುವಂತಹದ್ದು. ಶ್ರಮಿಕ ಮಹಿಳೆಯರಿಗೆ ವಿಶೇಷ ಗಮನ ಕೊಡುವ ವ್ಯವಸ್ಥೆ ಕುರಿತ ಚಿಂತನೆ ಅಗತ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

