ವಿನಾಶದ ಮೂಲಕ ಒಳಿತು ಸಾಧ್ಯವೇ?
ದಲಿತ ಚಳವಳಿಯ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತಾಡುತ್ತಾ, ಖ್ಯಾತ ಸಾಹಿತಿ ದೇವನೂರ ಮಹಾದೇವರವರು, ಮುಂಬಯಿಯ, ಹೆಚ್ಚಾಗಿ ದಲಿತರೇ ವಾಸವಾಗಿರುವ ಕೊಳೆಗೇರಿಯ ಪಕ್ಕದಲ್ಲೇ ಅಂಬಾನಿ ಕುಟುಂಬದವರು ನಿರ್ಮಿಸಿಕೊಂಡಿರುವ ಅರಮನೆಯಂಥಾ ನಿವಾಸವನ್ನೂ, ಬೆಂಗಳೂರಿನ ಬ್ರಾಹ್ಮಣ ಹಾಗೂ ಲಿಂಗಾಯತ ವರ್ಗದವರು ಬಹುಪಾಲು ತಮ್ಮ ತಮ್ಮ ಪಂಗಡದವರಿಗಾಗಿಯೇ ರೂಪಿಸಿಕೊಂಡಿರುವ ಬಡಾವಣೆಗಳನ್ನೂ, ಪ್ರಾಣಾಪಾಯವಾಗದಂತೆ ನಾಶಪಡಿಸಬೇಕೆಂದು ಕರೆಕೊಟ್ಟಿದ್ದಾರೆ. ತಮ್ಮ ಕರೆಗೆ ಕಾರಣವೆಂದು ಇವೆರಡನ್ನೂ ಅವರು ಬಲಾಢ್ಯ ಜಾತಿಗಳ ಸಂಕೇತವೆಂದೂ, ಭಾರತವನ್ನು ನುಂಗುವ ದುಃಸ್ವಪ್ನವೆಂದೂ ಹೇಳಿದ್ದಾರೆ.
ದೇಶವನ್ನು ಕಟ್ಟುವ, ದೇಶದ ಸಂಪತ್ತು ಅಭಿವೃದ್ಧಿಗೊಳ್ಳುವಂತೆ ಮಾಡುವ, ದಲಿತರಾದಿಯಾಗಿ ಸಮಸ್ತ ಪ್ರಜೆಗಳೂ ಆರ್ಥಿಕವಾಗಿಯೂ, ಶೈಕ್ಷಣಿಕವಾಗಿಯೂ, ಸಾಮಾಜಿಕ ಸ್ಥಾನ-ಮಾನಗಳ ಗಳಿಕೆಯಲ್ಲಿಯೂ ಒಳ್ಳೆಯ ಸ್ಥಿತಿಯನ್ನು ತಲುಪುವಂತಾಗಲಿ ಎಂದು ಎಲ್ಲರೂ ಪ್ರಯತ್ನಿಸಬೇಕಾಗಿರುವ ಸಂದರ್ಭದಲ್ಲಿ, ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು ಅಥವಾ ಇತರರು - ಬ್ರಾಹ್ಮಣರೇ ಆಗಿರಲಿ, ದಲಿತರೇ ಆಗಿರಲಿ, ಮತ್ತೆ ಯಾರೇ ಆಗಿರಲಿ, ದೇಶದ ಯಾವುದೇ ಸಂಪತ್ತಿನ ನಾಶವನ್ನು ತಮ್ಮ ವರ್ಗದವರ ಸಾಮಾಜಿಕ ಉನ್ನತಿಗಾಗಿ ಇರುವ ಅಸ್ತ್ರವೆಂದು ಭಾವಿಸುವುದು, ಪ್ರಜಾ ಸಮುದಾಯದ ಪರಮ ದೌರ್ಭಾಗ್ಯವೇ ಸರಿ.
ಯಾರದ್ದೋ ಮನೆಗಳನ್ನಾಗಲೀ ಬಡಾವಣೆಗಳನ್ನಾಗಲೀ ಧ್ವಂಸಗೊಳಿಸುವುದರಿಂದ ದಲಿತರ ಉದ್ಧಾರವಾಗುತ್ತದೆ ಎಂದು ನಂಬುವವರಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಮತ್ತೊಬ್ಬರ ಸಂಪತ್ತನ್ನು ಕಂಡು ಕರುಬುತ್ತಾ ಸಂಕಟಪಡುತ್ತಾ, ಅವರಿಗೆ ಕೆಡುಕನ್ನು ಬಯಸುತ್ತಾ ಕಾಲಕಳೆಯುವ ಬದಲು, ನಾವು ಅವರಿಗಿಂತಲೂ ಕಡಿಮೆಯೇನಲ್ಲ ಎಂದು ಭಾವಿಸುತ್ತಾ ಋಜು ಮಾರ್ಗದಲ್ಲೇ ನಡೆದು ಉನ್ನತಿಯನ್ನು ಪಡೆಯಲು ಯತ್ನಿಸುವುದು ಒಳ್ಳೆಯದಲ್ಲವಾ? ದಲಿತರಿಗೂ ಕೂಡ, ದೇವನೂರ ಮಹಾದೇವರವರು ನಾಶ ಮಾಡಲು ಬಯಸುತ್ತಿರುವುದಕ್ಕಿಂತಾ ಮಿಗಿಲಾದ ಭವ್ಯ ಸೌಧಗಳನ್ನೂ ಬಡಾವಣೆಗಳನ್ನೂ ನಿರ್ಮಿಸಿಕೊಳ್ಳಲು ಸಾಧ್ಯವಾಗಲಿ, ಆ ಒಳ್ಳೆಯ ದಿನಗಳು ಬೇಗ ಬರ.
-ಬೊ. ನಾ. ಕೃಷ್ಣಮೂರ್ತಿ, ಸಾಗರ
ಪ್ರಜಾಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ಅವಶ್ಯಕ
ಸಾಕಷ್ಟು ಕಲುಷಿತಗೊಂಡಿರುವ ರಾಜಕಾರಣವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಮತದಾರನು, ಮತದಾನದ ವೇಳೆ ಚುನಾವಣೆಯಲ್ಲಿ ಆಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕನ್ನು ನೀಡಿರುವ ಸುಪ್ರೀಂಕೋರ್ಟ್ನ ತೀರ್ಪು ಸ್ವಾಗತಾರ್ಹ. ಚುನಾವಣಿ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆ. ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಸಂಸ್ಥೆಯೂ ಅಭಿನಂದನಾರ್ಹ. ಇದೇ ವೇಳೆ, ಬೊಕ್ಕಸಕ್ಕೆ ಅನವಶ್ಯಕವಾಗಿ ಕೋಟಿಗಟ್ಟಳೆ ಹಣ ವೆಚ್ಚವಾಗುವ- ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧಿಸುವುದು, ಲೋಕಸಭೆಗೆ ಸ್ಪರ್ಧಿಸಲು ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಂದು ಅನವಶ್ಯಕ ಉಪಚುನಾವಣಿಗೆ ಕಾರಣವಾಗುವುದು- ಇವುಗಳನ್ನು ತಡೆಗಟ್ಟಬೇಕಿದೆ. ಚುನಾವಣೆಯಲ್ಲಿ ಮತದಾನವನ್ನು ಕಡ್ಡಾಯಗೊಳಿಸುವುದು, ಒಬ್ಬ ಅಭ್ಯರ್ಥಿ ಗೆಲ್ಲಬೇಕಾದರೆ ಒಟ್ಟು ಮತದಾರರ ಸಂಖ್ಯೆಯ ಶೇ. 50ರಷ್ಟು ಮತ ಪಡೆಯಬೇಕೆಂಬುದು- ಇವೇ ಮುಂತಾದ ಪ್ರಮುಖ ಅಂಶಗಳ ಕುರಿತು ಪ್ರಜಾಪ್ರಾತಿನಿಧ್ಯ ಕಾಯ್ದೆಗೆ ತುರ್ತಾಗಿ ತಿದ್ದುಪಡಿ ತರುವ ಅವಶ್ಯಕತೆ ಇದೆ. ಈ ತಿದ್ದುಪಡಿಗಳಾದಲ್ಲಿ, ಬೊಕ್ಕಸಕ್ಕೆ ಅನವಶ್ಯಕ ವೆಚ್ಚ ತಗ್ಗುವುದರಿಂದ ಈ ಹಣವು ವಿವಿಧ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಲಭ್ಯವಾಗುವುದು.
-ಕೆ.ಟಿ.ಕಣ್ಣನ್, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

