ಸಂಪಾದಕೀಯ

ಈ ಜೆಪಿಸಿ ಯಾಕೆ ಬೇಕಿತ್ತು?

Published On :

ಎರಡನೇ ತಲೆಮಾರಿನ (2ಜಿ) ಟೆಲಿಕಾಮ್ ತರಂಗಾಂತರ ಗುಚ್ಛಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ, ಭ್ರಷ್ಟಾಚಾರದ ರಾಜಕೀಯ ಸ್ವರೂಪದ ವಿಚಾರಗಳ ತನಿಖೆ ನಡೆಸಿದ ಸಂಯುಕ್ತ ಸಂಸದೀಯ ಸಮಿತಿಯ (ಜೆಪಿಸಿ) ತೀರ್ಮಾನ ನಿರೀಕ್ಷೆಯಂತೆಯೇ, ಈ ಪ್ರಕರಣಗಳಲ್ಲಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ವಿತ್ತಮಂತ್ರಿ ಪಿ. ಚಿದಂಬರಮ್ ಅವರ ವಿರುದ್ಧ ಕೇಳಿಬಂದಿದ್ದ ಆರೋಪಗಳೆಲ್ಲವೂ ಆಧಾರ ರಹಿತ ಎನ್ನುವಂತೆಯೇ ಪ್ರಕಟವಾಗಿದೆ.
 ಕಳೆದ ಶುಕ್ರವಾರ ತನಿಖಾ ಸಮಿತಿಯ ಕೊನೆಯ ಸಭೆಯಲ್ಲಿ ಅಧ್ಯಕ್ಷ ಪಿ.ಸಿ. ಚಾಕೋ ಅವರು ಸಿದ್ಧಪಡಿಸಿದ್ದ ಕರಡು ವರದಿಯನ್ನು ಭೀಕರ  ವಾಗ್ಯುದ್ಧದ ಅನಂತರ ಹದಿನಾರು- ಹನ್ನೊಂದು ಮತಗಳ ಬಹುಮತದಿಂದ ಅಂಗೀಕರಿಸಲಾಯಿತು.
 ಸಮಿತಿಯ ವರದಿಗೆ ಬಹುಮತದ ಒಪ್ಪಿಗೆ ಪಡೆದಿರುವ ಅಧ್ಯಕ್ಷ ಚಾಕೋ, ಭಿನ್ನಮತೀಯರಿಗೆ ಅವರ ಟಿಪ್ಪಣಿಯನ್ನು ಸಲ್ಲಿಸಲು ಕಾಲಾವಕಾಶ ನೀಡಿದ್ದು, ಅದನ್ನು ಪರಿಶೀಲಿಸಿ ಅನಂತರ ಸಮಗ್ರ ಸ್ವರೂಪದ ವರದಿಯನ್ನು ಲೋಕಸಭೆಯ ಸ್ಪೀಕರ್‌ಗೆ ಸಲ್ಲಿಸಬೇಕಾಗಿದೆ. ಅದಾದ ಮೇಲೆ ಸರ್ಕಾರ, ಸಮಿತಿಯ ವರದಿಯ ಪರಿಶೀಲನೆಯ ಅನಂತರ ತಾನು ಕೈಗೊಂಡ ಕ್ರಮಗಳ ವಿವರಗಳನ್ನು ಪ್ರಕಟಿಸಬೇಕು. ಇದು ನಿಯಮ-
 ಸಮಿತಿಯ ಕರಡು ವರದಿಯನ್ನು ಗಂಭೀರವಾಗಿ ಹಾಗೂ ಆಳವಾಗಿ ಅಧ್ಯಯನ ನಡೆಸಿರುವ ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಗುರುದಾಸ್ ದಾಸ್‌ಗುಪ್ತ ಅವರು ಈಗಾಗಲೇ ತಮ್ಮ ಅನಿಸಿಕೆಗಳ ಟಿಪ್ಪಣಿಯನ್ನು ಅರವತ್ತು ಪುಟಗಳಲ್ಲ್ಲಿ ದಾಖಲಿಸಿದ್ದಾರೆಂದೂ, ಅದು ಒಂದು ರೀತಿಯಲ್ಲಿ ಸಮಿತಿಯ ಪರ್ಯಾಯ ವರದಿಯ ರೂಪದಲ್ಲೇ ಇದೆ ಎಂದೂ, ಅದನ್ನು ನೋಡಿದವರು ಹೇಳಿದ್ದಾರೆ. ಗುರುದಾಸ್ ದಾಸ್ ಗುಪ್ತ ಮತ್ತು ಸಮಿತಿಯ ಇತರ ಕೆಲವು ಸದಸ್ಯರು, ಸಮಿತಿಯ ಅಧ್ಯಕ್ಷ ಚಾಕೋ ಅವರ ವರ್ತನೆ ಪ್ರಾಂಜಲ ಮನಸ್ಸಿನ ಲಕ್ಷಣಗಳನ್ನು ಪ್ರತಿಬಿಂಬಿಸಲಿಲ್ಲ, ಅವರು ಕಾಂಗ್ರೆಸ್ ವಕ್ತಾರರ ರೀತಿಯಲ್ಲೇ ವರ್ತಿಸಿದರು ಎಂದು ಆರೋಪಿಸಿರುವುದೂ ಉಂಟು.
 ಕರಡು ವರದಿಯ ಸಾರಾಂಶವನ್ನು ಒಂದು ಮಾತ್ರೆಯ ರೂಪಕ್ಕೆ ಇಳಿಸಬೇಕಾದರೆ, ವರದಿ ಎಲ್ಲ ಅವಾಂತರ, ಅನಾಚಾರಕ್ಕೂ ಮಾಜಿ ಟೆಲಿಕಾಮ್ ಸಚಿವ ಡಿಎಂಕೆಯ ಎ. ರಾಜಾ ಅವರೇ ಹೊಣೆ, ಅವರು ಪ್ರಧಾನಿ, ವಿತ್ತ ಮಂತ್ರಿಯನ್ನು ತಪ್ಪುದಾರಿಗೆ ಎಳೆದಿದ್ದಾರೆ ಎನ್ನಬಹುದು.
 ಈಗಾಗಲೇ ಈ ಪ್ರಕರಣದ ಒಂದೆರಡು ವಿಚಾರಗಳನ್ನು ಕುರಿತು, ನ್ಯಾಯಾಂಗದ ತನಿಖೆ, ವಿಚಾರಣೆ ಆಗಿದೆ. ಮಾಜಿ ಸಚಿವ ಎ. ರಾಜಾ ಹಾಗೂ ಡಿಎಂಕೆಯ ರಾಜ್ಯಸಭೆ ಸದಸ್ಯೆ, ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಅವರು ಜೈಲಿಗೆ ಹೋಗಿ ಬಂದಿದ್ದೂ ಆಗಿದೆ. ಹಲವು ಹಿರಿಯ ಅಧಿಕಾರಿಗಳು ಜೈಲಿಗೆ ಹೋಗಿದ್ದು  ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.
 ಸಮಿತಿಯ ಡಿಎಂಕೆ ಸದಸ್ಯ ಬಾಲೂ ಅವರು ಅನೇಕ ದಾಖಲೆಗಳನ್ನು ಪರಿಶೀಲಿಸದೇನೇ (ಆ ದಾಖಲೆಗಳು ನ್ಯಾಯಾಲಯಗಳಲ್ಲಿವೆ) ಅಧ್ಯಕ್ಷ ಚಾಕೋ ಕರಡು ವರದಿಯನ್ನು ಹೇಗೆ ಸಿದ್ಧಪಡಿಸಿದರೋ ಗೊತ್ತಾಗಿಲ್ಲ ಎಂದಿದ್ದಾರೆ.
 ಇದೆಲ್ಲಕ್ಕೂ ಅಧ್ಯಕ್ಷ ಚಾಕೋ ಅವರದ್ದು ಒಂದೇ ಉತ್ತರ: ನನ್ನ ಗಮನಕ್ಕೆ ಬಂದ ಎಲ್ಲ ವಿಚಾರಗಳನ್ನೂ ಪರಿಶೀಲಿಸಿ, ನಿಷ್ಪಕ್ಷಪಾತವಾದ ತೀರ್ಮಾನವನ್ನೇ ನೀಡಿದ್ದೇನೆ. ಅಲ್ಲಿಗೆ ವರದಿಯ ಕತೆ ಮುಗಿದಂತೆಯೇ. ಈ ಪ್ರಕರಣದ ವರದಿಯನ್ನು ಸರ್ಕಾರ ಪರಿಶೀಲಿಸುವ ಹಂತ ಮುಟ್ಟುವುದರಲ್ಲಿ ಈಗಿನ ಲೋಕಸಭೆಯ ಅವಧಿಯೇ ಮುಗಿಯುವ ಕಾಲವೂ ಸನ್ನಿಹಿತವಾಗಿರುತ್ತದೆ. ಆಗಿನ ಚುನಾವಣೆ ಪ್ರಚಾರ ಸಮರದ ಬಿಸಿಯಲ್ಲಿ ಈ ಜೆಪಿಸಿ ವರದಿಗೆ ಯಾವ ಸ್ಥಾನವೂ ಇಲ್ಲ.
 ಚಾಕೋ ನೇತೃತ್ವದ ಸಮಿತಿಯ ರಚನೆಯ ಸಂದರ್ಭದಲ್ಲಿದ್ದ ರಾಷ್ಟ್ರೀಯ ರಾಜಕೀಯ ಪರಿಸ್ಥಿತಿ ಈಗ ಇಲ್ಲ. ಗಮನಾರ್ಹವಾಗಿಯೇ ಬದಲಾಗಿದೆ. ಆಗ ಡಿಎಂಕೆ, ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿತ್ತು. ಈಗ ಜೆಪಿಸಿಯ ಸಭೆಯಲ್ಲಿ ಡಿಎಂಕೆ, ವರದಿಯ ವಿರುದ್ಧ ಮತ ನೀಡಿದೆ. ಅಷ್ಟೇ ಅಲ್ಲ, ಪಕ್ಷದ ಸಚಿವರಾಗಿದ್ದು, ರಾಜಿನಾಮೆ ಕೊಟ್ಟಿರುವ ಎ. ರಾಜಾ ಅವರು ಎಷ್ಟು ಮನವಿಗಳನ್ನು ಸಲ್ಲಿಸಿದರೂ, ಸಮಿತಿಯ ಮುಂದೆ ಹಾಜರಾಗಿ ತಮ್ಮ ನಿಲವು ಹಾಗೂ ಹಗರಣದ ಇನ್ನೊಂದು ಮುಖದ ದರ್ಶನಕ್ಕೆ ಅವಕಾಶವೇ ಕೊಡದಿರುವುದನ್ನು ಒಂದು ರಾಜಕೀಯ ಪಕ್ಷವಾಗಿ ಡಿಎಂಕೆ ಖಂಡಿಸಿದೆ.
 ಸಮಿತಿಯಲ್ಲಿ ಶರದ್ ಯಾದವ್ ಅವರೂ ಸೇರಿದಂತೆ ಇಬ್ಬರು ಸದಸ್ಯರನ್ನು ಹೊಂದಿರುವ ಸಂಯುಕ್ತ ಜನತಾದಳ ಈಗ ಬಿಜೆಪಿ ವಿರೋಧಿ ಪಕ್ಷವಾಗಿರುವುದರಿಂದ ಸರ್ಕಾರಕ್ಕೆ ಬೆಂಬಲವನ್ನು ಪರೋಕ್ಷವಾಗಿ ಪ್ರಕಟಿಸಲು ಮತದಾನದಲ್ಲಿ ಪಾಲುಗೊಳ್ಳಲಿಲ್ಲ. ಅದಕ್ಕಿಂತ ಹೆಚ್ಚಾಗಿ ಬಿಜೆಪಿಯ ಉಪಾಧ್ಯಕ್ಷ ಲೋಕಸಭೆಯ ಸದಸ್ಯ ಗೋಪಿನಾಥ ಮುಂಡೆ ಅವರು ಸಮಿತಿಯ ಕೊನೆಯ ಸಭೆಗೆ ಹಾಜರಾಗಲಿಲ್ಲ. ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ಸದಸ್ಯರು ವರದಿಯ ಪರವಾಗಿ ಮತ ನೀಡಿದ್ದಾರೆ.
 ಹೀಗಾಗಿ ಬಹುಮತವೇ ತನಿಖೆಯ ತೀರ್ಮಾನಕ್ಕೆ ಆಧಾರ ಎನ್ನುವುದಾದರೆ, ಆ ಕೆಲಸವನ್ನು ಸಂಸತ್ತೇ ಮಾಡಬಹುದಿತ್ತು ಅಥವಾ ಸ್ಥಾಯೀ ಸಮಿತಿಗೆ ಆ ಕೆಲಸವನ್ನು ವಹಿಸಿ ಇದೇ ತೀರ್ಮಾನವನ್ನು ಪಡೆಯಬಹುದಾಗಿತ್ತು. ಜೆಪಿಸಿ ತನಿಖೆಯೇ ಒಂದು ವೃಥಾ ವ್ಯರ್ಥ ಕಸರತ್ತು ಎನ್ನುವುದನ್ನು ಇದುವರೆಗಿನ ಎಲ್ಲ ಪ್ರಕರಣಗಳ ತನಿಖೆಗಳೂ ಪ್ರಕಟಿಸಿವೆ. ಇನ್ನು ಮುಂದೆ ಈ ನಾಮ್ ಕೆ ವಾಸ್ತೆ ತನಿಖೆಯನ್ನೇ ಕೈ ಬಿಡುವುದೇ ಒಳ್ಳೆಯದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.