ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರಿನ ದೊಡ್ಡಪುರದಿಂದ ಡಿ. ಗುರುಮಲ್ಲಪ್ಪ ಅವರು ಬರೆಯುತ್ತಾರೆ- 'ಆ.25ರಂದು 'ಸಾಪ್ತಾಹಿಕ ಪ್ರಭ' ಕೈಗೆತ್ತಿಕೊಂಡಾಗ ಮುಖಪುಟದಲ್ಲೇ ಸಾಹಿತ್ಯಾಸಕ್ತರಿಗೆ ಪುಳಕ ಹುಟ್ಟಿಸುವಂತಿದ್ದ 'ಕನ್ನಡ ವಿಮರ್ಶೆಯ ಆಸ್ತಿ' 'ಅನುವಾದಕನಾಗಿ ನನ್ನ ಅನುಭವ' 'ಕಾಂತಾವರದ' ಬಯಲು ಬೆಟ್ಟಗಳನ್ನು ದಾಟಿ ಮುಂದಿನ ಪುಟಗಳತ್ತ ಹೊರಳಿಸಲು ಅವಕಾಶ ಕೊಡದೇ ಮನದುಂಬಿಸಿದವು.'
'ಆದರೆ ಡಾ.ನಾ. ಮೊಗಸಾಲೆಯವರು ಹುಟ್ಟಿದ್ದು 1944ರಲ್ಲಿ. 'ಅವರು ತಮ್ಮ ಕೆಲವು ಗೆಳೆಯರ ಜತೆ ಸೇರಿ 1926ರಲ್ಲಿ ಯುವಕ ಮಂಡಲ ಸ್ಥಾಪನೆ ಮಾಡಿದರು' ಎಂದಿದೆಯಲ್ಲ? ಇದು ಹೇಗೆ ಸಾಧ್ಯ?' ಎಂದಿದ್ದಾರೆ.
ಬಾಗಲಕೋಟ ಜಿಲ್ಲೆ ಹುನುಗುಂದದಿಂದ ಸಂಗಪ್ಪ ನೂ.  ಗಾಣಿಗೇರ ಅವರು ಬರೆಯುತ್ತಾರೆ- 'ತಮಗೆ ಈ ಮೂಲಕ ತಿಳಿಸುವುದೇನೆಂದರೆ ಸೆ.14ರಲ್ಲಿ (ಪುಟ 9) ನಗರ್ತ ಸಮುದಾಯದ ಬಗ್ಗೆ ಬರೆಯುವಾಗ ಆ ಲೇಖನದಲ್ಲಿ 'ನಗರೀಕರಣದ ನಂತರ ಸಂಪ್ರದಾಯಗಳು ಕೊಂಚ ಕಡಿಮೆಯಾಗುತ್ತಿದ್ದರೂ 'ಹಿರಿಯೂರು' ಮಾತ್ರ ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ' ಎಂದಿದೆ. 'ಹಿರಿಯೂರು' ಎಂಬುದು 'ಹಿರಿಯರು' ಅಂತ ಪ್ರಿಂಟ್ ಆಗಬೇಕಿತ್ತಲ್ಲವೇ? ನಗರ್ತರು ವೈಶ್ಯರಲ್ಲವೇ? ಎಂಬುದನ್ನು ಲೇಖನದಲ್ಲಿ ತಿಳಿಸಿಲ್ಲ' ಎಂದಿದ್ದಾರೆ.
ನಗರ್ತರು ಎಂಬುದು ವೈಶ್ಯರಲ್ಲೇ ಒಂದು ಪಂಗಡ.
ದಕ್ಷಿಣ ಕನ್ನಡದ ಮುಡಿಪು ಕುರ್ನಾಡಿನಿಂದ ಎಂ. ಸುಬ್ರಹ್ಮಣ್ಯ ಭಟ್ ಅವರು ಬರೆಯುತ್ತಾರೆ- 'ಸೆ.11ರ ಪತ್ರಿಕೆಯಲ್ಲಿ 'ಉದಕಾರ್ಗಲ'ದ ಬಗ್ಗೆ ವರಾಹಮಿಹಿರನ ಬೃಹತ್ ಸಂಹಿತೆಯ 54ನೇ ಅಧ್ಯಾಯದಲ್ಲಿ 'ದಕಾರ್ಗಲ' ಎಂಬ ಪದ ಪ್ರಯೋಗವಿದೆ.'
"ದಕ' ಅಂದರೆ ನೀರು. 'ದೈಪ್-ಶೋಧನೆ' ಎಂಬ ಧಾತುವಿಗೆ 'ಸಂಜಾಯಾಂ ಕನ್‌' ಎಂಬ ಪ್ರತ್ಯಯ ಬಂದು 'ದಕಂ' (ನಪುಂಸಕಲಿಂಗ) ಎಂಬ ಪದ ಸಿದ್ಧಿಯಾಗುತ್ತದೆ. 'ವೈಜಯಂತೀಕೋಶ'ದಲ್ಲಿ ನೀರಿನ ಪರ್ಯಾಯ ಪದಗಳು ಹೀಗಿವೆ- ಪಾನೀಯಂ, ಜೀವನೀಯಂ, ಕಂ, ಜಲಂ, ಅಂಬು, ಉದಕಂ, ದಕಂ'
"ಅರ್ಗಲ' ಎಂಬ ಪದಕ್ಕೆ 'ಅಗಳಿ' ಎಂಬ ಅರ್ಥವಿದೆ. ಆದ್ದರಿಂದ ಶೋಧಿಸಿದ ನೀರನ್ನು ಬಂಧಿಸಿಡು ಎಂಬ ಅರ್ಥದಲ್ಲಿ 'ದಕಾರ್ಗಲ' ಎಂಬ ಪ್ರಯೋಗ ಸಾಧುವಾಗಿದೆ.'
'ಧರ್ಮಂ ಯಶಸ್ಯಂ ಚ ವದಾಮ್ಯತೋ ಹಂ
ದಕಾರ್ಗಲಂ ಯೇನ ಜಲೋಪಲಬ್ಧಿಃ
ಪುಂಸೋ ಯಥಾಂಗೇಷು ಶಿರಾಃ ತಥೈವ
ಕ್ಷಿತಾವಪಿ ಪ್ರೋನ್ನತ ನಿಮ್ನಸಂಸ್ಥಾ'
'ಅಂದರೆ... ಮನುಷ್ಯನ ದೇಹದಲ್ಲಿನ ನಾಡಿಗಳಂತೆ, ಭೂಮಿಯಲ್ಲಿ ಮೇಲ್ಮಟ್ಟದಲ್ಲಿ ಮತ್ತು ಕೇಳಮಟ್ಟದಲ್ಲಿರುವ ಜಲನಾಳಗಳನ್ನು ತಿಳಿಯುವ ವಿಚಾರವನ್ನು 'ದಕಾರ್ಗಲ'ದಲ್ಲಿ ವಿವರಿಸಿದೆ' ಎಂದಿದ್ದಾರೆ.


-ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.