ರೈತರನ್ನು ಕೆಣಕದಿರಿ
ಚುನಾವಣೆಯ ಸಮಯದಲ್ಲಿ ಎಲ್ಲ ಅಭ್ಯರ್ಥಿಗಳ ರಕ್ತದ ಒತ್ತಡವೂ ಹೆಚ್ಚಾಗುವುದು ಸಹಜ. ಅವರ ಪಾಲಿಗೆ ಚುನಾವಣೆ ಪ್ರಕ್ರಿಯೆ, ಪ್ರಚಾರದ ಸಮರ, ಎದುರಾಳಿಗಳ ಆರೋಪಗಳಲ್ಲಿ ಯಾವುದೂ "ಸಾಮಾನ್ಯ" ಸ್ಥಿತಿಯಲ್ಲ.
ಭಾರತದಲ್ಲಂತೂ ಇತ್ತೀಚಿನ ದಿನಗಳಲ್ಲಿ ಖಡಾ-ಖಡಿ ಸೆಣಸಾಟದ ಕಣವಾಗಿ ಚುನಾವಣೆ ಪರಿವರ್ತನೆಯಾಗಿರುವುದರಿಂದ ಅಲ್ಲಿನ ಪ್ರತ್ಯಕ್ಷ ಪಾತ್ರಧಾರಿಗಳು ತಮ್ಮ ನಡವಳಿಕೆಯ ಮೇಲೆ, ಪ್ರಧಾನವಾಗಿ ನಾಲಿಗೆಯ ಮೇಲೆ ಹಿಡಿತವನ್ನು ಯಾವ ಕಾರಣಕ್ಕೂ ಸಡಿಲ ಬಿಡಬಾರದು.
ಒಂದು ಜೋಕು, ಒಂದು ವ್ಯಂಗ್ಯ ಸಾಮಾನ್ಯ ದಿನಗಳಲ್ಲಿ ನೀಡಿದರೂ ಅದೇ ಮಾತು ಚುನಾವಣೆ ಪ್ರಚಾರ ಸಮರ ಕಾಲದಲ್ಲಿ ದೊಡ್ಡ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಳಗಾವಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದಾಗ, ಉತ್ತರ ಕರ್ನಾಟಕದ ಕಬ್ಬು ಬೆಳೆಯುವ ಪ್ರದೇಶಗಳ ರೈತರ ಪ್ರತಿನಿಧಿಗಳು ಕಬ್ಬು ಬೆಲೆ ನಿಗದಿ, ಹಣದ ಪಾವತಿಗೆ ಒತ್ತಾಯಪಡಿಸಿ, ಪ್ರತಿಭಟನೆ ಪ್ರದರ್ಶನ ನಡೆಸಿದಾಗ, ಪೊಲೀಸರ ಬಲಪ್ರಯೋಗ ಅನಿವಾರ್ಯವಾದ ಪ್ರಕರಣವನ್ನು ಬುಧವಾರ ಪ್ರಸ್ತಾಪಿಸಿ, ಆ ಪ್ರಕರಣದಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಿದ್ದ ರೀತಿಯನ್ನು ವಿವರಿಸುವಾಗ ಆತ ಕುಡಿದು ಸತ್ತ ಎಂದೇನೂ ಹೇಳಿರಲಿಲ್ಲ ಎಂದು ವಾದಿಸಿದ ರೀತಿ-ನೀತಿ ಮುಖ್ಯಮಂತ್ರಿ ಸ್ಥಾನದ ಗಾಂಭಿರ್ಯಕ್ಕೆ ತಕ್ಕಂತೆ ಇರಲಿಲ್ಲ. ಸಿದ್ದರಾಮಯ್ಯ ಅವರು ಆ ಪ್ರಕರಣದ ಪ್ರಸ್ತಾಪ ಮಾಡಿದ್ದು ಬುಧವಾರ. ಅದು ಗುರುವಾರದ ಪತ್ರಿಕೆಗಳಲ್ಲಿ, ಬುಧವಾರ -ಗುರುವಾರ ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾದಾಗ ರಾಜ್ಯದ ಅನೇಕ ಭಾಗಗಳಲ್ಲಿ ರೈತ ಸಮುದಾಯದ ಪ್ರತಿಭಟನೆಯನ್ನು ಎದುರಿಸಬೇಕಾಗಿದೆ. ಇದು ಅವರೇ ತಂದಿಟ್ಟುಕೊಂಡಿರುವ ಸಮಸ್ಯೆ. ಸ್ವಯಂಕೃತಾಪರಾಧದ ಸ್ವರೂಪವನ್ನು ಪಡೆದುಕೊಂಡಿದೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ಸಿನ ಒಳಗೆ, ಹೊರಗೆ ವೈರಿಗಳಿಗೇನೂ ಕಡಿಮೆ ಇಲ್ಲ. ಅವರು ಒಂದು ಸಣ್ಣ ತಪ್ಪನ್ನೂ ದೊಡ್ಡದನ್ನಾಗಿ ಮಾಡುವುದು ಸಹಜವೇ. ರಾಜಕೀಯದಲ್ಲಿ ಅವರಿಗೂ ಜಾಗ ಬೇಕಲ್ಲ.
ನಾಪೋಕ್ಲು ಪತ್ರಕರ್ತರ ಎದುರಿನಲ್ಲಿ ಈ ವಿಚಾರದಲ್ಲಿ ಸಿದ್ದರಾಮಯ್ಯ ಎಚ್ಚರ ತಪ್ಪಿದ್ದಾರೆ. ಬೆಳಗಾವಿಯ ರೈತ ಪ್ರದರ್ಶನ ಕುರಿತಂತೆ ತನಿಖೆಗೆ ಆದೇಶ ನೀಡಿದರೂ ಅವರೇ. ಈಗ ಸಿದ್ದರಾಮಯ್ಯ ಅವರ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ವಿಠಲ ಅರಬಾವಿ ಅವರ ಕುಟುಂಬಕ್ಕೆ ಸರ್ಕಾರವೇ ಹತ್ತು ಲಕ್ಷ ರುಪಾಯಿಗಳ ಪರಿಹಾರವನ್ನು ನೀಡಿದೆ. ಪ್ರಕರಣದ ತನಿಖೆಗೂ ಆದೇಶವಾಗಿದ್ದು, ಅದರ ವರದಿ ಬರುವುದಕ್ಕೆ ಮುನ್ನವೇ ಸರ್ಕಾರದ ಮುಖ್ಯಸ್ಥರೇ ತಮ್ಮ ತೀರ್ಮಾನವನ್ನೂ ಪ್ರಕಟಿಸಿ, ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ.
ನಿಜ. ಸಿದ್ದರಾಮಯ್ಯ ಅವರು ಒತ್ತಡದಲ್ಲಿರಬಹುದು. ಕೊಡಗು ಸೀಮೆಯಲ್ಲಿ ಬೆಳಗಾವಿ ಜಿಲ್ಲೆಯ ವಿಠ್ಠಲ ಅರಭಾವಿಯ ಸಾವು ಮುಖ್ಯವಾದ ವಿಷಯ ಅಲ್ಲದೇ ಇರಬಹುದು. ಆದರೆ ಮುಖ್ಯಮಂತ್ರಿಯ ಹೇಳಿಕೆಗೆ ವ್ಯಾಪಕವಾದ ಪ್ರಚಾರ ಸಿಗುವುದು ಖಚಿತ. ಸಾಲದ್ದಕ್ಕೆ ಸಿದ್ದರಾಮಯ್ಯ ಅವರ ಮಾತುಕತೆಯ ಟಿ.ವಿ. ಪ್ರಸಾರವೂ ಆಗಿದೆ. ವಿಡಿಯೋ ಸಾಕ್ಷ್ಯ ಕೂಡ ಲಭ್ಯ. ಇಂತಹ ಸನ್ನಿವೇಶದಲ್ಲಿ ನಾನು ಹಾಗಲ್ಲ ಹೇಳಿದ್ದು, ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ವರದಿಗಳು ಪ್ರಕಟವಾಗಿವೆ ಎನ್ನುವಂತಿಲ್ಲ. ಟಿ.ವಿ. ವಾಹಿನಿಗಳನ್ನು ಗಮನಿಸಿದವರಿದ್ದಾರೆ. ಈಗ ಆಡಿದ ಮಾತನ್ನು ಹಿಂದಕ್ಕೆ ಪಡೆಯುವಂತಿಲ್ಲ. ಇನ್ನೂ ಬಿಸಿಬಿಸಿ ಪ್ರಚಾರದ ದಿನಗಳು ಕಾದಿವೆ. ಸಿದ್ದರಾಮಯ್ಯ ಅವರು ಸಂಯಮದಿಂದ ಇದ್ದರೆ ಅವರಿಗೇ ಒಳ್ಳೆಯ ಹೆಸರು ಬರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

