ತಪ್ಪಾಯ್ತು ತಿದ್ಕೋತೀವಿ
ದಾವಣಗೆರೆ ಕನ್ನಡ ಜಾಗೃತಿ ಕೇಂದ್ರದ ಎಸ್.ಮಲ್ಲಿಕಾರ್ಜುನಪ್ಪ ಪತ್ರ ಬರೆಯುತ್ತಾರೆ- 'ಮಾ.23ರ ಮುಖಪುಟದಲ್ಲಿ 'ಚಿರ ನಿದ್ರೆಯ ಶಿಕಾರಿಗೆ ಚಿತ್ತಾಲ' ಎಂಬ ಶೀರ್ಷಿಕೆ ಪ್ರಕಟವಾಗಿದೆ. 'ಕನ್ನಡಪ್ರಭ'ದಲ್ಲಿ ಆಕರ್ಷಣೀಯ ಶೀರ್ಷಿಕೆಗಳು ಬಳಕೆಯಾಗುತ್ತಿರುವುದು ಸ್ವಾಗತಾರ್ಹ. ಆದರೆ ಆ ಶೀರ್ಷಿಕೆ ವರ್ತಮಾನ ಕಾಲಕ್ಕೆ ಅನುಗುಣವಾಗಿ ಸೂಕ್ತವಾಗಿರಬೇಕೆಂಬುದು ಓದುಗರ ಆಶಯವಾಗಿರುತ್ತದೆ. ಮೇಲಿನ 'ಚಿರ ನಿದ್ರೆಯ ಶಿಕಾರಿಗೆ ಚಿತ್ತಾಲ' ಎಂಬ ಶೀರ್ಷಿಕೆಯಲ್ಲಿ ಚಿರನಿದ್ರೆ ಎಂಬುದನ್ನು ಸಾವು ಎಂಬರ್ಥದಲ್ಲಿ ಬಳಸಲಾಗಿದೆ. ಆದರೆ ವರ್ತಮಾನ ಕಾಲದಲ್ಲಿ ವಿಜ್ಞಾನ ಮತ್ತು ವೈದ್ಯ ಶಾಸ್ತ್ರಗಳು ಉನ್ನತ ಮಟ್ಟಕ್ಕೆ ಬೆಳೆದಿದ್ದು, ಒಬ್ಬ ಪ್ರಜ್ಞೆ ತಪ್ಪಿ ಐಸಿಯುನಲ್ಲಿದ್ದರೂ ಆತ ಮೃತನಾಗಿದ್ದಾನೆಂದು ವೈದ್ಯರು ಘೋಷಿಸುವುದಿಲ್ಲ. ಕಾರಣ ಆತನ ಅರಿವು ತಪ್ಪಿರಬಹುದೇ ಹೊರತು ಆತನ ಪ್ರಾಣ ಪಕ್ಷಿ ಹಾರಿ ಹೋಗಿರುವುದಿಲ್ಲ. ಇನ್ನು ನಿದ್ರೆ ಎಂಬುದು ಮಾನವನ ಶಾರೀರಿಕ ಹಾಗೂ ಮಾನಸಿಕ ವಿಶ್ರಾಂತಿಯ ಅವಸ್ಥೆಯೇ ಹೊರತು. ಚಿರ ನಿದ್ರೆ ಎಂಬುದು ಸಾವು ಎಂದು ಯಾವ ರೀತಿಯಲ್ಲೂ ಅರ್ಥೈಸಲಾಗದು. ಇನ್ನು 'ಚಿರ ನಿದ್ರೆಯ ಶಿಕಾರಿಗೆ ಚಿತ್ತಾಲ' ಎಂಬ ಶೀರ್ಷಿಕೆಯಿಂದ ಯಶವಂತ ಚಿತ್ತಾಲರು ಸಾವಿನ ಬೇಟೆಗೆ ಹೋದರೋ ಅಥವಾ ಸಾವೇ ಚಿತ್ತಾಲರನ್ನು ಬೇಟೆಯಾಡಿತೋ ತಿಳಿಯುವುದಿಲ್ಲ. 'ಚಿರ ನಿದ್ರೆಯ ಶಿಕಾರಿಗೆ ಚಿತ್ತಾಲ' ಎಂಬುದರ ಬದಲು 'ಯಶವಂತ ಚಿತ್ತಾಲರ ನಿಧನ' ಎಂಬ ಸರಳರೂಪದ ಶೀರ್ಷಿಕೆ ಅರ್ಥವತ್ತಾಗಿ ಸಾಮಾನ್ಯ ಓದುಗರಿಗೆ ಸ್ಪಷ್ಟವಾಗಿ, ಸರಳವಾಗಿ ತಿಳಿಯುವಂತಿತ್ತು.'
'ಮಾ.24ರ ಪುಟ 14ರಲ್ಲಿ 'ವಿಂಡೀಸ್ ಥಂಡಾ-ಥಂಡ್' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ಛಾಯಾಚಿತ್ರವು ಮಾ.23ರಂದು ನಡೆದ ಭಾರತ-ವೆಸ್ಟ್ಇಂಡೀಸ್ ಪಂದ್ಯದ ಛಾಯಾಚಿತ್ರವಲ್ಲ. ಏಕೆಂದರೆ ಭಾನುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದ ನಂತರ ಬಂದ ಯುವರಾಜ್ ಸಿಂಗ್ ಕೂಡ ಔಟಾಗಿ ಗೆಲ್ಲುವಾಗ ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಚಿತ್ರದಲ್ಲಿ ರೈನಾ ಹಾಗೂ ಕೊಹ್ಲಿ ಹಸ್ತಲಾಘವ ಮಾಡುತ್ತಿರುವ ಚಿತ್ರವಿದೆ. ಈ ಚಿತ್ರವು ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಬಳಿಕ ತೆಗೆದಿರುವುದಾಗಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.'
'ಮಾ.24ರ ಕ್ರೀಡಾಪುಟದಲ್ಲಿ 'ಹಾಲೆಂಡ್ಗೆ ಸಿಂಹಳಿಯರ ಸವಾಲು' ಎಂಬ ಉಪಶೀರ್ಷಿಕೆಯಲ್ಲಿ 'ಬಲಿಷ್ಠ ಶ್ರೀಲಂಕಾ ತಂಡವು ದುರ್ಬಲ ಹಾಲೆಂಡ್ ವಿರುದ್ಧ ಸೆಣೆಸಲಿದೆ' ಎಂದು ಪ್ರಕಟವಾಗಿದೆ. ಆದರೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಹಾಲೆಂಡ್ ತಂಡವಿರಲಿಲ್ಲ. ಬದಲಾಗಿ ನೆದರ್ಲೆಂಡ್ ತಂಡವಿದೆ ಎನ್ನುವುದು ನನ್ನ ತಿಳಿವಳಿಕೆ' ಎಂದು ಹೇಳಿದ್ದಾರೆ.
ಚಿರನಿದ್ರೆಗೆ ಹೋಗಿರುವವರನ್ನು ಐಸಿಯುನಲ್ಲಿಟ್ಟು ಬದುಕಿಸಲು ಸಾಧ್ಯವಿಲ್ಲ. ಚಿರನಿದ್ರೆ ಎಂದರೆ ಸಾವು ಎಂದರ್ಥ. ಪ್ರಜ್ಞೆ ತಪ್ಪುವುದು ಹಾಗೂ ಚಿರ ನಿದ್ರೆಗೆ ಸಾಕಷ್ಟು ವ್ಯತ್ಯಾಸವಿದೆ. ಮುಖಪುಟದಲ್ಲಿ ನೀಡಿರುವ ಶೀರ್ಷಿಕೆ ಸಮರ್ಪಕವಾಗಿದೆ. ಇನ್ನು ನೆದರ್ಲೆಂಡ್ಗೆ ಹಾಲೆಂಡ್ ಎಂದೂ ಕರೆಯಲಾಗುತ್ತದೆ. ನಿಮ್ಮ ತಿಳಿವಳಿಕೆ ತಪ್ಪಾಗಿದೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

