ಸಂಪಾದಕೀಯ

ಕೊಲ್ಲುವ ಹಕ್ಕು ಯಾರಿಗೂ ಇಲ್ಲ

Published On :

ಶೃಂಗೇರಿ ಬಳಿಯ  ತನಿಕೋಡು ಬಳಿಯ ಚೆಕ್‌ಪೋಸ್ಟ್ ಸಮೀಪದಲ್ಲಿ ಒಂದು ಕಡೆ ವಾಹನ ನಿಲ್ಲಿಸಿ, ಅಧಿಕಾರಿಗಳಿಗೆ ಕಾಗದ ಪತ್ರಗಳನ್ನು ತೋರಿಸುತ್ತಿರುವಾಗಲೇ ಕಬೀರ್ ಎನ್ನುವ ಯುವಕ ನಕ್ಸಲ್ ವಿರೋಧಿ ಪೊಲೀಸ್ ಪಡೆಯ ಗುಂಡಿಗೆ ತುತ್ತಾಗಿದ್ದು ಒಂದು ದುರಂತವೇ.
ಇದೇನೂ ಸಾಮಾನ್ಯವಾದ ಘಟನೆಯಲ್ಲ. ಓಡಿ ಹೋಗುತ್ತಿದ್ದ ವ್ಯಕ್ತಿ ನಕ್ಸಲನಿರಬಹುದೆನ್ನುವ ಶಂಕೆಗೆ ಅವಕಾಶವಿದ್ದರೂ, ಅಂತಹ ವ್ಯಕ್ತಿಯನ್ನೂ ಗುಂಡಿಟ್ಟು ಕೊಲ್ಲುವ ಅಧಿಕಾರ ಕಾಯಿದೆಯಂತೆ ಯಾವ ಪೊಲೀಸರಿಗೂ ಇಲ್ಲ. ನಿಜ. ಆ ಪ್ರದೇಶದಲ್ಲಿ ನಕ್ಸಲೀಯರ ಚಟುವಟಿಕೆ ಇದ್ದಿರಬಹುದು. ಅಥವಾ ಕಬೀರ್ ದನದ ವ್ಯಾಪಾರಿಯೇ ಆಗಿರಬಹುದು ಆದರೂ ಪೊಲೀಸರಿಗೆ ಏಕ್‌ದಮ್ ಗುಂಡು ಹಾರಿಸುವ ಅಧಿಕಾರವನ್ನು ಕೊಟ್ಟವರಾರು?
ಇಂತಹ ವಿಚಾರ  ಕೋಮು ಸಂಘರ್ಷದ ಸ್ವರೂಪವನ್ನು ಪಡೆಯುವ ಸಂಭವ ಕಂಡುಬಂದಿರುವುದು ಆತಂಕದ ಪರಿಸ್ಥಿತಿಯೇ. ಈಗೇನೋ ಸರ್ಕಾರ ಕಬೀರ್‌ನ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು ಐದು ಲಕ್ಷ ರೂಪಾಯಿಗಳಿಂದ ಹತ್ತು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದರೂ ಅದು ಸಾಲದು ಎನ್ನುವವರಿದ್ದಾರೆ. ಕೆಲವು ಸಂಘಟನೆಗಳು ಕಳ್ಳ ವ್ಯಾಪಾರದಲ್ಲಿ ನಿರತರಾಗಿದ್ದವರಿಗೆ ಇಂತಹ ಪರಿಹಾರವೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಮಾತುಗಳೇ ಸಾಕು ಆ ಘಟನೆ ಸಹಜವಾಗಿ ನಡೆದಿದ್ದಲ್ಲ ಎನ್ನುವುದಕ್ಕೆ.
ಈ ಪ್ರಕರಣದ ತನಿಖೆ ಕುರಿತಂತೆ ಮ್ಯಾಜಿಸ್ಟ್ರೇಟ್‌ರಿಂದ ತನಿಖೆ ನಡೆಯುವುದು ಕಾಯಿದೆಯಂತೆ ಮಾಮೂಲು. ಅದಕ್ಕೆ ಆದೇಶ ಬೇಕಾಗಿಲ್ಲ. ಅದು ಕಡ್ಡಾಯ. ಆದರೆ ಸಿಐಡಿ-ಸಿಬಿಐ ತನಿಖೆಗೆ ಆದೇಶ ಬೇಕು. ರಾಜ್ಯ ಸರ್ಕಾರದ ಪರವಾಗಿ ಗೃಹಮಂತ್ರಿ ಜಾರ್ಜ್ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದರೆ ಸ್ಥಳೀಯ ಪೋಲಿಸರ ಧೈರ್ಯವನ್ನು ಕುಗ್ಗಿಸಿದಂತಾಗುತ್ತದೆ ಎಂದಿರುವುದು ಸರಿಯಾದ ಮಾತಲ್ಲ. ಜನರಿಗೆ ನಂಬಿಕೆ ಬರುವಂತೆ ವಿಶ್ವಾಸಾರ್ಹವಾದ ರೀತಿಯಲ್ಲಿ ತನಿಖೆ ನಡೆಸುವುದು ಸೂಕ್ತ. ಅದು ಹೇಳಿದಷ್ಟು ಸುಲಭವಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.