ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರಿನ ಕುವೆಂಪುನಗರದಿಂದ ಸಿ. ದಿನಮಣಿ ರಾವ್ ಅವರು ಬರೆಯುತ್ತಾರೆ- 'ಕೆಲವು ದಿನಗಳಿಂದ ಈ ಅಂಕಣಕ್ಕೆ ಪತ್ರ ಬರೆದಿರಲಿಲ್ಲ. ಗಮನಿಸಿದ ತಪ್ಪುಗಳು ಅಂತಹ ಪ್ರಮಾದವಾದವು ಅನಿಸದ ಕಾರಣ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಂಡು ಓದಿಕೊಳ್ಳುತ್ತಿದ್ದೆ. ಆದರೆ ಸರಿಪಡಿಸಿಕೊಂಡು ಓದಿದರೆ ನಾನೊಬ್ಬ ಸರಿಯಾಗಬಹುದು. ಆದರೆ ಬೇರೆಯವರಿಗೂ ಇದು ಗೊತ್ತಿರಬಹುದು ಅಥವಾ ಇಲ್ಲದಿರಬಹುದು ಎಂಬ ಕಾರಣಕ್ಕೆ ಈ ಪತ್ರ ಬರೆಯುತ್ತಿದ್ದೇನೆ.'
'ಏ.17ರಂದು ಮುಖಪುಟದಲ್ಲಿ ಬಿಜೆಪಿ ಹುರಿಯಾಳುಗಳ ಚಿತ್ರದಲ್ಲಿ ಧಾರವಾಡದ ಅಭ್ಯರ್ಥಿಯ ಹೆಸರನ್ನು 'ಪ್ರಲ್ಲಾದ ಜೋಶಿ' ಎಂದು ತಿಳಿಸಿದ್ದೀರಿ. ಆದರೆ ಅದು 'ಪ್ರಹ್ಲಾದ' ಎಂದಾಗಬೇಕಲ್ಲವೇ? ಏ.18ರಂದು ಪುಟ 3ರಲ್ಲಿ ಮೈಸೂರು ಪ್ರದೇಶದ ಸುದ್ದಿಯಲ್ಲಿ ಜಿಲ್ಲೆಯ ಮತದಾನ ಶೇ.65.19 ಎಂದು ಛಾಪಿಸಿದ್ದು, 11 ಕ್ಷೇತ್ರಗಳಲ್ಲಿ ಒಟ್ಟು 720.90 ಮತದಾನವಾಗಿದ್ದು, ಇದನ್ನು 11 ಕ್ಷೇತ್ರಕ್ಕೆ ಭಾಗಿಸಿದಾಗ ಶೇ.65.54 ಬರುತ್ತದಲ್ಲಾ?'
'ಏ.19ರಂದು 'ಬೈಟು ಕಾಫಿ'ಯಲ್ಲಿ 'ರಜೆ ಹೂವ ಪಕಗಳೆಗಳು' ಎಂದು ಶೀರ್ಷಿಕೆ ನೀಡಿದ್ದೀರಿ. ಹೂವಿನ ದಳಗಳು ಹಾಗೂ ಎಸಳುಗಳಿಗೆ 'ಪಕಳೆ'ಗಳು ಎನ್ನುತ್ತಾರೆ. 'ಪಕಗಳೆಗಳು' ಅಲ್ಲ. ಏ.21ರಂದು ಪುಟ 9ರಲ್ಲಿ 'ವೀರ ಮದಕರಿ ನಾಯಕ ಚಿತ್ರಕ್ಕೆ ಅವಮಾನ ಪ್ರತಿಭಟಿಸಿ' ಎಂಬ ಶೀರ್ಷಿಕೆಯಲ್ಲಿ ಪ್ರಸ್ತಾಪಿತವಾಗಿರುವ ಸುದ್ದಿ, 'ಬಲಮುರಿಯಲ್ಲಿ ಮದುವೆಗೆ ಬಂದಿದ್ದವರ ಮೇಲೆ ಹಳೆಯ ಮರ ಬಿದ್ದು ಗಾಯಗೊಂಡ' ಸುದ್ದಿ ಇದೆ' ಎಂದಿದ್ದಾರೆ. ಇದರ ಜತೆಗೆ ಒಂದು ಉಚಿತ ಸಲಹೆಯನ್ನೂ ನೀಡಿದ್ದಾರೆ. ಅದೇನೆಂದರೆ 'ಮಂಡ್ಯದ ಕೊಕ್ಕಡ ವೆಂಕಟ್ರಮಣ ಭಟ್ಟರನ್ನು ತಮ್ಮ ಪತ್ರಿಕೆಗೆ ಪ್ರೂಫ್ ರೀಡರ್ ಹಾಗೂ ವ್ಯಾಕರಣದ ಉಸ್ತುವಾರಿಗೆ ನೇಮಿಸಿಕೊಳ್ಳುವುದನ್ನು ಪರಿಶೀಲಿಸಿದರೆ ಸಾಕಷ್ಟು ತಪ್ಪುಗಳು ಕಡಿಮೆಯಾಗಬಹುದು' ಎಂದಿದ್ದಾರೆ.
ಕೊಕ್ಕಡ ವೆಂಕಟ್ರಮಣ ಭಟ್ ಸೇರಿದಂತೆ ಸಾಕಷ್ಟು ಓದುಗರ ಜ್ಞಾನ, ಸಮಯ ಮತ್ತು ಆಸಕ್ತಿಯಿಂದಾಗಿ ಪತ್ರಿಕೆಯಲ್ಲಿ ಸಾಕಷ್ಟು ತಪ್ಪುಗಳು ತಿದ್ದುಪಡಿಗೊಳ್ಳುತ್ತಿವೆ. ಅಂತಹ ಓದುಗರ ಸಹಕಾರ ಪತ್ರಿಕೆಗೆ ಮತ್ತು ಅದರ ಬೆಳವಣಿಗೆಗೆ ಅಗತ್ಯ ಕೂಡ. ಹಾಗಂತ ಅವರನ್ನೇ ಪತ್ರಿಕೆಗೆ ನೇಮಿಸಿಕೊಳ್ಳುವುದು ಸಮಂಜಸವಲ್ಲ. ಅದರ ಜತೆಗೆ ಮಂಡ್ಯದಲ್ಲಿ ಉತ್ತಮ ಉದ್ಯೋಗದಲ್ಲಿದ್ದಾರೆ. ಅವರಂತಹ ಅಸಂಖ್ಯ ಓದುಗರ ಸಹಕಾರ ಸದಾ ಇರುತ್ತದೆ ಎಂಬ ನಂಬಿಕೆಯಿದೆ. ಯಾಕೆಂದರೆ ಸುದ್ದಿ ಮನೆಗಳಲ್ಲಿ ಅಂತಹ ಜ್ಞಾನವಿರುವವ ಕೊರತೆ ಎದ್ದುಕಾಣುತ್ತಿದೆ. ಸವರ್ಣದೀರ್ಘ ಸಂಧಿಯೊಂದನ್ನು ಬಿಟ್ಟು ಉಳಿದ ಸಂಧಿಗಳನ್ನು ನಾವು ಮರೆಯುತ್ತಿದ್ದೇವೆ.
ಅದಕ್ಕೆ ದಿನಮಣಿ ರಾವ್ ಅವರೇ ಬರೆದಿರುವ 'ಪ್ರಹ್ಲಾದ' ಮತ್ತು 'ಪ್ರಲ್ಲಾದ'ವೇ ಉತ್ತಮ ಉದಾಹರಣೆ. ಅದೇ ರೀತಿ ಮಧ್ಯಾಹ್ನ- ಮಧ್ಯಾನ್ಹ, ಚಿಹ್ನೆ- ಚಿನ್ಹೆ ಇಂತಹ ಶಬ್ದಗಳ ಉಚ್ಚಾರ ಒಂದೇ ರೀತಿ ಅನ್ನಿಸಿದರೂ ಸರಿಯಾದದ್ದು ಯಾವುದು ಎನ್ನುವುದು ಮುಖ್ಯ. ಆದರೆ ಇತ್ತೀಚೆಗೆ ಪತ್ರಿಕೋದ್ಯಮ ಸೇರುವವರಿಗೆ ಒಟ್ಟಾರೆ ಆ ಅರ್ಥ ಬಂದರಾಯಿತು, ಹೇಗೆ ಬರೆದರೂ ಒಂದೇ ಎಂಬಂತಾಗಿದೆ. ಅಂತಹ ಸಂದರ್ಭದಲ್ಲಿ ಕೊಕ್ಕಡ ವೆಂಕಟ್ರಮಣ ಭಟ್ ಅವರಂತಹ ವ್ಯಕ್ತಿಗಳ ಅಗತ್ಯ ಹೆಚ್ಚು ಗೋಚರಿಸುತ್ತದೆ.
ಇನ್ನು ಮೈಸೂರು ಜಿಲ್ಲೆ ಮತದಾನದ ಶೇಕಡಾವಾರು ವಿವರದಲ್ಲಿ ಮತದಾರರ ಸಂಖ್ಯೆಯನ್ನೂ ಪರಿಗಣಿಸಬೇಕಾಗುತ್ತದೆ. ಅಲ್ಲದೇ ಇದು ಚುನಾವಣಾ ಆಯೋಗ ನೀಡುವ ವಿವರವೇ ಹೊರತು ನಾವು ಮಾಡಿದ ಲೆಕ್ಕವಲ್ಲ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.