ಸಾಮಾನ್ಯರಿಗೆ ಸಂದ ಗೌರವ
ಲಾಗಾಯ್ತಿನಿಂದಲೂ ನಮ್ಮಲ್ಲಿ ಜಾರಿಗೆ ಬಂದಿರುವ ಬಹುತೇಕ ಕಾಯಿದೆಗಳನ್ನು ಜಾರಿಯಲ್ಲಿ ತರುವ ನಿಮಯಗಳಲ್ಲಿ ಜನಸಾಮಾನ್ಯ ವರ್ಗಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ರೀತಿಯಲ್ಲೇ ಷರತ್ತುಗಳನ್ನು ಅಳವಡಿಸಲಾಗಿದೆ ಎನ್ನುವುದು ನಿಜ.
ಈ ಪರಂಪರೆಯಲ್ಲಿ ಸರ್ಕಾರದ ಸಂಬಂಧ ಬರುವ ಎಲ್ಲ ವಿಚಾರಗಳಲ್ಲೂ ಜನಸಾಮಾನ್ಯರ ಹೇಳಿಕೆಯನ್ನು ಒಪ್ಪದೇ ಸರ್ಕಾರವೇ ನೇಮಿಸಿರುವ ವಕೀಲ- ನೋಟರಿಗಳ ಮುಂದೆ ಪ್ರಮಾಣ ಪತ್ರವನ್ನು ಅಪೇಕ್ಷಿಸುವ ನಿಯಮವೂ ಸೇರಿದೆ.
ಸಾಮಾನ್ಯರು ಮಾತಿನಲ್ಲಿ ಸುಳ್ಳು ಹೇಳಿದ್ದರೆ, ಪ್ರಮಾಣ ಪತ್ರದಲ್ಲೂ ಅದು ದಾಖಲಾಗಲೇ ಬೇಕಾಗುತ್ತದೆ. ಅಂತಹ ಪದ್ಧತಿಯಲ್ಲಿ ನೋಟರಿಯ ಮುಂದೆ ಪ್ರಮಾಣ ಪತ್ರವನ್ನು ಸಲ್ಲಿಸುವುದು, ಅವರ ಸಮ್ಮುಖದಲ್ಲೇ ಅದಕ್ಕೆ ಸಹಿ ಮಾಡುವುದು, ಎಲ್ಲ ಷರತ್ತುಗಳೂ ಇರುತ್ತವೆ. ಅಲ್ಲಿಗೆ ಜನರ ಮಾತಿಗೆ ಇಲ್ಲದ ಮೌಲ್ಯ ನೋಟರಿ ಮುಂದೆ ಸಹಿ ಮಾಡಿದ ಪ್ರಮಾಣ ಪತ್ರಕ್ಕೆ ಇದೆ ಎಂದಾಯಿತು. ಆ ನೋಟರಿಗೆ (ಯಾರ ಮುಂದೆ ಪ್ರಮಾಣ ಪತ್ರವನ್ನು ಸಲ್ಲಿಸಲಾಗುವುದೋ ಅವರು) ವಿಷಯದ ಜ್ಞಾನ ಬೇಕಾಗಿಲ್ಲ. ಪ್ರಮಾಣ ಪತ್ರವನ್ನು ಸಲ್ಲಿಸುವವರು ಹೇಳಿದ್ದನ್ನೇ ಅವರೂ ನಂಬಬೇಕು. ಅನೇಕ ನೋಟರಿಗಳಿಗೆ ಈ ಕೆಲಸದಲ್ಲಿ ವಿಶ್ವಾಸವೂ ಇಲ್ಲ, ಅದನ್ನು ಬಹು ದೊಡ್ಡ ಜವಾಬ್ದಾರಿ ಎಂದೇನೂ ಅವರು ತಿಳಿದಿಲ್ಲ.
ಇಲ್ಲಿ ಮುಖ್ಯವಾಗಿರುವುದು ಶುಲ್ಕ ಪಾವತಿ. ನೋಟರಿಗೆ, ಪ್ರಮಾಣ ಪತ್ರ ಸಲ್ಲಿಸಿರುವವರು ಶುಲ್ಕ ಕೊಡಬೇಕು. ಶುಲ್ಕದ ಪ್ರಮಾಣ ನಿಗದಿಯಾಗದಿದ್ದರೂ ಇತರ ಎಲ್ಲ ವ್ಯಾಪಾರಗಳಂತೆ ಅದರಲ್ಲೂ ಹೆಚ್ಚು ಕಡಿಮೆ ಆಗಬಹುದು. ಪ್ರಮಾಣ ಪತ್ರ (ನೋಟರಿ ಮೊಹರು ಸಮೇತ) ಇಲ್ಲದೆ ಸರ್ಕಾರದಲ್ಲಿ ಯಾವ ಕೆಲಸವೂ ಆಗುವುದಿಲ್ಲ ಎನ್ನುವ ಪ್ರತೀತಿ. ಈ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿ, ಬಹುತೇಕ ಸಂದರ್ಭಗಳಲ್ಲಿ ಪ್ರಮಾಣ ಪತ್ರ ಅನಗತ್ಯ, ಅರ್ಜಿದಾರನ ಹೇಳಿಕೆಯೇ ಸಾಕು ಎನ್ನುವ ಆದೇಶವನ್ನು ಹೊರಡಿಸಲು ಮುಂದಾಗಿದೆ. ಒಂದು ರೀತಿಯಲ್ಲಿ ಇದು ಜನಸಾಮಾನ್ಯರ ಪಾಲಿಗೆ ಮುಕ್ತಿಯನ್ನು ರೂಪಿಸಿಕೊಡುವಂತಹ ಬೇರು ಮಟ್ಟದ ನಿರ್ಧಾರ.
ಆದರೆ ಅರ್ಜಿಯ ನಮೂನೆಗಳನ್ನು ಸಿದ್ಧಪಡಿಸಲು ಎರಡು ತಿಂಗಳು ಬೇಕಂತೆ. ಅಲ್ಲಿಯವರೆಗೆ ಪ್ರಮಾಣ ಪತ್ರದ ವ್ಯವಹಾರವೇ ನಡೆಯುವುದು. ಅರ್ಜಿಯ ನಮೂನೆಯ ತಯಾರಿಕೆಗೆ ಎರಡು ತಿಂಗಳು ಯಾಕೆ ಬೇಕು? ಇಂತಹ ಚಿಂತನೆ ಸರ್ಕಾರದಲ್ಲಿ ದಿಢೀರನೆ ಮೂಡುವುದಿಲ್ಲ. ಚಿಂತನೆ ಆರಂಭವಾದಾಗಲೇ, ಯಾರಾದರೂ ಒಂದಿಬ್ಬರು ಅರ್ಜಿ ನಮೂನೆಯ ಸ್ವರೂಪ ಕುರಿತು ಕೆಲಸ ಮಾಡಿದ್ದರೆ, ಸಚಿವ ಸಂಪುಟದ ನಿರ್ಧಾರದ ಜತೆಯಲ್ಲೇ ಅರ್ಜಿಗಳ ನಮೂನೆಯನ್ನು ಪ್ರಕಟಿಸುವುದು ಸಾಧ್ಯವಿತ್ತು. ಆ ದಿಕ್ಕಿನಲ್ಲಿ ಯೋಚಿಸುವುದು ಸರ್ಕಾರದ ಕಾಯಿದೆಯಲ್ಲಿಲ್ಲ ಎಂದು ತೋರುತ್ತದೆ.
ನಿಜ. ಸರ್ಕಾರಿ ಸೇವೆ, ಸೌಲಭ್ಯಗಳನ್ನು ಪಡೆಯಲು ಅನೇಕರು ಸುಳ್ಳು ಹೇಳಿಕೆಗಳನ್ನು ಕೊಡಬಹುದು. ಈಗಲೂ ಪ್ರಮಾಣ ಪತ್ರ ಸುಳ್ಳು ಬರೆಯುತ್ತಿಲ್ಲವೇ? ಹಾಗೇ ಮೋಸಗಾರಿಕೆ ಮುಂದುವರೆಯುತ್ತದೆ. ಅಲ್ಲಿ ತಪ್ಪು ರುಜುವಾತಾದರೆ ಸೂಕ್ತ ಶಿಕ್ಷೆಯನ್ನು ವಿಧಿಸಲೂ ನಿಯಮವನ್ನು ರಚಿಸಬಹುದು. ಈಗಲೂ ಪ್ರಮಾಣ ಪತ್ರದಲ್ಲಿ ಸುಳ್ಳು ಹೇಳುವುದು ಶಿಕ್ಷಾರ್ಹ ಅಪರಾಧ. ಮೋಸವನ್ನು ಪತ್ತೆ ಹಚ್ಚುವುದು ಒಳ್ಳೆಯ ಗುಣ ಮಟ್ಟದ ಆಡಳಿತದ ಲಕ್ಷಣ. ಆಡಳಿತದಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆಯನ್ನು ಮೂಡಿಸಿದರೆ, ನಿರ್ದಾಕ್ಷಿಣ್ಯವಾಗಿ ಮೋಸಗಾರರನ್ನು ಶಿಕ್ಷಿಸುವ ಹೆದರಿಕೆಯನ್ನು ಜನರ ಮಧ್ಯೆ ಹರಡಿದರೆ ಮೋಸಗಾರಿಕೆ ಕಡಿಮೆಯಾಗಬಹುದು. ಆದಷ್ಟು ಬೇಗ ಸರ್ಕಾರ ನೂತನ ನೀತಿಯನ್ನು ಜಾರಿಗೆ ತರುವುದು ಆಡಳಿತ ಯಂತ್ರದ ಜವಾಬ್ದಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

