ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಭದ್ರಾವತಿಯಿಂದ ಓಂಚನ್ನೇಶ್ ಅವರು ಬರೆಯುತ್ತಾರೆ- 'ಏ.28ರಂದು ಪುಟ 5ರಲ್ಲಿ 'ಪತ್ನಿ ಕೊಲೆಗೈದು ಪತಿ ಆತ್ಮಹತ್ಯೆ' ಎಂಬ ಶೀರ್ಷಿಕೆಯ ಸುದ್ದಿಯಲ್ಲಿ, 'ಮೂಲತಃ ಹುಬ್ಬಳ್ಳಿ ಜಿಲ್ಲೆಯವರಾದ ಗೀತಾ (30) ಮತ್ತು ನಾರಾಯಣ (42) ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು' ಎಂದಿದೆ. ಅದು ಸಾವಿಗೀಡಾದ ದಂಪತಿಗಳು ಎಂದಾಗಬೇಕಿತ್ತಲ್ಲವೇ?'
'ಏಕೆಂದರೆ ಆತ್ಮಹತ್ಯೆ ಮಾಡಿಕೊಂಡಿದ್ದು ನಾರಾಯಣ ಮಾತ್ರ. ಪತ್ನಿ ಗೀತಾ ಕೊಲೆಯಾಗಿರುತ್ತಾಳೆ. ಆದ್ದರಿಂದ ಸಾವಿಗೀಡಾದ ಎಂಬ ಶಬ್ದದ ಉಪಯೋಗ ಆತ್ಮಹತ್ಯೆಯ ಬದಲು ಸೂಕ್ತವಲ್ಲವೇ?' ಎಂದಿದ್ದಾರೆ.
ಇದು ಎಲ್ಲಾ ಸಂದರ್ಭಕ್ಕೂ ಅನ್ವಯವಾಗುವುದಿಲ್ಲ. ಕೆಲವೊಮ್ಮೆ ಸಂಪೂರ್ಣ ಕುಟುಂಬ ಆತ್ಮಹತ್ಯೆ ಮಾಡಿಕೊಂಡ ಘಟನೆಗಳನ್ನು ನೀವು ಗಮನಿಸಿರಬಹುದು. ಮಕ್ಕಳಿಗೆ ಆತ್ಮಹತ್ಯೆ, ಪಾಲಕರ ಸಮಸ್ಯೆಗಳ ಅರಿವಿರುವುದಿಲ್ಲ. ಹಾಗಾಗಿ ಅವರು ಆತ್ಮಹತ್ಯೆಗೆ ಸಮ್ಮತಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಪಾಲಕರು ಮಕ್ಕಳಿಗೆ ವಿಷವುಣಿಸಿ ಅಥವಾ ಇನ್ನಾವುದೇ ರೀತಿಯಲ್ಲಿ ಅವರನ್ನು ಸಾಯಿಸಿ, ನಂತರ ತಾವೂ ಅತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳ ಕೊಲೆ ಎಂದೇ ಪರಿಗಣಿಸಲಾಗುತ್ತದೆ. ಆದರೆ ನಿಜವಾದ ಅರ್ಥದಲ್ಲಿ ಅದು ಕುಟುಂಬದ ಆತ್ಮಹತ್ಯೆಯಾಗಿರುತ್ತದೆ.
ಆದ್ದರಿಂದ ಘಟನೆ ಆಧಾರದಲ್ಲಿ ಇದು ನಿರ್ಧಾರವಾಗುತ್ತದೆ.
ಮೈಸೂರಿನಿಂದ ಕೊ.ಸು. ನರಸಿಂಹಮೂರ್ತಿ ಅವರು ಬರೆಯುತ್ತಾರೆ- 'ನಮ್ಮ ಕಣ್ಣಿಗೇ ಬೀಳುವುದೇತಕೆ ಇಂತಹ ತಪ್ಪುಗಳು? ಏ.28ರಂದು ಮೂರನೇ ಪುಟದ 'ಗೋರಿಲ್ಲಾ ಪೋಲೋ ಇನ್ನಿಲ್ಲ' ಎಂಬ ಸುದ್ದಿಯಲ್ಲಿ 'ಸ್ನಾನ ಮಾಡೋದೆಂದರೆ ಖುಷಿ' ಉಪಶೀರ್ಷಿಕೆಯ ಸುದ್ದಿಯಲ್ಲಿ, 'ತನ್ನನ್ನು ಹಾರೈಕೆ ಮಾಡುವವರು ಸ್ನಾನ ಮಾಡಿಸಲು ಬಂದರೆ' ಎಂದು ಪ್ರಕಟವಾಗಿದೆ.'
'ಹಾರೈಕೆಗೂ ಆರೈಕೆಗೂ ವ್ಯತ್ಯಾಸ ಗೊತ್ತಿಲ್ಲದಿರುವುದು ನಿಮ್ಮ ವರದಿಗಾರರಿಗೋ ಅಥವಾ ಅಂತಿಮ ಕರಡು ತಿದ್ದುವವರಿಗೋ? ತಿಳಿಯಲಿಲ್ಲ.'
'ಏ.27ರಂದು ಪುಟ 4ರ 'ಬಯಲು ಶೌಚಮುಕ್ತ ಸಿದ್ದರಾಮಯ್ಯ ಆಸಕ್ತ 95 ಸಾವಿರ ಜನಪ್ರತಿನಿಧಿಗಳಿಗೆ ಪತ್ರ' ಸುದ್ದಿಯ ಶೀರ್ಷಿಕೆಯಾಗಿದ್ದರೆ, '95 ಜನಪ್ರತಿನಿಧಿಗಳಿಗೆ ಪತ್ರ' ಎಂದು ಉಪಶೀರ್ಷಿಕೆ ಮುದ್ರಣವಾಗಿದೆ' ಎಂದಿದ್ದಾರೆ.
ತಪ್ಪು ಯಾರದ್ದಾದರೂ ಆಗಿರಲಿ. ಅಂತಿಮವಾಗಿ ಜನ ದೂರುವುದು ಪತ್ರಿಕೆಯನ್ನು. ವರದಿಗಾರ ಸರಿಯಾಗಿ ಬರೆಯಬೇಕು. ಅಕಸ್ಮಾತ್ ಆತ ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಪುಟ ನಿರ್ವಾಹಕರದ್ದು ಮತ್ತು ಕರಡು ತಿದ್ದುವವರದ್ದು. ವರದಿಗಾರರು ತಪ್ಪು ಮಾಡಿದ್ದಲ್ಲಿ ಅವರು ಸುದ್ದಿ ಓದಿ ತಿದ್ದಿಕೊಳ್ಳಬೇಕು. ಆದರೆ ಬಹುತೇಕ ವರದಿಗಾರರು ಪತ್ರಿಕೆಯಲ್ಲಿ ಪ್ರಕಟವಾದ ಅವರೇ ಬರೆದ ಸುದ್ದಿಯನ್ನು ಓದುವುದೇ ಇಲ್ಲ.

 ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.