ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಉತ್ತರಕನ್ನಡ ಜಿಲ್ಲೆ ಕೆಕ್ಕಾರದಿಂದ ಎಸ್.ಎ. ಭಟ್ಟ ಅವರು ಬರೆಯುತ್ತಾರೆ- 'ಕ.ಪ್ರ.ದ ಕ್ರೀಡಾಪುಟದಲ್ಲಿ ಪ್ರತಿನಿತ್ಯ ಏನಾದರೂ ತಪ್ಪು ಆಗುತ್ತಲೇ ಇರುತ್ತವೆ. ಹಲವು ಜನರು ಹಲವು ಬಾರಿ ಬರೆದು ತಿಳಿಸಿದರೂ ಏನೂ ಪ್ರಯೋಜನ ಆಗಲಿಲ್ಲ. ಫೆ.12 ಬುಧವಾರ "ಆತಿಥೇಯ 606 ರನ್ ಬೃಹತ್ ಮೊತ್ತ"ದಲ್ಲಿ ಸ್ಕೋರ್ ವಿವರದಲ್ಲಿ ಬಿನ್ನಿ, ಗೌತಮ ಮಿಥುನ್ ಮೂರೂ ಆಟಗಾರರು ಅಜೇಯರಾಗಿ ಉಳಿದಿದ್ದಾರೆ. (ಆ ಪೈಕಿ ಯಾರಿಗೂ ಪೆಟ್ಟಾಗಿರಲಿಲ್ಲ) ಗುರುವಾರ 13ರಂದು ವಿವರಣೆಯಲ್ಲಿ ಶೇಷ ಭಾರತದ ಮಿಶ್ರಾ (5) ಹರ್ಬಜನ್ ಸಿಂಗ್ (8) ಅನುರಿತ್ ಸಿಂಗ್ (ಅಜೇಯ 7) ಹೀಗೆ ಇದೆ. ಕೊನೆಯಲ್ಲಿ ಲಗುಬಗನೆ ವಿಕೆಟ್ ಒಪ್ಪಿಸಿದರು ಎಂದು ಬರೆದಿದ್ದೀರಿ. ಆ ಅಜೇಯರಾಗಿ ಉಳಿದಿದ್ದ ಅನುರಿತ್‌ಸಿಂಗ್‌ರ ವಿಕೆಟ್ ಬೀಳಲಿಲ್ಲ. ಆದರೂ ಅವರು ಹೇಗೆ ವಿಕೆಟ್ ಒಪ್ಪಿಸಿದರು ತಿಳಿಯಲಿಲ್ಲ' ಎಂದಿದ್ದಾರೆ.
ಕ್ರೀಡಾಪುಟದಲ್ಲಿ ಬರುತ್ತಿದ್ದ ತಪ್ಪುಗಳು ಗಣನೀಯವಾಗಿ ಕಡಿಮೆಯಾಗಿವೆ. ಒಂದು ಸುದ್ದಿಯಲ್ಲಿ ತಪ್ಪಾದತಕ್ಷಣ ತಪ್ಪುಗಳೇ ಕಡಿಮೆಯಾಗಿಲ್ಲ ಎಂದು ಹೇಳುವುದು ಸರಿಯಲ್ಲ. ಆದರೆ ತಪ್ಪಾಗಿರುವುದು ನಿಜ.
ಮೈನಾ ಶ್ರೀವರ ಅವರು ಬರೆಯುತ್ತಾರೆ- 'ಫೆ.20ರಂದು ಸಂಚಿಕೆಯ, ಬೆಂಗಳೂರು ಆವೃತ್ತಿಯ ಪುಟ 14ರಲ್ಲಿ ಪ್ರಕಟವಾಗಿರುವ 'ತೆಲಂಗಾಣದ ಸುತ್ತಮುತ್ತ' ಎಂಬ ಶೀರ್ಷಿಕೆಯಲ್ಲಿ ಒಂದು ಸೊನ್ನೆ ಅನವಶ್ಯಕವಾಗಿ ನುಸುಳಿಕೊಂಡಿದೆ. ತೆಲಂಗಾಣ ಹೋರಾಟವನ್ನು 500 ವರ್ಷಗಳಷ್ಟು ಹಳೆಯದಾಗಿ ಮಾಡಿದೆ. 50 ದಶಕಗಳ ಇತಿಹಾಸ ಎಂದು ಶೀರ್ಷಿಕೆ ಹೇಳಿದರೆ, 5 ದಶಕಗಳ ಇತಿಹಾಸ ಎಂದು ಸುದ್ದಿ ಹೇಳುತ್ತದೆ. 1959ರಲ್ಲಿ ಹೋರಾಟ ಶುರುವಾಗಿರುವುದರಿಂದ, ಶೀರ್ಷಿಕೆ 5 ದಶಕಗಳ ಇತಿಹಾಸ ಎಂಬುದಾಗಿ ಬದಲಾಗಬೇಕಿತ್ತು' ಎಂದಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ರಾಸಾಯನಿಕ ಶಾಸ್ತ್ರ ವಿಭಾಗದಿಂದ ವಿನಾಯಕ ಕಾಮತ್ ಅವರು ಬರೆಯುತ್ತಾರೆ- 'ಹುಬ್ಬಳ್ಳಿ-ಧಾರವಾಡ ಸುದ್ದಿಗಳನ್ನು 'ಟ್ವಿನ್ ಸಿಟಿ' ಎಂಬ ತಲೆಬರಹದಲ್ಲಿ ಪ್ರಕಟಿಸುತ್ತಿದ್ದೀರಿ. ಕನ್ನಡ ಪತ್ರಿಕೆಯಲ್ಲಿ 'ಟ್ವಿನ್ ಸಿಟಿ' ಎಂಬ ಇಂಗ್ಲಿಷ್ ಪದಗಳ ಅವಶ್ಯವಿತ್ತೆ?'
'ಅಷ್ಟಕ್ಕೂ ಹುಬ್ಬಳ್ಳಿ-ಧಾರವಾಡಗಳನ್ನು ಸ್ಥಳೀಯವಾಗಿ ಎಲ್ಲರೂ 'ಟ್ವಿನ್ ಸಿಟಿ' ಎಂದು ಕರೆದಿದ್ದರೆ, ಕರೆಯುತ್ತಿದ್ದರೆ ನೀವು ಅದನ್ನೇ ಬರೆದಿದ್ದೀರಿ ಎನ್ನಬಹುದಿತ್ತು. ಪರಿಸ್ಥಿತಿ ಹಾಗೇನು ಇಲ್ಲ. ಹಾಗೆಯೇ 'ಟ್ವಿನ್ ಸಿಟಿ' ಎಂಬುದಕ್ಕೆ ಪರ್ಯಾಯ ಪದ ಕನ್ನಡದಲ್ಲಿಲ್ಲದಿದ್ದರೆ 'ಟ್ವಿನ್ ಸಿಟಿ' ನಡೆಯುತ್ತಿತ್ತೇನೋ. 'ಅವಳಿ ನಗರ' ಎಂಬ ಸುಂದರ ಹಾಗೆಯೇ ಎಲ್ಲರಿಗೂ ಅರ್ಥವಾಗುವಂತಹ ಕನ್ನಡ ಪದವಿದ್ದರೂ 'ಟ್ವಿನ್ ಸಿಟಿ' ಬೇಕಿತ್ತೆ? ಇನ್ನು ಮುಂದಾದರೂ  'ಟ್ವಿನ್ ಸಿಟಿ' ಕೈಬಿಡುತ್ತೀರೆಂದು ಆಶಿಸುತ್ತೇನೆ' ಎಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿನಗರ ಎಂದೇ ಕರೆಯುತ್ತಾರೆ. ಆದ್ದರಿಂದ ವಿನಾಯಕ ಕಾಮತ್ ಅವರ 'ಟ್ವಿನ್ ಸಿಟಿ' ಅಭಿಪ್ರಾಯಕ್ಕೆ ಸಹಮತವಿದೆ. ಆದರೆ, ಈಗಾಗಲೇ ಬೇರೆ ಪತ್ರಿಕೆಗಳು ಅದನ್ನು ಬಳಸುತ್ತಿವೆ. ಆಗ ನಾವೂ ಅದನ್ನೇ ಬಳಸಿದಂತೆ ಆಗಬಾರದು ಎಂಬ ಕಾರಣಕ್ಕೆ 'ಟ್ವಿನ್ ಸಿಟಿ' ಎಂಬ ಹೆಸರು ಇಡಲಾಗಿದೆ. ಆದರೂ ಪರ್ಯಾಯಗಳಿದ್ದರೆ ಹುಡುಕೋಣ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.