ಸಂಪಾದಕೀಯ

ಬರದ ನಡುವೆ ಪ್ರವಾಸದ ಸುಗ್ಗಿ

Published On :

"ಬರದಲ್ಲೂ ಶಾಸಕರಿಗೆ ಸಾಂಬಾ ಮೋಜು" (ಕ.ಪ್ರ. ಡಿ.26). 18 ಮಂದಿ ಶಾಸಕರು ದುಡಿದೂ ದುಡಿದೂ ಸುಸ್ತಾಗಿ ಸ್ವಲ್ಪ ಮಟ್ಟಿನ ವಿಶ್ರಾಂತಿ ಮತ್ತು ಮನಾಹ್ಲಾದಕ್ಕಾಗಿ, ತಮ್ಮದಲ್ಲದ ಆದರೆ ಸಾರ್ವಜನಿಕರ ಹಣದ ಲೆಕ್ಕದಲ್ಲಿ, ಬ್ರೆಜಿಲ್, ಪೆರು ಮತ್ತು ಅರ್ಜೆಂಟೀನಾ ದೇಶಗಳಿಗೆ ಪ್ರವಾಸ ಹೊರಡಲು ತುದಿಗಾಲ ಮೇಲೆ ನಿಂತಿದ್ದಾರೆ. ಇವರದು  "ಅಧ್ಯಯನ ಪ್ರವಾಸವಂತೆ"! ಅಧ್ಯಯನದ ಭರಾಟೆಯ ನಡುವೆಯೇ ಮರುಭೂಮಿ ಸಫಾರಿ, ಬುಡಕಟ್ಟು ಜನಾಂಗದ ಲಲನೆಯರು ನಡೆಸಿಕೊಡುವ "ಸಾಂಸ್ಕೃತಿಕ ನೃತ್ಯ" ವೀಕ್ಷಣೆಯಂಥ ಮನಕಾನಂದ ತರುವ ಕಾರ್ಯಕ್ರಮಗಳೂ ಉಂಟು. ಭಾಜಪ "ಅಧಿಕಾರದ ಕೊನೆಯ ದಿನಗಳಲ್ಲಿ "ಶಾಸಕರ ಐದು ವರ್ಷಗಳ ಅವಧಿಯಲ್ಲಿ ಎರಡು ಬಾರಿ ವಿದೇಶ ಯಾತ್ರೆ ಅವಕಾಶದ ಕೊಡುಗೆ ದೊರೆಯಿತು. ಸಾರ್ವಜನಿಕರು ಈ ನಿಟ್ಟಿನಲ್ಲಿ ಕುತೂಹಲದಿಂದ ಅರಿತುಕೊಳ್ಳ ಬಯಸುವ ಕೆಲವು ಸಂಗತಿಗಳಿವೆ, ಏಕೆಂದರೆ ಶಾಸಕರು ರಾಜ್ಯದ ಬೊಕ್ಕಸಕ್ಕೆ ಕೈಯಿಕ್ಕಿದ್ದಾರೆ; ಬೊಕ್ಕಸ ತುಂಬುವುದು ಸಾರ್ವಜನಿಕರಿಂದ. (ಈಗ ಬೊಕ್ಕಸ ಬರಿದಾಗುತ್ತಿದೆಯಂತೆ. ಆದರೇನು ಬಿಡಿ) ಯಾವ ಯಾವ ಸ್ಥಳಗಳಲ್ಲಿ ಶಾಸಕರು ನಡೆಸುವ ಅಧ್ಯಯನದ ವಿಷಯಗಳು ಯಾವುವು? ಇವು ರಾಜ್ಯಕ್ಕೆ ಪ್ರಸ್ತುತವಾದುವೇ? ಅಗತ್ಯವಾದುವೇ? ಜರೂರಾಗಿ ಅಳವಡಿಸಿಕೊಳ್ಳಬೇಕಾದವೇ? ಅಧ್ಯಯನದ ವಿಷಯದಲ್ಲಿ ಶಾಸಕರ ಅರ್ಹತೆ ಏನು ಮತ್ತು ಏನು ಪೂರ್ವಸಿದ್ಧತೆ ಮಾಡಿಕೊಂಡಿದ್ದಾರೆ? 224 ಶಾಸಕರಲ್ಲಿ ಈ 18 ಮಂದಿಯನ್ನು ಆಯ್ಕೆ ಮಾಡಲು ಅನುಸರಿಸಿದ ಮಾನದಂಡಗಳ್ಯಾವುವು? ಆಯ್ಕೆ ಮಾಡಿದವರು ಯಾರು? ಹಿಂದಿನ ಪ್ರವಾಸ ತಂಡಗಳು ಕೊಟ್ಟಿರಬಹುದಾದ ವರದಿಗಳು ಎಲ್ಲಿವೆ? ಅವುಗಳ ಬಗ್ಗೆ ಏನು ಕಾರ್ಯಕ್ರಮಗಳನ್ನು ಕೈಗೊಂಡು, ರಾಜ್ಯಕ್ಕೆ ಲಾಭವಾಗಿದೆ? ಅಧ್ಯಯನದ ಪ್ರವಾಸಕ್ಕೆ 'ಅಸ್ತು' ಎಂದವರು ಯಾರು? ಇವೆಲ್ಲವೂ ಬಹಿರಂಗಗೊಳ್ಳಲಿ. ನಮ್ಮದು ಎಷ್ಟೆಂದರೂ ಪಾರದರ್ಶಕ ವ್ಯವಸ್ಥೆ ತಾನೆ! ಈ ಪ್ರವಾಸ ಕುರಿತು ದೂರದರ್ಶನ ಛಾನಲ್ ಒಂದರಲ್ಲಿ ಚರ್ಚೆ ನಡೆದು, ನಮ್ಮ ಕೆಲವು ಶಾಸಕರು ತಡಬಡಿಸಿದ್ದನ್ನು ಕಂಡಾಗ ಈ ಪ್ರವಾಸವೆನ್ನುವುದರ ಜಳ್ಳು ಬಯಲಾಯಿತು. 90 ತಾಲ್ಲೂಕುಗಳಲ್ಲಿ ಬರ ಬಡಿದಿರುವಾಗ ಶಾಸಕರ ಪ್ರವಾಸೋಲ್ಲಾಸಕ್ಕೆ ಸುಗ್ಗಿ ಬಂದಿದೆ.
- ಸಾಮಗ ದತ್ತಾತ್ರಿ, ಬೆಂಗಳೂರು.

ಉತ್ತರ ಕೊಡಿ ಮುಖ್ಯಮಂತ್ರಿಗಳೇ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಸಚಿವ ಸಂಪುಟ ವಿಸ್ತರಣೆಯ ನಿಲುವು ಸರಿಯೇ? ನೀವು ನಿಮ್ಮ ಮೊದಲ ಸಚಿವ ಸಂಪುಟದಲ್ಲಿ ಹೇಳಿದ ಮಾತು ಮರೆತು ಬಿಟ್ಟಿದ್ದೀರಿ. ಅಂದು ನೀವು ಹೇಳಿದ್ದು ಏನು? 'ನನ್ನ ಸಚಿವ ಸಂಪುಟದಲ್ಲಿ ಕಳಂಕಿತ ಹಾಗೂ ಭ್ರಷ್ಟಾಚಾರದ ಹಣೆಪಟ್ಟಿ ಹೊತ್ತಿರುವ ಯಾವ ಶಾಸಕರಿಗೂ ಅವಕಾಶವಿಲ್ಲ' ಎಂದು ಘಂಟಾಘೋಷವಾಗಿ ಹೇಳಿದ್ದಿರಿ. ಆದರೆ, ಈಗ ನೀವು ಭ್ರಷ್ಟಾಚಾರ ಆರೋಪ ಹೊತ್ತಿರುವ ಡಿ.ಕೆ.ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೀರಿ. ಎಲ್ಲಿ ಹೋಯಿತು ಅಂದು ನೀವು ತೋರಿಸಿದ್ದ ಪೌರುಷ? ವಿಪರ್ಯಾಸ ಎಂದರೆ, ಹಿರೇಮಠ್ ಅವರ ಆರೋಪವನ್ನೇ ನಂಬಿ ಇತ್ತೀಚೆಗಷ್ಟೇ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದೀರಿ. ಅದೇ ಹಿರೇಮಠ್ ಅವರ ಕಳೆದ ಕೆಲವು ವರ್ಷಗಳಿಂದ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಹೀಗಿದ್ದಾಗ್ಯೂ, ಅವರನ್ನು ಹೇಗೆ ಸಂಪುಟಕ್ಕೆ ಸೇರಿಸಿಕೊಂಡಿರಿ? ಇದು ನಿಮ್ಮ ಇಬ್ಬಂದಿತನವನ್ನು ತೋರಿಸುವುದಿಲ್ಲವೇ? ಈ ನಿಮ್ಮ ಇಬ್ಬರು ಸಚಿವರಿಗೆ ನೀವು ನೀಡಿರುವ ಖಾತೆಯನ್ನು ಭ್ರಷ್ಟಾಚಾರ, ಕಳಂಕವಿಲ್ಲದೆ ಪ್ರಾಮಾಣಿಕವಾಗಿ ನಿರ್ವಹಿಸುವರೇ? ನಿಮ್ಮ ಭ್ರಷ್ಟಾಚಾರ ರಹಿತ ಆಡಳಿತ ಸಂಕಲ್ಪಕ್ಕೆ ಸಹಕರಿಸುವರೇ? ಉತ್ತರಿಸಿ ಮುಖ್ಯಮಂತ್ರಿಗಳೇ.
- ಮಂಜುನಾಥ್ ಎಸ್. ಬೆಂಗಳೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.