ಸಂಪಾದಕೀಯ

ಆಡಳಿತಯಂತ್ರ ಸ್ಥಗಿತವಾಗಬಾರದು

Published On :

ಪ್ರಧಾನಿ ಮನಮೋಹನಸಿಂಗ್ ಅವರು ತಮ್ಮ ರಾಜದಂಡವನ್ನು ಕೆಳಗಿಟ್ಟು ಅದರ ಮುಂದಿನ ವಾರಸುದಾರರನ್ನು ಎದುರು ನೋಡುತ್ತಿದ್ದಾರೆ. ಲೋಕಸಭೆ ಚುನಾವಣೆ ಏಪ್ರಿಲ್ ಮಧ್ಯದಿಂದ ಮೇ ಮೊದಲಿನ ದಿನಗಳವರೆಗೂ ನಡೆಯಬಹುದೆನ್ನುವ ವರದಿ ನಂಬಲು ನಿಜವಾಗಿಯೂ ಅರ್ಹವಾದ ಮೂಲಗಳಿಂದ ಹೊರಬಿದ್ದಿದೆ.
ಕೇಂದ್ರದ ಸಚಿವರಲ್ಲಿ ಬಹುಮಂದಿ ಲೋಕಸಭೆಯ ಸದಸ್ಯರಾಗಿರುವುದರಿಂದ ಅವರಿಗೆ ಸಹಜವಾಗಿಯೇ ಚುನಾವಣೆ ಚಿಂತೆ. ಅವರವರ ರಾಜ್ಯಗಳು ಹಾಗೂ ಕ್ಷೇತ್ರಗಳಿಗೆ ರಾಜಕೀಯ ಗಮನ ಕೊಡುವುದರಲ್ಲೇ ಅವರು ಮಗ್ನರಾಗಿರುತ್ತಾರೆ.
ಹೀಗಾಗಿ ದೆಹಲಿಯಲ್ಲಿ ಆಡಳಿತ ಯಂತ್ರದ ಚಕ್ರಗಳು ಸ್ಥಗಿತವಾಗುವುದು ತೀರ ಸಹಜವಾದ ಪ್ರಕ್ರಿಯೆ. ಆದರೆ ಹಾಗಾಗದಂತೆ ನೋಡಿಕೊಳ್ಳುವುದು ಈಗ ಅಧಿಕಾರದ ಸ್ಥಾನಗಳಲ್ಲಿರುವವರ ಕರ್ತವ್ಯ. ಹೊಸ ನಿರ್ಧಾರವನ್ನು ಕೈಗೊಳ್ಳಬೇಕಾದರೆ ಸ್ವಲ್ಪ ಹಿಂದೆ-ಮುಂದೆ ನೋಡುವುದು ಅಗತ್ಯವಾದರೂ, ಈಗಾಗಲೇ ಸಂಸತ್ತಿನ ಅಂಗೀಕಾರ ಪಡೆದಿರುವ ಕೆಲಸ ನಿಲ್ಲಬೇಕಾದ ಅಗತ್ಯವೇನೂ ಇಲ್ಲ. ಆದರೂ ಅಧಿಕಾರಿಷಾಹಿ ವ್ಯವಸ್ಥೆಯಲ್ಲಿ, ಅನಿಶ್ಚಿತ ವಾತಾವರಣ ಮೂಡಿದರೆ, ಮೊದಲ ಪರಿಣಾಮ ಕಂಡುಬರುವುದು ಅಧಿಕಾರಿಗಳು ಮಾಡಬೇಕಾದ ಕೆಲಸದಲ್ಲಿ. ನಮ್ಮ ಆಡಳಿತ ಪದ್ಧತಿಯಲ್ಲಿ ತೀರ್ಮಾನದ ಅಧಿಕಾರ ಮಂತ್ರಿಗಳಲ್ಲಿ ಇದ್ದರೂ, ಆದೇಶದ ಅಧಿಕಾರ ಇರುವುದು ಅಧಿಕಾರಿಗಳಲ್ಲೇ. ನಾನಾ ಹಂತಗಳಲ್ಲಿ ಅಧಿಕಾರ ಚಲಾಯಿಸಬೇಕಾದ ಸನ್ನಿವೇಶಗಳಲ್ಲಿ ಭವಿಷ್ಯದಲ್ಲಿ ತಮ್ಮ ಸ್ಥಾನ-ಮಾನದ ಕುರಿತು ಅನಿಶ್ಚಿಕತೆ ಮೂಡಿದಾಗ ಅಧಿಕಾರಿಗಳು ಸುಮ್ಮನಾಗುತ್ತಾರೆ.
ಈಗಾಗಲೇ ಆ ಪ್ರವೃತ್ತಿ ಅನೇಕ ಕಡೆಗಳಲ್ಲಿ ಕಂಡುಬಂದಿದೆ. ಕಲ್ಲಿದ್ದಲ ಗಣಿಗಳಲ್ಲಿ ಉತ್ಪಾದನೆಗೆ ಅನುಮತಿ ನೀಡುವ ವಿಚಾರದಲ್ಲಿ ಗೊಂದಲವಿದೆ. ಮೂರನೆಯ ತಲೆಮಾರಿನ ಟೆಲಿಕಾಮ್ ತರಂಗಾಂತರ ಗುಚ್ಛಗಳ ಹಂಚಿಕೆಯ ವಿಚಾರದಲ್ಲಿ ಇನ್ನೂ ಕೊನೆಯ ಮಾತು ಕೇಳಿ ಬಂದಿಲ್ಲ. ಇಲ್ಲಿ ಕಂಡುಬಂದಿರುವುದು ನೀತಿ-ನಿರೂಪಣೆ ವ್ಯವಸ್ಥೆಗೆ "ಲಕ್ವ" ಹೊಡೆದಿರುವ ಅವಸ್ಥೆಯಲ್ಲ. ಸಂಬಂಧಪಟ್ಟ ಮಂತ್ರಿಗಳು ಅಧಿಕಾರಿಗಳ ಮನಸ್ಸಿನಲ್ಲಿನ ತೊಳಲಾಟದ ಅವಸ್ಥೆ. ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ನಡೆಯಬೇಕಾಗಿರುವ, ನಡೆಯುತ್ತಿರುವ ತನಿಖೆ ಅನೇಕ ಪ್ರಕರಣಗಳಲ್ಲಿ ನಿಧಾನವಾಗಿ ಸಾಗುತ್ತಿದೆ. ಮೂಲ ಸೌಲಭ್ಯಗಳ ರಚನೆಯ ಬೃಹತ್ ಕಾಮಗಾರಿಗಳಲ್ಲಿ ವಿಳಂಬವಾಗುತ್ತಿರುವುದೂ ನಿಜ.
ಇದುವರೆಗೂ ದೈನಂದಿನ ಆಡಳಿತದಲ್ಲಿ ಹೆಚ್ಚಿನ ವ್ಯತ್ಯಾಸಗಳೇನೂ ಕಂಡುಬಂದಿರದೇ ಹೋಗಿರಬಹುದು. ಆದರೆ ಏಪ್ರಿಲ್ ಮೇ ನಲ್ಲಿ ಚುನಾವಣೆ ಎನ್ನುವ ಬಹುತೇಕ ಖಚಿತ ರೂಪದ ವರದಿಗಳು ಪ್ರಕಟವಾದ ಅನಂತರ ಸಾಮಾನ್ಯ ಆಡಳಿತದಲ್ಲಿ ಆಗಲೇ ಬೇಕಾದ ಕೆಲಸವನ್ನು ಬಿಟ್ಟರೆ ಬೇರೆ ಕೆಲಸಗಳು ಆಗುವುದೇ ಇಲ್ಲ. ಆದರೆ ಅನೇಕ ರಾಜ್ಯಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ಇದೆ. ಈಚೆಗೆ ನೂತನ ಮಂತ್ರಿ ಮಂಡಲಗಳು ಅಧಿಕಾರ ವಹಿಸಿಕೊಂಡ ರಾಜ್ಯಗಳಲ್ಲಿ ಅಧಿಕಾರದ ಮೊದಲ ದಿನಗಳಲ್ಲಿ ಚುರುಕಾಗಿ ಕೆಲಸ ಮಾಡುವ ಉಮೇದು ಕಂಡು ಬಂದಿರಬಹುದು. ಕೇಂದ್ರದಲ್ಲಿ ಸರ್ಕಾರ ಚುರುಕಿನಿಂದ ಕೆಲಸ ಮಾಡದೇ ಹೋದರೆ, ಅದರ ಪರಿಣಾಮ ರಾಜ್ಯಗಳ ಆಡಳಿತದ ಮೇಲೂ ಆಗಬಹುದು.
ನಿಜವಾಗಲೂ ಹಾಗೆ ಆಗಬೇಕಾಗಿಲ್ಲ. ಆದರೆ ಆಗುತ್ತಿದೆ ಎನ್ನುವುದು ಇದುವರೆಗಿನ ಅನುಭವದ ಮಾತು. ಕರ್ನಾಟಕದಲ್ಲಂತೂ ಆಡಳಿತ ಯಂತ್ರದಲ್ಲಿ ವಿಳಂಬ ನೀತಿ ಕಂಡುಬರುವುದಕ್ಕೆ ಯಾವ ಕಾರಣವೂ ಇಲ್ಲ. ಆದರೂ ಕೆಲವು ಕಡೆಗಳಲ್ಲಿ ಬಜೆಟ್ನಲ್ಲಿ ಅಂಗೀಕಾರವಾಗಿದ್ದ ಕೆಲಸಗಳಿಗೂ ಬರಬೇಕಾದ ಆದೇಶ ಬಂದಿಲ್ಲವಂತೆ. ಅದು ವಿಧಾನ ಸಭೆ ಸ್ಪೀಕರ್ ಅವರ ಗಮನಕ್ಕೂ ಬಂದಿದೆ. ಅವರು ಅದನ್ನು ಬಹಿರಂಗವಾಗಿ ಹೇಳಿದ್ದೂ ಆಗಿದೆ. ಹೀಗೇಕೆ ಆಗಬೇಕು ಆ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಯಾರು ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.