ತಪ್ಪಾಯ್ತು ತಿದ್ಕೋತೀವಿ
ಶ್ರೀವತ್ಸ ಕುರುಡಿ ಮಿಂಚಂಚೆ ಕಳುಹಿಸಿದ್ದಾರೆ. ಜ.2ರ ಕ್ರೀಡಾ ಪುಟದ ಸುದ್ದಿಯ ತಪ್ಪನ್ನು ಗಮನಕ್ಕೆ ತಂದಿದ್ದಾರೆ. 'ಪುಟ 15ರಲ್ಲಿ 'ಶುಮಾಕರ್ ಆರೋಗ್ಯ ಚೇತರಿಕೆ, ಅಪಾಯದಿಂದ ಪಾರಾಗಿಲ್ಲ' ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿದೆ. ಸುದ್ದಿಯ ಕೊನೆಯಲ್ಲಿ ಒಂದು ಹಾಸ್ಯದ ತುಣುಕು ಸೇರಿಕೊಂಡಿದೆ. 'ಅವರ ವಯಸ್ಸು ಹಾಗೂ ದೈಹಿಕ ಪರಿಸ್ಥಿತಿ ಅವರಿಗೆ ಬೆಂಬಲವಾಗಿದೆ. ಅವರ ಸ್ಥಿತಿ ಮತ್ತಷ್ಟು ಚೇತರಿಕೆ ಕಾಣಲು ಕೋಮಾದಲ್ಲಿ ಇರಿಸಲಾಗಿದೆ' ಎಂದು ಪ್ರಕಟವಾಗಿದೆ. ಯಾವುದೇ ವ್ಯಕ್ತಿಯ ಆರೋಗ್ಯ ಚೇತರಿಕೆಯಾಗಲು ಕೋಮಾದಲ್ಲಿ ಇಡುತ್ತಾರೆಯೇ, ಹಾಗಿದ್ದರೇ ಅದು ಹೇಗೆ?' ಎಂದು ಅವರು ಪ್ರಶ್ನಿಸಿದ್ದಾರೆ.
ಶುಮಾಕರ್ ಅವರು ಕೋಮಾದಲ್ಲಿರುವುದು ನಿಜ. ಆದರೆ ಕ್ರೀಡಾ ವರದಿಗಾರರು ಶುಮಾಕರ್ ಚೇತರಿಕೆಗೂ ಕೋಮಾಗೆ ಸೇರಿಸಿದ್ದಾರೆ. ಅದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಬರೆಯಬೇಕಿತ್ತು.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಪಿ.ಹೇಮಲತಾ ಮುರಳಿ ಅವರು ಮಿಂಚಂಚೆ ಬರೆದಿದ್ದಾರೆ. 'ಜ.6ರ ಪತ್ರಿಕೆಯ 'ಬೈಟು ಕಾಫಿ'ಯ 'ಜನುಮ ದಿನ' ಅಂಕಣದಲ್ಲಿ ಕಪಿಲ್ ದೇವ್ ಅವರ ಬಗ್ಗೆ ಬರೆದಿದ್ದೀರಿ. ಅವರ ಜನ್ಮ ವರ್ಷ 1929 ಎಂದು ಪ್ರಕಟವಾಗಿದೆ. ಅದು ನಿಜವಾದರೆ ಅವರ ಇಂದಿನ ವಯಸ್ಸು 85 ಆಗಿರಬೇಕು ಮತ್ತು ಅವರು ವಿಶ್ವಕಪ್ ಗೆದ್ದು ತಂದಾಗ ಅವರ ವಯಸ್ಸು 64 ಆಗಿರಬೇಕು. ನನ್ನ ನಂಬಿಕೆಯಂತೆ ಆ ಎರಡೂ ಅಲ್ಲ. ಹಾಗಾದರೆ ಅವರು ಜನಿಸಿದ ಇಸವಿ ಯಾವುದು? ನನಗಂತೂ ಗೊತ್ತಿಲ್ಲ, ಸರಿಯಾದ ಮಾಹಿತಿ ಕೊಡುವಿರಾ?' ಎಂದು ಕೇಳಿದ್ದಾರೆ.
ಈ ಅಂಕಣದಲ್ಲಿನ ವಿವರದಲ್ಲಿ ಕೇವಲ ಅವರು ಹುಟ್ಟಿದ ಇಸವಿಯನ್ನು ಮಾತ್ರ ತಪ್ಪಾಗಿ ಪ್ರಕಟಿಸಿಲ್ಲ. ಇದರ ಜತೆಗೆ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಇಸವಿಯನ್ನು 1993 ಎಂದು ಪ್ರಕಟಿಸಲಾಗಿದೆ. ಭಾರತವು ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದ್ದು 1983ರಲ್ಲಿ ಹಾಗೂ ಕಪಿಲ್ ದೇವ್ ಅವರು ಜನಿಸಿದ್ದು ಜ.6 1959ರಂದು.
ಬಾಗಲಕೋಟೆಯ ಇಳಕಲ್ನಿಂದ ಶ್ರೀಕಾಂತ ಮುದಗಲ್ಲ ಅವರು ಪತ್ರ ಬರೆದಿದ್ದಾರೆ. 'ಡಿ.27ರ ಸಂಚಿಕೆಯ ಕ್ರೀಡಾ ಪುಟದ ಮೇಲ್ಗಡೆ ಪ್ರಕಟವಾದ 'ರಣಜಿ: ದೆಹಲಿ ವಿರುದ್ಧ ಅಪ್ಪಣ್ಣ ಬದಲಿಗೆ ಕಾಜಿ' ಎಂಬ ತಲೆಬರಹದ ಸುದ್ದಿಯಲ್ಲಿ 'ರಣಜಿ ಟ್ರೋಫಿ ದೈತ್ಯ ತಂಡ ಮುಂಬೈ.......' ಎಂದು ಪ್ರಕಟವಾಗಿದೆ. ದೈತ್ಯ ಎಂದರೆ ದೊಡ್ಡ ಅಂತಾಗುತ್ತದೆ ಮತ್ತು ಅದು ಗಾತ್ರವನ್ನು ಸೂಚಿಸುತ್ತದೆ. ಅಂದರೆ ಮುಂಬೈ ತಂಡ ಗಾತ್ರದಲ್ಲಿ ದೊಡ್ಡದಿದೆ ಅಥವಾ ಅದು 11 ಆಟಗಾರರಿಗಿಂತ ಹೆಚ್ಚು ಆಟಗಾರರನ್ನು ಹೊಂದಿದೆ ಎಂಬರ್ಥ ಬರುತ್ತದೆ. ಆದರೆ ಅಲ್ಲಿ ತಂಡದ ಸಾಮರ್ಥ್ಯದ ಬಗ್ಗೆ ಹೇಳಬೇಕಾಗಿರುವುದರಿಂದ 'ದೈತ್ಯ' ಶಬ್ದದ ಬದಲು 'ಬಲಿಷ್ಠ ತಂಡ ಮುಂಬೈ.......' ಎಂದು ಹೇಳಿದ್ದರೆ ತುಂಬಾ ಸೂಕ್ತವಾಗುತ್ತಿತ್ತು' ಎಂದಿದ್ದಾರೆ.
ಕ್ರೀಡಾ ವರದಿಗಾರಿಕೆ ಹಾಗೂ ಇತರ ವರದಿಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಕ್ರೀಡೆಗೆ ಸಂಬಂಧಿಸಿದ ವರದಿಯಲ್ಲಿ 'ದೈತ್ಯ ಪಟು' ಅಥವಾ 'ದೈತ್ಯ ಬ್ಯಾಟ್ಸಮನ್' ಎಂಬ ಬಳಕೆ ಗಮನಿಸಿರುತ್ತೀರಿ. ಇದರರ್ಥ ಅವರು ದೇಹದಲ್ಲಿ ದೊಡ್ಡವರು ಎಂದಲ್ಲ. ಹಾಗೆಯೇ ದೈತ್ಯ ತಂಡ ಎಂಬ ಪದವು ಬಲಿಷ್ಠ ಎಂಬರ್ಥವನ್ನೇ ನೀಡುತ್ತದೆ. ಇದರಲ್ಲಿ ಯಾವುದೇ ತಪ್ಪಿಲ್ಲ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

