ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಪತಂಗಿ ಗ್ರೀಷ್ಮಾ ಅವರು ಮಿಂಚಂಚೆ ಕಳುಹಿಸಿದ್ದಾರೆ. ಸಾಕಷ್ಟು ಓದುಗರಿಗೆ ಆದ ಗೊಂದಲವನ್ನು ಇವರು ವ್ಯಕ್ತಪಡಿಸಿದ್ದಾರೆ. "ಜ.8ರ ಪತ್ರಿಕೆಯ ಮುಖಪುಟದಲ್ಲಿ 'ಮಂಜುಗಟ್ಟಿದ ಅಮೆರಿಕ' ಸುದ್ದಿ ಇದೆ. ಅದರಲ್ಲಿ '-40 ಡಿ.ಸೆ. 20 ವರ್ಷಗಳಲ್ಲೇ ಅಮೆರಿಕದಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ ಎಂದಿದೆ. ಅದು ಬಹುಶಃ -4 ಡಿ.ಸೆ ಇರಬಹುದೇನೋ? -4 ಡಿ.ಸೆ.ನಲ್ಲಿಯೇ ಬದುಕುವುದು ದುಸ್ತರವಾಗುತ್ತದೆ. ಇನ್ನು ನೀವು ಪತ್ರಿಕೆಯಲ್ಲಿ ದಾಖಲಿಸಿದಷ್ಟು ಕಡಿಮೆ ತಾಪಮಾನದಲ್ಲಿ ಹೇಗೆ ಬದುಕಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನು ಟಿವಿಯಲ್ಲಿ ನೋಡಿದಾಗ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಓದಿದ್ದಾಗ ನನಗೂ ಇಂತಹುದೇ ಒಂದು ಸಂಶಯ ಕಾಡಿತ್ತು. ಇದೇ ಕಾರಣದಿಂದ ಉತ್ತರ ಅಮೆರಿಕದ ಪ್ರಸ್ತುತ ಚಳಿಯನ್ನು ಮಂಗಳ ಗ್ರಹದ ವಾತಾವರಣಕ್ಕೆ ಹೋಲಿಸಲಾಗುತ್ತಿದೆ. ನಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ನೂರಕ್ಕೆ ನೂರರಷ್ಟು ನಿಜ. ಭಾರತೀಯರಿಗೆ ಇದನ್ನು ಊಹಿಸಿಕೊಳ್ಳಲು ಕಷ್ಟವಾಗಬಹುದು. ಉತ್ತರ ಅಮೆರಿಕದ ಮೋಂಟಾನಾ ಎಂಬ ಪ್ರದೇಶದಲ್ಲಿ ಇದು -52 ಡಿ.ಸೆ. ವರೆಗೂ ತಲುಪಿದೆ. ನೀವೆತ್ತಿರುವ ಪ್ರಶ್ನೆಯಂತೆ ಬದುಕುವುದು ದುಸ್ತರ ನಿಜ, ಆದರೆ ಅಲ್ಲಿಯ ಸ್ಥಿತಿ ಹಾಗಿದೆ, ಜನ ಹೋರಾಡಿ ಬದುಕುತ್ತಿದ್ದಾರೆ.
'ಓದುಗದೊರೆ ಸಾಹಿತ್ಯ ಸ್ವರ್ಗ' ಎಂಬ ಹೆಸರಲ್ಲಿ ಒಬ್ಬರು ಮಿಂಚಂಚೆ ಕಳುಹಿಸಿದ್ದಾರೆ. 'ಗಂಗಾಚಾರಿಯವರು ಡಿಸೆಂಬರ್ 30ರಂದು ಬರೆದ ನ್ಯಾನೋ ಕಥೆ, ಜನವರಿ 4ರ ಬೈಟು ಕಾಫಿಯಲ್ಲಿ ಮರುಪ್ರಕಟವಾಗಿದೆ. ಹಾಗೆಯೇ ಕೆವಿಟಿ ಮೇಗೂರುರವರು ಬರೆದ 'ಡೋಂಗಿ ಬಾಬಾ ಸಣ್ಣ ಕಥೆ' ಕೂಡ ಡಿಸೆಂಬರ್ 24 ಹಾಗೂ 26ರ ಬೈಟುಕಾಫಿಯಲ್ಲಿ ಪ್ರಕಟವಾಗಿದೆ. ಕೇವಲ ಸಣ್ಣ ಲೇಖನಗಳಿಗೆ ಇದು ಸೀಮಿತವಾಗಿಲ್ಲ. ಡಿಸೆಂಬರ್ 31ರಂದು ಬೈಟುಕಾಫಿಯ ಮುಖಪುಟದಲ್ಲಿ 'ಹೀಗೊಂದು ಮೌನ' ಲೇಖನವು ಜನವರಿ 8ರ ಪುಟ 3ರಲ್ಲಿ 'ಒಂದು ನೈತಿಕತೆ' ಎಂಬ ಬೇರೊಂದು ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಎರಡೂ ಲೇಖನದ ಲೇಖಕರು ಹಾಗೂ ಅದರಲ್ಲಿರುವ ಸುದ್ದಿ ಒಂದೇ ಆಗಿದೆ. ಒಂದೇ ಲೇಖನ ಅದೇ ಪತ್ರಿಕೆಯಲ್ಲಿ ವಿಭಿನ್ನ ಶೀರ್ಷಿಕೆಯಲ್ಲಿ ಪ್ರಕಟಗೊಂಡರೆ ಹೇಗೆ? ಒಮ್ಮೆ ಈ ರೀತಿಯಾದರೆ ಕಣ್ತಪ್ಪು ಎನ್ನಬಹುದು. ಆಗಾಗ ಮರುಕಳಿಸುತ್ತಲೇ ಇದ್ದರೆ ಏನೆಂದು ಬಣ್ಣಿಸಬೇಕು? ಏನ್ ಮಾಡ್ತೀವಿ ನೋಡ್ತಾ ಇರಿ ಎಂದ ನೀವು ಈ ರೀತಿ ತಪ್ಪುಗಳಾಗದಂತೆ ಎಚ್ಚರವಹಿಸುವುದರಿಂದ ಓದುಗರಿಗೆ ಹಳತನ್ನು ಬಡಿಸುವುದನ್ನು ತಪ್ಪಿಸಬಹುದು" ಎಂದಿದ್ದಾರೆ.
ಇತ್ತೀಚಿನ ಬೈಟುಕಾಫಿಯಲ್ಲಿ ಇಂತಹ ತಪ್ಪುಗಳು ಪದೇಪದೆ ಆಗುತ್ತಿವೆ. ಈ ಹಿಂದೆ ಮಾಹಿತಿ.ಕಾಂ ಹಾಗೂ ಲೆಕ್ಕರಾಜರಾಣಿ ಅಂಕಣಕ್ಕೆ ಸಂಬಂಧಿಸಿಯೂ ಇದೇ ರೀತಿಯ ದೂರುಗಳು ಬರುತ್ತಿದ್ದವು. ಯಾವುದೋ ಶೀರ್ಷಿಕೆಗೆ, ಮತ್ಯಾವುದೋ ಸುದ್ದಿ ಪ್ರಕಟವಾಗುತ್ತಿದೆ. ಪುಟ ನಿರ್ವಹಿಸುವಾಗಿನ ಬೇಜವಾಬ್ದಾರಿಯಿಂದ ಈ ರೀತಿಯ ತಪ್ಪು ಮರುಕಳಿಸುತ್ತದೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

