ನಾಡಗೀತೆಯ ಕಡ್ಡಾಯ ಬೇಕೆ?
ಮಡಿಕೇರಿಯಲ್ಲಿ ಈಗ ತಾನೇ ಮುಗಿದಿರುವ ಎಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳಲ್ಲಿ ಗಮನ ಸೆಳೆಯುವಂತಹದ್ದು ಕನ್ನಡದ ನಾಡಗೀತೆಯನ್ನು ಎಲ್ಲ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳಲ್ಲಿ ಹಾಡುವುದನ್ನು ಸರ್ಕಾರ ಕಡ್ಡಾಯ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಪಡಿಸುವ ನಿರ್ಣಯ.
ಶಾಲೆಯ ಮಟ್ಟದಲ್ಲಿ ಅನೇಕ ದಶಕಗಳಿಂದಲೂ ಪ್ರಾರ್ಥನೆಯ ಕಾರ್ಯಕ್ರಮ ಜಾರಿಯಲ್ಲಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಗೀತೆಗಳನ್ನು ಹಾಡುವುದು ಸಹಜ. ಇದರಲ್ಲಿ ಮಿಲಿಟರಿಯ ಶಿಸ್ತನ್ನು ಜಾರಿಗೆ ತರುವ ಅಗತ್ಯವಿಲ್ಲ. ಎಲ್ಲ ವಿದ್ಯಾರ್ಥಿಗಳೂ ಎರಡು-ಮೂರು ನಿಮಿಷವಾದರೂ ಸಾಮೂಹಿಕ ಗಾನದಲ್ಲಿ ತೊಡಗಿದರೆ ಮುಂದಿನ ಪಾಠಗಳ ಕಲಿಕೆಗೆ ಸೂಕ್ತ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವ ನಂಬಿಕೆಯಿಂದ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು. ಸರ್ಕಾರಿ ಶಾಲೆ-ಖಾಸಗಿ ಶಾಲೆಯ ಭೇದವಿಲ್ಲದೇ ಯಾರೂ ಈ ಕಾರ್ಯಕ್ರಮಕ್ಕೆ ವಿರುದ್ಧವಾಗಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿರಲಿಲ್ಲ.
ಆದರೆ ಸಾಹಿತ್ಯ ಸಮ್ಮೇಳನದಲ್ಲಿ ನಾಡಗೀತೆಯನ್ನು ಕಡ್ಡಾಯ ಮಾಡುವ ಮನವಿಗೆ ಇದ್ದ ಪ್ರಚೋದನೆ ಅರ್ಥವಾಗುತ್ತಿಲ್ಲ. ನಾಡಗೀತೆಯನ್ನು ಪ್ರತಿನಿತ್ಯ ಹಾಡುವುದರಿಂದ ವಿದ್ಯಾರ್ಥಿಗಳಲ್ಲಿ ನಾಡಪ್ರೇಮ-ಕನ್ನಡದ ಪ್ರೇಮ ಹುಟ್ಟುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಒಪ್ಪಲಿಕ್ಕೆ ಆಗುವುದಿಲ್ಲ. ಇಂತಹ ವಿಚಾರಗಳಲ್ಲಿ ಸಮುದಾಯಗಳ ಮೇಲೆ ಕಡ್ಡಾಯ ನಿಯಮವನ್ನು ಹೇರುವುದರಿಂದ ನಾಡಪ್ರೇಮವನ್ನು ಮೂಡಿಸುವುದು ಸಾಧ್ಯವಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕನ್ನಡ ಜನರನ್ನು ಚಿಂತನೆಗೆ ಹಚ್ಚುವಂತಹ ಯಾವ ನಿರ್ಣಯವೂ ಅಂಗೀಕಾರವಾದಂತಿಲ್ಲ. ಚಳವಳಿಗಳ ಘೋಷಣೆ ಅಖಂಡ ಕರ್ನಾಟಕದ ಸಾಹಿತ್ಯ ಸಮ್ಮೇಳನದ ನಿರ್ಣಯವಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ. ಒಂದು ಸಮಗ್ರ ಸ್ವರೂಪದ ಗಂಭೀರ ನಿರ್ಣಯ ಕೈಗೊಂಡಿದ್ದರೆ, ಅದು ಪ್ರಬುದ್ಧತೆಯ ಲಕ್ಷಣವಾಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

