ತಪ್ಪಾಯ್ತು ತಿದ್ಕೋತೀವಿ
ಬಾಗಲಕೋಟೆ ಜಿಲ್ಲೆ ಇಳಕಲ್ನಿಂದ ಶ್ರೀಕಾಂತ ಮುದಗಲ್ಲ ಅವರು ಬರೆಯುತ್ತಾರೆ. 'ಜ. 5ರ 'ಖುಷಿ'ಯಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ಸಾಲದ ಬಗ್ಗೆ ಬರೆಯುತ್ತಾ, ಇರುವೆಗೆ ಇರುವೆ ಬಾಲ ದೊಡ್ಡದು, ಆನೆಗೆ ಆನೆ ಬಾಲ ದೊಡ್ಡದು' ಎಂದು ಬರೆದಿದ್ದೀರಿ. ಇರುವೆಗೆ ಬಾಲ ಎಲ್ಲಿರುತ್ತದೆ? ಮತ್ತು ಆನೆ ಬಾಲ ಆನೆಗಿಂತಲೂ ಹೇಗೆ ದೊಡ್ಡದಿರುತ್ತದೆ? ನಮ್ಮಲ್ಲಿ 'ಇರುವೆ ಭಾರ ಇರುವೆಗೆ ಆನೆ ಭಾರ ಆನೆಗೆ' ಎಂಬ ಮಾತು ಇದೆ. ನೀವು ಬಳಸಿದ ಆ ಮಾತು ಬಹುಶಃ ತಪ್ಪಾಗಿರಬೇಕು. ಇನ್ನು ಪುಟ 7ರಲ್ಲಿರುವ 'ಹನಿಮೂನ್ ಸ್ಕಿಪ್ ಮಾಡಿ' ಶೀರ್ಷಿಕೆಯ ವಿವರಣೆಯಲ್ಲಿ '......ಜೀವನ ಇಲ್ಲೇ ಮುಗಿಯುವುದಿಲ್ಲ' ಎಂದಿದೆ. ಅದು 'ಜೀವನ ಇಲ್ಲಿಗೇ ಮುಗಿಯುವುದಿಲ್ಲ' ಎಂದಾಗಬೇಕಿತ್ತು.'
'ಜ.3ರ ಸಂಚಿಕೆಯ ಪುಟ 3ರ ಮೇಲ್ಗಡೆ ಪ್ರಕಟವಾದ 'ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸಲು ಸಲಹೆ' ಎಂಬ ತಲೆಬರಹದ ಸುದ್ದಿಯ ಕೊನೆಯಲ್ಲಿ '... ಕಲಿಕೋತ್ಸವದಲ್ಲಿ ಹಿರೇಶಿವನಗುತ್ತಿ, ಚಿಕ್ಕಆದಾಪುರ ಇದ್ದರು' ಎಂದಿದೆ. ಆದರೆ ಅದು ಹಿರೇಶಿವನಗುತ್ತಿ, ಚಿಕ್ಕ ಆದಾಪೂರ ಗ್ರಾಮಗಳ ಶಿಕ್ಷಕರು ಇದ್ದರು ಎಂದಾಗಬೇಕಿತ್ತು. ಇನ್ನು ಪುಟ 10ರಲ್ಲಿರುವ 'ಕಮರಿಗೆ ಬಸ್ ಉರುಳಿ 26 ಮಂದಿ ದುರ್ಮರಣ' ತಲೆಬರಹದ ಸುದ್ದಿಯಲ್ಲಿ '... ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಾಗಿದೆ' ಎಂದಿದೆ. ಅದು '... ಸಮೀಪದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ' ಎಂದಾಗಬೇಕಿತ್ತು' ಎಂದಿದ್ದಾರೆ.
ಭದ್ರಾವತಿಯಿಂದ ಓಂ ಚನ್ನೇಶ್ ಬರೆಯುತ್ತಾರೆ. 'ಡಿ.7ರಂದು 4ರಲ್ಲಿ 'ನಕಲಿ ಬಂಗಾರ: ವಂಚನೆ' ಸುದ್ದಿಯಲ್ಲಿ 'ನಕಲಿ ಬಂಗಾರ ಎಂದು ನಂಬಿಸಿ 5.50 ಲಕ್ಷ ವಂಚಿಸಿದ ಘಟನೆ ತಾಲ್ಲೂಕಿನ ತ್ಯಾಗರ್ತಿ ಸಮೀಪದ ಯಳವರಸಿಯಲ್ಲಿ ಭಾನುವಾರ ನಡೆದಿದೆ' ಎಂದಿದೆ. ನಕಲಿ ಬಂಗಾರ ಎಂದು ಹೇಳಿದರೂ ಅದನ್ನು ಕೊಳ್ಳುವ ಮೂರ್ಖರು ಇರುತ್ತಾರೆಯೇ? ಅದು 'ಅಸಲಿ' ಬಂಗಾರ ಎಂದು ನಂಬಿಸಿ ಎಂದಾಗಬೇಕಿತ್ತಲ್ಲವೇ?' ಎಂದಿದ್ದಾರೆ.
ಬೆಂಗಳೂರಿನಿಂದ ವಿ.ಹೇಮಂತಕುಮಾರ್ ಪತ್ರ ಕಳುಹಿಸಿದ್ದಾರೆ. 'ಡಿ.30ರ ಸಂಚಿಕೆಯ ಮೊದಲ ಪುಟದಲ್ಲಿ 'ಕಾಮಗಾರಿ ಮಾಡಿದ್ದಾರೆ ಅಂದ್ರು ಕುರುಹೇ ಕಾಣುತ್ತಿಲ್ಲ' ಶೀರ್ಷಿಕೆಯ ಲೇಖನದಲ್ಲಿ 'ಉತ್ತರವಿಲ್ಲ' ಎಂಬ ಉಪಶೀರ್ಷಿಕೆ ಪ್ರಕಟವಾಗಿದೆ. 'ಆದರೆ ಶಿರಾಡಿ ಘಾಟಿಯ 20 ಕಿ.ಮೀ ಉದ್ದಕ್ಕೂ ರಸ್ತೆಯೇ ಕಾಣುತ್ತಿಲ್ಲ. ಹೊಂಡ ಗುಂಡಿಗಳು ಮಾತ್ರ ಕಾಣುತ್ತಿವೆ. ಹೀಗೆ ರಸ್ತೆಯೇ ಕಾಣದಂತೆ ಮಾಡಲು ಗುತ್ತಿಗೆದಾರರು, ಎಂಜಿನಿಯರ್ಗಳು ಯಾವ ಹೈಟೆಕ್ ತಂತ್ರಜ್ಞಾನ ಬಳಸಿದ್ದಾರೆ ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ' ಎಂದಿದೆ. ಮತ್ತಿದೇ ಉಪ ಶೀರ್ಷಿಕೆ ಹಾಗೂ ಪ್ಯಾರಾವು 5ನೇ ಪುಟದಲ್ಲಿಯೂ ಪ್ರಕಟವಾಗಿದೆ. ಇದು ಪೇಜು ತುಂಬಲು ಮಾಡಿದ ಪ್ರಯತ್ನವೇ?' ಎಂದು ಪ್ರಶ್ನಿಸಿದ್ದಾರೆ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

