ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಹೊರಾಂಗಣ ಮೈದಾನವಾಗಲಿ, ಒಳಾಂಗಣವಾಗಲಿ, ಓಡುವ, ಕುಪ್ಪಳಿಸುವ, ಜಿಗಿಯುವ, ಹಾರುವ, ನೆಗೆಯುವ, ಕೂಡುವ, ಜಾರುವ , ನಡೆಯುವ, ಕ್ರೀಡಾಪಟುಗಳಿಗೆ ಸಂಧಿಗಳು ಎಷ್ಟು ಪ್ರಾಮುಖ್ಯವೋ (ದೇಹದ ಕೈ, ಕಾಲು ಮುಂತಾದ ಅಂಗಾಂಗಗಳ ಜೋಡಣೆಯ ಕೀಲುಗಳಿಗೆ ಸಂಧಿ ಎನ್ನುತ್ತಾರೆ),  ಪತ್ರಿಕೆಗಳ ಮೂಲಕ, ಲಕ್ಷಾಂತರ ಓದುಗರಿಗೆ, ಮೈದಾನದಲ್ಲಿ ನಡೆದ ಸಂಗತಿಯನ್ನು ಕಟ್ಟಿಕೊಟ್ಟು , ಶೀರ್ಷಿಕೆ ಬರೆಯುವ ಸುದ್ದಿ ಮನೆಯ  ಕ್ರೀಡಾ ಪತ್ರಕರ್ತರಿಗೂ, ಈ ಸಂಧಿಜ್ಞಾನ ಅಷ್ಟೇ ಮುಖ್ಯ ಅದನ್ನು ಅವರು ತಿಳಿಯದಿದ್ದಾಗ ಜಾರಿ ಬಿದ್ದ ಜಾಣನಂತಾಗುತ್ತಾರೆ.'
'ಅಂತಹ ಒಂದು ಪ್ರಸಂಗ ಜ.9ರಂದು ಕ್ರೀಡಾಪುಟದಲ್ಲಿ ಜರುಗಿದೆ. ಕರ್ನಾಟಕ-ಉತ್ತರಪ್ರದೇಶ ರಣಜಿ ಪಂದ್ಯದ ಮೊದಲ ದಿನದ ಆಟದ ಸಾರಾಂಶಕ್ಕೆ ಉತ್ತಪ್ಪ, ಕರುಣ್ 'ಆಪತ್ಬಾಂಧವ' ಎಂಬ ಶೀರ್ಷಿಕೆ ಕೊಡಲಾಗಿದೆ.  ಈ ಶೀರ್ಷಿಕೆಯಲ್ಲಿ 'ಆಪತ್ಬಾಂಧವ' ಶುದ್ಧ ಅಪದ್ಧ ಪದ. ಸಂಧಿ ನಿಯಮ ನ್ಯಾಯ ಬಾಹಿರ.'
'ಸಂಸ್ಕೃತ ಭಾಷೆಯಲ್ಲಿ ಎರಡು ಪದಗಳನ್ನು ಒಟ್ಟಿಗೆ ಸೇರಿಸಿ ಒಂದು ಮಾಡುವ ಪ್ರಕ್ರಿಯೆಗೆ ಸಂಧಿ ಎನ್ನುತ್ತಾರೆ.  ಸಂಧಿಯ ನಿಯಮಗಳು ಮೊದಲ ಪದದ ಕೊನೆಯ ಅಕ್ಷರ ಮತ್ತು ಎರಡನೇ ಪದದ ಮೊದಲ ಅಕ್ಷರಗಳ ಮೇಲೆ ಅವಲಂಬಿತವಾಗಿರುತ್ತದೆ. ಸಂಧಿಗಳು ಅನೇಕ. ಉ. ದಾ. ಸವರ್ಣ ದೀರ್ಘ, ಗುಣ, ವೃದ್ಧಿ, ಹ್ರಸ್ವ, ಜಸ್ತ್ವ, ಯಾಂತಾದೇಶ ಇತ್ಯಾದಿ.'
'ಮೇಲ್ಕಂಡ ಶೀರ್ಷಿಕೆಯಲ್ಲಿ ಆಪತ್‌೤ಬಾಂಧವ ಸೇರಿ ಸಂಧಿಯಾಗಬೇಕು. 'ಆಪತ್‌' ಎಂಬಲ್ಲಿ ಕೊನೆಗೆ 'ತ' ಕಾರ ಕೇಳಿಸುತ್ತದೆ ಮತ್ತು 'ಬಾಂಧವ'ದಲ್ಲಿ 'ಬ' ಕಾರ. ಈ ಸಂಧಿ ನಿಯಮಕ್ಕೆ 'ಜಸ್ತ್ವ' ಎನ್ನುತ್ತಾರೆ. 'ತ'ಕಾರಕ್ಕೆ 'ದ'ಕಾರ ಕೂಡಿದಾಗ 'ತ' ಕಾರಕ್ಕೆ 'ದ' ಕಾರ ಆದೇಶವಾಗಿ ಬರುತ್ತದೆ. ಸಂಧಿ ನಿಯಮ ಸರಿಯಾಗಿ ಪಾಲಿಸಿದರೆ ಅದು 'ಆಪದ್ಬಾಂಧವ' ಆಗುತ್ತದೆ.'
'ಸುದ್ದಿ ಮನೆಯ ಮಂದಿ ಪ್ರಾಣ (ಅಲ್ಪ ಮತ್ತು ಮಹಾ ಪ್ರಾಣ)ಕ್ಕಷ್ಟೇ ಪ್ರಾಮುಖ್ಯ ಕೊಟ್ಟರೆ ಸಾಲದು. ಸಂಧಿಗಳ ಬಗ್ಗೆಯೂ ಎಚ್ಚರ ಅಗತ್ಯ. ಇಲ್ಲವಾದರೆ ಸಂಧಿ ಗೊಂದಿಯಾದೀತು' ಎಂದಿದ್ದಾರೆ.
ಮೈಸೂರಿನ ಕುವೆಂಪುನಗರದಿಂದ ಪಿ.ಜೆ.ರಾಘವೇಂದ್ರ ಅವರು ಬರೆಯುತ್ತಾರೆ- 'ಜ.8ರಂದು 'ಬೈಟು ಕಾಫಿ'ಯ ಇಬ್ಬನಿಯಲ್ಲಿ ಪ್ರಕಟವಾದ ನನ್ನ ಈ ಕವನದಲ್ಲಿ ಒಂದು ಪುಟ್ಟ ತಪ್ಪಾಗಿತ್ತು. ನಡೆವರೆಡವುದು ಸಹಜ. ನನ್ನ ತೊದಲ್ನುಡಿಗಳಿಗೆ ವೇದಿಕೆಯಾದ ಪ್ರಭಕ್ಕೆ ವಂದನೆಗಳು. ನನ್ನ ಕವನದ ಹೆಸರು ಆವಿಷ್ಕಾರ.
'ಹೊಸ ಹೊಸ
ಸಂಗತಿಗಳನ್ನು
ಅರಸುತ್ತಾ
ವಾಚನಾಲಯಕ್ಕೆ
ಹೋದವ
ಹಿಂದಿರುಗಿದುದು
ಮಾತ್ರ
ಹೊಸ
ಸಂಗಾತಿಯೊಡನೆ' ಎಂದಾಗಬೇಕಿತ್ತು. ಸಂಗಾತಿ ಮತ್ತು ಸಂಗತಿಗಳು ಅದಲುಬದಲಾಗಿ ಗೊಂದಲವಾಗಿತ್ತು' ಎಂದಿದ್ದಾರೆ.


- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.