ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಪತ್ರ ಬರೆಯುತ್ತಾರೆ. 'ಡಿ.31ರ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ಎಚ್.ಆನಂದರಾಮ ಶಾಸ್ತ್ರೀಯವರು 'ಪೌರೋಹಿತ್ಯರಿಂದ' ಎಂಬ ಅಪದ್ಧ ಪದವನ್ನು ವರದಿಗಾರರು ಸೃಷ್ಟಿಸಿದ್ದಾರೆ ಎಂದು ಆರೋಪಿಸಿರುವುದು ಸರಿಯಷ್ಟೆ. ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕಾಗಿತ್ತು. 'ಪೌರೋಹಿತ್ಯ' ಎಂಬ ಪದ ಅಬದ್ಧವಲ್ಲ. 'ಪುರೋಹಿತ' ಪದ ಬಳಕೆಯಾಗಬೇಕಾದ ಸ್ಥಳದಲ್ಲಿ 'ಪೌರೋಹಿತ್ಯ' ಪದವನ್ನು ಬಳಸಿರುವುದು ಅಸಮಂಜಸವಾಗಿದೆ ಎಂದೆನ್ನಬಹುದಿತ್ತು. 'ಸಂಪಾದಕರಿಂದ' ಎಂಬ ಪದದ ಬದಲಾಗಿ 'ಸಂಪಾದಕೀಯರಿಂದ' ಎಂದರೆ ಹೇಗೆ ಅಸಮಂಜಸ ಹಾಗೂ ಅಕಾಲ ಪ್ರಯೋಗವಾಗುತ್ತದೆಯೋ ಅಂತೆಯೇ 'ಪೌರೋಹಿತ್ಯರಿಂದ' ಎಂದು ತಪ್ಪಾಗಿದೆ. ಮಾತ್ರವಲ್ಲ ವ್ಯಾಕರಣ ರೀತಿಯಿಂದ ಪರಿಶೀಲಿಸಿದಾಗ ಮಾತ್ರ ಈ ಪದ 'ಅಪದ್ಧ' ಪದವೆಂಬುದು ನಿರ್ವಿವಾದ. 'ರೇಲ್ವೇ' ಪದ ಬಳಕೆ ಬಗೆಗೆ ಜಿಜ್ಞಾಸೆ ಇದೆ. ಕಾರಣ ಆಂಗ್ಲ ಪದದ ಉಚ್ಚಾರಣೆಯು ಒಬ್ಬೊಬ್ಬರ ನಾಲಿಗೆಯಿಂದ ಒಂದೊಂದು ರೀತಿಯಲ್ಲಿ ಇರುತ್ತದೆ. ರೈಲು, ಜೈಲು, ಫೇಲ್(ಫೇಯಿಲ್), ಮೇಯಿಲ್ ಮುಂತಾದ ಪದಗಳ ಉಚ್ಚಾರಣೆಯಲ್ಲಿ ಸಮಾನತೆ ಕಂಡು ಬರುವುದಿಲ್ಲ. ಆದ್ದರಿಂದ ರೇಲ್ವೇ, ರೈಲ್ವೇ, ರೈಲ್ವೇ, ರೀಯಿಲ್ವೇ ಇವುಗಳಲ್ಲಿ ಯಾವುದು ಸರಿ ಎನ್ನುವುದು ಚರ್ಚಾರ್ಹ. ಲೇಖಕರು 'ಅಧಿಕ ಪ್ರಸಂಗಿಗಳು' ಲೇಖನದಲ್ಲಿ ಬಳಸಿದ 'ನಿಷ್ಕ್ರಿಯ ಹೊಗೆ' ಪದದ ಬದಲಾಗಿ 'ಪರೋಕ್ಷ ಧೂಮಪಾನ' ಎಂಬ ಪದ ಬಳಸಿದ್ದರೆ ಹಿತವಾಗಿತ್ತು' ಎಂದಿದ್ದಾರೆ.
ಮೈಸೂರಿನಿಂದ ಸಿ.ವಿನಯ್ ರಾವ್ ಪತ್ರ ಕಳುಹಿಸಿದ್ದಾರೆ. 'ಡಿ.31ರ ಪುಟ 8ರಲ್ಲಿ ಬಂದ ಬಸ್ಟರ್ಡ್ ಪಕ್ಷಿ ಬಗ್ಗೆ ವರದಿ ಪ್ರಕಟವಾಗಿದೆ. ವರದಿಯ ಮಧ್ಯದ ಒಂದು ವೃತ್ತದಲ್ಲಿ ಹೀಗೆ ಸುದ್ದಿ ಬರೆಯಲಾಗಿದೆ, '21ನೇ ಶತಮಾನದಲ್ಲಿ 31 ಸಾವಿರವಿದ್ದ ಈ ಪಕ್ಷಿಗಳ ಸಂಖ್ಯೆ ಕಳ್ಳ ಬೇಟೆಗೆ ತುತ್ತಾಗಿ 2008ರಲ್ಲಿ ಕೇವಲ 250ಕ್ಕೆ ಬಂದು ಕುಸಿದಿದೆ' ಎಂದಿದೆ. ಈಗ ನಾವು 21ನೇ ಶತಮಾನದಲ್ಲಿಯೇ ಇದ್ದೇವೆ. 2008ರಲ್ಲಿ ಕುಸಿದಿದೆ ಎಂದರೆ 2008ರ ಹಿಂದಕ್ಕೆ 21ನೇ ಶತಮಾನ ಬರುತ್ತದೆ. ಇದು ಏನು ಮಾಹಿತಿ? ನೆಲದಲ್ಲಿ ನಡೆದಾಡುವ ಹುಲಿ, ಆನೆ ಇತ್ಯಾದಿ ಕಾಡುಪ್ರಾಣಿಗಳ ಗಣತಿ ನಡೆಸಲು ಕೆಲವೊಂದು ವಿಧಿ ವಿಧಾನಗಳಿವೆ.
ಇದರನ್ವಯ ಇವುಗಳ ಸಂಖ್ಯೆಯನ್ನು ಕಂಡುಹಿಡಿಯುತ್ತಾರೆ. ಆದರೆ ಆಕಾಶದಲ್ಲಿ ಎಲ್ಲೆಂದರಲ್ಲಿ ಹಾರಾಡುವ ಪಕ್ಷಿಗಳ ಸಂಖ್ಯೆಯನ್ನು ಇಂತಿಷ್ಟೆ ಎಂದು ಖಚಿತಪಡಿಸುವುದು ಸಾಧ್ಯವೇ? ನನಗೆ ತಿಳಿಯದು. ಈ ಅಂಕಿ ಅಂಶಗಳು ನಂಬಲರ್ಹವೇ? 2008ನೇ ಇಸವಿಯ 21ನೇ ಶತಮಾನದಲ್ಲಿಯೇ ಬರುತ್ತದೆಯಲ್ಲವೇ? 21ನೇ ಶತಮಾನ 2008ಕ್ಕಿಂತ ಹಿಂದಿನದು ಎಂದರೆ ಏನರ್ಥ? ಇನ್ನು ಈ ಪಕ್ಷಿಯ ಮಾಹಿತಿಯನ್ನು ದಿನದ ವರದಿಯಲ್ಲಿ ನೀಡುವ ಬದಲು 'ಬೈಟು ಕಾಫಿ' ಅಥವಾ 'ಖುಷಿ' ಅಂಕಣದಲ್ಲಿ ಬಂದಿದ್ದರೆ ಸಂಗ್ರಹಿಸಲು ಯೋಗ್ಯವಾಗುತ್ತಿತ್ತು. ಇನ್ನು ಇದೇ ಸುದ್ದಿಯಲ್ಲಿ 'ಮೊಗಲ್ ರಾಜ ಬಾಬರ್ನಿಗೆ ಅತ್ಯಂತ ಪ್ರಿಯವಾದದ್ದು ಈ ಪಕ್ಷಿಯ ಮಾಂಸವಾಗಿದೆ ಎಂಬುದು ಇತಿಹಾಸ ಹೇಳುತ್ತದೆ' ಎಂದು ಬರೆಯಲಾಗಿದೆ. ಇದು ಅಪಕ್ವವಾದ ಜೋಡಣೆ' ಎಂದಿದ್ದಾರೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

