ತಪ್ಪಾಯ್ತು ತಿದ್ಕೋತೀವಿ
ಸಂಪದಿಂದ ಮ.ರಾ. ಹೆಗಡೆ ಅವರು ಬರೆಯುತ್ತಾರೆ- 'ಜ.21ರಂದು 2ನೇ ಪುಟದಲ್ಲಿ 'ರಸವತ್ತು' ಅಂಕಣದ 2ನೇ ವಿಷಯದ ಕೊನೆಯ ಸಾಲಿನ 'ತಗ್ಧತೆ' ಎಂಬ ಶಬ್ದವು ಈವರೆಗೆ ನಾನು ಕಂಡು, ಕೇಳರಿಯದ ಶಬ್ದವಾಗಿದೆ. ಇದೇ ಶುದ್ಧವೆಂದಾದರೆ ಅದರ ಅರ್ಥ ತಿಳಿಯುವಾಸೆಯಾಗಿದೆ.'
'ಇದೇ ಪುಟದಲ್ಲಿ ವರದಿಯಾಗಿರುವ ಸುದ್ದಿಯಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಡಿ.ಎನ್. ಶಂಕರ 'ಬಟ್ಟ'ರ ಹೆಸರು ಓದಿ ಪ್ರತಿಕ್ರಿಯಿಸಬೇಕೆನ್ನಿಸಿತು. 'ಭಟ್ಟ' ಶಬ್ದವು ಭರ್ತಾ ಭರ್ತೃ ಶಬ್ದದ ತದ್ಭವವೆಂದು ಓದಿದ ನೆನಪು. ಭರ್ತೃ ಶಬ್ದಕ್ಕೆ ಪೋಷಿಸುವವ, ಪೂರೈಸುವವ, ತುಂಬಿಕೊಡುವವ, ಕಟ್ಟಿಕೊಡುವವ, ಬದ್ಧತೆಯುಳ್ಳವ ಮುಂತಾದ ಮೌಲಿಕ ಅರ್ಥಗಳಿವೆ. ತಲೆಗಟ್ಟು ಇಲ್ಲದ 'ಬಟ್ಟ' ಈ ಯಾವ ಅರ್ಥಗಳನ್ನೂ ಧ್ವನಿಸದೇ ತಲೆಕೆಟ್ಟುಹೋಗುವುದಕ್ಕೆಡೆಯಾಗಿದೆ.'
'ಭಟ್ಟರು ಗಟ್ಟಿ ಮನಸ್ಸಿನಿಂದ ಶಂಕರ ಬಟ್ಟರಿಂದ ಇದರ ಗುಟ್ಟನನ್ನು ಒಟ್ಟು ಮಾಡಿ ಪತ್ರಿಕೆಯಲ್ಲಿ ಕಟ್ಟಿಕೊಟ್ಟರೆ ಪಟ್ಟ ಶ್ರಮಕ್ಕೂ ಸಾರ್ಥಕ ಭಾವ. ಹಾಗೆಯೇ ಮಹಾಪ್ರಾಣ ತೆಗೆದ ಬಟ್ಟರನ್ನು ನಿಧಾನವಾಗಿಯಾದರೂ ಒಪ್ಪಿಕೊಳ್ಳಬಹುದು. ಇದೇ ವರದಿಯಲ್ಲಿ 'ಮಧ್ಯ'ವೂ 'ಮದ್ಯ'ವಾಗಿ ಮದವೇರಿಸಿದೆ. ಮಹಾಪ್ರಾಣಕ್ಕೇಕೆ ಈ ಪರಿಯ ಪ್ರಾಣಸಂಕಟವೋ ಕಾಣೆ' ಎಂದಿದ್ದಾರೆ.
ಶಂಕರ ಬಟ್ಟರು ಕನ್ನಡದಲ್ಲಿ ಮಹಾಪ್ರಾಣವೇ ಇರಬಾರದು ಎಂಬ ಅಭಿಪ್ರಾಯ ಹೊಂದಿರುವವರು. ಮಹಾಪ್ರಾಣ ಹೊಂದಿರುವ ಶಬ್ದಗಳೆಲ್ಲ ಸಂಸ್ಕೃತದವು ಎಂಬ ವಾದವೂ ಇದೆ. ಅದೇ ಕಾರಣಕ್ಕೆ ಅವರು 'ಶಂಕರ ಭಟ್ಟ' ಎಂಬ ಹೆಸರನ್ನು 'ಶಂಕರ ಬಟ್ಟ' ಎಂದು ಮಾಡಿಕೊಂಡಿದ್ದಾರೆ. ಅವರ ಹೆಸರು ಹಾಗೇ ಎಂದು ಅವರೇ ಹೇಳಿಕೊಂಡ ಮೇಲೆ ನಾವು ಕೂಡ ಹಾಗೇ ಬಳಸಿದ್ದೇವೆ.
ಮಹಾಪ್ರಾಣವೇ ಕನ್ನಡದಲ್ಲಿ ಇರಬಾರದು ಎಂದು ಹೇಳಿದವರ ಸುದ್ದಿಯಲ್ಲಿ ಹೇಗೆ ಮಹಾಪ್ರಾಣ ಹಾಕುವುದು ಎಂಬ ಕಾರಣಕ್ಕೆ 'ಮಧ್ಯ'ವೂ 'ಮದ್ಯ'ವಾಗಿರಲಿಕ್ಕಿಲ್ಲ. ಇದು ಕಣ್ತಪ್ಪಿನಿಂದ ಆಗಿರಬೇಕು ಅಥವಾ 'ಮಧ್ಯ' ಮತ್ತು 'ಮದ್ಯ'ದ ನಡುವಿನ ಗೊಂದಲದಿಂದ ಆಗಿರಬಹುದು. ಆದರೆ ದಿಢೀರನೆ ಮಹಾಪ್ರಾಣವೇ ಇಲ್ಲದಿದ್ದರೆ ಏನಾಗುತ್ತದೆ ಎಂಬುಕ್ಕೆ ಇದೊಂದು ಉತ್ತಮ ಉದಾಹರಣೆ.
ಬೆಂಗಳೂರಿನ ಶೇಷಾದ್ರಿಪುರಂನಿಂದ ರವಿಕುಮಾರ ಜಿ.ಬಿ. ಅವರು ಬರೆಯುತ್ತಾರೆ- 'ಜ.18ರಂದು ಮುಖಪುಟದಲ್ಲಿ 'ಶಿರಾಡಿ ರಸ್ತೆ ದುರಸ್ತಿಯಾಯ್ತು' ಸಾಕ್ಷಾತ್ ವರದಿಯಲ್ಲಿ ಒಂದು ತಪ್ಪಾಗಿದೆ. ಶಿರಾಡಿ ರಸ್ತೆಯ ಬಗ್ಗೆ ಡಿಸೆಂಬರ್ 26ರ ಸಂಚಿಕೆಯಲ್ಲಿ ಬಂದಿದ್ದು. ನವೆಂಬರ್ 26ರ ಸಂಚಿಕೆಯಲ್ಲಿ ಪ್ರಕಟಗೊಂಡಿಲ್ಲ.'
'ಏನೋ ಇರಲಿ ನಿಮ್ಮ ಒಂದು ಲೇಖನ, ಪತ್ರಿಕೆಯ ಅಭಿಯಾನದಿಂದ ರಸ್ತೆ ದುರಸ್ತಿ ಆಗಿರುವುದು ನಿಜಕ್ಕೂ ನಿಮಗೂ, ಪತ್ರಿಕೆಗೂ ಅಭಿನಂದನೆಗಳು' ಎಂದಿದ್ದಾರೆ.
ಡಿ.26ರಂದು ನಾನೇ ನನ್ನ ಅಂಕಣದಲ್ಲಿ ಬರೆದಿದ್ದೆ. ಡಿ.28ರಂದು ಶಿರಾಡಿ ಅವ್ಯವಸ್ಥೆ ಕುರಿತು ಒಂದು ಪುಟ ಸಮಗ್ರ ವರದಿ ಪ್ರಕಟಿಸಿದ್ದೆವು. ಇದು ಕೇಂದ್ರ ಸರ್ಕಾರದ ಮತ್ತು ಸಚಿವರ ಕಣ್ಣು ತೆರೆಸಿದ್ದು ನಮಗೂ ಸಂತೋಷ ತಂದಿದೆ. ನಿರಂತರವಾಗಿ 'ಕನ್ನಡಪ್ರಭ' ಅದರ ಮೇಲೆ ನಿಗಾವಹಿಸಿದೆ. ಇಂತಹ ಪ್ರಮುಖ ರಸ್ತೆಯೊಂದು ಸುಗಮ ಸಂಚಾರಕ್ಕೆ ಯೋಗ್ಯವಾದರೆ ಅಷ್ಟೇ ಸಂತೋಷ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

