ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರಿನ ಕುವೆಂಪುನಗರದಿಂದ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- 'ಜ.25ರಂದು 'ಕನ್ನಡಪ್ರಭ'ದ 7 ಪುಟಗಳೂ ಕರ್ನಾಟಕ ಗೃಹಮಂಡಳಿಯ ಜಾಹೀರಾತಿಗೆ ಮೀಸಲಾಗಿದ್ದವು. ಕನ್ನಡಪ್ರಭದ ಓದುಗರೆಲ್ಲರ ಆಕ್ರೋಶ ಹೇಳತೀರದು. ಮೈಸೂರಿನ ಸ್ಥಳೀಯ ಪತ್ರಿಕೆಯಲ್ಲೂ ಇದೇ ಜಾಹೀರಾತು ಪ್ರಕಟವಾಗಿತ್ತು. ಆದರೆ ಆ ಪತ್ರಿಕೆ ಅಂದು 7 ಪುಟಗಳನ್ನು ಹೆಚ್ಚುವರಿಯಾಗಿ ನೀಡಿ ಆ ಕೊರತೆಯನ್ನು ಸರಿದೂಗಿಸಿತ್ತು. ಸ್ಥಳೀಯ ಪತ್ರಿಕೆಗಿರುವ ಕಾಳಜಿ ನಮ್ಮ ಕನ್ನಡಪ್ರಭಕ್ಕೆ ಏಕಿಲ್ಲ?'
'ಈ ನೋಟೀಸು ತಲುಪಿದ ಎರಡು ದಿನಗಳೊಳಗಾಗಿ ಕನ್ನಡಪ್ರಭದ ಮೈಸೂರು ಆವೃತ್ತಿಯಲ್ಲಿ  4 ಪುಟ ಹೆಚ್ಚುವರಿಯಾಗತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ಕನ್ನಡಪ್ರಭದ ಮೈಸೂರಿನ ಓದುಗರಿಂದ ಕ್ವೀನ್ಸ್ ರಸ್ತೆಯ ನಮ್ಮ ಕನ್ನಡಪ್ರಭದ ಕಚೇರಿಗೆ ಮುತ್ತಿಗೆ ಹಾಕಲಾಗುವುದು.  ಆ ಸಮಯದಲ್ಲಿ ಚಹಾ-ಬಿಸ್ಕೆಟ್ಗೆ ತಗಲುವ ಖರ್ಚನ್ನು ನೀವೇ ಭರಿಸತಕ್ಕದ್ದು' ಎಂದಿದ್ದಾರೆ.
ಇದು ಪಿ.ಜೆ. ರಾಘವೇಂದ್ರ ಅವರ ಪ್ರೀತಿ ಮಿಶ್ರಿತ ಬೆದರಿಕೆ ಎಂಬುದು ಗೊತ್ತಿದೆ. ಅವರು ಒಂದು ಸಂಗತಿ ಅರ್ಥಮಾಡಿಕೊಳ್ಳಬೇಕು. ಸಣ್ಣ ಪತ್ರಿಕೆಗೆ ಪ್ರಸಾರ ಸಂಖ್ಯೆಯೂ ಕಡಿಮೆ ಇರುತ್ತದೆ. ಆದರೆ ನಮ್ಮ ಪತ್ರಿಕೆಯ ಪ್ರಸಾರ ಸಂಖ್ಯೆಗೆ ಅಷ್ಟು ಪುಟಗಳನ್ನು ಹೆಚ್ಚು ಮಾಡಿದರೆ ಆಗ ಜಾಹೀರಾತಿಗಿಂತ ಹೆಚ್ಚು ಹಣ ಅದಕ್ಕಾಗಿ ವ್ಯಯಿಸಬೇಕಾಗುತ್ತದೆ. ಇದ್ದ ಪುಟಗಳಲ್ಲಿ ಜಾಹೀರಾತು ಪ್ರಕಟಿಸಿದರೆ ಮಾತ್ರ ಲಾಭ. ಪುಟ ಹೆಚ್ಚು ಮಾಡಿ ಜಾಹೀರಾತು ಪ್ರಕಟಿಸಿದರೆ ಲಾಭ ಕಡಿಮೆ. ದೊಡ್ಡ ಲಾಭ ಬರದಿದ್ದರೂ ನಷ್ಟವಂತೂ ಆಗಲೇಬಾರದಲ್ಲ.
ಬೆಂಗಳೂರಿನ ತನ್ವ ಟೆಕ್ನಾಲಜೀಸ್ ನಿರ್ದೇಶಕ ಬಿ. ಶ್ಯಾಮ್ ಅವರು ಬರೆಯುತ್ತಾರೆ- 'ತಪ್ಪು ಹುಡುಕುವುದಲ್ಲ, ಆದರೂ ಪತ್ರಿಕೆ ಓದುವಾಗ ಕೆಲವು ಪದಗಳು ವಿಶೇಷವಾಗಿ ಕಾಣಿಸಿಕೊಳ್ಳುತ್ತವೆ. ಜ.17 (ಮೊದಲೊಂದು ಬಾರಿ ಹಾಗೆ ಪ್ರಕಟವಾಗಿತ್ತು) 'ಸಂಪಿಗೆ ಬಿದ್ದು ಬಾಲಕಿ ಸಾವು' (ಸಾವಿನ ಸುದ್ದಿಯಲ್ಲಿಯೂ ತಮಾಷೆಯೇ ಕೇಳಬೇಡಿ) ಸಂಪಿಗೆ ಬಿದ್ರೆ ಯಾರಾದ್ರು ಸಾಯ್ತಾರಾ?'
'ಮಲ್ಲಿಗೆ ಬಿದ್ದು, ಗುಲಾಬಿ ಬಿದ್ದು ಅಸ್ವಸ್ಥ, ಮರಣ. ಇದು ಸರಿ ಕಾಣುವುದಿಲ್ಲ. ಕನ್ನಡ  ಮತ್ತು ಇಂಗ್ಲಿಷ್ ಜತೆ ಸೇರಿದಾಗ ಇಂತಹ ವಿಶೇಷ ಪ್ರಯೋಗ ಉಂಟಾಗುತ್ತದೆ. ಇದನ್ನು ಬದಲಿಸುವ ನಿಟ್ಟಿನಲ್ಲಿ ಯೋಚಿಸಬೇಕು. ಅಲ್ಲವೇ?' ಎಂದಿದ್ದಾರೆ. 'ಸಂಪಿಗೆ' ಎಂದರೆ ಸಂಪಿಗೆ ಹೂವು ಎಂಬುದು ಒಂದು ಅರ್ಥ. ಹಾಗೆಯೇ ಬೆಂಗಳೂರು ಪ್ರದೇಶದಲ್ಲಿ 'ಸಂಪು' ಅಂದರೆ ನೀರಿನ ಟ್ಯಾಂಕ್. ಅದರಲ್ಲೂ ವಿಶೇಷವಾಗಿ ಭೂಗತವಾಗಿರುವ ನೀರಿನ ಟ್ಯಾಂಕ್. 'ಸಂಪು' ಅಂದರೆ ಮುಷ್ಕರ ಎಂಬ ಅರ್ಥವೂ ಇದೆ.
ಸಂಪಿಗೆ ಹೂವು ಬಿದ್ದು ಯಾರೂ ಸಾಯುವುದಿಲ್ಲ ಎಂಬುದು ಸಾಮಾನ್ಯ ಜ್ಞಾನ. ಹಾಗಾಗಿ ಓದುಗರಿಗೆ ಅರ್ಥವಾಗುತ್ತದೆ. 'ಸಂಪಿನಲ್ಲಿ ಬಿದ್ದು ಸಾವು' ಎಂದು ಬರೆದರೆ ಹೆಚ್ಚು ಸೂಕ್ತವಾಗಬಹುದು. ಅಪಾರ್ಥವನ್ನೇ ಮಾಡಿಕೊಳ್ಳಬೇಕು ಅಂದರೆ ಇಂತಹ ಸಾಕಷ್ಟು ಪದಗಳು ಸಿಗುತ್ತವೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.