ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಸಾಗರದಿಂದ ಸಂಕೇತ್ ಹುತ್ಗಾರ್ ಬರೆಯುತ್ತಾರೆ: "ಮೊನ್ನೆಯ ಪತ್ರಿಕೆಯಲ್ಲಿ ದೇಶದ ಹೆಸರೇ ಅದಲುಬದಲಾಗಿದೆ! ದಿನಾಂಕ 4 ಜುಲೈ 2014, ಫುಟ್ಬಾಲ್ ಸುದ್ದಿಯ ಪೇಜು. 'ಕೊಲಂಬಿಯಾ ಭೀತಿಯಲ್ಲಿ ಬ್ರೆಜಿಲ್' ಎಂಬ ತಲೆಬರಹದಡಿಯಲ್ಲಿ ಪ್ರಕಟವಾದ ಸುದ್ದಿಯ ಪ್ರಥಮ ವಾಕ್ಯ ಹೀಗಿದೆ: 'ಕೊಲಂಬಿಯಾ ಮತ್ತು ಬೆಲ್ಜಿಯಮ್ ರಾಷ್ಟ್ರಗಳು ಈ ಹಿಂದೆ ಬರೋಬ್ಬರಿ 25 ಬಾರಿ ಪರಸ್ಪರ ಸೆಣಸಿವೆ'. ಕೊಲಂಬಿಯಾ ಜೊತೆ 25 ಬಾರಿ ಸೆಣಸಿದ್ದು ಬೆಲ್ಜಿಯಮ್ಮಾ? ಬ್ರೆಜಿಲ್ಲಾ? ದಯವಿಟ್ಟು ಸ್ಪಷ್ಟೀಕರಿಸಿ.
ಅಂದಹಾಗೆ, ಜುಲೈ 1ರ ಬೈಟುಕಾಫಿಯ ಕೊನೆಯ ಪುಟದಲ್ಲಿ 'ಹಲೋಪತಿ ಜಗತ್ತು' ಎಂಬ ಲೇಖನವಿದೆ. 'ನಾವು ಭಾರತೀಯರು ಡಿಫರೆಂಟ್' ಹಣೆಪಟ್ಟಿಯ ಪ್ಯಾರಾದ ಕೊನೆಯಿಂದ ಎರಡನೇ ವಾಕ್ಯ ಹೀಗೆ ಮುಂದುವರೆಯುತ್ತದೆ: "ನಾವು ಕಚೇರಿಗಳಲ್ಲಿ ದಾಖಲೆ ಪತ್ರಗಳ ಫೋಟೋ ತೆಗೆದುಕೊಳ್ಳಲು ಅಥವಾ ಇನ್ಯಾವುದೇ ಪತ್ರಿಕೆಯ ಫೊಟೋ ಕ್ಲಿಕ್ಕಿಸಲು ಬಳಸುತ್ತಾರಂತೆ". ಸರ್, ಮೊದಲು 'ನಾವು' ಎಂದು ಬರೆದು, ಕೊನೆಯಲ್ಲಿ 'ಬಳಸುತ್ತಾರಂತೆ' ಎಂದು ಬರೆದರೆ, ಕನ್ನಡ ವ್ಯಾಕರಣ ಒಪ್ಪುವುದಿಲ್ಲ, ಅಲ್ಲವೇ?"
ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಮಿಂಚಂಚೆ ಕಳುಹಿಸಿರುವ ಎಸ್.ರಾಘವೇಂದ್ರ ಹೇಳುತ್ತಾರೆ:
"ಕ.ಪ್ರ. ಜುಲೈ 2ರ ಸಂಚಿಕೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಸಂಬಂಧ 'ಕಾರ' ಎಂಬ ಪದವನ್ನು ಮುಖಪುಟದಲ್ಲೇ ಬಳಸಿದೆ. ಇದನ್ನು ಆಕ್ಷೇಪಿಸಿ ನಾನು 'ಖಾರ' ಎಂಬ ತಿದ್ದುಪಡಿಯನ್ನು ಕೂಡಲೇ ಭಟ್ಟರ ಗಮನಕ್ಕೆ ತಂದೆನು. ಆದರೆ ಭಟ್ಟರು 'ಕ್ಯಾರೆ' ಎನ್ನುತ್ತಿಲ್ಲ! ಅವರು ಒಪ್ಪಿಕೊಂಡಿದ್ದಿದ್ದರೆ ಪುನಃ ಜುಲೈ 3ರ ಸಂಚಿಕೆಯ ಮುಖಪುಟದಲ್ಲಿ ಮತ್ತೊಮ್ಮೆ 'ಕಾರ' ಪುನರಾವರ್ತನೆಯಾಗುತ್ತಿರಲಿಲ್ಲ. ಇದು ಖಾರ ಪ್ರತಿಕ್ರಿಯೆ ವ್ಯಕ್ತಪಡಿಸುವ ವಿಷಯವಲ್ಲವಾದ್ದರಿಂದ, ನಾನು 'ಖಾರ' ಪರವಾಗಿ ಸಾಕ್ಷಿ, ಪುರಾವೆಗಳನ್ನು ಮಂಡಿಸುತ್ತಿದ್ದೇನೆ. ಕಾರ ಪ್ರಯೋಗವೇ ಸರಿ ಎನ್ನುವುದಾದರೆ ಇನ್ನು ಮುಂದೆ ಕ.ಪ್ರ.ದಲ್ಲಿ ಓಂಕಾರ, ಶ್ರೀಕಾರ ...ಮುಂತಾದ ಪದಗಳಲ್ಲಿ ಖಾರ ಪದ ಬಳಸಬೇಕಾಗುತ್ತದೆ.
ಸಂಸ್ಕೃತದಲ್ಲಿ ಖಾರಕ್ಕೆ 'ಕಟು' ಎಂದು ಕರೆಯುತ್ತಾರೆ. ಶ್ರೀ ಜಿ.ಎನ್. ಚಕ್ರವರ್ತಿ ಅವರು ಬರೆದ ಸಂಸ್ಕೃತ-ಕನ್ನಡ ನಿಘಂಟು ಪುಸ್ತಕದಲ್ಲಿ ಈ ಪ್ರಯೋಗವಿದೆ. ಈ ಪುಸ್ತಕದ ಪ್ರಕಾಶಕರು ಗೀತಾ ಬುಕ್ ಹೌಸ್"
ರಾಘವೇಂದ್ರ ಅವರು ಗಮನಿಸಬೇಕಿರುವ ಸಂಗತಿಯೆಂದರೆ 'ಕನ್ನಡ ಸಾಹಿತ್ಯ ಪರಿಷತ್ತು' ಪ್ರಕಟಿಸಿರುವ ಸಂಕ್ಷಿಪ್ತ ಕನ್ನಡ ನಿಘಂಟಿನ (2001) ಪುಟ 237ರಲ್ಲಿ 'ಕಾರ' ಎಂದೇ ಬಳಸಿ ಅರ್ಥ ವಿವರಣೆ ನೀಡಲಾಗಿದೆ. ಆ ಆಧಾರದಲ್ಲೇ ನಾವು ಈ ಪದ ಬಳಸಿದ್ದೇವೆ.



 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.