ಅತ್ಯಾಚಾರ: ಕುಚೇಷ್ಟೆ ಬೇಡ
ಇತ್ತೀಚಿನ ದಿನಗಳಲ್ಲಿ ದೇಶದ ಒಂದಲ್ಲ ಒಂದು ಭಾಗದಲ್ಲಿ ಅತ್ಯಾಚಾರ ಪ್ರಕರಣಗಳು ವರದಿಯಾದರೆ, ಅದು ಇಡೀ ದೇಶಕ್ಕೆ ಚಿರಪರಿಚಿತವಾದ ರೀತಿಯಲ್ಲಿ ಪ್ರಚಾರವಾಗುವುದು ಸಹಜ. ಅತ್ಯಾಚಾರದ ಪ್ರಕರಣಗಳು ನಮ್ಮ ನಾಗರಿಕತೆಯ ಮೇಲೇ ಕಪ್ಪುಚುಕ್ಕೆಗಳನ್ನು ಹಚ್ಚುತ್ತಿವೆ. ಅತ್ಯಾಚಾರ ನಿಜವಾಗಲೂ, ಹೀನಾಯವಾದ ಅಪರಾಧ.
ಸೋಮವಾರ ಹುಬ್ಬಳ್ಳಿಯ ಸೆರಗಿನ ಸೀಮೆಯಲ್ಲಿ ಇಬ್ಬರು ಮಹಿಳೆಯರ ಮೇಲೆ (ಅವರಲ್ಲಿ ಒಬ್ಬರು ಅವಿವಾಹಿತರು. ಇನ್ನೊಬ್ಬರು ವಿವಾಹ ವಿಚ್ಛೇದನ ಪಡೆದವರು) ನಡೆದ ಅತ್ಯಾಚಾರದ ವರದಿಗಳನ್ನು ಗಮನಿಸಿದರೆ ಅದು ನರರಾಕ್ಷಸರ ವರ್ತನೆಯೇ ಎನ್ನುವುದು ಸ್ಪಷ್ಟ. ಅತ್ಯಾಚಾರದ ಪ್ರಕರಣಗಳು ವರದಿಯಾದಾಗಲೆಲ್ಲ ಸಾರ್ವಜನಿಕರ ಆಕ್ರೋಶ ಮುಗಿಲನ್ನು ಮಟ್ಟುವುದು, ಅನಂತರದ ದಿನಗಳಲ್ಲಿ ಎಲ್ಲವೂ ಯಥಾಪ್ರಕಾರ ಎನ್ನುವಂತೆ ಜನಜೀವನ ತನ್ನದೇ ಆದ ಧಾಟಿಯಲ್ಲಿ ಸಾಗುವುದು ಮಾಮೂಲಾಗಿದೆ. ಅತ್ಯಾಚಾರದ ಪ್ರಕರಣಗಳು ಮಾಮೂಲಿ ಅಪರಾಧ ಪ್ರಕರಣಗಳಂತೆ ಉತ್ತರ ಪ್ರದೇಶದ ಅನೇಕ ಭಾಗಗಳಿಂದ ವರದಿಯಾಗುತ್ತಿರುವುದು ನಿಜ. ಅಲ್ಲೂ ದೇಶದ ಇತರ ಕಡೆಗಳಂತೆ ಆಕ್ರೋಶ ಪ್ರಕಟವಾಗಿ ಅನಂತರ ತಣ್ಣಗಾಗುತ್ತದೆ.
ಹಾಗೆಂದ ಮಾತ್ರಕ್ಕೇ ಅಲ್ಲಿನ ಪೊಲೀಸರು ಸುಮ್ಮನೆ ಕೂಡುವಂತಿಲ್ಲ. ಕೂಡುವುದೂ ಇಲ್ಲ. ಅವರ ಪಾಡಿಗೆ ಅವರು ತನಿಖೆ ನಡೆಸುತ್ತಾರೆ. ಮುಂದೆ ನ್ಯಾಯಾಲಯದಲ್ಲಿ ಶಿಕ್ಷೆಯೂ ಆಗಬಹುದು. ಆದರೆ ಅತ್ಯಾಚಾರದ ಮೊಕದ್ದಮೆಗಳ ಪ್ರಗತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಪರಿಶೀಲಿಸುವುದು ಕಡು ಕಷ್ಟ. ಸಾರ್ವಜನಿಕರಿಗೆ ಅದಕ್ಕೆ ಸಮಯವೂ ಇಲ್ಲ, ಪ್ರಕರಣದ ಘೋರ ವಿವರಣೆಗಳಲ್ಲಿ ಆಸಕ್ತಿಯೂ ಇರುವುದಿಲ್ಲ. ಹೀಗೇ ಜೀವನ ವಾಹಿನಿ ನಿರಂತರವಾಗಿ ಹರಿಯುತ್ತದೆ. ಅತ್ಯಾಚಾರಗಳು ನಮ್ಮ ಸಮಾಜದ ಒಂದು ಸಹಜ ಅಂಗವೇ ಆಗಿಬಿಟ್ಟಿದೆಯೇನೋ ಎನ್ನುವ ಅನುಮಾನ ಬರಲೂಬಹುದು- ಹಾಗಾಗಬಾರದು. ಅತ್ಯಾಚಾರಿಗಳಿಗೆ ಅನೇಕ (ಬಹುತೇಕ) ಪ್ರಕರಣಗಳಲ್ಲಿ ಶಿಕ್ಷೆಯೂ ಆಗುತ್ತದೆ. ಅದು ವರದಿಯಾದರೂ ಅದರಲ್ಲಿ ಜನರ ಆಸಕ್ತಿ ಇರುವುದಿಲ್ಲ.
ಹುಬ್ಬಳ್ಳಿಯ ಅತ್ಯಾಚಾರದ ಪ್ರಕರಣ ನಡೆದ ಸಮಯದಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ ಯಾದವ್ ಅವರು ಅಲ್ಲಿನ ಒಂದು ಪ್ರಕರಣ ಕುರಿತ ಪ್ರಶ್ನೆಗೆ, ಉತ್ತರ ರೂಪದಲ್ಲಿ ಕರ್ನಾಟಕದ ಹುಬ್ಬಳ್ಳಿಯಲ್ಲೂ ಅತ್ಯಾಚಾರ ನಡೆಯುತ್ತಿದೆ. ಅದನ್ಯಾಕೆ ನೀವು ಪ್ರಸ್ತಾಪಿಸಲ್ಲ ಎಂದು ಪತ್ರಕರ್ತರಿಗೆ ಛೀಮಾರಿ ಹಾಕಿದರಂತೆ. ಇಂತಹ ವರ್ತನೆ, ಮುಖ್ಯಮಂತ್ರಿಯಾದವರಿಗೆ ಸಲ್ಲದು. ಅತ್ಯಾಚಾರದ ಪ್ರಕರಣಗಳ ವಿಚಾರದಲ್ಲಿ ಯಾವ ಕಾರಣಕ್ಕೂ ಲೇವಡಿ - ಕುಚೇಷ್ಟೆ ಸಲ್ಲದು. ಅದು ಗಂಭೀರವಾದ ಸವಾಲು. ಅದನ್ನು ಹಾಗೇ ಪರಿಗಣಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

