ಅನೈತಿಕ ಸಂಬಂಧಗಳ ವರದಿ ಏಕಾಗಿ?
ವಾರ್ತೆಗಳು' ಎಂಬ ಪದವನ್ನು ಸರಳವಾಗಿ ವ್ಯಾಖ್ಯಾನಿಸಬಹುದಾದರೆ ಸಮಾಜಕ್ಕೆ ಉಪಯುಕ್ತವೆನಿಸುವ ಯಾವುದೇ ವ್ಯಕ್ತಿ, ವಿಷಯ, ವಸ್ತು, ಘಟನೆಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುವುದೇ ವಾರ್ತೆ ಎನ್ನಬಹುದು. ವಾರ್ತಾ ಪ್ರಸಾರವು ಸಾಮಾನ್ಯ ಜ್ಞಾನ ಪ್ರಸಾರದ ಒಂದು ರೂಪವೂ ಹೌದು. ಆದರೆ ದಿನದ 24ಗಂಟೆ ಸುದ್ದಿ ಪ್ರಸಾರ ಮಾಡುವ ವಾಹಿನಿಗಳು ಬಂದ ನಂತರ ಆ ಪರಿಕಲ್ಪನೆ ಜಾಳಾಗಿರುವುದು (ಹಾಳಾಗಿರುವುದು)ಸತ್ಯ. ಸಾಮಾಜಿಕವಾಗಿ ತೀರಾ ಅನಾವಶ್ಯಕ ಎನ್ನಿಸುವ ಸುದ್ದಿಗಳನ್ನು ಬಿತ್ತರಿಸುವುದನ್ನು ವಾರ್ತಾ ವಾಹಿನಿಗಳು ನಿಲ್ಲಿಸುವ ಅವಶ್ಯಕತೆ ಇದೆ. ಅಂತಹವುಗಳಲ್ಲಿ ಅನೈತಿಕ ಸಂಬಂಧ ಹೊಂದಿದವರ ಕುರಿತ ಸುದ್ದಿ ಒಂದು. ಸಮಾಜದ ಪ್ರಮುಖ ರಾಜಕಾರಣಿ ಅಥವಾ ಪ್ರಮುಖ ವ್ಯಕ್ತಿಯ ಅನೈತಿಕ ಸಂಬಂಧದ ಸುದ್ದಿಯಿಂದ ತೊಂದರೆ ಇಲ್ಲ. ಅದರಿಂದ ಜನರಿಗೆ ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡದಿರಲು ಅಥವಾ ನಂಬದಿರಲು ಮಾಹಿತಿ ಸಿಗುತ್ತದೆ. ಆದರೆ ಸಾಮಾನ್ಯ ವರ್ಗದವರು ವಿವಾಹೇತರ ಅನೈತಿಕ ಸಂಬಂಧ ಹೊಂದಿ, ಜಗಳವಾಗಿ ಮರಣಿಸಿದರೆ ಅದನ್ನು ಬಿತ್ತರಿಸುವುದರಿಂದ ಯಾರಿಗೂ ಉಪಯೋಗವಿಲ್ಲ. ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಸಮಯದಲ್ಲಿ ವ್ಯಾಪಾರ ಹೆಚ್ಚಿಸಿಕೊಳ್ಳಲು ಬ್ರೆಜಿಲ್ ವೇಶ್ಯೆಯರು ಸಿದ್ದರಾಗುತ್ತಿದ್ದಾರೆ ಎಂಬ ಸುದ್ದಿ ಯಾರಿಗೆ ಎಷ್ಟು ಉಪಯುಕ್ತ? ಪ್ರಮುಖ ವಾರ್ತೆಗಳ ಪ್ರಸಾರದ ವೇಳೆ ಅಂತಹ ವಿಚಾರಗಳನ್ನು ಬಿತ್ತರಿಸುವುದು ಯಾವ ಪುರುಷಾರ್ಥಕ್ಕಾಗಿ? ಸುದ್ದಿಯಿಂದ ಬುದ್ಧಿ ಮತ್ತೆ ಹೆಚ್ಚಾಗಬೇಕೆ ಹೊರತು ತಲೆ ಲದ್ದಿಯ ಬುಟ್ಟಿಯಾಗಬಾರದು ಅಲ್ಲವೇ?
ಎಸ್.ರವಿ, ನ್ಯಾಯವಾದಿ, ಮೈಸೂರು.
ಸರ್ಕಾರಕ್ಕಿಲ್ಲ ಕ್ಷಮತೆ
ಇತ್ತೀಚಿನ ಕೆಲ ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಸರ್ಕಾರ ಇದೆಯಾ ಎಂಬ ಅನುಮಾನ ಕಾಡುತ್ತದೆ. ಒಬ್ಬರು ಅದ್ದೂರಿ ಮದುವೆಗಳ ತಡೆಗೆ ಕಡಿವಾಣ ಹಾಕಿ 5 ಲಕ್ಷಕ್ಕಿಂತ ಹೆಚ್ಚಿಗೆ ಖರ್ಚು, ಒಂದು ಸಾವಿರ ಜನಕ್ಕಿಂತ ಹೆಚ್ಚಿಗೆ ಇದ್ದರೆ ತೆರಿಗೆ ವಿಧಿಸುವುದು- ಅದರಿಂದ ಬರುವ ಹಣವನ್ನು ಸರಳ ವಿವಾಹಗಳಿಗೆ ವಿನಿಯೋಗಿಸುವುದು ಎಂದು ಒಂದು ಹೇಳಿಕೆ. ಇದು ಸಚಿವರಾದ ಜಯಚಂದ್ರರ ಬಾಲಿಶ ಹೇಳಿಕೆ. ಇದು ನಿಜವೇ ಆದರೆ ಚುನಾವಣಾ ಆಯೋಗದ ಸೂಚನೆಯಂತೆ ನೀವು ಗೆಲ್ಲಬೇಕಾದರೆ ಎಷ್ಟು ಖರ್ಚು ಮಾಡಿದ್ದೀರಾ ಅಥವಾ ಆಯೋಗದ ನಿಯಮ ಪಾಲಿಸಿದ್ದೀರಾ? ಇನ್ನು ಎರಡನೆಯದು ಸಿ.ಎಂ. ಹೇಳಿಕೆ. ನಕಲಿ ಪಡಿತರ ಚೀಟಿಯನ್ನು ಹಿಂದಿರುಗಿಸಿ ಇಲ್ಲದಿದ್ದರೆ ತನಿಖೆ ವೇಳೆ ಪತ್ತೆಯಾದರೆ ಅಂತಹವರ ಮೇಲೆ ಕ್ರಿಮಿನಲ್ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಹೇಳಿದ್ದೇನೋ ಸರಿ. ಆದರೆ, ಏನಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲು ಹಟಕ್ಕೆ ಬಿದ್ದವರಂತೆ ಬೆಂಬಲಿಗರು, ಹಿಂಬಾಲಕರ ಮೂಲಕ ಯಾವುದೇ ಪರಾಮರ್ಶೆ ಇಲ್ಲದೆ ಕೊಟ್ಟವರು ನೀವೇ ಅಲ್ಲವೇ? ಈಗ ವಾಪಸ್ ಕೊಡಿರಿ ಎಂದರೆ ಯಾರು ಕೊಡುತ್ತಾರೆ. ಇನ್ನು ರಾಜ್ಯದ ರಕ್ಷಣೆಗೆ ಇರುವ ಕಾನೂನು ಕಾಪಾಡುವ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ವೈಯಕ್ತಿಕ ವಿಚಾರಗಳಿಗೆ ಬೀದಿಗೆ ಬಂದು ಮಾನ ಹರಾಜು ಆಗುತ್ತಿದ್ದರೂ ತಮಗೆ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿರುವ ಸರ್ಕಾರ. ಕೂಲಂಕಷವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಂಡಿದ್ದರೆ ಈ ರಾದ್ಧಾಂತ ಆಗುತ್ತಿತ್ತೆ? ಗೃಹ ಸಚಿವರು ಕ್ರಮ ತೆಗೆದುಕೊಂಡು ತಪ್ಪಿತಸ್ಥರನ್ನು ಮನೆಗೆ ಕಳುಹಿಸಬಹುದಾಗಿತ್ತು. ಅದು ಬಿಟ್ಟು ಓಲೈಕೆಗೆ ಶರಣಾದರೆ ಕರ್ನಾಟಕದ ಬಗ್ಗೆ ಇತರರು ನಗದೆ ಇರುತ್ತಾರಾ? ಒಟ್ಟಿನಲ್ಲಿ ಒಂದು ರಾಜ್ಯದ ಏಳಿಗೆಗೆ ಶ್ರಮಿಸಿದ ಸರ್ಕಾರ, ಸರ್ಕಾರಕ್ಕೆ ಸೆಡ್ಡು ಹೊಡೆಯುವ ಸರ್ಕಾರಿ ಅಧಿಕಾರಿಗಳು. ಹೀಗಾದರೆ ನಮ್ಮನ್ನು ಆ ದೇವರೇ ಕಾಪಾಡಬೇಕು.
-ಕೋರಾ ವಿಜಯಕುಮಾರ್, ತುಮಕೂರು
ಜಾತಿ ನೆಪ ಸಲ್ಲದು
ಇಂದು ಅನೇಕ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಜನರು ಕರ್ತವ್ಯ ಲೋಪ ಮಾಡಿ ಕೊನೆಗೆ ಅದರ ಲೋಪದಿಂದ ಮುಕ್ತರಾಗಲು ಜಾತಿ ನೆಪ ಒಡ್ಡಿ ತಮಗೆ ಆಗದವರ ಮೇಲೆ ಅಥವಾ ಮೇಲಧಿಕಾರಿಗಳ ಮೇಲೆ ದೋಷಾರೋಪಣೆ ಮಾಡುವುದು ಇಂದು ಜಾಸ್ತಿಯಾಗುತ್ತಿರುವುದು ಕಳವಳಕಾರಿ. ಆಪಾದನೆ ಬಂದಾಗ ಜಾತಿ ವಿಷಯ ಎತ್ತಿ ಸಮಾಜದಲ್ಲಿ ಸೌಹಾರ್ದಕ್ಕೆ ಧಕ್ಕೆ ತರುತ್ತಿರುವುದು 'ಅಂಗೈ ತೋರಿಸಿ ಅವಲಕ್ಷಣ ಮಾಡಿಕೊಂಡಂತೆ'
-ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

