ವಿಳಂಬ ಪರಿಹಾರಕ್ಕೆ ಹೆಜ್ಜೆ
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಸರ್ಕಾರಿ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ವಿಶೇಷ ಸೂಚನೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ಕಾರ್ಯದರ್ಶಿ ಅಜಿತ್ ಸೇಥಿ ಅವರು ಇನ್ನು ಮುಂದೆ ಸರ್ಕಾರಿ ಇಲಾಖೆಗಳಲ್ಲಿ ಯಾವುದೇ ಕಡತ ಪರಿಶೀಲನೆ 4 ಹಂತಕ್ಕಿಂತ ಮೀರಿ ಹೋಗಬಾರದು ಎಂದು ಸೂಚಿಸಿರುವುದು ತುಕ್ಕು ಹಿಡಿದ ಆಡಳಿತ ಯಂತ್ರಕ್ಕೆ ಸಾಣೆ ಹಿಡಿದಂತಾಗಿದೆ. ಆಡಳಿತದಲ್ಲಿ ಲಂಚವೇ ಪ್ರಾಧಾನ್ಯವಾಗಿರುವುದರಿಂದ ಪರಿಶೀಲನಾ ಕಾರ್ಯ ಎರಡು ಹಂತಗಳನ್ನು ದಾಟಬಾರದು ಎಂದು ಸೂಚಿಸಿದರೂ ವಿಳಂಬ ತಪ್ಪಿದ್ದಲ್ಲ. ಮುಖ್ಯವಾಗಿ 4 ಹಂತಗಳಲ್ಲಿ ನಡೆಯುವ ಪರಿಶೀಲನಾ ಕಾರ್ಯವು ನಿಗದಿತ ವೇಳೆಯಲ್ಲಾಗಬೇಕು. ಹಾಗೊಮ್ಮೆ ಆಗದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ನೌಕರ ವರ್ಗದವರಾಗಲಿ ಕೂಡಲೇ ವಿಳಂಬಕ್ಕೆ ಕಾರಣವನ್ನು ನೀಡಬೇಕು. ಅಧಿಕಾರಿ-ನೌಕರ ವರ್ಗದಲ್ಲಿ ತೃಪ್ತಿಕರವಾದ ಕಾರಣವಿಲ್ಲದೆ ವಿಳಂಬ ಧೋರಣೆ ಅನುಸರಿಸಿದರೆ ಅಂತಹವರಿಗೆ ಶಿಕ್ಷೆ ಆದರೆ ಮಾತ್ರ ಆಡಳಿತ ಯಂತ್ರ ಚುರುಕುಗೊಳ್ಳುತ್ತದೆ. ಸಾರ್ವಜನಿಕರ ಕೆಲಸ ಮಾಡಿಕೊಡಲು ವಿಳಂಬಿಸುವುದು ಲಂಚದ ಅಪೇಕ್ಷೆಯಿಂದಲೇ ಎಂಬುದು ತಿಳಿದಿರುವ ಸಂಗತಿ.
ಆನ್ಲೈನ್ ಮೂಲಕ ಬೇಕಾದ ಮಾಹಿತಿಗಳನ್ನು ತಿಳಿದುಕೊಳ್ಳುವಂತೆ ತಾಂತ್ರಿಕವಾಗಿ ಮುಂದುವರಿದಿದ್ದರೂ, ಅನಕ್ಷರಸ್ಥರು ಮಾಹಿತಿಗಳಿಗೆ ನೌಕರ ವರ್ಗದವರನ್ನೇ ಅವಲಂಬಿಸಿರಬೇಕಾಗುತ್ತದೆ. ಏನೇ ವಿಳಂಬ ಧೋರಣೆ ಅನುಸರಿಸಿದರೂ ಲಂಚ ಸಿಗುವುದಿಲ್ಲ ಎಂಬ ವ್ಯವಸ್ಥೆ ಉಂಟಾದರೆ ಯಾರ ಸೂಚನೆಯೂ ಇಲ್ಲದೆ ಕೆಲಸಗಳು ತನಗೆ ತಾನೇ ಸಕಾಲದಲ್ಲಿ ಆಗುತ್ತವೆ. ತ್ವರಿತವಾಗಿ ಕೆಲಸವಾಗಬೇಕು ಎಂಬ ಕಾರಣಕ್ಕೆ ಲಂಚ ನೀಡುವವರೂ ಲಂಚಗುಳಿತನಕ್ಕೆ ನೀರು ಗೊಬ್ಬರವನ್ನು ಎರೆದಂತಾಗುತ್ತಿದೆ.
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಆಗುವಂತೆ ನೋಡಿಕೊಳ್ಳಲು ಒಂದು ಸಚಿವ ಸ್ಥಾನವನ್ನೇ ಸೃಷ್ಟಿಸಿದರೂ ಚಿಂತೆಯಿಲ್ಲ. ವಿಳಂಬ ನೀತಿಗೆ ಇತಿ ಹಾಡಬೇಕು.
-ಕೆ.ವಿ. ಸೀತಾರಾಮಯ್ಯ, ಹಾಸನ
ನೆರವಿಗೆ ಮನವಿ
ನನ್ನ ಪತಿ ಚಿಕ್ಕಯ್ಯನವರಿಗೆ (57) ಮೂತ್ರನಾಳದಲ್ಲಿ ಸೋಂಕು ಕಾಣಿಸಿಕೊಂಡು ನಿರಂತರವಾಗಿ ರಕ್ತಸ್ರಾವವಾಗುತ್ತಿದೆ. ಪದ್ಮನಾಭನಗರದಲ್ಲಿರುವ ಎನ್ಯು (ಕಿಡ್ನಿ ಫೌಂಡೇಷನ್) ಆಸ್ಪತ್ರೆಗೆ ದಾಖಲಿಸಿದ್ದೇನೆ. ಅವರನ್ನು ಪರೀಕ್ಷಿಸಿದ ವೈದ್ಯರು ಶಸ್ತ್ರ ಚಿಕಿತ್ಸೆ ಹಾಗೂ ಮೂರು ತಿಂಗಳ ಸತತ ಚಿಕಿತ್ಸೆ ನೀಡಬೇಕೆಂದು ಹಾಗೂ ಇದಕ್ಕೆ ಸುಮಾರು 80,000 ರು. ಹಣ ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನನ್ನ ಪತಿಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಸಹ ಮಾಡಿಸಿದ್ದೇನೆ. ಇದಕ್ಕಾಗಿ ಸುಮಾರು 1,40,000 ರು. ಹಣ ವೆಚ್ಚವಾಗಿದೆ. ಕನಕಪುರ ತಾಲ್ಲೂಕಿನ ಒಂದು ಹಳ್ಳಿಯಿಂದ ಬಂದಿರುವ ನನಗೆ ಅಷ್ಟು ಹಣ ಹೊಂದಿಸಲು ಶಕ್ತಿ ಇರುವುದಿಲ್ಲ. ದಾನಿಗಳು ದಯಮಾಡಿ ತಮ್ಮ ಕೈಲಾದಷ್ಟು ಹಣ ನೀಡಿ ಸಹಕರಿಸಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ. ಹಣ ಸಹಾಯ ಮಾಡಲಿಚ್ಚಿಸುವ ದಾನಿಗಳು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ದೊಡ್ಡಕಲ್ಲಸಂದ್ರ ಶಾಖೆಯ ಖಾತೆ ಸಂಖ್ಯೆ 64040171915 - ಇಲ್ಲಿ ಜಮಾ ಮಾಡಬಹುದು. ಸಂಪರ್ಕ ದೂರವಾಣಿ: 9902307820
-ಲಕ್ಷಮ್ಮ ಚಿಕ್ಕಯ್ಯ, ಬೆಂಗಳೂರು.
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

