ರಾಜ್ಯಪಾಲರ ಹುದ್ದೆ ನೌಕರಿಯೇ?
ಸಂವಿಧಾನದಲ್ಲಿ ನಮೂದಾಗಿರುವಂತೆ ರಾಜ್ಯಪಾಲರ ಹುದ್ದೆ, ಸಂವಿಧಾನದ ರಕ್ಷಣೆ ಪಡೆದ ಹುದ್ದೆ. ಅದು ಕೇಂದ್ರ ಸರ್ಕಾರದ ನೌಕರಿ ಅಲ್ಲ. ಅದಕ್ಕಿಂತ ಹೆಚ್ಚಾಗಿ, ರಾಜ್ಯಪಾಲರಿಗೆ ಇರುವ ಕರ್ತವ್ಯಗಳಲ್ಲಿ ಬಹುಮುಖ್ಯವಾಗಿರುವುದು ರಾಜ್ಯಗಳಲ್ಲಿನ ಸ್ಥಿತಿಗತಿಗಳ ವಾಸ್ತವ ಸ್ಥಿತಿಯನ್ನು ಕೇಂದ್ರಕ್ಕೆ ವರದಿ ಮಾಡುವುದು. ಉಳಿದಂತೆ ಬಹುತೇಕ ಕರ್ತವ್ಯಗಳು ಅಲಂಕಾರಿಕ ಹಾಗೂ ಸಂಪೂರ್ಣವಾಗಿ ಸಂಪ್ರದಾಯ ಬದ್ಧ.
ಅಷ್ಟೇ ಆಗಿದ್ದರೆ, ರಾಜಕೀಯ ಪಕ್ಷಗಳು ಈ ಹುದ್ದೆಯತ್ತ ಹೆಚ್ಚು ಆಸಕ್ತಿಯನ್ನು ವಹಿಸಬೇಕಾಗಿರಲಿಲ್ಲ. ಆದರೆ ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ, ರಾಜ್ಯಪಾಲರ ಹುದ್ದೆಗೆ ಪಕ್ಷದವರನ್ನೇ ನೇಮಿಸಿ, ಆ ಉನ್ನತ ಗೌರವಾನ್ವಿತ, ಸಂವಿಧಾನಾತ್ಮಕ ಸ್ಥಾನದಲ್ಲಿ ರಾಜಕೀಯವನ್ನು ಬೆರಸಿ, ಆ ಹುದ್ದೆಗೂ ರಾಜಕೀಯ ನೇಮಕದ ಲೇಪವನ್ನು ಬಳಿದಿದ್ದೇ ಈಗ ದೊಡ್ಡ ಸಮಸ್ಯೆಯಾಗಿದೆ.
ಕಾಲಕ್ರಮದಲ್ಲಿ ರಾಜ್ಯಪಾಲರ ವರ್ಗಾವರ್ಗಿ, ರಾಜ್ಯಪಾಲರ ಸ್ಥಾನಕ್ಕೆ ರಾಜಿನಾಮೆ ನೀಡಿ, ಚುನಾವಣೆಯಲ್ಲಿ ಸ್ಪರ್ಧಿಸಿ ಆನಂತರ ಮುಖ್ಯಮಂತ್ರಿಯಾಗುವ ರಾಜಕೀಯ ಶಕ್ತಿಯನ್ನು ಪ್ರದರ್ಶಿಸುವವರೆಗೂ ಹೋಯಿತು. ಈ ಸಂಪ್ರದಾಯವನ್ನು ಆರಂಭಿಸಿದ್ದು ಒಡಿಶಾದ ಹರೇಕೃಷ್ಣ ಮೆಹತಾಬ್ ಈಗ ಅದು ಅಪರೂಪವೇನೂ ಅಲ್ಲ. ಚುನಾವಣೆಯಲ್ಲಿ ಸೋತವರನ್ನು, ಗೆದ್ದವರನ್ನು ರಾಜ್ಯಪಾಲರನ್ನಾಗಿ ನೇಮಿಸಿ, ಅನಂತರ ಆಳುವ ಪಕ್ಷಕ್ಕೆ ಅನುಕೂಲವೆಂದು ಕಂಡು ಬಂದಾಗ ಅವರನ್ನು ಕೇಂದ್ರದಲ್ಲಿ ಮಂತ್ರಿಗಳನ್ನಾಗಿ ಮಾಡುವುದಕ್ಕೂ ಒಂದು ರಾಜಕೀಯ ಪಕ್ಷ ಕೈ ಹಾಕಿದೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿನ ಉದಾಹರಣೆ ಎಸ್.ಎಂ. ಕೃಷ್ಣ ಮತ್ತು ಸುಶೀಲ ಕುಮಾರ ಶಿಂಧೆ.
ರಾಜ್ಯಪಾಲರ ಹುದ್ದೆಗೆ ನೇಮಕ ಮಾಡುವಾಗ ಆಗಿನ ಆಳುವ ಸರ್ಕಾರ ರಾಜಕೀಯ ಪರಿಗಣನೆಯನ್ನು ಪ್ರದರ್ಶಿಸಿದರೆ, ಚುನಾವಣೆಯಲ್ಲಿ ಕೇಂದ್ರದಲ್ಲಿ ಆಳುವ ಪಕ್ಷ ಸೋತಾಗ, ಪರ್ಯಾಯ ಸರ್ಕಾರ ರಾಜಕೀಯ ಲೆಕ್ಕಚಾರವನ್ನು ಹಾಕಬಾರದು ಎಂದರೆ ಹೇಗೆ? ಕಾಂಗ್ರೆಸ್ ಸೋತು ಜನತಾ ಪಕ್ಷದ ಸರ್ಕಾರ ಜಾರಿಗೆ ಬಂದಾಗಲೂ ಹೀಗೇ ಆಗಿದ್ದು. ವಾಜಪೇಯಿ ಸರ್ಕಾರ ಸೋತಾಗ ಕಾಂಗ್ರೆಸ್ ಕೂಟದ ಸರ್ಕಾರ ಮಾಡಿದ್ದೂ ಇದನ್ನೇ. ಈಗ ಕಾಂಗ್ರೆಸ್ ಕೂಟ ಹೋಗಿ ಬಿಜೆಪಿ ಕೂಟ ಸರ್ಕಾರ ಬಂದಾಗ ಮಾಡಲಿಕ್ಕೆ ಹೊರಟಿರುವುದೂ ಅದನ್ನೇ.
ನಿಜ. ಸುಪ್ರೀಮ್ ಕೋರ್ಟಿನ ಒಂದು ತೀರ್ಪಿನ ಪ್ರಕಾರ ರಾಜ್ಯಪಾಲರನ್ನು ಅವಧಿಗೆ ಮುಂಚೆ ಸಕಾರಣವಿಲ್ಲದೇ ವಜಾ ಮಾಡಲಿಕ್ಕೆ ಬರುವುದಿಲ್ಲ. ಆದರೆ ಆಳುವ ಸರ್ಕಾರ ರಾಜ್ಯಪಾಲರ ರಾಜಿನಾಮೆಯನ್ನು ಕೇಳುವುದಕ್ಕೆ ಸಂವಿಧಾನ ಬದ್ಧವಾದ ಯಾವ ನಿರ್ಬಂಧವೂ ಇಲ್ಲವಲ್ಲ.
ಸರ್ಕಾರ ರಾಜಿನಾಮೆ ಕೇಳಿದಾಗ, ಅದಕ್ಕೆ ಒಪ್ಪದೇ ಹೋದರೆ ಏನು ಮಾಡಬಹುದು? ಇದುವರೆಗಿನ ಅನುಭವದಲ್ಲಿ ಈಶಾನ್ಯ ಭಾರತದ ರಾಜ್ಯಗಳಿಗೆ ವರ್ಗಮಾಡಬಹುದು ಎನ್ನುವ ಉದಾಹರಣೆ ಇದೆ.
ಆದರೆ ರಾಜಕೀಯ ಉದ್ದೇಶದಿಂದ, ರಾಜಕೀಯ ಪಕ್ಷದಿಂದ ನೇಮಕವಾದ ರಾಜಕಾರಣಿಗಳಿಗೆ, ಸರ್ಕಾರ ರಾಜಿನಾಮೆ ಕೊಡಲು ಕೇಳಿದಾಗ ಅದನ್ನು ನಿರಾಕರಿಸುವ ನೈತಿಕ ಅಧಿಕಾರ ಇರುವುದಿಲ್ಲ. ರಾಜ್ಯಪಾಲರ ಹುದ್ದೆಯನ್ನು ಸಾಂಪ್ರದಾಯಿಕ-ಗೌರವಾನ್ವಿತ ಹುದ್ದೆ ಎಂದು ಎಲ್ಲ ರಾಜಕೀಯ ಪಕ್ಷಗಳು ಭಾವಿಸುವುದಾದರೆ, ರಾಜ್ಯಪಾಲರ ಅಧಿಕಾರಾವಧಿ ಅವರ ಸರ್ಕಾರದ ಅಧಿಕಾರವಧಿಗೇ ಸೀಮಿತವಾಗಬೇಕು. ಸರ್ಕಾರ ಹೋದ ಕೂಡಲೇ ರಾಜಕೀಯವಾಗಿ ನಾಮಕರಣವಾದವರ ಹುದ್ದೆಯ ಅವಧಿಯೂ ಅಂತ್ಯವಾಗುತ್ತದೆ ಎನ್ನುವ ನಿಯಮವನ್ನು ಜಾರಿಗೆ ತರುವುದು ಒಳ್ಳೆಯದು.
ಭಾರತ- ಭೂತಾನ್ ಸಂಬಂಧ
ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ಅಡಗಿ, ತನ್ನ ಪಾಡಿಗೆ ತಾನು ಎನ್ನುವಂತೆ ಕೂತಿರುವ ಭೂತಾನಕ್ಕೂ ಭಾರತಕ್ಕೂ ಇರುವ ಸಂಬಂಧ ಹಲವು ಶತಮಾನಗಳದ್ದೇ. ಅದಕ್ಕೆ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಒಂದು ಒಡಂಬಡಿಕೆಯ ಸ್ವರೂಪ ಬಂದಿದ್ದು ನಿಜ.
ಆ ಒಪ್ಪಂದದಂತೆ, "ಭೂತಾನ್ ಭಾರತದ ರಕ್ಷಣೆಗೆ ಒಳಪಟ್ಟ ರಾಷ್ಟ್ರ". ಬ್ರಿಟಿಷರು ಹೋದ ಮೇಲೂ ಅನಧಿಕೃತವಾಗಿ ಆ ಸಂಬಂಧ ಮುಂದುವರಿದರೂ, ಈಗ ಭೂತಾನ್ ಒಂದು ಪ್ರತ್ಯೇಕ ರಾಷ್ಟ್ರ. ಸಾರ್ಕ್ ರಾಷ್ಟ್ರಗಳ ಕೂಟದ ಸದಸ್ಯ ರಾಷ್ಟ್ರ. ಅಲ್ಲೂ ಕೆಲವು ವರ್ಷಗಳ ಹಿಂದೆ ಹೊಸ ಹೊಸ ಚಿಂತನೆಯ ಅಲೆಗಳು ಎದ್ದಿದ್ದವು. ಚೀನಾದಲ್ಲಿ ಕಮ್ಯುನಿಸ್ಟರ ಪ್ರಭಾವ ಹೆಚ್ಚಾದಾಗ ಆ ಸರ್ಕಾರ ಅಲ್ಲಿನ ವ್ಯವಹಾರಗಳಲ್ಲಿ ಕೈಯಾಡಿಸಲು ಪ್ರಯತ್ನಿಸಿದ್ದೂ ನಿಜ. ಆದರೆ ಆ ಆಟ ನಡೆಯಲಿಲ್ಲ.
ಭಾರತದ ಪ್ರಧಾನಿಗಳೆಲ್ಲರೂ ಭೂತಾನ್ ಪ್ರವಾಸ ಮಾಡಿ ಬಂದಿದ್ದಾರೆ. ಭೂತಾನಕ್ಕೆ ಭಾರತ, ಅಗತ್ಯ ಕಂಡು ಬಂದಾಗಲೆಲ್ಲ ನೆರವಿನ ಭರವಸೆಯನ್ನೂ ನೀಡಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಭೂತಾನವನ್ನೇ ಆರಿಸಿಕೊಂಡಿದ್ದೂ ಒಳ್ಳೆಯದೇ.
ಉಭಯ ರಾಷ್ಟ್ರಗಳ ನಾಯಕರು ಪ್ರಕಟಿಸಿದ ಸಂಯುಕ್ತ ಹೇಳಿಕೆಯಲ್ಲಿ ಪರಸ್ಪರ ಸೌಹಾರ್ದ, ನೆರವಿನ ಸಂಬಂಧದ ಜತೆಯಲ್ಲೇ ಭಾರತ - ಭೂತಾನ್ಗಳ ನೆಲದಿಂದ ಮಿತ್ರ ರಾಷ್ಟ್ರದ ವಿರುದ್ಧದ ಯಾವುದೇ ಚಟುವಟಿಕೆಗೂ ಅವಕಾಶ ಕೊಡುವುದಿಲ್ಲ ಎನ್ನುವ ಭರವಸೆಯನ್ನು ಅಳವಡಿಸಲಾಗಿದೆ. ಅದು ಸಾಮಯಿಕವಾದ ಮಾತು. ಈ ಒಡಂಬಡಿಕೆಯನ್ನು ಚೀನಾದಲ್ಲಿನ ಆಡಳಿತಗಾರರೂ ಸ್ವಾಗತಿಸಿದ್ದಾರೆ. ಆ ಪ್ರದೇಶದಲ್ಲಿ ಭದ್ರತೆ ಅಗತ್ಯ. ಭೂತಾನದ ವಿದ್ಯುಚ್ಛಕ್ತಿ ಭಾರತವನ್ನು ಬೆಳಗುವಂತಾದರೆ (ಈಗಾಗಲೇ ಆ ಯೋಜನೆ ಇದೆ) ಉಭಯತ್ರರಿಗೂ ಒಳ್ಳೆಯದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

