ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಹೊನ್ನಾವರದಿಂದ ಶಂಕರನಾರಾಯಣ ಭಟ್ ಅವರು ಬರೆಯುತ್ತಾರೆ- 'ಮೇ 19ರಂದು ಮುಖಪುಟ ವಾರಾಣಸಿಗೆ ರಾಜನಾಥ್ ಅವರನ್ನು ಕರೆದೊಯ್ದದ್ದು 'ಅವರೇ ಸೆಕೆಂಡ್ ಮ್ಯಾನ್‌' ಎನ್ನುವ ಸಂದೇಶ ನೀಡಲು ಎಂದು ವಿಶ್ಲೇಷಿಸಲಾಗುತ್ತಿದೆ. ಮುಂದುವರಿದ ವಾಕ್ಯ 'ಮೋದಿ ನಂತರ ಪ್ರಮಾಣ ವಚನ ಸ್ವೀಕರಿಸಲಿರುವುದು ಸಹ ರಾಜನಾಥ ಅವರೇ ಎನ್ನಲಾಗಿದೆ.' ರಾಜನಾಥ ಅವರ ಲಿಂಗ ಪರಿವರ್ತನೆಯಾದಂತಿದೆ.'
'ಸಂಪಾದಕೀಯ 1ನೇ ಪ್ಯಾರಾ... ಈ ಚುನಾವಣೆ ಫಲಿತಾಂಶ ರಾಜಕೀಯವಾಗಿ ಬಹುತೇಕ ಎಲ್ಲ ರಾಜ್ಯಗಳ ಮೇಲೂ ಪರಿಣಾಮ ಬೀರುವುದಂತೂ ಖಚಿತ ಅಂತಿದೆ. 'ಬೀರಿರುವುದಂತೂ' ಆಗಬೇಕು. 4ನೇ ಪ್ಯಾರಾ 2ನೇ ಸಾಲು... 'ಪ್ರಕರಣ ಅಷ್ಟು ಸುಲಭವಾಗಿ ಇತ್ಯರ್ಥವಾಗುವಂತಿರಲಿಲ್ಲ' ಅಂತ ಬರೆದಿದೆ. ಮೇ 19ರವರೆಗೆ ಸಮಸ್ಯೆ ಬಗೆಹರಿಯದಿದ್ದರಿಂದ ಇದು 'ಇತ್ಯರ್ಥವಾಗುವಂತಿಲ್ಲ' ಅಂತಾಗಬೇಕಿತ್ತು' ಎಂದಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ನಳಿನಿ ಶಿವನಂಜಪ್ಪ ಅವರು ಬರೆಯುತ್ತಾರೆ- 'ಮಾರ್ಚ್ 11 ಪುಟ 5ರಲ್ಲಿ ಹಾಸನ ಜಿಲ್ಲೆಯಲ್ಲಿ ಮೊದಲ 3 ಬಾರಿಗೆ (1952-1967) ಲೋಕಸಭಾ ಸದಸ್ಯರಾಗಿದ್ದ ಶ್ರೀ ಸಿದ್ದನಂಜಪ್ಪನವರ ಬಗ್ಗೆ 1 ಚಿತ್ರ ಪ್ರಕಟವಾಗಿತ್ತು. ಅದನ್ನು ಸಿದ್ದನಂಜಪ್ಪನವರ ಮುರುಕಲು ಮನೆ ಎನ್ನುವ ಬದಲು ಆಗ ಸಿದ್ದನಂಜಪ್ಪನವರಿದ್ದ ಮನೆ ಎಂದಿದ್ದರೆ ಸರಿಯೆನಿಸುತ್ತಿತ್ತು.'
'ಅವರು ಅಲ್ಲಿ ವಾಸವಿದ್ದುದು 50ರ ದಶಕದಲ್ಲಿ. ಆಗ ಅದು ಸುಸ್ಥಿತಿಯಲ್ಲೇ ಇತ್ತು. ನಂತರ ಅವರ ಸಂಬಂಧಿಗಳಿಗೆ ಸೇರಿದ ಆ ಮನೆಯಲ್ಲಿ ಈಗ ಯಾರೂ ವಾಸ ಇಲ್ಲದೆ ಹಾಳಾಗಿದೆ. ಶ್ರೀಯುತರು ತೀರಿಕೊಂಡೇ 42 ವರ್ಷಗಳಾಗಿವೆ. ಇಂದಿನ ಬಹಳಷ್ಟು ರಾಜಕಾರಣಿಗಳ ಶ್ರೀಮಂತಿಕೆಯ ಜೀವನ ಶೈಲಿಯೊಂದಿಗೆ ಜನ ಹೋಲಿಕೆ ಮಾಡಿಕೊಳ್ಳಲಿ ಎಂಬ ಆತುರದಲ್ಲಿ ವಾಸ್ತವಿಕತೆಯನ್ನು ಏರುಪೇರು ಮಾಡಬಾರದಲ್ಲವೇ' ಎಂದಿದ್ದಾರೆ.
ಬಾಗಲಕೋಟೆ ಜಿಲ್ಲೆ ಹುನಗುಂದದಿಂದ ಸಂಗಪ್ಪ ಗಾಣಿಗೇರ ಅವರು ಬರೆಯುತ್ತಾರೆ- 'ಮೇ 12ರಂದು ಪುಟ 6ರಲ್ಲಿಯ ಲೇಖನ 'ಹೈಕಮಾಂಡ್ ಕೈಯಲ್ಲಿ ಭಸ್ಮವಾಗುವ ಸಚಿವರ್ಯಾರು?' ಎಂಬಲ್ಲಿ 2ನೇ ಕಾಲಂನ ಕೆಳಗಡೆ 'ಪರಸ್ಪರ ದ್ವೇಷ ರಾಜಕೀಯ ಮಾಡಿದ್ದು, ರಮ್ಯಾಗೆ ಮುಳುಗಿ ನೀರಾಗಿ ಪರಿಣಮಿಸುವ ಲಕ್ಷಣಗಳಿವೆ' ಎಂಬಲ್ಲಿ 'ಮುಳುಗು ನೀರಾಗಿ' ಎಂದಾಗಬೇಕಿತ್ತಲ್ಲವೇ?'
'ಅದರಂತೆ ಪುಟ 7ರಲ್ಲಿ 'ಈ ಮುಖಾಮುಖಿಯ ಹಿಂದಿನ ಕಥೆಯೇನು' ಎಂಬ ಲೇಖನದ 2ನೇ ಕಾಲಂನಲ್ಲಿ 'ಬೂತ್ ಕ್ಯಾಪ್ಚುರಿಂಗ್‌' ಎಂಬುದು ಇಂಗ್ಲೀಷಿನಲ್ಲಿದ್ದಂತೆ 'ಬೂತ್ ಕ್ಯಾಪ್ಚರಿಂಗ್‌' ಆಗಬೇಕಿತ್ತು. ಅದು ಬಿಟ್ಟು ಮತಗಟ್ಟೆ ವಶ ಎಂಬುದನ್ನು ಪ್ರಯೋಗಿಸಬಾರದಿತ್ತೆ? ಅದೇ 2ನೇ ಕಾಲಂನಲ್ಲಿ ಕಡೆಯಲ್ಲಿ 'ನಿರ್ವಚನ ಸದನದಲ್ಲಿ' ಎಂಬುದು 'ನಿರ್ವಾಚನ ಸದನ' ಅಂತ ಆಗಬೇಕಿತ್ತಲ್ಲವೇ? 'ನಿರ್ವಚನ' ಎಂದರೆ ಆದೇಶ ಅಂತ ಅರ್ಥವಾಗುವುದಲ್ಲವೇ?' ಎಂದಿದ್ದಾರೆ.

 ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.