ಸಿಂಹಾಸನದಲ್ಲಿ ವಿ'ರಾಜ'ನಾದವ
ಈತನಿಗೆ ಎಂದೂ ರಜೆಯೇ ಇಲ್ಲ
ಪೃಥ್ವಿಯಲ್ಲಿರುವ ಯಾರನ್ನೂ ಪೃಥಕ್ ಆಗಿ ನೋಡದೇ ತನ್ನ ಮಕ್ಕಳಂತೆ ನೋಡಿಕೊಳ್ಳುವ ಪಾರ್ಥಿವ
ಅನೇಕ ಪತ್ನಿ ವ್ರತಸ್ಥ. ಹಾಗಾಗಿಯೇ ಬಹುವಲ್ಲಭ
ಕೋಪತಾಪಗಳ ಮೂಟೆ ಈ ನೃಪ
ಭೋಪಾಲಕ್ಕೂ ಈತ ಭೂಪಾಲನೇ
ತನ್ನ ಕೋಪಕ್ಕೆ ತುತ್ತಾದವರನ್ನು ಸಜಾ ಕೊಟ್ಟು ಭೂಮಿಯಿಂದಲೇ ವಜಾ ಮಾಡುವವ
ಕಿವಿಯನ್ನು ಸೊಳ್ಳೆ ಕಚ್ಚದಿರಲೆಂದು ಈತನ ಪಕ್ಕ ಚಾಮರವನ್ನು ಬೀಸಲಾಗುತ್ತದೆ
ಕಿರೀಟವನ್ನು ಸದಾ ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ಈತನದು
ರಾಜಾ ಪ್ರತ್ಯಕ್ಷ ದೇವತಾ. ವರ ಕೊಡದಿದ್ದರೂ ಶಾಪಕ್ಕಂತೂ ರೆಡಿ ಇರಬೇಕು
ರಾಜ್ಯದ ಬಡತನಕ್ಕೆ ರಾಜ ಕಾರಣ. ಹೌದು ಇಂದಿಗೂ ಕಾರಣ ಅದೇ ರಾಜಕಾರಣ
ಇವನ ವಿವೇಕವೆಲ್ಲ ರಾಜ್ಯಾಭಿಷೇಕದ ಪವಿತ್ರ ತೀರ್ಥದೊಂದಿಗೇ ಇಳಿದು ಹೋಗಿರುತ್ತದೆ
ಸರಸದ ಪ್ರತಿನಿಧಿ ಈ ಅರಸ
-ವಿಶ್ವನಾಥ ಸುಂಕಸಾಳ
vishwasunkasal@yahoo.com