ತಪ್ಪಾಯ್ತು ತಿದ್ಕೋತೀವಿ
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮುದನೂರದಿಂದ ಅಂಬ್ರೀಶ್ ಎಸ್. ಹೈಯ್ಯಾಳ ಅವರು ಬರೆಯುತ್ತಾರೆ- 'ಫೆ.25ರ 'ಬೈಟು ಕಾಫಿ'ಯ 'ತಿಳ್ಕೊಳ್ಳೋ ವಿಷ್ಯ' ಎಂಬ ಅಂಕಣದಲ್ಲಿ ಸ್ಫೋಟಕಗಳು ಒಯ್ಯುವುದು ಅಪರಾಧ ಎಂಬುವುದರಲ್ಲಿ ನೀವು ಹೇಳಿರುವ ಮಾಹಿತಿಗಳು ಪ್ರಕಟಿಸಿದ ಚಿತ್ರಕ್ಕೆ ಯಾವುದೇ ಸಂಬಂಧವಿಲ್ಲವಲ್ಲ? ಹೊತ್ತಿ ಉರಿಯುವ ಸ್ಫೋಟಕಗಳನ್ನು ಒಯ್ಯುವುದು ಅಪರಾಧ ಎಂದಿದ್ದೀರಿ. ಆದರೆ ಚಿತ್ರದಲ್ಲಿ ತುಂಬಿದ ಜನರ ಬಸ್ಸನ್ನು ತೋರಿಸಿದ್ದೀರಿ. ಏಕೆ ಹೀಗೆ?'
'ಕ್ರೀಡಾಪುಟದ '2010ರ ಕ್ಷಣ ಮತ್ತೆ ನಮ್ಮದಾಗಲಿ' ಎಂಬ ಲೇಖನದಲ್ಲಿ 'ಕ್ರಿಕೆಟ್ ಅನ್ನು ತಮ್ಮ ಉಸಿರಂತೆ ಆರಾಧಿಸುವ ಖಂಡದಲ್ಲಿ ಅತಿಪತ್ಯ" ಸಾಧಿಸಲು ಎಂದಿದೆ. ಅದು ಆಧಿಪತ್ಯ ಆಗಬೇಕಿತ್ತಲ್ಲವೇ? ಅದೇ ದಿನದ 'ಭಾರತೀಯ ಚಿತ್ರರಂಗ ನಮಗೆ ಕಲಿಸಿದ ಪಾಠಗಳು' ಎಂಬ ಕಿರುನಗೆ ನನಗೆ ಬಹಳ ಇಷ್ಟವಾಯಿತು. ಕಿರುನಗೆ ಎಂದರೆ ಬರೀ ಜೋಕ್ಸ್ ಇರಬೇಕೆಂದೇನೂ ಇಲ್ಲ. ಈ ತರಹದ ಭಿನ್ನತೆ ಇದ್ದರೆ ಎಲ್ಲರಿಗೂ ಇಷ್ಟವಾಗುತ್ತದೆ.'
'ಇನ್ನೊಂದು ವಿಪರ್ಯಾಸವೆಂದರೆ ನಿಮ್ಮ ಪತ್ರಿಕೆ ಓದುವುದು ತಪ್ಪು ಹುಡುಕಲು ಎಂಬಂತಾಗಿದೆ. ಇದು ಮುಖ್ಯವಾಗಿ ಕನ್ನಡಪ್ರಭದ ಅಭಿಮಾನಿಯಾದ ನನಗೆ ನೋವಿನ ಸಂಗತಿಯಾಗಿದೆ. ಆದರೆ ಖುಷಿಯೇನೆಂದರೆ ತಪ್ಪನ್ನು ತಿದ್ದಿಕೊಳ್ಳಲು ನಿಮ್ಮ ಪತ್ರಿಕೆ ಸಾರಿ... ನಮ್ಮ ಪತ್ರಿಕೆ ತುಂಬಾ ಸಹಾಯಕವಾಗಿದೆ. ಇಂತಹ ಪ್ರಯೋಗ ಕನ್ನಡಪ್ರಭದಲ್ಲಿ ಮಾತ್ರ ಎಂಬುದು ವಿಶೇಷ. ಕನ್ನಡಪ್ರಭದಲ್ಲಿನ ಲೇಖನಗಳನ್ನು ಇತರ ಯಾವುದೇ ಪತ್ರಿಕೆಗಳು ಮೀರಿಸಲು ಸಾಧ್ಯವಿಲ್ಲ. ಸಾಹಿತ್ಯಾಸಕ್ತರಿಗೆ ನಮ್ಮ ದಿನಪತ್ರಿಕೆ ತುಂಬಾ ಇಷ್ಟವಾಗುತ್ತದೆ ಎಂಬುದು ನನ್ನ ಅಭಿಪ್ರಾಯ' ಎಂದಿದ್ದಾರೆ. ಅವರ ಪ್ರೀತ್ಯಾದರಕ್ಕೆ ನಾವು ಋಣಿಗಳು. ಹಾಗೆಯೇ ತಪ್ಪುಗಳನ್ನು ತಿದ್ದುವವರಿಗೂ ಸ್ವಾಗತ. ಹೊಗಳಿಕೆ, ತೆಗಳಿಕೆ, ತಪ್ಪು, ಒಪ್ಪುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಾಗಲೇ ಒಳಿತಾಗಲು ಸಾಧ್ಯ.
ಬೆಳಗಾವಿಯಿಂದ ಸಿದ್ದಲಿಂಗಪ್ಪ ಈಶ್ವರಪ್ಪ ಸಿದ್ದಿಬಾವಿ ಅವರು ಬರೆಯುತ್ತಾರೆ- 'ಫೆ.28ರಂದು ಪುಟ 3ರಲ್ಲಿ 'ನಾಯಿಯಿಂದ ನವಜಾತ ಶಿಶು ರಕ್ಷಣೆ' ಎಂಬ ಶೀರ್ಷಿಕೆಯಲ್ಲಿ ವರದಿಯೊಂದು ಪ್ರಕಟವಾಗಿದೆ. ಈ ವರದಿಯನ್ನು ಓದುವ ಮುಂಚೆ ಶೀರ್ಷಿಕೆಯನ್ನು ಓದಿದಾಗ ಬಹುಶಃ ನಾಯಿಯೇ ಶಿಶುವನ್ನು ರಕ್ಷಿಸಿರಬಹುದೆಂದು ತಿಳಿದಿದ್ದೆ. ಏಕೆಂದರೆ ಮನುಷ್ಯನ ನಂಬುಗೆಯ ಪ್ರಾಣಿಯಾದ ನಾಯಿಯೂ ಸಹ ಒಮ್ಮೊಮ್ಮೆ ಮಾನವೀಯತೆ ಮೆರೆದಿದೆ. ಆದರೆ ಈ ವರದಿಯ ವಿಷಯವೇ ಬೇರೆ.'
'ನೀವು ಈ ವರದಿಗೆ 'ನಾಯಿಯ ಬಾಯಿಯಿಂದ ನವಜಾತ ಶಿಶುವಿನ ರಕ್ಷಣೆ' ಎಂಬ ಶೀರ್ಷಿಕೆ ನೀಡಿದ್ದರೆ ಈ ರೀತಿ ಗೊಂದಲವಾಗುತ್ತಿರಲಿಲ್ಲ. ವರದಿಯಲ್ಲಂತೂ ತಪ್ಪಿಲ್ಲ. ನನಗಾದ ಅನಿಸಿಕೆ ಹೇಳಿರುವೆ ಅಷ್ಟೇ' ಎಂದಿದ್ದಾರೆ. ಶೀರ್ಷಿಕೆ ಓದುವಾಗ ಸಹಜವಾಗಿ ಯಾರಿಗೇ ಆಗಲಿ 'ನಾಯಿಯೇ ಶಿಶುವನ್ನು ರಕ್ಷಿಸಿತು' ಎಂದು ಭಾವಿಸುವ ಸಾಧ್ಯತೆಗಳೇ ಹೆಚ್ಚಾಗಿವೆ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

