ಸಂಪಾದಕೀಯ

ಕೆ.ಪಿ.ಎಸ್.ಸಿ. ಹಿಡಿದ ಹಟ

Published On :

ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ತೀವ್ರ ಸ್ವರೂಪದ ವಾದ-ವಿವಾದವನ್ನು ಸೃಷ್ಟಿಸಿರುವ 2011ರ ಕೆ.ಪಿ.ಎಸ್.ಸಿ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪಟ್ಟಿಯ ವಿಚಾರದಲ್ಲಿ ಆಯೋಗದ ಅಧ್ಯಕ್ಷರೇ ಜೈಲಿಗೆ ಹೋಗಬೇಕಾಗಿ ಬಂದರೂ, ಇನ್ನೂ ಆಯೋಗ ತನ್ನ ಹಟಮಾರಿತನಕ್ಕೇ ಅಂಟಿಕೊಂಡಿದೆ.
ಈಗ ಲೋಕಸಭೆ ಚುನಾವಣೆಯ ವೇಳಾ ಪಟ್ಟಿ ಪ್ರಕಟವಾದ ಪರ್ವಕಾಲದಲ್ಲಿ ಮತ್ತೆ ಮತ್ತೊಂದು "ತಾತ್ಕಾಲಿಕ" ಪಟ್ಟಿಯನ್ನು ಪ್ರಕಟಿಸಿ, ರಾಜ್ಯ ಸರ್ಕಾರಕ್ಕೇ ಸವಾಲನ್ನು ಎಸೆದಿದೆ. ಮೊದಲ ಪಟ್ಟಿ ಪ್ರಕಟಣೆಯಾದಾಗ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪವನ್ನು ಅಭ್ಯರ್ಥಿಗಳು ಹೊರಿಸಿದಾಗ ಸರ್ಕಾರ ತನಿಖೆಗೇ ವ್ಯವಸ್ಥೆ ಮಾಡಿತ್ತು. ಸಿ.ಐ.ಡಿ. ತನಿಖೆಯ ಅನಂತರ ಕೆಲವು ವಿಷಯಗಳಲ್ಲಿ ಹಾಗೂ ಪ್ರಕರಣಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಅರ್ಥ ಬರುವ ವರದಿಯನ್ನು ಸಲ್ಲಿಸಲಾಗಿತ್ತು. 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಗೊಂಡಿದ್ದವರ ಪಟ್ಟಿ ರದ್ದಾಗಿತ್ತು.
ರಾಜ್ಯ ಸರ್ಕಾರ ಆ ಪಟ್ಟಿಯನ್ನು ಮಾನ್ಯ ಮಾಡುವುದಿಲ್ಲವೆಂದು ವಚನ ನೀಡಿತ್ತು. ಆಯೋಗದ ಸದಸ್ಯೆ ಮಂಜುಳಾ ಶ್ರೀಧರ್ ಅವರನ್ನು ಅಮಾನತ್ತಿನಲ್ಲಿಡುವ ಶಿಫಾರ್ಸು ಪ್ರಕಟವಾಗಿತ್ತು.
ಈ ಸಂಬಂಧದಲ್ಲಿ ಸರ್ಕಾರಕ್ಕೆ ತಮ್ಮ ಅಭಿಪ್ರಾಯವನ್ನು ಸಲ್ಲಿಸಿದ ಅಡ್ವೊಕೇಟ್ ಜನರಲ್ ಅವರು ಎಲ್ಲ ಅಧಿಸೂಚನೆಗಳನ್ನೂ ಹಿಂದಕ್ಕೆ ಪಡೆದು, ಮರುಪರೀಕ್ಷೆ ಅಥವಾ ಮರು ಮೌಲ್ಯಮಾಪನದ ವ್ಯವಸ್ಥೆಗೆ ಶಿಫಾರ್ಸು ಮಾಡಿದ್ದರು. ಅದು ಕಾಯಿದೆ ಬದ್ಧ ಶಿಫಾರ್ಸು. ಆ ಹಂತದಲ್ಲೇ ಕೆಲವು ವಲಯಗಳಲ್ಲಿ ಒಂದು ರೀತಿಯ ಆಂದೋಲನವೇ ಆರಂಭವಾಯಿತು. ಯಾರದೋ ತಪ್ಪಿಗೆ ಬೇರೆ ಯಾರಿಗೋ ಶಿಕ್ಷೆಯಾಗಬಾರದು ಎನ್ನುವ ವಾದ ತಪ್ಪು ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಲಿ, ಆದರೆ ಯಾವ ತಪ್ಪನ್ನೂ ಮಾಡದ ಅಮಾಯಕರ ನೌಕರಿಯನ್ನು ಕಸಿದುಕೊಳ್ಳುವುದು ಸರಿಯಲ್ಲ ಎನ್ನುವುದೇ ಆಂದೋಲನಕಾರರ ಮಂತ್ರ.
ಈ ವಿಚಾರದಲ್ಲಿ ಮಂತ್ರಿ ಮಂಡಲದಲ್ಲೂ ಗಟ್ಟಿಯಾದ ರೀತಿಯಲ್ಲಿ ಒಂದೇ ಅಭಿಪ್ರಾಯ ಇಲ್ಲ. ಮಂತ್ರಿಮಂಡಲದ ತೀರ್ಮಾನಕ್ಕಾಗಿ ಎರಡು ಬಾರಿ ವಿಷಯವನ್ನು ಮಂಡಿಸಿದಾಗಲೂ ನ್ಯಾಯ ಎನಿಸಿದ ಒಮ್ಮತದ ಅಭಿಪ್ರಾಯ ಪ್ರಕಟವಾಗಲಿಲ್ಲ.
ಆ ವೇಳೆಗೆ ವಿವಾದದಲ್ಲಿ ಸಾಮಾಜಿಕ ನ್ಯಾಯ ವಿತರಣೆಯ ಸಿದ್ಧಾಂತವೂ ಪ್ರವೇಶವಾಯಿತು. ಮೇಲ್ನೋಟಕ್ಕೆ ಗೊತ್ತಾಗದೇ ಹೋದರೂ ಒಳಹೊಕ್ಕು ನೋಡಿದವರಿಗೆ ಇಡೀ ವ್ಯವಹಾರದಲ್ಲಿ ಜಾತಿ ಜಗಳದ ಪಾತ್ರವಿದೆ ಎನ್ನುವ ಅನುಮಾನವೂ ಮೂಡಿದೆ.
ಈ ಸನ್ನಿವೇಶದಲ್ಲಿ, ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ, ತನಗೆ ಸಂವಿಧಾನದ ವಿಧಿ ನಿಯಮಗಳಿಂದ ಲಭ್ಯವಿರುವ ಸ್ವಾಯತ್ತ ಅಧಿಕಾರವನ್ನು ಚಲಾಯಿಸಿ ಒಂದು ತಾತ್ಕಾಲಿಕ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ.
ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಕಂಡುಬಂದಿರುವ ಲೋಪವೆಂದರೆ ಪಾರದರ್ಶಕತೆಯ ಕೊರತೆ. ಪ್ರಭಾವ ಬೀರುವ ಹವ್ಯಾಸ ಇಲ್ಲಿ ದೊಡ್ಡ ರೀತಿಯಲ್ಲೇ ಕೆಲಸ ಮಾಡಿದೆ ಎನ್ನುವುದು ಸಿಐಡಿ ವರದಿಯಲ್ಲಿ ಉಲ್ಲೇಖವಾಗಿದೆ. ಮೋಸ ನಡೆದಿದೆ ಎನ್ನುವುದು ನಿಜ. ಅದು ಎಲ್ಲಿ ಆರಂಭವಾಗಿದೆ, ಎಲ್ಲಿ ಮುಗಿದಿದೆ ಎನ್ನುವುದನ್ನು ಪತ್ತೆ ಹಚ್ಚುವುದು ಸಾಧ್ಯವಿಲ್ಲ. ಪ್ರಭಾವ ಬೀರಿದ "ಮಹನೀಯರಿಗೂ" ಶಿಕ್ಷೆಯಾಗಲೇ ಬೇಕು.
ಈ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವುದೇ ರೀತಿಯ ಒತ್ತಡ, ಆಮಿಷಕ್ಕೆ ಬಲಿಯಾಗಬಾರದು. ರಾಜ್ಯಾಡಳಿತ ವ್ಯವಸ್ಥೆಯ ಪ್ರಾಮಾಣಿಕತೆ - ದಕ್ಷತೆಯ ಹಿತದೃಷ್ಟಿಯಿಂದ ಇದು ಅನಿವಾರ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.