ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಬೆಂಗಳೂರಿನ ಶ್ರೀನಿವಾಸನಗರದಿಂದ ಸಾಮಗ ದತ್ತಾತ್ರಿ ಅವರು ಬರೆಯುತ್ತಾರೆ- 'ಚುನಾವಣೆ ಸಮೀಕ್ಷೆಗಳ ಭವಿಷ್ಯ ಈ ಸಂಪಾದಕೀಯದಲ್ಲಿ (ಕ.ಪ್ರ. ಮಾರ್ಚ್ 3) ನುಸುಳಿದ ಕೆಲವು ತಪ್ಪುಗಳ ಬಗೆಗೆ: ಮೊದಲನೆ ಪ್ಯಾರಾದ ಎರಡನೆಯ ಸಾಲಿನಲ್ಲಿ 'ಮಹಾಪ್ರಗಾಧ'ವು ಮಹಾಪ್ರಗಾಥ ಎಂದಿರಬೇಕಿತ್ತು. ನಾಲ್ಕನೆ ಪ್ಯಾರಾದ ನಾಲ್ಕನೆಯ ಸಾಲಿನ ಕೊನೆಯ ಪದ ಸಂಭವಿರುವುದರಿಂದ ಎಂದಿದೆ. ಇದು ಸಂಭವವಿರದಿರುವುದರಿಂದ ಎಂದಾಗಬೇಕಿತ್ತು.'
'ಆರನೆ ಪ್ಯಾರಾದ ಮೂರನೆಯ ಸಾಲಿನಲ್ಲಿ ಸಮೂಹಸನ್ನಿ ಯ ನಂತರದ ಪದ 'ತನ್ನ' ಅನಗತ್ಯ.
12ನೇ ಪ್ಯಾರಾದ 3ನೇ ಸಾಲಿನಲ್ಲಿ ಸಮೀಕ್ಷಾ ಸಂಸ್ಥೆಗಳ 'ನಂತರದ ಆದರ' ಅನವಶ್ಯಕ. ಚುನಾವಣೆ ಸಮೀಕ್ಷೆಗಳು, ಚುನಾವಣಾ ಸಮೀಕ್ಷೆಗಳೋ? ಅಂತೆಯೇ ಚುನಾವಣಾ ಆಯೋಗ ಎನ್ನಬೇಕಲ್ಲವೇ?
ಶ್ರೀವತ್ಸ ಜೋಷಿಯವರು ಹೇಳುವ ಸಾಂವಿಧಾನಿಕ ಎಂಬ ಪ್ರಯೋಗ ಉಚಿತವೆನಿಸುತ್ತದೆ. (ತಪ್ಪಾಯ್ತು ತಿದ್ಕೋತೀವಿ -ಕ.ಪ್ರ.ಯ ಮಾ.3) ಸಂವೈಧಾನಿಕ ಎಂಬ ಪ್ರಯೋಗವೂ ಕೆಲವು ಕಡೆಯಲ್ಲಿ ಬಳಕೆಯಾಗುತ್ತಿರುವುದನ್ನು ಗಮನಿಸಿದ್ದೇನೆ' ಎಂದಿದ್ದಾರೆ.
ಬಳ್ಳಾರಿಯಿಂದ ಶಿಕ್ಷಕಿ ಎಂ. ಸರೋಜ ಅವರು ಬರೆಯುತ್ತಾರೆ- 'ಫೆ.23ರಂದು ಬಂದ 'ಖುಷಿ' ಪತ್ರಿಕೆಯಲ್ಲಿ ಸುಗುಣ ಕೈಗುಣ ಪೇಜಿನಲ್ಲಿ 'ಪ್ರಸೂತಿ ಮತ್ತು ನವಜಾತ ಶಿಶುವಿನ' ಎಂದು ಇರಬೇಕಾಗಿತ್ತು. ತಪ್ಪಾಗಿ 'ನವಡಾತ' ಎಂದು ಮುದ್ರಿತವಾಗಿದೆ. ಅದೇ ಖುಷಿ ಪತ್ರಿಕೆಯಲ್ಲಿ 22ನೇ ಪುಟದಲ್ಲಿ ಸಂಪತ್ ಬೆಟ್ಟಗೆರೆ ಬರೆದ 'ಓ! ಸಿದ್ಲಿಂಗು ಎದೆಯೊಳಗೊಂದು ಊರು ಕೇರಿ' ಎಂಬ ವಿಷಯ ಓದುವಾಗ ಒಂದು ಆಶ್ಚರ್ಯ ಕಾದಿತ್ತು. ಸಿದ್ದಲಿಂಗಯ್ಯನವರು ಜನಿಸಿದ ವರ್ಷ 1995 ಅಂತ ತಪ್ಪಾಗಿ ಮುದ್ರಿತವಾಗಿದೆ. ಶಿಕ್ಷಕಿಯಾಗಿದ್ದ ನನಗೆ ಶಾಕ್ ಆಯ್ತು. ಅದು 1954 ಎಂದು ಇರಬೇಕಾಗಿತ್ತು' ಎಂದಿದ್ದಾರೆ.
ಇದೇ ಸಂಗತಿಯ ಕುರಿತು ಕೆಲವು ಪತ್ರಗಳು ಬಂದಿವೆ. ಇದೊಂದು ವಿಷಯದಲ್ಲಿ ಮಾತ್ರ ಸಾಕಷ್ಟು ಬಾರಿ ತಪ್ಪಾಗಿದೆ. ಯಾರಾದರೊಬ್ಬರ ಹುಟ್ಟಿದ ವರ್ಷ ಆಗಾಗ ತಪ್ಪಾಗಿ ಪ್ರಕಟವಾಗುತ್ತಲೇ ಇರುತ್ತದೆ.
ಮೈಸೂರಿನಿಂದ ಶಾಂತಾರಾಂ ಅವರು ಕರೆಮಾಡಿದ್ದರು. ಮಾ.13ರ ಮುಖಪುಟದಲ್ಲಿ 'ತೇಜಸ್ವಿನಿ ಅವರು ಗುರುವಾರ ಬಿಜೆಪಿ ಸೇರಿದ್ದಾರೆ' ಎಂದಿದೆ. ಆದರೆ ಒಳಗಿನ ಪುಟದಲ್ಲಿ ಅವರು ಬುಧವಾರ ಬಿಜೆಪಿ ಸೇರಿದರು ಎಂಬುದನ್ನು ಚಿತ್ರ ಸಹಿತ ಪ್ರಕಟಿಸಿದ್ದೀರಿ. ಮುಖಪುಟದಲ್ಲೊಂದು, ಒಳಪುಟದಲ್ಲೊಂದು ಯಾಕೆ? ಮುಖಪುಟದಲ್ಲಿ ಸರಿಯಾಗಿದ್ದು, ಒಳಪುಟದಲ್ಲಿ ಸರಿಯಾಗಿಲ್ಲದಿದ್ದರೆ ಸಹಿಸಿಕೊಳ್ಳಬಹುದು. ಆದರೆ ಮುಖಪುಟದಲ್ಲೇ ತಪ್ಪಾದರೆ ಹೇಗೆ? ನೀವು ಈ ಬಗ್ಗೆ ಇನ್ನಷ್ಟು ಗಮನ ಹರಿಸಬೇಕು. 'ಕನ್ನಡಪ್ರಭ' ಅತ್ಯಂತ ಹಳೆಯ ಓದುಗನಾದ ನನಗೆ ತಪ್ಪುಗಳಾಗುವುದು ಬೇಸರ ತಂದಿದೆ ಎಂದಿದ್ದಾರೆ.
ಅವರ ಬೇಸರ ನಮಗೆ ಅರ್ಥವಾಗುತ್ತದೆ. ಎಲ್ಲ ಬಣ್ಣ ಮಸಿ ನುಂಗಿತು ಎಂಬಂತೆ ನಾವು ಮಾಡಿದ ಪ್ರಯತ್ನಗಳೆಲ್ಲ ಒಂದೆರಡು ತಪ್ಪುಗಳಿಂದ ಗೌಣವಾಗುವಾಗ ನಮಗೂ ಬೇಸರವಾಗುತ್ತದೆ. ತಪ್ಪುಗಳನ್ನು ಕಡಿಮೆ ಮಾಡುವ ನಮ್ಮ ಪ್ರಯತ್ನವಂತೂ ಜಾರಿಯಲ್ಲಿದೆ.


- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.