ಸಂಪಾದಕೀಯ

ಹೀಗೊಂದು ಸಮೀಕ್ಷಾ ವರದಿ

Published On :

ಚುನಾವಣೆ ಪೂರ್ವ ಜನಾಭಿಪ್ರಾಯ ಸಂಗ್ರಹ ಆಧರಿತ ಸಮೀಕ್ಷಾ ವರದಿಗಳಲ್ಲಿ ಸರ್ವೇ ಸಾಮಾನ್ಯ ಎನ್ನುವಂತೆ, ಎಲ್ಲ ಜನವರ್ಗಗಳನ್ನು ಒಟ್ಟಿಗೇ ಕೂಡಿಸಿ ಪಡೆದ ಅಭಿಪ್ರಾಯಗಳಷ್ಟೇ ಪ್ರಕಟವಾಗಿರುವುದು. ಅದು ಸಹಜವೇ. ಆದರೆ ಇದೇ ಅವಕಾಶವನ್ನು ಬಳಸಿಕೊಂಡು ಕೃಷಿಕ ಸಮಾಜದ ಅಭಿಪ್ರಾಯಗಳನ್ನಷ್ಟೇ ಪ್ರತ್ಯೇಕಿಸಿ, ಆ ಜನವರ್ಗದ ಅನಿಸಿಕೆ- ಆಸೆ ಆಕಾಂಕ್ಷೆಗಳನ್ನು ಕುರಿತ ಒಂದು ವರದಿ ಪ್ರಕಟವಾಗಿರುವುದು ಒಂದು ರೀತಿಯಲ್ಲಿ ಸ್ವಾಗತಾರ್ಹವಾದ ಬದಲಾವಣೆಯೇ.
ಆ ವರದಿಯ ಪ್ರಕಾರ ಉತ್ತರ ಭಾರತದ ರಾಜ್ಯಗಳು, ಪೂರ್ವ ಭಾರತ ಹಾಗೂ ಮಧ್ಯ ಭಾರತದ ಸೀಮೆಯಲ್ಲಿ ಕೃಷಿಕರು ಹೆಚ್ಚಾಗಿ ಬಿಜೆಪಿಯ ಕಡೆಗೇ ವಾಲುತ್ತಿರುವಂತಿದೆ. ಇದು ಕೇವಲ ಚುನಾವಣೆಯಲ್ಲಿನ ಮತದಾನದ ಸಮೀಕ್ಷೆಯ ವಿಚಾರವಲ್ಲ. ರಾಜಕೀಯ ಶಕ್ತಿಗಳಲ್ಲಿನ ಪಲ್ಲಟದ ಚಿತ್ರಣವೂ ಹೌದು. ದಕ್ಷಿಣದಲ್ಲಿ ಈ ಪ್ರವೃತ್ತಿ ಕಡಿಮೆ. ಸಾಮಾನ್ಯವಾಗಿ, ಮಧ್ಯಮ ಜಾತಿಗಳಿಗೆ ಸೇರಿದವರೇ ಹೆಚ್ಚಾಗಿ ಕೃಷಿಯನ್ನು ಇನ್ನೂ ಜೀವನಾಧಾರವಾಗಿ ಅವಲಂಬಿಸಿರುವುದು. ಮಧ್ಯಮ ಜಾತಿಗಳೇ ರೈತ ಸಮಾಜದ ಬೆನ್ನೆಲುಬು.
ಈಗ ದೇಶದ ಎಲ್ಲ ಕಡೆ ರೈತರ ಬೆನ್ನು ಬಾಗಿದೆ. ಸ್ವಾವಲಂಬನೆಗೆ ಮಾದರಿಯಂತಿದ್ದ ಸಮಾಜಗಳು ಈಗ ಸರ್ಕಾರಗಳ ಕೊಡುಗೆ, ಉಡುಗೊರೆಗಳಿಗೆ ಕೈ ಚಾಚಲೇ ಬೇಕಾದ ಸಂಸ್ಕೃತಿಗೆ ಶರಣಾಗಿರುವಂತಿದೆ.
ಈ ಸಮೀಕ್ಷೆಯನ್ನು ನಡೆಸಿದ ಸಂಸ್ಥೆಗೆ ಯಾವುದೇ ರಾಜಕೀಯ ಒಲವು ಇದೆ ಎನ್ನುವುದಕ್ಕೆ ದಾಖಲೆಗಳಿಲ್ಲ. ಸರ್ಕಾರದ ಅನೇಕ ರೈತರ ಅಭ್ಯುದಯ ಕಾರ್ಯಕ್ರಮಗಳು ಆ ಸಮಾಜದ ಒಂದು ದೊಡ್ಡ ಭಾಗವನ್ನು ಮುಟ್ಟಿಲ್ಲ ಎನ್ನುವುದೂ ಸಮೀಕ್ಷೆಯಿಂದ ಗೊತ್ತಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ರೈತ ಸಮುದಾಯದ ಬಹು ದೊಡ್ಡ ಸಂಖ್ಯೆಯ ಜನರು ಅವಕಾಶ ಸಿಕ್ಕರೆ, ತಮ್ಮ ಕಸುಬನ್ನು ಬದಲಾಯಿಸಲು, ಹಳ್ಳಿಯನ್ನು ಬಿಟ್ಟು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗಲು ಸಿದ್ಧ ಎನ್ನುವ ಅಭಿಪ್ರಾಯವನ್ನು ಪ್ರಕಟಿಸಿರುವುದು.
ಹಾಗಿದ್ರೆ ಇದುವರೆಗೂ ಸರ್ಕಾರಗಳು ಕೈಗೊಂಡಿರುವ ಹಲವು ಲಕ್ಷ ಕೋಟಿ ರುಪಾಯಿಗಳ ವೆಚ್ಚದ ರೈತ ಅಭ್ಯುದಯ ಯೋಜನೆಗಳ ಉಪಯೋಗ ಕಡಿಮೆ ಎಂದೇ ಅರ್ಥವಲ್ಲವೇ?
ಇನ್ನೇನು ಮಹಾ ಚುನಾವಣೆಯ ಪ್ರಣಾಳಿಕೆಗಳು ಬಿಡುಗಡೆಯಾಗುವ ದಿನಗಳಿವು. ಆ ಪ್ರಣಾಳಿಕೆಗಳನ್ನು ಸಿದ್ಧಪಡಿಸುವುದು ಯಾರೇ ಆಗಿರಲಿ ಅವರು ಕೃಷಿ, ರೈತರನ್ನು ಕುರಿತಂತೆ ತಮ್ಮ ಪಕ್ಷದ ಧೋರಣೆಗಳನ್ನು ನಿರೂಪಿಸುವಾಗ ಸರ್ವೇಸಾಮಾನ್ಯ ಭರವಸೆಗಳನ್ನು ನೀಡದೇ ನಿರ್ದಿಷ್ಟ ಅವಧಿಯಲ್ಲಿ ಕೈಗೊಂಡು ಮುಗಿಸಬಹುದಾದ ಯೋಜನೆಗಳನ್ನು ಪ್ರಕಟಿಸುವುದು ಸೂಕ್ತ. ಈ ಚಿಂತನೆ ಈಗಲೇ ಆರಂಭವಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.