ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರು ಜೆ.ಪಿ. ನಗರದಿಂದ ವಿ. ಹೇಮಂತಕುಮಾರ್ ಅವರು ಬರೆಯುತ್ತಾರೆ- 'ಜ.20ರ ಸಂಚಿಕೆಯ ಪುಟ 8ರಲ್ಲಿ ಸುದ್ದಿ ಸಂಕ್ಷೇಪದಲ್ಲಿ 'ತಹಸೀಲ್ದಾರ್ ಜೀಪ್ಗೆ ಬೈಕ್ ಡಿಕ್ಕಿ: ಇಬ್ಬರ ಸಾವು' ಶೀರ್ಷಿಕೆಯ ಲೇಖನದಲ್ಲಿ 'ಶಿರಸಿ-ಬನವಾಸಿ ರಸ್ತೆಯ ಪಕ್ಕಕ್ಕೆ ಹಾಕಿರುವ ಮಣ್ಣಿನ ಧೂಳು ಹಾಗೂ ಅತಿಯಾದ ವೇಗ ಎರಡು ಜೀವಗಳನ್ನು ಬಲಿತೆಗೆದುಕೊಂಡಿದೆ. ಶನಿವಾರ ಮಧ್ಯರಾತ್ರಿ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ' ಎಂದಿದೆ.'
'ರಸ್ತೆಯ ಪಕ್ಕಕ್ಕೆ ಹಾಕಿರುವ ಮಣ್ಣಿನ ಧೂಳು ಎಂಬುದು ಎಷ್ಟು ಸಮಂಜಸ? ರಸ್ತೆಯ ಪಕ್ಕಕ್ಕೆ ಹಾಕಿದ್ದ ಮಣ್ಣಿನಿಂದ ಉಂಟಾದ ಧೂಳು ಎಂದು ಹೇಳುವುದೇ ಸರಿಯಲ್ಲವೇ. ಮಣ್ಣಿನ ಧೂಳನ್ನು ಹಾಕುವುದು ಸಾಧ್ಯವೇ? ಬೈಕ್ ಸವಾರರಿಬ್ಬರು ಅಂದರೆ ಬೈಕನ್ನು ಇಬ್ಬರು ಸವಾರಿ ಮಾಡುವುದು ಎಂಬುದಕ್ಕೆ ಬದಲಾಗಿ ಬೈಕ್ ಸವಾರ ಹಾಗೂ ಹಿಂದೆ ಕುಳಿತಿದ್ದವರು ಎಂದು ಪ್ರಕಟಿಸಬೇಕಿತ್ತಲ್ಲವೇ?'
'ಲೇಖನ ಮುಂದುವರೆದು ಒಬ್ಬ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದಿದೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದಿರಬೇಕು. ಅತಿಯಾದ ಚಾಲನೆ ಎಂಬುದಕ್ಕೆ ಬದಲಾಗಿ ಅತಿವೇಗದ ಚಾಲನೆ ಎಂದಿರಬೇಕಿತ್ತಲ್ಲವೇ?'
'ಇನ್ನು ಪುಟ 9ರಲ್ಲಿ 'ನೀಲಗಗನದಲ್ಲಿ ಪತಂಗದ ವೈಯ್ಯಾರ' ಶೀರ್ಷಿಕೆಯ ಲೇಖನದಲ್ಲಿ ಅಂತಾರಾಷ್ಟ್ರೀಯ ಪಂತಗ ಉತ್ಸವ ಎಂಬಲ್ಲಿ ಪತಂಗ ಎಂದೂ, 'ಪ್ರೇಕ್ಷಕರ ಮನೆ ಗೆದ್ದೆವು' ಎಂದಿರುವಲ್ಲಿ ಮನೆ ಬದಲು 'ಮನ ಗೆದ್ದೆವು' ಎಂದಿರಬೇಕಿತ್ತು.'
'ಫೆ.28ರ ಸಂಚಿಕೆಯ ಪುಟ 8ರಲ್ಲಿ 'ಇಂದು ಹುಬ್ಬಳ್ಳಿಗೆ ನರೇಂದ್ರ ಮೋದಿ, ಲಕ್ಷಾಂತರ ಜನರ ನಿರೀಕ್ಷೆ' ಶೀರ್ಷಿಕೆಯ ಲೇಖನದಲ್ಲಿ 'ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ರ್ಯಾಲಿಗೆ ಕ್ಷಣಗಣನೆ ಆರಂಭಗೊಂಡಿದೆ. ಹುಬ್ಬಳ್ಳಿ ಕುಸುಗಲ್ ರಸ್ತೆಯ ಆಕ್ಸ್ಫರ್ಡ್ ಕಾಲೇಜಿನ ಪಕ್ಕದ ಮೈದಾನದಲ್ಲಿ ಫೆ 28ರಂದು ಮಧ್ಯಾಹ್ನ 4ಕ್ಕೆ' ಬದಲು ಸಂಜೆ 4ಕ್ಕೆ ಎಂದು ಪ್ರಕಟವಾಗಬೇಕಿತ್ತು.'
'ಇನ್ನು ಪುಟ 10ರಲ್ಲಿ 'ಹಗರಿಬೊಮ್ಮನಹಳ್ಳಿ: ಗುಡುಗು ಸಿಡಿಲು ಸಹಿತ ಭಾರಿ ಮಳೆ' ಶೀರ್ಷಿಕೆಯ ಲೇಖನದಲ್ಲಿ ಪಟ್ಟಣದ ರಸ್ತೆಗಳ ಮೇಲ್ಲೆಲ್ಲ ಮಳೆ ನೀರು ಹರಿದರೆ ಚಂರಡಿಗಳು ಮಳೆ ನೀರಿನಿಂದ ಭರ್ತಿಯಾಗಿ ಹರಿದವು ಎಂದಿದೆ. ಪಟ್ಟಣದ ರಸ್ತೆಗಳ 'ಮೇಲ್ಲೆಲ್ಲ' ಬದಲು 'ಮೇಲೆಲ್ಲ' ಎಂದು 'ಚಂರಡಿಗಳು' ಬದಲು 'ಚರಂಡಿಗಳು' ಎಂದು ಪ್ರಕಟವಾಗಬೇಕಿತ್ತು' ಎಂದಿದ್ದಾರೆ.
'ರಸ್ತೆ ಬದಿಯ ಮಣ್ಣಿನ ಧೂಳು' ಎಂಬುದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. 'ರಸ್ತೆ ಬದಿಗೆ ಹೊಸದಾಗಿ ಮಣ್ಣು ಹಾಕಿದ್ದು ಅದರಿಂದ ಉಂಟಾದ ಧೂಳು' ಎಂಬುದನ್ನು ಸಂಕ್ಷಿಪ್ತವಾಗಿ 'ರಸ್ತೆ ಬದಿ ಮಣ್ಣಿನ ಧೂಳು' ಎಂದು ಸಂಕ್ಷಿಪ್ತವಾಗಿ ಬರೆಯಲಾಗಿದೆ. ಧೂಳನ್ನು ಹಾಕುವುದು ಸಾಧ್ಯವಿಲ್ಲವಾದರೂ, ಹೊಸದಾಗಿ ಮಣ್ಣು ಹಾಕಿದ ಸ್ವಲ್ಪ ದಿನದಲ್ಲಿ ಧೂಳನ್ನೇ ಹಾಕಿದ್ದಾರೇನೋ ಎಂಬಷ್ಟು ಧೂಳು ಶೇಖರವಾಗಿರುತ್ತದೆ.
ಇನ್ನು 'ಬೈಕ್ ಸವಾರರಿಬ್ಬರು' ಎಂದೇ ಬಳಸುವುದು ರೂಢಿ. ಅಂದರೆ ಬೈಕ್ನಲ್ಲಿ ಇಬ್ಬರು ಇದ್ದರು ಎಂದರ್ಥ. ಒಂದೇ ಬೈಕನ್ನು ಇಬ್ಬರು ಚಲಾಯಿಸಲು ಬರುವುದಿಲ್ಲ ಎಂಬುದು ಮೂರ್ಖರಿಗೂ ಅರ್ಥವಾಗುವ ಸಂಗತಿ. ಕೇವಲ ತಪ್ಪಿಗಾಗಿ ತಪ್ಪು ಗುರುತಿಸುವ ಬದಲು ಓದುಗರಿಗೆ ಸಹಾಯವಾಗುವಂತಹ ತಪ್ಪುಗಳನ್ನು ಎತ್ತಿತೋರಿಸುವಂತಾದರೆ ಉತ್ತಮ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

