ತಪ್ಪಾಯ್ತು ತಿದ್ಕೋತೀವಿ
ಮೈಸೂರಿನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಈ ಬಾರಿಯ 'ನಂಗಿಷ್ಟಾನೋ' ಅಂಕಣದಲ್ಲಿ 'ಮಧ್ಯರಾತ್ರಿ ಒಂದುವರೆಯ ಹೊತ್ತಿಗೆ ಲೇಖನ ಮುಗಿಸಿದೆ' ಎಂದು ಬರೆದಿದ್ದೀರಿ. ಆ ದಿನ ಮೈಸೂರು ಆವೃತ್ತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ನಿಮ್ಮ ಲೇಖನ ಕಾಣ ಸಿಗಲಿಲ್ಲ. ಬೇರೆಯವರು ಬರೆದಿದ್ದು ಮಾತ್ರ ಇತ್ತು. ಹೀಗೇಕೆ? ನಿಮ್ಮ ಲೇಖನ ತಪ್ಪಿಸಿಕೊಂಡಿದ್ದೇನೆ. ಹುಡುಕಿ ಕೊಡುವಿರಾ?' ಎಂದಿದ್ದಾರೆ.
ಅವರು ಕಣ್ಣಲ್ಲಿ ಕಣ್ಣಿಟ್ಟು, ಅದರ ಮೇಲೆ ಕನ್ನಡಕ ಹಾಕಿ ಹುಡುಕಿದ್ದರೂ ಸಿಗುತ್ತಿರಲಿಲ್ಲ. ಯಾಕೆಂದರೆ ಪ್ರಕಟವಾಗದ ಲೇಖನ ಕಾಣಲು ಸಾಧ್ಯವಿಲ್ಲ. ಲೇಖನದಲ್ಲೇ ಹೇಳಿದಂತೆ ಲೇಖನ ಬರೆದು ಮುಗಿಸಿದ್ದೇ ಮಧ್ಯರಾತ್ರಿ. ಅದರ ನಂತರ ಮುದ್ರಣವಾಗುವ ನಗರ ಆವೃತ್ತಿಯಲ್ಲಿ ಮಾತ್ರ ಲೇಖನ ಪ್ರಕಟವಾಗಿದೆ. ಓದಲೇಬೇಕೆಂದಿದ್ದರೆ ಅಂದಿನ ಅಂತರ್ಜಾಲ ಆವೃತ್ತಿಯಲ್ಲಿ ಲೇಖನ ಲಭ್ಯವಿದೆ.
ಬೆಂಗಳೂರಿನ ಅಕ್ಷಯನಗರದಿಂದ ಡಾ. ಹೊಸ್ಕೆರೆ ಎಸ್. ಸುರೇಶ್ ಅವರು ಬರೆಯುತ್ತಾರೆ- 'ಈ ತಪ್ಪು ಸಹನೀಯವೂ ಅಲ್ಲ, ಕ್ಷಮಾರ್ಹವೂ ಅಲ್ಲ. ಆದರೆ ಗಮನೀಯ. ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕ ಶ್ರೀ ವಿನಯ್ ಲೂಥ್ರಾ ಹೆಸರು ಮುದ್ರಣದಲ್ಲಿ ಆಗಿರುವ ದೋಷವನ್ನು ಏನೆಂದು ಹೇಳಲಿ' ಎಂದಿದ್ದಾರೆ.
ಅವರ ಹೆಸರು ಕ್ಷಮಾರ್ಹವಲ್ಲದ ರೀತಿಯಲ್ಲಿ ಪ್ರಕಟವಾಗಿರುವುದು ನಿಜ. ಇಂತಹ ಸಾಕಷ್ಟು ಉದಾಹರಣೆಗಳು ಪತ್ರಿಕೋದ್ಯಮದಲ್ಲಿದೆ. ಆದರೆ ಅವುಗಳನ್ನೆಲ್ಲ ಬರೆಯಲು ಸಾಧ್ಯವಿಲ್ಲ. ಅವು ಅತ್ಯಂತ ಗಂಭೀರ ತಪ್ಪುಗಳಾದರೂ ಸುದ್ದಿಮನೆಯಲ್ಲಿ ಅವು ಭಾರೀ ಜೋಕುಗಳಾಗಿ ಚಾಲ್ತಿಯಲ್ಲಿರುತ್ತವೆ. ಏನೇನೋ ತಪ್ಪಾಗಿ ಪ್ರಕಟವಾದ ದೊಡ್ಡ ಪಟ್ಟಿಯನ್ನೇ ಇರಿಸಿಕೊಂಡ ಪತ್ರಕರ್ತರಿದ್ದಾರೆ. ಕೆಲಸದ ಒತ್ತಡದ ನಡುವೆ ಇಂತಹ ಜೋಕುಗಳನ್ನು ನೆನಪಿಸಿಕೊಂಡು ನಕ್ಕು ಹಗುರಾಗುತ್ತಾರೆ. ಆ ನಗುವಿನೊಂದಿಗೇ ಮತ್ತೆ ಇಂತಹ ತಪ್ಪು ಮಾಡಬಾರದೆಂಬ ಸಂದೇಶವೂ ಅದರಲ್ಲಿ ಅಡಗಿರುತ್ತದೆ. ಇಂತಹ ಹಾಸ್ಯಾಸ್ಪದ ಸುದ್ದಿಯ ಕುರಿತು ಇಬ್ಬರು ಓದುಗರು ಪತ್ರ ಬರೆದಿದ್ದಾರೆ.
ಎಚ್.ಕೆ. ವಾದಿರಾಜ ಅವರು ಸುದ್ದಿಯ ತುಣುಕಿನ ಫೋಟೋ ಕ್ಲಿಕ್ಕಿಸಿ ಕಳುಹಿಸಿದ್ದಾರೆ. ಅವರ ಪ್ರಶ್ನೆ ಇಷ್ಟೇ, ಮಾ.13ರಂದು ಪ್ರಕಟವಾದ ಸುದ್ದಿಯೊಂದರಲ್ಲಿ ಸಾವಿರಾರು ಜನ ಇರುವ ಸ್ಥಳ ನಿರ್ಜನ ಪ್ರದೇಶ ಹೇಗಾದೀತು? ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಜೋಕ್ ಸಂಪೂರ್ಣವಾಗಿ ಅರ್ಥವಾಗಬೇಕಾದರೆ ನೀವು ಸಾಗರದಿಂದ ಜಿ.ಆರ್. ಪಂಡಿತ್ ಅವರು ಬರೆದ ಪತ್ರ ಓದಬೇಕು.
ಅವರು ಬರೆಯುತ್ತಾರೆ- 'ಮಾ.13ರಂದು 'ಕನ್ನಡಪ್ರಭ' ದಿನಪತ್ರಿಕೆಯ ಪುಟ ಸಂಖ್ಯೆ 10ರಲ್ಲಿ 'ಕಲ್ಲು ತೂರಾಟದ ನಡುವೆ ಕೋಣನ ವಧೆ' ಶೀರ್ಷಿಕೆಯಲ್ಲಿ 'ಕೋಣ ಬಲಿಯಾಗದ ಹೊರತು ದುಗ್ಗಮ್ಮ ಜಾತ್ರೆ ನಡೆಯದು ಎಂಬ ಮಾತನ್ನು ಪುಷ್ಠೀಕರಿಸುವಂತೆ ನಿರ್ಜನ ಪ್ರದೇಶದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ದುಗ್ಗಮ್ಮನ ಕೋಣವನ್ನು ವಧೆ ಮಾಡಲಾಯಿತು ಎಂದು ಬರೆದಿದ್ದೀರಿ. ಸಾವಿರಾರು ಜನರಿದ್ದರೆ ಅದು ನಿರ್ಜನ ಪ್ರದೇಶ ಹೇಗಾಗುತ್ತದೆ ಅರ್ಥವಾಗಲಿಲ್ಲ' ಎಂದಿದ್ದಾರೆ.
ನಿಜ ಹೇಳಬೇಕು ಅಂದರೆ ನನಗೂ ಅರ್ಥವಾಗಲಿಲ್ಲ. ಈ ಮಾತನ್ನು ಅಧಿಕಾರಿಗಳು ಹೇಳಿದರೆ ಆಗ ಒಪ್ಪಬಹುದು. ಯಾಕೆಂದರೆ ಕೋಣ ಬಲಿ ಕೊಡುವುದು ಕಾನೂನು ಬಾಹಿರ. ಹಾಗಾಗಿ ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ಬಲಿಕೊಟ್ಟರು ಎಂದೇ ಅವರು ಹೇಳಬೇಕಾಗುತ್ತದೆ. ಆದರೆ ಸಾವಿರಾರು ಜನರಿದ್ದ ನಿರ್ಜನ ಪ್ರದೇಶದಲ್ಲಿ ಎಂಬುದು ಹಾಸ್ಯವಾಗಬಹುದಷ್ಟೇ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

