ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಬೆಂಗಳೂರಿನಿಂದ ಸಂತೋಷಕುಮಾರ ಎಲ್.ಎಂ. ಅವರು ಬರೆಯುತ್ತಾರೆ- 'ವಿಚಿತ್ರವೆಂದರೆ ಮಾರ್ಚ್ 7ರ ಪತ್ರಿಕೆಯಲ್ಲಿ ಸಿಕ್ಕ ಪುಟ್ಟ ತಪ್ಪುಗಳು ಮೇಲ್ಭಾಗದಲ್ಲಿ ಪ್ರಕಟವಾಗುವ ಪುಟ್ಟ ಸುದ್ದಿಗಳಲ್ಲಿವೆ. 2ನೇ ಪುಟದ ಮೇಲ್ಭಾಗದ 'ಆಟೋ ಚಾಲಕ' ಸುದ್ದಿಯ ಕಡೆಯ ಸಾಲು 'ರೇವಣ್ಣ ಅವರು ವಿಜಯೇಂದ್ರಕೆ ವಿಶೇಷ ಬಹುಮಾನ ನೀಡಿ ಗೌರವಿಸಿದ್ದಾರೆ' ಎಂದಿದೆ. ಇಲ್ಲಿ 'ವಿಜಯೇಂದ್ರರವರಿಗೆ' ಅಗಬೇಕಿತ್ತಲ್ಲವೇ? ಹಾಗೆಯೇ ಪುಟ 12ರಲ್ಲಿ 'ಯುಪಿಎಸ್ಸಿಗೆ ಅಭ್ಯರ್ಥಿಗಳ ವಯೋವುತಿ ಸಡಿಲಿಕೆಗೆ ಒಪ್ಪಿಗೆ' ಸುದ್ದಿಯ ಕಡೆಯ ಸಾಲಿನಲ್ಲಿ 'ಅಬ್ಯರ್ಥಿಗಳ' (ಅಭ್ಯರ್ಥಿಗಳ), ಪುಟ 13ರಲ್ಲಿ 'ತಂಡಕ್ಕೆ ಹೊರೆಯಾದ ದಿನವೇ ನಿವೃತ್ತಿ' ಸುದ್ದಿಯಲ್ಲಿ 'ಬೆರೆಯವರು' (ಬೇರೆಯವರು), ಹಾಗೆಯೇ ಪುಟ 14ರಲ್ಲಿ 'ಅಶ್ವಿನ್ ಪ್ರತಿಸ್ಪರ್ಧಿಯಲ್ಲ' ಸುದ್ದಿಯಲ್ಲಿ 'ಪ್ರದರ್ಶಂನ' (ಪ್ರದರ್ಶನ)ಆಗಬೇಕಿತ್ತು.
"ತಪ್ಪಾಯ್ತು ತಿದ್ಕೋತೀವಿ' ಇರುವುದರಿಂದಲೋ ಏನೋ, ಈ ತರಹದ ಮುದ್ರಣ ದೋಷಗಳು ಬಹಳಷ್ಟು ಕಡಿಮೆಯಾಗಿವೆ. ಈ ಪ್ರಯೋಗ ಮುಂದುವರೆಯಲಿ. ಇಂತಹ ತಪ್ಪುಗಳು ಕಡಿಮೆಯಾದರೆ ಪತ್ರಿಕೆ ಓದುವವರ ಕನ್ನಡವೂ ಶುದ್ಧವಾಗುತ್ತದೆ ಎಂಬ ಆಶಯ ನನ್ನದು ಕೂಡ' ಎಂದಿದ್ದಾರೆ.
ಮೈಸೂರಿನಿಂದ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- 'ಮಾ.3ರಂದು 'ಕನ್ನಡಪ್ರಭ'ದ ಕ್ರೀಡಾಪುಟದಲ್ಲಿ 'ರಾಜ್ಯಕ್ಕೆ ಕೈ ಕೊಟ್ಟ ದಾಂಡಿಗರು, ತಮಿಳುನಾಡು ಜಯದ ಕೇಕೆ' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಸುದ್ದಿಯಲ್ಲಿ ಬ್ಯಾಟ್ಸ್‌ಮನ್ ಎಂಬ ಪದದ ಬದಲು ದಾಂಡಿಗರು ಎಂದು ಬರೆದಿದ್ದೀರಿ. ದಾಂಡಿಗ ಎಂದರೆ ದಡಿಯ, ಒರಟ, ಕಟ್ಟುಮಸ್ತಾದ ಆಳು ಎಂದರ್ಥ. ಬ್ಯಾಟ್ಸ್‌ಮನ್‌ಗಳನ್ನು ದಾಂಡಿಗರು ಎಂದದ್ದು ಏಕೋ ಸರಿಕಾಣಲಿಲ್ಲ' ಎಂದಿದ್ದಾರೆ.
ಕ್ರಿಕೆಟ್‌ನಲ್ಲಿ ದಾಂಡಿಗ ಎಂಬ ಶಬ್ದ ಬಳಕೆಯಲ್ಲಿರುವುದು ನಿಜ. ಆದರೆ ಅದು ಮೂಲ ಅರ್ಥದಲ್ಲಲ್ಲ. ಅದು ಕ್ರಿಕೆಟ್ ಕಾಮೆಂಟರಿ ಹೇಳುವ ಪಿ.ಜೆ. ರಾಘವೇಂದ್ರ ಅವರಿಗೂ ತಿಳಿದಿರಬಹುದು.
ಆದ್ದರಿಂದ ಕ್ರೀಡಾ ಸುದ್ದಿ ಓದುವವರನ್ನು ಮೂಲ ಅರ್ಥದಲ್ಲಿ ಅದನ್ನು ತೆಗೆದುಕೊಳ್ಳಲಾರರು ಎಂದು ಭಾವಿಸುತ್ತೇನೆ. ಯಲಬುರ್ಗಾದಿಂದ ಶರಣಪ್ಪ ಹಾಳಕೇರಿ (ಗೆದಗೇರಿ) ಅವರು ಬರೆಯುತ್ತಾರೆ- "ಜಾರ್ಖಂಡ್  ಭರ್ಜರಿ ಜಯ' ಪುಟ 12ರಲ್ಲಿ 'ಮೈಸೂರು: ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಜಾರ್ಖಂಡ  ಆಟಗಾತಕಿರಿಯ ಮಹಿಳೆಯಗಾರ್ತಿಯರು' ಎಂದಾಗಿದೆ ಆದರೆ ಅದು (ಆಟಗಾರ್ತಿಯರು) ಎಂದಾಗಬೇಕಿತ್ತು.'
'4ನೇ ರಾಷ್ಟ್ರಿಯ ಹಾಕಿ ಪಂದ್ಯಾವಳಿಯ ಎ ವಿಭಾಗದಲ್ಲಿ ಬಂಗಾಳ ಹಾಕಿ ಸಂಸ್ಥೆಯನ್ನು 19-0 ಅಂತರದಿಂದ ಮಣಿಸಿದ್ದಾರೆ. ಪುಟ 11ರಲ್ಲಿ 'ಶಿವಮೊಗ್ಗ ವೈದ್ಯ ವಿಜ್ಞಾನ ಸಂಸ್ಥೆಯ ಪದವಿ ಪ್ರದಾನ' ಎಂದಾಗಿದೆ ಅದು ಪ್ರಧಾನ ಆಗಬೇಕು. ಅದರಲ್ಲಿಯೇ ಮತ್ತೆ ಸಿಮ್ಸ್ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಎಂದಾಗಿದೆ ಆದರೆ ಅದು ಪ್ರಧಾನ ಆಗಬೇಕು.
'ನಾವು 'ಕನ್ನಡಪ್ರಭ' ಪತ್ರಿಕೆಯ ಓದುಗರು ಹಾಗೂ ಅದರಲ್ಲಿ ಬರುವ ಅಂಕಣಗಳು, ಲೇಖನಗಳು, ಹಾಗೂ ಬಿಸಿ ಬಿಸಿ ಸುದ್ದಿಗಳನ್ನು ಪ್ರತಿದಿನ ತಪ್ಪದೆ ಓದುತ್ತೇವೆ. ಆದ್ದರಿಂದ ಪತ್ರಿಕೆಯಲ್ಲಿಯ ವರದಿಗಳು ತಪ್ಪಾಗಿ ಬಾರದೆ ಇದ್ದರೆ ಒಳ್ಳೆದು' ಎಂದಿದ್ದಾರೆ.
ಓದುಗರು ಕೂಡ 'ತಪ್ಪಾಯ್ತು ತಿದ್ಕೋತೀವಿ'ಗೇ ತಪ್ಪಾಗಿ ಬರೆದು ಕಳುಹಿಸದೇ ಇರುವುದು ಒಳ್ಳೆಯದು. ಯಾಕೆಂದರೆ 'ಪ್ರದಾನ' ಮತ್ತು 'ಪ್ರಧಾನ'ಕ್ಕೆ ವ್ಯತ್ಯಾಸವಿದೆ. 'ಪ್ರಧಾನ' ಎಂದರೆ ಮುಖ್ಯ ಎಂಬ ಅರ್ಥವಿದೆ. ಆದರೆ 'ಪ್ರದಾನ' ಅಂದರೆ ಕೊಡುವುದು ಎಂಬ ಅರ್ಥ. ಆದ್ದರಿಂದ ಅದು ಪದವಿ ಪ್ರದಾನ, ಪ್ರಶಸ್ತಿ ಪ್ರದಾನ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.