ಚುನಾವಣೆ ಬೀದಿ ಜಗಳವಲ್ಲ
ಎಲ್ಲ ಜನತಾಂತ್ರಿಕ ದೇಶಗಳಲ್ಲೂ ಚುನಾವಣೆ ಸಮಯದಲ್ಲಿ ಬಹಿರಂಗ ಸಭೆಗಳ ಪಾತ್ರ ದೊಡ್ಡದು. ಜನರ ಮತವನ್ನು ಕೇಳುವವರಿಗೆ ಜನರನ್ನು ಮುಖತಃ (ವೈಯಕ್ತಿಕ ವಾಗಲ್ಲ) ಭೇಟಿ ಮಾಡಲು ಒಂದು ಅವಕಾಶ ಅದು. ಸಾಮಾನ್ಯವಾಗಿ ಬಹಿರಂಗ ಸಭೆ ಗಳಲ್ಲಿ, ಅದರಲ್ಲೂ ಚುನಾವಣೆ ಪ್ರಚಾರ ಸಮರದಲ್ಲಿ ವಾಗ್ಮಿಗಳಿಗೆ ವಿಜೃಂಭಿಸಲು ಒಂದು ಒಳ್ಳೆಯ ಅವಕಾಶ ಲಭ್ಯ.
ಹಿಂದೆ ನೆರೆಯ ತಮಿಳುನಾಡು - ಕೇರಳಗಳಲ್ಲಿ ಚುನಾವಣೆ ಪ್ರಚಾರ ಸಭೆಗಳೆಂದರೆ ಕತ್ತಲಾದ ಮೇಲೇ ಆರಂಭವಾಗುವ ಚಟುವಟಿಕೆಯಾಗಿತ್ತು. ಅಲ್ಲಿನ ದ್ರಾವಿಡ ಪಕ್ಷಗಳ ಪ್ರಮುಖರಲ್ಲಿ ಬಹುಮಂದಿ ಪ್ರಚಂಡ ವಾಗ್ಮಿಗಳೇ. ಅಣ್ಣಾ ದೊರೈ, ಕರುಣಾನಿಧಿ ಅವರು ಪ್ರಸಿದ್ಧ ಪುರುಷರಾಗಿದ್ದು ಹಾಗೆಯೇ. ಆದರೆ ಕರ್ನಾಟಕದಲ್ಲಿ ಬಹಿರಂಗ ಸಭೆಗಳ ಸಂಸ್ಕೃತಿ ಕಡಿಮೆ. ಮತದಾರರನ್ನು ತಲುಪಲು ಇಲ್ಲಿ ಬೇರೆ ಮಾರ್ಗಗಳನ್ನು ಅನುಸರಿಸುವುದೇ ಹೆಚ್ಚು. ಕರ್ನಾಟಕದಲ್ಲಿ ವಾಗ್ಮಿಗಳು ಇಲ್ಲ ಎಂದೇನೂ ಅಲ್ಲ. ಆದರೆ ಚುನಾವಣೆ ಸಮಯಕ್ಕೆ ಹಾಜರಾಗುವ ಬಾಡಿಗೆದಾರ ವಾಗ್ಮಿಗಳು ಇಲ್ಲ.
ಬಹಿರಂಗ ಸಭೆಗಳಲ್ಲಿ ಪಕ್ಷಗಳ ಮುಖಂಡರು ಆಡುವ ಮಾತನ್ನೇ ಜನ ಆ ಪಕ್ಷಗಳ ನೀತಿ ಎಂದು ಭಾವಿಸುವುದುಂಟು. ನಾಯಕರ ಸಭೆ ಮುಗಿದ ಅನಂತರದ ದಿನಗಳಲ್ಲಿ "ಮರಿನಾಯಕರ" ಭಾಷಣಗಳ ಸಂಪ್ರದಾಯವೂ ಇದೆ. 2014 ರ ಚುನಾವಣೆಯಲ್ಲಿ ಕಳೆದ ವಾರದ ಅನಂತರ ನಾಯಕರು ತಮ್ಮ ಉದ್ವೇಗದ ಭರದಲ್ಲಿ ನಾಲಿಗೆಯ ಮೇಲಿನ ಹತೋಟಿಯನ್ನು ಕಳೆದುಕೊಳ್ಳುತ್ತಿದ್ದಾರೇನೋ ಎನಿಸುತ್ತಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಸಭೆಯಲ್ಲಿ ಬಿಜೆಪಿಯ ಪ್ರಧಾನಿ ಪೀಠದ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕುರಿತು ತಮ್ಮ ನಾಲಿಗೆಯನ್ನು ಹರಿಯಲು ಬಿಟ್ಟಿದ್ದಾರೆ. ನರಹಂತಕ, ನರಹತ್ಯೆ, "ಹರ ಹರ ಅಲ್ಲ, ನರ ಹರ" ಇಂತಹ ಪದಗಳೂ ಪ್ರಯೋಗವಾಗಿವೆ. ನಾಯಕರೇ ಹೀಗೆ ಮಾತಾಡಿದರೆ ಹಿಂಬಾಲಕರ ಭಾಷೆಯನ್ನು ಊಹಿಸಿಕೊಳ್ಳಬಹುದು. ನರೇಂದ್ರ ಮೋದಿ ಅವರಿಗೆ ತಮ್ಮ ವಿರೋಧಿಗಳ ಬಾಯಲ್ಲಿ ಈ ಪದಗಳನ್ನು ಸುಮಾರು ಹನ್ನೆರಡು ವರ್ಷಗಳಿಂದಲೂ ಕೇಳಿ, ಕೇಳಿ ಈಗ ಜಡ್ಡು ಹಿಡಿಯುವ ಕಾಲಘಟ್ಟ ಸಮೀಪಿಸಿದೆ. ಅಂತಹ ಆರೋಪಗಳನ್ನು, ಅವರ ವಿರೋಧಿಗಳು ಎಲ್ಲ ಸಮೂಹ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ಹೊರಿಸಿದರೂ, ಅವು ನ್ಯಾಯಾಲಯಗಳಲ್ಲಿ ಪ್ರಸ್ತಾಪವಾದರೂ, ಇದುವರೆಗೆ ಯಾವ ನ್ಯಾಯಾಲಯದಲ್ಲೂ ಒಂದು ಆರೋಪವೂ ಅವರ ವಿರುದ್ಧ ಋಜುವಾತಾಗಿಲ್ಲ. ಆದರೂ 2002ರ ಗೊಂದಲ -ದೊಂಬಿಗಳನ್ನು ತಡೆಯುವುದರಲ್ಲಿ ಅವರು ವಿಫಲರಾಗಿದ್ದರು ಎನ್ನುವ ಮಟ್ಟಿಗೆ ಆರೋಪಗಳನ್ನು ಪರಿಗಣಿಸಬಹುದಷ್ಟೇ. ಲಭ್ಯವಿರುವ ಸಾಕ್ಷ್ಯ - ಆಧಾರದ ಮೇಲೆ, ಆ ಆರೋಪಗಳಿಗೆ ಅದಕ್ಕಿಂತ ಹೆಚ್ಚಿನ ಮೌಲ್ಯ ಈಗ ಇಲ್ಲ.
ಸಾಮಾನ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಧಾನವಾಗಿ, ಗಂಭೀರವಾಗಿ ಮಾತನಾಡುವ ಭಾಷಣಕಾರರು. ವ್ಯಕ್ತಿಗತ ನಿಂದನೆಗೆ ಅವರು ಮುಂದಾಗುವುದಿಲ್ಲ. ಅವರಂತಹವರೇ ಈಗ ಗೋಧ್ರಾ ಪ್ರಕರಣ ನಡೆದು ಹನ್ನೆರಡು ವರ್ಷಗಳ ಅನಂತರ ನರೇಂದ್ರ ಮೋದಿಗೆ ನರಹತ್ಯೆಯ ಕಳಂಕ ಅಂಟಿದೆ ಎನ್ನುವುದಕ್ಕೇನು ಕಾರಣ?
ಕೆಲವು ದಿನಗಳ ಹಿಂದೆ ರಾಹುಲಗಾಂಧಿ, ಅವರು ಒಂದು ಕಡೆ ಮಹಾತ್ಮಾ ಗಾಂಧಿಯವರ ಕೊಲೆಗೆ ಆರೆಸ್ಸೆಸ್ ಕಾರಣ ಎಂದಿದ್ದರು. ಗಾಂಧಿ ಹತ್ಯೆಯ ಪ್ರಕರಣದ ವಿಚಾರಣೆಯಾಗಿ ಇಬ್ಬರನ್ನು ಗಲ್ಲಿಗೇರಿಸಿ, ಇತರ ಕೆಲವರನ್ನು ಶಿಕ್ಷೆಗೆ ಒಳಪಡಿಸಿದ್ದೂ ಆಗಿದೆ. ಆದರೂ ಆ ಪ್ರಸ್ತಾಪ ಪ್ರತಿ ಚುನಾವಣೆಯಲ್ಲೂ ಆಗಲೇಬೇಕೇನು?
ಚುನಾವಣೆ ಪ್ರಚಾರ ಸಮರದ ಮೊದಲ ಹಂತದಲ್ಲಿ ಸೋತು ಹತಾಶವಾಗಿರುವಂತೆ ಕಂಡು ಬರುತ್ತಿರುವ ಕಾಂಗ್ರೆಸ್ಸಿಗರಿಗೆ ಚುನಾವಣೆಯಲ್ಲಿ ಕಾವು ಮೂಡಿಸಲು "ಮೇಲಿನಿಂದ" ಆದೇಶ ಬಂದಿದೆಯೇ ಎನ್ನುವ ಪ್ರಶ್ನೆ ಈಗ ಪ್ರಸ್ತುತ. ಚುನಾವಣೆ ಬೀದಿ ಜಗಳವಲ್ಲ, ಒಂದು ಗಂಭೀರ ಪ್ರಕ್ರಿಯೆ. ಇಲ್ಲಿ ಟೀಕೆ ಸಲ್ಲುತ್ತದೆ. ಬೈಗುಳ ಸಲ್ಲುವುದಿಲ್ಲ. ಶಕ್ತಿ ಶಾಲಿಗಳಿಗೆ ಸಂಯಮ ಭೂಷಣ. ದಂಡಾಧಿಕಾರಿಗಳಂತೂ ಸಂಯಮದಿಂದಿರಬೇಕು. ಕೀಳು ದರ್ಜೆಯ ಪದಗಳ ಬಳಕೆ ಬೇಡ. ಅದು ಯಾರಿಗೂ ಭೂಷಣವಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

