ತಪ್ಪಾಯ್ತು ತಿದ್ಕೋತೀವಿ
ಶಿಕಾರಿಪುರದಿಂದ ಆರ್.ಪಿ. ಪರಶುರಾಮ್ ಅವರು ಬರೆಯುತ್ತಾರೆ- 'ಮಾ.15ರಂದು 'ಪತ್ರಪ್ರಭ' ವಿಭಾಗದಲ್ಲಿ ಕೆ. ನಾಗರಾಜ್ ಅರಸಿಕೆರೆ ಇವರ ಪತ್ರದಲ್ಲಿ, 'ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ರವರು ನರೇಂದ್ರ ಮೋದಿಯವರು ಮುಸಲ್ಮಾನರ ಟೋಪಿ ಧರಿಸಿದ ವಿಚಾರವಾಗಿ ಟೀಕಿಸಿದ್ದಾರೆ' ಎಂದಿದೆ. ಇದನ್ನು ಓದಿದ ನಮಗೆ ಆಶ್ಚರ್ಯ! ಮೋದಿಯವರು ಯಾವಾಗ ಮುಸಲ್ಮಾನರ ಟೋಪಿ ಧರಿಸಿದರು ಎಂದು. ಇದು ಮುಸಲ್ಮಾನರ ಟೋಪಿ ಧರಿಸದ ವಿಚಾರವಾಗಿ ಎಂದಾಗಬೇಕಿತ್ತಲ್ಲವೇ? ಈ ಒಂದೇ ಒಂದು ಅಕ್ಷರದ ತಪ್ಪಿನಿಂದಾಗಿ ಅವರ ಪತ್ರದ ವಿಷಯವೇ ಬುಡಮೇಲಾದಂತಾಗಿದೆ' ಎಂದಿದ್ದಾರೆ.
ಬೆಳಗಾವಿಯಿಂದ ಸಿದ್ದಲಿಂಗಪ್ಪ ಈಶ್ವರಪ್ಪ ಸಿದ್ದಿಭಾವಿ ಅವರು ಬರೆಯುತ್ತಾರೆ- "ಬೈಟುಕಾಫಿ'ಯ (ಮಾ.15) ಪುಟ 2ರ 'ಜನುಮದಿನ' ಅಂಕಣದಲ್ಲಿ ಉಗ್ರರೊಡನೆ ಕೆಚ್ಚೆದೆಯಿಂದ ಹೋರಾಡಿ ವೀರಮರಣ ಹೊಂದಿದ ಮೇಜರ್ ಸಂದೀಪ ಉನ್ನಿಕೃಷ್ಣನ್ ಅವರ ಜನ್ಮ ಶಕೆಯನ್ನು 1997 ಎಂದು ಪ್ರಕಟಿಸಿದ್ದೀರಿ. ನನಗ್ಯಾಕೋ ಜನ್ಮಶಕೆಯ ಬಗೆಗಿನ ನಿಮ್ಮ ಈ ಉದಾಸೀನತೆ ಅತಿಯಾಯಿತೆಂದು ಅನಿಸುತ್ತಿದೆ. ಅದೂ ಸಂಗ್ರಹ ಯೋಗ್ಯವಾದ ಮಾಹಿತಿಯಲ್ಲಿಯೇ ಹೆಚ್ಚಾಗಿರುತ್ತದೆ. ದಯವಿಟ್ಟು ಗಣ್ಯರ, ಮೇಧಾವಿಗಳ ಜನ್ಮ ವೃತ್ತಾಂತ ವಿವರಣೆ ನೀಡುವಾಗ ಸ್ವಲ್ಪ ಹೆಚ್ಚಿನ ಗಮನ ಕೊಡಿ' ಎಂದಿದ್ದಾರೆ.
ಸಿದ್ದಲಿಂಗಪ್ಪ ಈಶ್ವರಪ್ಪ ಸಿದ್ದಿಭಾವಿ ಅವರ ಮಾತು ಒಪ್ಪುವಂಥದ್ದು. ಹಲವು ಬಾರಿ ಗಣ್ಯ ವ್ಯಕ್ತಿಗಳ ಜನನ ವರ್ಷದಲ್ಲಿ ತಪ್ಪಾಗಿರುವುದನ್ನು ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿದೆ. ವ್ಯಕ್ತಿಗಳ ಜನನ ಮತ್ತು ಮರಣ ವರ್ಷ, ದಿನಾಂಕಗಳನ್ನು ಸರಿಯಾಗಿ ನಮೂದಿಸುವತ್ತ ಎಚ್ಚರವಹಿಸುವ ಅಗತ್ಯವಿದೆ.
ಬೆಂಗಳೂರಿನ ಬನಶಂಕರಿಯಿಂದ ಬಿ.ಎಸ್. ರಮೇಶ್ ಅವರು ಬರೆಯುತ್ತಾರೆ- "ಪತ್ರ ಪ್ರಭ'ದಲ್ಲಿ 'ಬೆಂಗಳೂರಿನ ಖ್ಯಾತ ಗಾಂಧಿವಾದಿಗಳಾಗಿದ್ದ ಎನ್. ನರಸಿಂಹಯ್ಯನವರು ಆಗಾಗ್ಗೆ ತಮಾಷೆ ಮಾಡುತ್ತಿದ್ದರು' ಅಂತಿದೆ. ಅದು ಎಚ್. ನರಸಿಂಹಯ್ಯ ಅಂತ ನನ್ನ ನಂಬಿಕೆ. ಏಕೆಂದರೆ ಎನ್. ನರಸಿಂಹಯ್ಯ ಪತ್ತೇದಾರಿ ಕಾದಂಬರಿಯ ಲೇಖಕರು. ಅದೇ ದಿನದ 'ಬೈಟೂಕಾಫಿ'ಯಲ್ಲಿ 'ತಾರೆಗಳು ಸಾರ್ ತಾರೆಗಳು' ಲೇಖನಲ್ಲಿ ಜನಪ್ರಿಯ ನಟ ಎನ್.ಟಿ. ರಾಮರಾಯರ ಬಗ್ಗೆ ಬರೆಯುತ್ತಾ ಮೂರು ಬಾರಿ ಆಂಧ್ರದ ಪ್ರಧಾನಿಯಾಗಿದ್ದಾಗ (!) ಅಂತಿದೆ. ಅದು ಮುಖ್ಯಮಂತ್ರಿಗಳಾಗಿದ್ದ ಅಂತ ಇರಬೇಕಾಗಿತ್ತು, ಅಲ್ಲವೇ?' ಎಂದಿದ್ದಾರೆ.
ಆಂಧ್ರಪ್ರದೇಶದ ಈರೋಡು ಜಿಲ್ಲೆಯಿಂದ ಡಿ. ಗುರುಮಲ್ಲಪ್ಪ ಅವರು ಬರೆಯುತ್ತಾರೆ- 'ಪದಯಾತ್ರೆಯಲ್ಲಿ ಯಾತ್ರಿಕರನ್ನು ದಾರಿ ತಪ್ಪಿಸುವುದೇ ಹೆಚ್ಚಾಗಿದೆ. ಆಗಾಗ ಇದು ನಡೆಯುತ್ತಲೇ ಇದೆ, ಎಚ್ಚರಿಕೆಗಳೂ ಬರುತ್ತವೆ. ಆದರೂ ಫಲವಿಲ್ಲ. ಪದಯಾತ್ರೆ 407ರಲ್ಲಿ ಕೆಲವು ಪ್ರಶ್ನೆಗಳಿಗೆ ನೀವೇ ಉತ್ತರಿಸಿದ್ದೀರಿ. ಮೇ.ಕೆ. ಪ್ರಶ್ನೆಯನ್ನೇ ಮಾಡದೇ ನೀವೇ ಉತ್ತರಗಳನ್ನು ಬರೆದಿರುವಿರಿ. ಏಕೆ ಹೀಗಿದೆ. ಪತ್ರಿಕೆ ಆಫೀಸಿನಲ್ಲಿ ಕೆಲಸ ಮಾಡುವವರಿಗೆ ಇಷ್ಟು ಮೈ ಮರವೆಯಿದ್ದರೆ ಪತ್ರಿಕೆಗೆ ಒಳ್ಳೆಯದಲ್ಲ' ಎಂದಿದ್ದಾರೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

