ಸರ್ಕಾರಿ ಉದ್ಯಮಗಳ ದ್ವಂದ್ವ
ಸರ್ಕಾರಿ ಉದ್ಯಮಗಳ ಆಡಳಿತ ವ್ಯವಸ್ಥೆಯಲ್ಲಿ ಈಗ ದ್ವಂದ್ವ ಅಧಿಕಾರ ಕೇಂದ್ರಗಳ ಸಮಸ್ಯೆ ದೊಡ್ಡ ರೂಪದಲ್ಲೇ ಸಾರ್ವಜನಿಕರ ಮುಂದೆ ಬಂದು ನಿಂತಿದೆ. ಸರ್ಕಾರ ನೇಮಿಸುವ ಛೇರ್ಮನ್-ಮ್ಯಾನೇಜಿಂಗ್ ಡೈರೆಕ್ಟರ್, ಹೇಳಿಕೇಳಿ "ಮಾಲೀಕರ" ಪ್ರತಿನಿಧಿ. ಆದರೆ ಆಡಳಿತಾತ್ಮಕವಾದ ಎಲ್ಲ ವ್ಯವಹಾರಗಳಿಗೂ ಜವಾಬ್ದಾರಿಯನ್ನು ಹೊರಬೇಕಾದವರು ಚೀಫ್ ಎಕ್ಸಿಕ್ಯೂಟಿವ್ ಆಫೀಸರ್. ಸಾಮಾನ್ಯವಾಗಿ ಈ ಸಿಇಓಗಳು ವೃತ್ತಿನಿಷ್ಠ ಮ್ಯಾನೇಜರ್ಗಳೇ. ಹಾಗಾದ್ರೆ ಸಿ.ಎಂ.ಡಿ ಅಧಿಕಾರದ ವ್ಯಾಪ್ತಿ ಏನು? ಅದನ್ನು ಸ್ಪಷ್ಟವಾಗಿ, ನಿಖರವಾಗಿ ಪ್ರಕಟಿಸಬೇಕಾದ ಹೊಣೆ ಸರ್ಕಾರದ್ದು. ಆ ಕೆಲಸವನ್ನು ಸರ್ಕಾರ ಮಾಡಿಲ್ಲ.
ಸರ್ಕಾರಿ ಉದ್ಯಮಗಳಲ್ಲಿ ಈ ದ್ವಂದ್ವ ಅಧಿಕಾರ ಕೇಂದ್ರಗಳ ಸಮಸ್ಯೆ ಹಿಂದಿನ ಸಮಾಜವಾದಿ ಮಂತ್ರ ಪಠಣದ ಕಾಲದಲ್ಲೂ ಇತ್ತು, ಈಗಲೂ ಇದೆ. ಹಿಂದೆಯೂ ಈ ವಿಚಾರದಲ್ಲಿ ಬೇಕಾದಷ್ಟು ವೇದಿಕೆಗಳಲ್ಲಿ ವಿವಿಧ ಹಂತಗಳಲ್ಲಿ ಚರ್ಚೆ ನಡೆದಿದೆ. ಆ ಕಾಲದಲ್ಲಿ ಆಡಳಿತದಲ್ಲಿ ನೌಕರ-ಕಾರ್ಮಿಕ ಪ್ರತಿನಿಧಿಗಳಿಗೂ ಪಾಲಿರಬೇಕೆನ್ನುವ ನಿಯಮವೂ ಕೆಲವು ತಿಂಗಳ ಕಾಲ ಜಾರಿಯಲ್ಲಿತ್ತು. ಈ "ಪ್ರಾತಿನಿಧ್ಯ" ಕೇವಲ ನಿರ್ದೇಶಕರ ಮಂಡಳಿಗೇ ಸೀಮಿತವಾಗಿರಲಿಲ್ಲ. ಅದು ನಿಜವಾದ ಉತ್ಪಾದನೆಯ ಕೆಲಸ ನಡೆಯುವ ಯಂತ್ರಾಗಾರಗಳಲ್ಲೂ ಇರಬೇಕೆನ್ನುವ ಸಿದ್ಧಾಂತವೂ ಪ್ರಕಟವಾಗಿತ್ತು. ಆದರೆ ಅದು ಜಾರಿಗೆ ಬರಲಿಲ್ಲ.
ಈಗ ಯಾರೂ ನೌಕರ-ಕಾರ್ಮಿಕರ ಪ್ರಾತಿನಿಧ್ಯದ ವಿಚಾರವನ್ನೇ ಮಾತಾಡುತ್ತಿಲ್ಲ. ಆದರೆ ಕಾರ್ಖಾನೆಗಳ ಮಾಲಿಕರ ಪ್ರತಿನಿಧಿಯಾದ ಸಿ.ಎಂ.ಡಿ, ಹಲವಾರು ವಿಚಾರಗಳಲ್ಲಿ ಮಾಲಿಕತ್ವದ ಪ್ರತಿನಿಧಿಯ ಅಧಿಕಾರವನ್ನು ಚಲಾಯಿಸುವುದೂ ಉಂಟು. ಆದರೆ ಅವರು ಆ ನಿರ್ಧಾರದ ಪರಿಣಾಮಕ್ಕೆ ಯಾವ ಜವಾಬ್ದಾರಿಯನ್ನೂ ಹೊರಲು ಸಿದ್ಧರಿಲ್ಲ. ಉದ್ಯಮದ ಸಾಧನೆ ಅಥವಾ ಸೋಲಿನ ಜವಾಬ್ದಾರಿಯನ್ನು ಹೊರಬೇಕಾದ ಸಿ.ಇ.ಓ ಗೆ ನಿರ್ಧಾರದ ಹಕ್ಕೇ ಇಲ್ಲ.
ಸರ್ಕಾರಿ ಏಕಸ್ವಾಮ್ಯದ ದಿನಗಳಲ್ಲಿ ಇಂತಹ ವ್ಯವಸ್ಥೆಯಿಂದ ಆಗುವ ಕೆಟ್ಟ ಪರಿಣಾಮ ಕುರಿತು ಯಾರೂ ಮಾತಾಡುತ್ತಿರಲಿಲ್ಲ. ಅದು ಸರ್ಕಾರಕ್ಕೆ ಸ್ಪರ್ಧೆಯೇ ಇಲ್ಲದಿದ್ದ ದಿನಗಳು. ಈಗ ಹಾಗಲ್ಲ. ಸರ್ಕಾರಿ ಉದ್ಯಮಗಳೂ ಖಾಸಗಿ, ವಿದೇಶಿ ಸ್ಪರ್ಧೆಯನ್ನು ಎದುರಿಸಬೇಕು. ಈ ಪರಿಸ್ಥಿತಿಯನ್ನು ಉದ್ಯಮಿಗಳ ಸಮಾವೇಶದಲ್ಲೇ ಬಹಿರಂಗವಾಗಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಸಂಸ್ಥೆಯ ಸಿ.ಇ.ಓ ಅಲುಕ್ರಾಯ್ ಪ್ರಸ್ತಾಪಿಸಿದ್ದಾರೆ. ನಿಜ. ಈಗ ಚುನಾವಣೆ ಪ್ರಚಾರ ಸಮರದ ಮಧ್ಯದಲ್ಲಿ ಸರ್ಕಾರದಲ್ಲಿ ಮಂತ್ರಿಯಾಗಿರುವವರು ಈಗೇನೂ ಮಾಡುವಂತಿಲ್ಲ. ಆದರೆ, ಆಡಳಿತ ವ್ಯವಸ್ಥೆಯ ಗುಣಮಟ್ಟ ಹಾಗೂ ನ್ಯಾಯಪರತೆಯಲ್ಲಿ ಆಸಕ್ತಿ ಇರುವವರೆಲ್ಲರೂ ಇದನ್ನು ಗಮನಿಸಬೇಕು.
ಗಂಭೀರ ಪ್ರಕ್ರಿಯೆ ಚುನಾವಣೆ
ತಾರಾ ಸಮರ ಬೇಕಾ?
ಆಮ್ ಆದ್ಮಿ ಪಾರ್ಟಿಯ ಸಂಚಾಲಕ ಅರವಿಂದ ಕೇಜ್ರಿವಾಲ್ ಲೋಕಸಭೆ ಚುನಾವಣೆ ನಡೆಯುತ್ತಿರುವುದು ವಾರಾಣಸಿ ಹಾಗೂ ಅಮೇಠಿಗಳಲ್ಲಿ ಮಾತ್ರ ಎಂದಿದ್ದಾರೆ. ಅವರ ದೃಷ್ಟಿಯಲ್ಲಿ ನರೇಂದ್ರ ಮೋದಿ ಹಾಗೂ ರಾಹುಲ ಗಾಂಧಿ ಸ್ಪರ್ಧಿಸಿರುವ ಕ್ಷೇತ್ರಗಳೇ ನಿರ್ಣಾಯಕ. ಆ ಕ್ಷೇತ್ರಗಳಲ್ಲಿ ನಡೆಯುವುದೇ ತಾರಾ ಸಮರ. ವಾರಾಣಸಿಯಲ್ಲಿ ಕೇಜ್ರಿವಾಲ್, ಅಮೇಥಿಯಲ್ಲಿ ರಾಹುಲ ಗಾಂಧಿ ಅಭ್ಯರ್ಥಿಗಳು.
ಉತ್ತರ ಭಾರತದಲ್ಲಿ ಈಗ ಬಿಸಿಲಿನ ತಾಪ ಏರುತ್ತಿರುವಂತೆಯೇ ಚುನಾವಣೆಯ ಕಾವೂ ಏರುತ್ತಿದೆ. ಚುನಾವಣೆ ರಾಜಕೀಯ ನಿಜಕ್ಕೂ ಒಂದು ಗಂಭೀರ ಪ್ರಕ್ರಿಯೆ. ಮುಂದಿನ ಐದು ವರ್ಷಗಳ ಕಾಲ ದೇಶದ ಆಗುಹೋಗುಗಳನ್ನು ನಿರ್ಧರಿಸುವವರು ಯಾರು ಎನ್ನುವುದನ್ನು ಮತದಾರರು ತೀರ್ಮಾನಿಸುವ ಪ್ರಕ್ರಿಯೆ ಅದು.
ನಿಜ. ಇಂತಹ ಬೃಹತ್ ಸಮರದಲ್ಲಿ ಅನೇಕರು ಮೋಜಿಗಾಗಿ ಮನರಂಜನೆ ಎಂದು ಭಾವಿಸಿರುವಂತಿದೆ. ಅರವಿಂದ ಕೇಜ್ರಿವಾಲ್ ಹೇಳಿಕೆ ಅದಕ್ಕೊಂದು ನಿದರ್ಶನ.
ಸೋನಿಯಾ ಗಾಂಧಿ ಅವರು ಸ್ಪರ್ಧಿಸುತ್ತಿರುವ ರಾಯ್ಬರೈಲಿ ಹಾಗೂ ರಾಹುಲ ಗಾಂಧಿ ತಮ್ಮ ರಾಜಕೀಯ ಭವಿಷ್ಯವನ್ನೇ ಪಣವಾಗಿಟ್ಟಿರುವ ಅಮೇಠಿ ಕ್ಷೇತ್ರಗಳಲ್ಲಿ ನಡೆಯಬೇಕಾದ್ದು ಎರಡು ಪ್ರಮುಖ ಪಕ್ಷಗಳ ನಾಯಕರು ಪ್ರತಿಪಾದಿಸುವ ತತ್ವ- ಸಿದ್ಧಾಂತ ಹಾಗೂ ಕಳೆದ ವರ್ಷಗಳಲ್ಲಿನ ಅವರ ವರ್ತನೆಗಳ ನಡುವಣ ಗಂಭೀರವಾದ ಹೋರಾಟ.
ಈ ದೃಷ್ಟಿಯಿಂದ ನೋಡಿದರೆ, ಬಿಜೆಪಿ ತನ್ನ ಹಿಂದಿನ ನಿರ್ಧಾರವನ್ನು ಬದಲಾಯಿಸಿ ಉಮಾ ಭಾರತಿ ಅವರನ್ನು ಸೋನಿಯಾ ವಿರುದ್ಧ ಹಾಗೂ ಸ್ಮೃತಿ ಇರಾನಿ ಅವರನ್ನು ರಾಹುಲ ಗಾಂಧಿ ವಿರುದ್ಧ ಅಭ್ಯರ್ಥಿಗಳನ್ನಾಗಿ ಹೂಡಬಹುದೆನ್ನುವ ಚಿಂತನೆಯೇ ಸರಿಯಲ್ಲ. ಅಂತಹ ಸ್ಪರ್ಧೆಯಲ್ಲಿ ರಾಜಕೀಯವಾಗಿ ಪ್ರಮುಖ ವಿಚಾರಗಳು ಎಷ್ಟೇ ಇದ್ದರೂ, ಚರ್ಚೆ ನಡೆಯುವುದು ಇತರ ಲಘು ವಿಚಾರಗಳಲ್ಲೇ. ನಿಜ. ಈಗ ಪ್ರಕಟವಾಗಿರುವುದು ಅಧಿಕೃತ ಆಯ್ಕೆಯಲ್ಲ. ಇದೊಂದು ಚಿಂತನೆ ಮಾತ್ರ. ರಾಷ್ಟ್ರೀಯ ಪಕ್ಷಗಳ ಮಹಾನಾಯಕರಿಗೆ ಇಂತಹ ವಿಚಾರಗಳು ಹೇಗೆ ಹೊಳೆಯುತ್ತವೆಯೋ ಗೊತ್ತಿಲ್ಲ.
ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಈ ಕ್ಷೇತ್ರಗಳಲ್ಲಿ ಸ್ಪರ್ಧಿಸಿರಲಿಲ್ಲ. ಅದನ್ನು ಕಾಂಗ್ರೆಸ್ಸಿಗೆ ಕೊಟ್ಟ ಸಹಕಾರ ಎಂದರೂ ಸರಿಯೆ. ಕಳೆದ ಐದು ವರ್ಷಗಳ ಕಾಲ ಕಾಂಗ್ರೆಸ್ ಕೂಟದ ಶಕ್ತಿ ಸಂಸತ್ತಿನಲ್ಲಿ ಪರೀಕ್ಷೆಯಾದಾಗಲೆಲ್ಲ ಸಮಾಜವಾದಿ ಪಾರ್ಟಿಯ ಬೆಂಬಲ ಆ ಪಕ್ಷಕ್ಕೆ ಸಿಕ್ಕಿದೆ. ಅದು ಸಮಾಜವಾದಿ ಪಕ್ಷದ ಆಗಿನ ರಾಜಕೀಯ ಆಯ್ಕೆ. ಈ ಬಾರಿ ಪ್ರಬಲ ರಾಜಕೀಯ ಅಭ್ಯರ್ಥಿಗಳನ್ನೇ ಸಮಾಜವಾದಿ ಪಾರ್ಟಿ ಈ ಕ್ಷೇತ್ರಗಳಿಗೆ ಆರಿಸುತ್ತದೆ ಎನ್ನುವ ವದಂತಿ ಆಧರಿತ ವರದಿಗಳಿವೆ. ಅದು ಚುನಾವಣೆಯ ಸಂಘರ್ಷದಲ್ಲಿ ರಾಜಮಾರ್ಗ. ಚುನಾವಣೆಯ ಗಾಂಭಿರ್ಯವನ್ನು ರಕ್ಷಿಸುವುದು ಈಗಿನ ಅಗತ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

