ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಕಾಶಿ ಕ್ಷೇತ್ರದಲ್ಲಿ 'ವಾರಣಾ' ಮತ್ತು 'ಅಸಿ' ಎಂಬ ನದಿಗಳು ಸೇರುವುದರಿಂದ ವಾರಣಾ೤ಅಸಿ 'ವಾರಣಾಸಿ' ಎಂಬ ಹೆಸರು ಬಂತು. ಆದರೆ ಈ ಸಂಗತಿ ಅರಿತೋ, ಅರಿಯದೆಯೋ 'ವಾರಾಣಸಿ', ವಾರ್ಣಾಸಿ, ವಾರಣಾಶಿ ಎಂಬೆಲ್ಲ ಪದಗಳು ಜನರ ಬಾಯಲ್ಲಿ ನಲಿದಾಡ ತೊಡಗಿದವು.'
'ಆಂಗ್ಲರ ಬಾಯಲ್ಲಿ ವಕಾರವು ಬಕಾರವಾಗಿ 'ಬನಾರಸ್‌' ಪದ ಬಂದಾಗ 'ಬೂರ್ನಾಸ್‌', 'ಬೂರ್ಣಾಸ್‌' ಪದ ನೆನಪಾಯಿತು. ಸುಟ್ಟು ಬೂದಿಯಂತೆ ನಾಶವಾಯಿತು, ಹಾಳಾಯಿತು, ಕೆಟ್ಟು ಹೋಯಿತು, ನಿಷ್ಪ್ರಯೋಜಕವಾಯಿತು ಎಂಬರ್ಥದಲ್ಲಿ ಆಂಗ್ಲಭಾಷೆಯ 'ಬರ್ನ್ ಆ್ಯಶ್‌' ಎಂಬ ನುಡಿಗಟ್ಟು ಭಾರತೀಯರ ಬಾಯಲ್ಲಿ ನಾಲಿಗೆ ಸುಲಲಿತದಿಂದಾಗಿ 'ಬುರ್ನ್‌ಆಶ್‌' ಆಗಿ, ನಂತರ ಕೆಲವರ ಬಾಯಲ್ಲಿ 'ಬೂರ್ಣಾಶ್‌' ಆಯಿತು. ಬಾಯಿಂದ ಬಾಯಿಗೆ ಬಂದಾಗ 'ಬೂರ್ನಾಸ್, ಬೂರ್ಣಾಶು' ಎಂಬ ರೂಪ ಬಳಕೆಗೆ ಬಂತು. ಭಾಷಾ ಶಬ್ದ ಭಂಡಾರ ಬೆಳವಣಿಗೆಯಲ್ಲಿ ಇದೊಂದು ಸೋಜಿಗದ ಸಂಗತಿಯೂ ಹೌದು! ಅದಿರಲಿ ಕನ್ನಡಪ್ರಭದ ಸ್ಟೈಲ್ ಷೀಟ್‌ನಲ್ಲಿ 'ವಾರಣಾಸಿ' ಎಂಬ ಪದವನ್ನು ಅಳವಡಿಸುವುದು ಲೇಸೆಂದು ವಿನಂತಿ.'
'ಎರಡು ಹೆಸರುಗಳನ್ನು ಬರೆಯುವಲ್ಲಿ ಉಂಟಾಗುವ ದೋಷಗಳನ್ನು ಕುರಿತು ಬೆಳಕು ಚೆಲ್ಲಲು ಸಂದರ್ಭ ಒದಗಿ ಬಂದಿದೆ. ಏ.8ರಂದು ಪುಟ 5ರಲ್ಲಿ
'ಸುಬ್ರಮಣ್ಯವಾದ' ಎಂದು ಬಳಕೆಯಾಗಿದೆ. ಸುಬ್ರಹ್ಮಣ್ಯಸ್ವಾಮಿ ಅವರು ಹೇಗೆ ಬರೆದುಕೊಳ್ಳುತ್ತಾರೋ ಎಂಬುದು ಅಪ್ರಸ್ತುತ. ಕಾರಣ ಆಂಗ್ಲ ಭಾಷೆಯಲ್ಲಿ ಡ್ಡಛ್ಠಿಛಟಛಟಿಣಛ  ಎಂದು ರೂಢಿಯಿಂದ ಬರೆದಿರುವ ಸಾಧ್ಯತೆ ಇದೆ. ಆದರೆ ಅದು ಸಾಧುವಲ್ಲ.'
'ಸಮುಚಿತವಾದ ವೈದಿಕ ಪರಂಪರೆಯ ಜ್ಞಾನವುಳ್ಳವನೆಂಬ ಅರ್ಥದಲ್ಲಿ 'ಸುಬ್ರಹ್ಮಣ್ಯ' ಎಂಬ ರೂಪವೇ ಸಾಧುವಾದ ರೂಪ. ಯಜ್ಞದಲ್ಲಿ ಭಾಗಿಯಾಗುವ 16 ಮಂದಿ ಋತ್ವಿಜರಲ್ಲಿ ಒಬ್ಬನನ್ನು ಸುಬ್ರಹ್ಮಣ್ಯ ಎನ್ನುತ್ತಾರೆ. ಬ್ರಹ್ಮಚರ್ಯ, ಬ್ರಾಹ್ಮಣ್ಯ. ಬ್ರಹ್ಮಜ್ಞಾನವನ್ನು ಅರಿತವನು ಸುಬ್ರಹ್ಮಣ್ಯ. ಶಿವಸುತನಾದ ಕಾರ್ತಿಕೇಯನಿಗೂ ಸುಬ್ರಹ್ಮಣ್ಯ ಎನ್ನುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು 'ಸುಬ್ರಮಣ್ಯ' ಎಂದು ಬರೆಯುವುದು ಸಾಧುವಲ್ಲ. ಆದ್ದರಿಂದ ಸುಬ್ರಹ್ಮಣಸ್ವಾಮಿ ಎಂದು ಬರೆಯುವುದೇ ಸರಿಯಾದ ರೂಪ.'
'ಏ.5ರಂದು 'ಬೈಟೂಕಾಫಿ'ಯಲ್ಲಿ 'ಸಂಭವಾಮೀ ಉಗೀ ಉಗೀ' ಲೇಖನದಲ್ಲಿ 'ಅಸಹ್ಯಮೂಡುತ್ತದೆ' ಎಂಬ ಪದ ಬಳಕೆಯಾಗಿದೆ. ಸಹ್ಯ ಎಂದರೆ ಸಹಿಸಲು ಯೋಗ್ಯವಾದ್ದು ಎಂದು ಅರ್ಥ. ಅಸಹ್ಯ ಸಹಿಸಿಕೊಳ್ಳಲು ಯೋಗ್ಯವಲ್ಲದ ಎಂದರ್ಥ ಅಥವಾ ಸಹಿಸಲಸಾಧ್ಯವಾದ ಎಂದರ್ಥ. ಅಸಹ್ಯವಾಗುತ್ತದೆ, ಅಸಹ್ಯವೆನಿಸುತ್ತದೆ ಎಂಬುದು ವಿಶೇಷಣವೇ ವಿನಾ ವಿಶೇಷ್ಯ ನಾಮಪದವಲ್ಲ;'
'ಅಸಹ್ಯ ಮೂಡುತ್ತದೆ ಎಂಬುದು ಸರಿಯಲ್ಲ. ಅಸಹ್ಯ ಹುಟ್ಟುತ್ತದೆ ಎಂಬ ಅಬದ್ಧ ಬಳಕೆಯನ್ನು ಪತ್ರಿಕೆಗಳಲ್ಲಿ ಹಾಗೂ ದೃಶ್ಯಮಾಧ್ಯಮದ ವರದಿಗಾರರ ಬಾಯಲ್ಲಿ ಹರಿದಾಡುವುದನ್ನು ಗಮನಿಸಿದ್ದೇನೆ. 'ಅಸಹ್ಯ ಹುಟುತ್ತದೆ' ಎಂಬ ಬಳಕೆಯು ತೀರಾ ಅಸಹ್ಯವಾಗುತ್ತದೆ. ಕ.ಪ್ರ.ದಲ್ಲಿ ಇದೀಗ 'ಶ್ರುತಿ' ಎಂಬ ಪದ ಸರಿಯಾಗಿ ಬಳಕೆಯಾಗುತ್ತಿದೆ. ಮೊದಲು 'ಶೃತಿ' ಎಂಬ ಅಸಾಧುರೂಪ ಬಳಕೆಯಾಗುತ್ತಿತ್ತು!' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.