ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಮನಕಲಕುವ ಘಟನೆಗಳು ನಡೆದು ಚಿರಸ್ಮರಣೀಯವಾಗಿವೆ. ಅಂತಹ ಅಪರೂಪದ ಘಟನೆಗಳಲ್ಲಿ ಒಂದು ಸಿದ್ಧಾಪುರದ ಕೆಳಗಿನ ಮನೆಯಲ್ಲಿ ನಡೆಯಿತು. ಅಲ್ಲಿ ವಾಸವಾಗಿದ್ದ ನಾಗೇಶ ಹೆಗಡೆ ಮತ್ತವರ ಸಹೋದರರು ಕರನಿರಾಕರಣೆ ಚಳವಳಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲರಿಗೂ ಕರ ನೀಡದಂತೆ ಪ್ರಚಾರ ಮಾಡುತ್ತಿದ್ದರು. ಆದರೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕರವಸೂಲಿ ಮಾಡತೊಡಗಿತು. ಕರನೀಡದವರ ಮನೆ, ಆಸ್ತಿ ಜಪ್ತಿಯೂ ನಡೆಯಿತು. ನಾಗೇಶ ಹೆಗಡೆ ಮತ್ತವರ ಸಹೋದರರು ಪ್ರತಿಭಟಿಸಿದಾಗ ಅವರನ್ನು ಬಂಧಿಸಲು ಸಿದ್ಧತೆ ನಡೆಯಿತು. ಆಗ ನಾಗೇಶ ಹೆಗಡೆ ತಮ್ಮ ಮನೆಯಲ್ಲಿದ್ದ ನಗನಾಣ್ಯಗಳನ್ನು ಒಂದು ತಪ್ಪಲೆಯಲ್ಲಿ ಮುಚ್ಚಿ ಅದನ್ನು ತಮ್ಮ ತೋಟದಲ್ಲಿ ಹುಗಿದಿಟ್ಟರು. ಚಳವಳಿ ಮಾಡುತ್ತಿದ್ದ ಹೆಗಡೆಯವರನ್ನು ಪೊಲೀಸರು ಬಂಧಿಸಿ ಸೆರೆಮನೆಗೆ ಕಳುಹಿಸಿದರು. ಆರು ತಿಂಗಳ ಸೆರೆಮನೆವಾಸ ಮುಗಿಸಿ ಮರಳಿ ಮನೆಗೆ ಬಂದು ತಾವು ಹುಗಿದಿಟ್ಟಿದ್ದ ಜಾಗವನ್ನು ನೋಡಿದಾಗ ಅವರಿಗೆ ಅಘಾತ ಕಾದಿತ್ತು. ಅಲ್ಲಿದ್ದ ತಪ್ಪಲೆ ಕಣ್ಮರೆಯಾಗಿತ್ತು. ಹೆಗಡೆಯವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಇತ್ತ ಪೊಲೀಸರಿಗೆ ದೂರು ನೀಡುವಂತಿರಲಿಲ್ಲ, ತನ್ನ ಅಣ್ಣಂದಿರಿಗೆ ಏನು ಹೇಳಬೇಕೆಂದು ತಿಳಿಯದೆ ಗೊಂದಲದಲ್ಲಿ ಸಿಕ್ಕಿಬಿದ್ದರು. ಅವರಿವರಿಂದ ನಗನಾಣ್ಯದ ತಪ್ಪಲೆ ವಿಷಯ ಪೊಲೀಸರಿಗೂ ತಿಳಿದು ಅವರೂ ಸಹ ಅದನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂದು ಹಿಂಸಿಸತೊಡಗಿದರು. ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ದೇವಿ ಮತ್ತವಳ ಪತಿಗೆ ಚೆನ್ನಾಗಿ ಹೊಡೆದು ಹಿಂಸಿಸಿದರೂ ಪ್ರಯೋಜನವಾಗಲಿಲ್ಲ. ಅದೇ ವೇಳೆಗೆ ಚಳವಳಿಯ ಕಾರಣದಿಂದ ಬಿಡುಗಡೆಯಾದ ಎಲ್ಲ ಸಹೋದರರೂ ಒಬ್ಬೊಬ್ಬರೇ ಬಿಡುಗಡ ೆಹೊಂದಿ ಮನೆಗೆ ಬಂದು ನೋಡಿದಾಗ ತಮ್ಮನ ಸ್ಥಿತಿ ಚಿಂತಾಜನಕವಾಗಿತ್ತು. ಅಂದು ಮಧ್ಯರಾತ್ರಿ ಯಾರೋ ಬಾಗಿಲು ತಟ್ಟಿದ ಹಾಗಾಯಿತು. ಬಾಗಿಲು ತೆರೆದು ನೋಡಿದರೆ ದೇವಿಯೆಂಬ ಹಸಲರ ಮಹಿಳೆ ನಗನಾಣ್ಯ ತುಂಬಿದ ತಪ್ಪಲೆಯನ್ನು ಹಿಡಿದು ನಿಂತಿದ್ದಾಳೆ! ಅದನ್ನು ಒಳಗಿಟ್ಟು ಹೆಗಡೆಯವರಿಗೆ ನಮಿಸಿ, ತಾನೊಮ್ಮೆ ತೋಟಕ್ಕೆ ಹೋದಾಗ ನೀರ ಕಾಲುವೆಯ ಪಕ್ಕದಲ್ಲಿ ನೀರು ಹರಿದ ಜಾಗದಲ್ಲಿ ತಪ್ಪಲೆಯ ಕಂಠ ಕಾಣಿಸಿತೆಂದೂ, ಅದನ್ನು ತೆಗೆದು ನೋಡಿದಾಗ ಅದರಲ್ಲಿ ನಗನಾಣ್ಯವಿತ್ತೆಂದೂ, ಇದು ಹೆಗಡೆಯವರದೇ ಇರಬೇಕೆಂದು ಭಾವಿಸಿ, ಅದನ್ನು ಅವರೆಲ್ಲ ಜೈಲಿನಿಂದ ಬಿಡುಗಡೆಯಾಗುವವರೆಗೂ ಕಾಪಾಡಿ ತಂದೊಪ್ಪಿಸುತ್ತಿರುವುದಾಗಿಯೂ ಆ ದೇವಿ ಹೇಳಿದಳು. ಅದನ್ನು ಕೇಳಿ ತಪ್ಪಲೆ ಸಿಕ್ಕಿದ್ದಕ್ಕಿಂತ, ದೇವಿಯ ಪ್ರಾಮಾಣಿಕತೆ ಕಂಡು ತುಂಬಾ ಸಂತೋಷಪಟ್ಟರು. ಅದರಲ್ಲಿರುವ ಯಾವುದಾದರೊಂದು ಅಮೂಲ್ಯವಾದ ಒಡವೆಯನ್ನು ತೆಗೆದುಕೊಳ್ಳುವಂತೆ ಹೆಗಡೆಯವರು ತಿಳಿಸಿದರೂ ಸಹ, ಇವೆಲ್ಲ ನಿಮ್ಮದು, ನನಗೇನೂ ಬೇಡ, ಅದರಲ್ಲಿ ಇಟ್ಟಿರುವುದೆಲ್ಲಾ ಸರಿಯಾಗಿದೆಯೋ ಇಲ್ಲವೋ ನೋಡಿಕೊಳ್ಳಿ ಎಂದು ಹೇಳಿ ಅವರಿಗೆ ನಮಿಸಿ ಮನೆಗೆ ಹಿಂತಿರುಗಿದಳು. 1934 ರಲ್ಲಿ ಗಾಂಧೀಜಿ ಸಿದ್ದಾಪುರಕ್ಕೆ ಬಂದಿದ್ದಾಗ ಮಹಾತ್ಯಾಗಿ ಶಂಕರರಾವ್ ಗುಲ್ವಾಡಿಯವರು ದೇವಿಯನ್ನು ಗಾಂಧೀಜಿಯವರಿಗೆ ಪರಿಚಯಿಸುತ್ತಾ, ಆಕೆಯ ತ್ಯಾಗ ಮತ್ತು ಪ್ರಾಮಾಣಿಕತೆಯನ್ನು ಮನಮುಟ್ಟುವಂತೆ ವಿವರಿಸಿದರು. ಅದನ್ನು ಕೇಳಿ ಗಾಂಧೀಜಿ ಭಾವುಕರಾದರು. ಅವರು ಕಣ್ಣೀರೊರಸಿಕೊಳ್ಳುತ್ತಾ, ದೇವಿಯಂತಹ ಪುಣ್ಯವಂತರು ಭೂಮಿಯ ಮೇಲೆ ಇರುವುದರಿಂದಲೇ ಜಗತ್ತು ನಡೆಯುತ್ತಿದೆ ಎಂದು ಉದ್ಗರಿಸಿದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com