ಪಂಡರಾಪುರದ ಮಹಾಕ್ರಾಂತಿ
ದೇಶಕಾಲ ಪರಿಸ್ಥಿತಿಯಲ್ಲಿನ ಬದಲಾವಣೆಯ ಪ್ರವೃತ್ತಿ ಸುಮಾರು ಒಂಬತ್ತು ಶತಮಾನಗಳ ಭವ್ಯ ಇತಿಹಾಸದ ಪಂಡರಾಪುರದ ಪ್ರಸಿದ್ಧ ಹಿಂದೂ ಸಾಂಸ್ಕೃತಿಕ ಕೇಂದ್ರವಾದ ವಿಠೋಬಾ ರುಕ್ಮಿಣೀ ದೇವಾಲಯವನ್ನು ಪ್ರವೇಶಿಸಿರುವುದು ನಿಜಕ್ಕೂ ಒಂದು ಐತಿಹಾಸಿಕ ದಾಖಲೆ.
ಹಿಂದಿನಿಂದಲೂ, ಈ ದೇವಾಲಯದ ಧಾರ್ಮಿಕ, ಲೌಕಿಕ ಕಾರುಬಾರು ಎರಡು ಬ್ರಾಹ್ಮಣ ಕುಟುಂಬಗಳಲ್ಲೇ ಕೇಂದ್ರೀಕೃತವಾಗಿತ್ತು. ಆಸ್ತಿಕ ಜನ ಸಮುದಾಯಗಳು ಭಕ್ತಿಯಿಂದ ದೇವಾಲಯಕ್ಕೆ ಹೋಗಿ ಅಲ್ಲಿನ ಪೂಜೆ ಪುನಸ್ಕಾರಗಳನ್ನು ಮಾಡಿಸುವುದರಲ್ಲೇ ಸಂತೃಪ್ತರಾಗಿ ಹಿಂತಿರುಗುತ್ತಿದ್ದರು. ಆ ಸಮುದಾಯಗಳಿಗೆ, ದೇವಾಲಯದ ಉಸ್ತುವಾರಿ ಯಾರದ್ದು, ಪೂಜಾರಿ ಅರ್ಚಕರು ಯಾವ ಜಾತಿ, ಹಣದ ವಿತರಣೆಯ ವ್ಯವಸ್ಥೆ ಹೇಗೆ ಎನ್ನುವ ವಿಚಾರಗಳಲ್ಲಿ ಆಸಕ್ತಿ ಇರಲಿಲ್ಲ. ಆದರೆ ಅಂತಹ ಅನಿಯಂತ್ರಿತ ಅವ್ಯವಸ್ಥೆ ಬಹುಕಾಲ ನಡೆಯುವುದು ಸಾಧ್ಯವಿರಲಿಲ್ಲ. ಕೆಲವರಲ್ಲಿ ದೇವಾಲಯದ ಲೌಕಿಕ ಆಗು-ಹೋಗುಗಳಲ್ಲಿ ಆಸಕ್ತಿ ಮೂಡಿದಾಗ ಪ್ರಕಟವಾದ ಕೆಲವು ಸಂಗತಿಗಳಲ್ಲಿ ಆದಾಯದಲ್ಲಿ ಬಹು ಭಾಗ ತಲೆತಲಾಂತರದಿಂದಲೂ ಎರಡೇ ಬ್ರಾಹ್ಮಣ ಕುಟುಂಬಗಳಿಗೇ ಸೇರುತ್ತಿದ್ದದ್ದು ಗಮನಕ್ಕೆ ಬಂತು.
ಆಗಲೇ ವಿವಾದ ಆರಂಭ. ಮಹಾರಾಷ್ಟ್ರ ಸರ್ಕಾರದ ಧಾರ್ಮಿಕ ಸಂಸ್ಥೆಗಳ ಕಾಯಿದೆಯಂತೆ, ನ್ಯಾಯಾಲಯದ ಬಾಗಿಲನ್ನು ತಟ್ಟಿದ್ದೂ ಆಯಿತು. ಹಲವು ವರ್ಷಗಳ ಸುದೀರ್ಘ ನ್ಯಾಯಾಲಯಗಳಲ್ಲಿನ ವಾದ-ವಿವಾದದ ಅನಂತರ ಅಂತಿಮವಾಗಿ ಸುಪ್ರೀಮ್ ಕೋರ್ಟಿನ ತೀರ್ಪಿನಂತೆ ದೇವಾಲಯದ ವ್ಯವಹಾರ ಎರಡು ಬ್ರಾಹ್ಮಣ ಕುಟುಂಬಗಳ ಹಿಡಿತದಿಂದ ಮುಕ್ತವಾಯಿತು. ಈಗ ವಿಠೋಬ - ರುಕ್ಮಿಣೀ ದೇವಾಲಯದ ಆಡಳಿತಕ್ಕೆಂದು ಮಹಾರಾಷ್ಟ್ರ ಸರ್ಕಾರವೇ ಒಂದು ಟ್ರಸ್ಟ್ ನೇಮಿಸಿದೆ. ಎಲ್ಲ ವ್ಯವಹಾರವೂ ಈಗ ಆ ಟ್ರಸ್ಟ್ನ ಮೂಲಕವೇ ನಡೆಯಬೇಕು. ಇದರ ಪರಿಣಾಮವಾಗಿ ದೇವಾಲಯಕ್ಕೆ ಆಸ್ತಿಕರು ಅರ್ಪಿಸಿದ ಕಾಣಿಕೆಯಿಂದ (ಸರ್ಕಾರವೂ ಸಾಕಷ್ಟು ನೆರವು ನೀಡಿದೆ) ಪಂಡರಾಪುರದಲ್ಲಿ ಯಾತ್ರಿಕರಿಗೆ ಹಿಂದಿಗಿಂತ ಈಗ ಹೆಚ್ಚು ಸೌಲಭ್ಯಗಳು ಲಭ್ಯವಾಗಿವೆ. ಅಲ್ಲಿನ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ.
ಅದು ಲೌಕಿಕ ವ್ಯವಸ್ಥೆಯ ವಿಚಾರವಾಯಿತು. ವಿಠೋಬಾ - ರುಕ್ಮಿಣಿ ದೇವಾಲಯ ಹಾಗೂ ಇತರ ದೇವಾಲಯಗಳಲ್ಲಿ, ದೇವರ ಪೂಜೆಯ ವ್ಯವಸ್ಥೆ ಹೇಗೆ? ಹಿಂದೆ "ಧಣಿಗಳಂತೆ" ದೇವಾಲಯವನ್ನು ನಡೆಸುತ್ತಿದ್ದವರೇ ತಮಗೆ ಬೇಕಾದವರನ್ನೇ ಅರ್ಚಕರನ್ನಾಗಿ ನೇಮಿಸುತ್ತಿದ್ದದ್ದು ವಾಡಿಕೆ. ಅವರು ಸಾಮಾನ್ಯವಾಗಿ ಬ್ರಾಹ್ಮಣರೇ ಆಗಿರುತ್ತಿದ್ದರು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಈಗ ಮಹಾರಾಷ್ಟ್ರದಲ್ಲಿ ಪ್ರಬಲವಾಗಿ ಬೀಸಿರುವ ಸಾಮಾಜಿಕ ಕ್ರಾಂತಿಯ ಗಾಳಿಯ ಹಿನ್ನೆಲೆಯಲ್ಲಿ ಅನೇಕರು ದೇವಾಲಯಗಳಲ್ಲಿ ಅರ್ಚಕರಾಗಲು ಬ್ರಾಹ್ಮಣರೇ ಆಗಬೇಕೆ ಎನ್ನುವ ಪ್ರಶ್ನೆಯನ್ನು ಎತ್ತಿದ್ದು ಸಹಜ.
ಈಗಿನ ಹೊಸ ಚಿಂತನೆಯ ಧಾಟಿಯಲ್ಲಿ ಬ್ರಾಹ್ಮಣರ ಪೌರೋಹಿತ್ಯದ ವಂಶಪಾರಂಪರ್ಯ "ಅಧಿಕಾರವನ್ನು" ಇಂತರರಿಗೂ ಹಂಚಲು ದೇವಾಲಯದ ಧರ್ಮದರ್ಶಿಯವರು ನಿರ್ಧರಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ದೇಶದ ಬೇರೆ ಬೇರೆ ಭಾಗಗಳಲ್ಲಿ ಇಂತಹ ಪ್ರಯೋಗಗಳು ನಡೆದಿವೆ. ಎಲ್ಲ ದೇವಾಲಯಗಳಲ್ಲೂ ಬ್ರಾಹ್ಮಣ ಅರ್ಚಕರೇ ಇದ್ದಾರೆ ಎಂದೇನೂ ಅಲ್ಲ. ಈಗ ವಿಠೋಬ - ರುಕ್ಮಿಣೀ ದೇವಾಲಯದ ಧರ್ಮದರ್ಶಿಗಳ ಪರವಾಗಿ ಪ್ರಕಟಿಸಲಾಗಿರುವ "ಅರ್ಚಕರು ಬೇಕಾಗಿದ್ದಾರೆ" ಜಾಹಿರಾತಿನಲ್ಲಿ ಎಲ್ಲ ಹಿಂದೂ ವರ್ಗಗಳ ಜನರಿಗೂ ಅರ್ಚಕರ ಸ್ಥಾನಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಇದು ಪಂಡರಪುರದ ಕ್ರಾಂತಿಯ ಮೊದಲ ದಿಟ್ಟ ಹೆಜ್ಜೆ.
ಅರ್ಜಿದಾರರಿಗೆ ಇರಬೇಕಾದ ಅರ್ಹತೆಗಳಲ್ಲಿ ದೇವರ ಪೂಜಾ ನಿರ್ಧಾರ ವಿಧಿ-ವಿಧಾನಗಳನ್ನು ತಿಳಿದುಕೊಂಡಿರಬೇಕು ಎನ್ನುವ ಪ್ರಸ್ತಾಪವೂ ಇದೆ. ಆದರೆ ಅದರ ಅವಶ್ಯಕತೆ ದೇವಾಲಯದ ಧರ್ಮದರ್ಶಿಗಳಿಗೆ ಕಂಡು ಬರಲಿಲ್ಲ. ಈ ಜಾಹಿರಾತಿಗೆ ಸಹಜವಾಗಿಯೇ ಆಸಕ್ತ ಹಿತಗಳ ಮೂಲಕ ಆಕ್ಷೇಪ - ವಿರೋಧ ಪ್ರಕಟವಾಗಿದೆ. ಕೆಲವರು ಪೂಜೆ ಮಾಡುವ ವಿಧಾನ ಬಲ್ಲವರು ಯಾರಾದರೂ ಅರ್ಚಕರಾಗಿರಬಹುದು. ಬ್ರಾಹ್ಮಣರೇ ಆಗಬೇಕೆಂದೇನೂ ಇಲ್ಲ, ಎಂದಿದ್ದಾರೆ. ಆದರೆ ಎಲ್ಲ ಅರ್ಚಕರಿಗೂ ಅನ್ವಯವಾಗುವ ಆಚಾರ ಸಂಹಿತೆಯನ್ನು ರೂಪಿಸುವ ಅಗತ್ಯವಿದೆ ಎಂದೂ ಹಲವರು ಹೇಳಿದ್ದಾರೆ. ಅವರ ದೃಷ್ಟಿಯಲ್ಲಿ ದೇವಾಲಯದ ಅರ್ಚಕರಿಗೆ ಯಾವುದೇ ರೀತಿಯ ಚಟಗಳೂ ಇರಬಾರದು, ದೇವರ ಪೂಜೆ ಮಾಡುವವರ ವಿಚಾರದಲ್ಲಿ ಆಸ್ತಿಕರಿಗೆ, ಧರ್ಮದಲ್ಲಿ ನಂಬಿಕೆ ಇರುವವರಿಗೆ ಗೌರವ ಮೂಡಬೇಕಾದರೆ ಈ ಷರತ್ತು ಅಗತ್ಯ.
ಇನ್ನು ಕೆಲವರು ಕೊನೆಯ ನಿಮಿಷದಲ್ಲಿ, ದೇವಾಲಯದ ಧರ್ಮದರ್ಶಿಗಳ ಕೆಲಸ ಅಲ್ಲಿನ ಲೌಕಿಕ ವ್ಯವಹಾರಗಳನ್ನು ಚೆನ್ನಾಗಿ ನಡೆಸುವುದು. ನಡೆದು ಬಂದ ಸಂಪ್ರದಾಯಗಳನ್ನು ಬದಲಾಯಿಸುವುದಲ್ಲ ಎಂದಿದ್ದಾರೆ. ಈಗಾಗಲೇ ಸಂಪ್ರದಾಯಗಳ ವಿಚಾರದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಪಂಡರಪುರದ ಮಹಾಕ್ರಾಂತಿಯಂತೂ ಆರಂಭವಾಗಿದೆ. ಅದು ಯಶಸ್ವಿಯಾಗುವಂತೆ ನೋಡಿಕೊಳ್ಳುವುದು ಪ್ರಗತಿಪರ ಶಕ್ತಿಗಳ ಕರ್ತವ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

