ಅಪ್ರತಿಮ ಶೂರ ನೆಲ್ಸನ್

ಬ್ರಿಟಿಷ್ ನೌಕಾಧಿಪತಿಯಾಗಿದ್ದ ಹೊರೋಷಿಯೋ ನೆಲ್ಸನ್ ಒಬ್ಬ ಚರಿತ್ರಾರ್ಹ ವ್ಯಕ್ತಿ. ಸಾಮಾನ್ಯವಾಗಿ ಸೇನೆಯಲ್ಲಿ...
Updated on: 

ಬ್ರಿಟಿಷ್ ನೌಕಾಧಿಪತಿಯಾಗಿದ್ದ ಹೊರೋಷಿಯೋ ನೆಲ್ಸನ್ ಒಬ್ಬ ಚರಿತ್ರಾರ್ಹ ವ್ಯಕ್ತಿ. ಸಾಮಾನ್ಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವವರು ತಮ್ಮ ಮೇಲಧಿಕಾರಿಗಳ ಆಜ್ಞೆಯನ್ನು ಧಿಕ್ಕರಿಸುವಂತಿಲ್ಲ. ಅವಿಧೇಯತೆ ಶಿಕ್ಷಾರ್ಹ ಅಪರಾಧ. ಆದರೆ ನೆಲ್ಸನ್ ಇದಕ್ಕೆ ಹೊರತಾಗಿದ್ದ. ತನ್ನ ಉನ್ನತಾಧಿಕಾರಿಗಳ ಆದೇಶ, ಸೂಚನೆ ಮತ್ತು ಎಚ್ಚರಿಕೆಗಳನ್ನು ಕಡೆಗಣಿಸಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಂಡು ಯಶಸ್ವಿಯೂ ಆಗುತ್ತಿದ್ದ. ಹೀಗಾಗಿ ಅವನ ವಿರುದ್ಧ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿರಲಿಲ್ಲ. ನೌಕಾಪಡೆಯ ಕನಿಷ್ಠ ಹುದ್ದೆಗೆ ಸೇರಿ ತನ್ನ ಸಾಮರ್ಥ್ಯದಿಂದ ಯುದ್ಧನೌಕೆಯೊಂದರ ಕ್ಯಾಪ್ಟನ್ ಆದ. ಒಮ್ಮೆ ಕೋರ್ಸಿಕಾ ದ್ವೀಪದಲ್ಲಿ ಫ್ರೆಂಚ್ ನೌಕಾಪಡೆಯೊಂದಿಗೆ ಘನಘೋರ ಯುದ್ಧವುಂಟಾಗಿ ಅವನಿಗೆ ಬಲಗಣ್ಣಿನ ಗುಡ್ಡೆ ಕಿತ್ತುಹೋಯಿತು. ಆದರೆ ಧೃತಿಗೆಡದ ನೆಲ್ಸನ್ ತನ್ನ ಕುರುಡುಗಣ್ಣಿನ ಮೇಲೊಂದು ಕಪ್ಪು ಪಟ್ಟಿಯನ್ನು ಧರಿಸಿ ಹೋರಾಡಿ ಜಯಗಳಿಸಿದ. ನಂತರ 1797ರಲ್ಲಿ ನಡೆದ ಫ್ರೆಂಚ್ ಮತ್ತು ಸ್ಪಾನಿಷ್ ನೌಕಾಪಡೆಗಳ ವಿರುದ್ಧ ನಡೆದ ಯುದ್ಧದಲ್ಲಿ ತನ್ನ ತಾಯ್ನಾಡಿಗೆ ಜಯತಂದಿತ್ತ. ಇದರಿಂದ ಅವನಿಗೆ ಅಡ್ಮಿರಲ್ ಪದವಿ ದೊರೆಯಿತು. ಸಾಂತಾಕ್ರುಜ್‌ನ ನೌಕಾಯುದ್ಧದಲ್ಲಿ ಪಾಲ್ಗೊಂಡು  ಹೋರಾಟಮಾಡುವಾಗ ಅವನ ಬಲಗೈ ತುಂಡಾಯಿತು. ಆದರೂ ಯುದ್ಧ ಮುಂದುವರೆಸಿದ. ಆಫ್ರಿಕಾದ ನೈಲ್ ನದಿಯ ಮೇಲೆ ಫ್ರೆಂಚರನ್ನು ಸೋಲಿಸಿದ. 1801 ರಲ್ಲಿ ಡೆನ್ಮಾರ್ಕ್‌ನ ರಾಜಧಾನಿ ಕೋಪನ್ಹೇಗನ್ ಬಳಿ ಡೇನರ ಬೃಹತ್ ನೌಕಾಪಡೆಯನ್ನು ಎದುರಿಸಬೇಕಾಯಿತು. ಡೇನರು ಪ್ರಬಲರಾಗಿದ್ದು, ಅವರ ವಿರುದ್ಧದ ಹೋರಾಟ ವಿನಾಶಕಾರಿಯೆಂದೂ ಬ್ರಿಟಿಷ್ ಅಧಿಕಾರಿಗಳು ಭಾವಿಸಿ, ನೆಲ್ಸನ್‌ಗೆ ನೌಕಾಪಡೆಯನ್ನು ಹಿಂಪಡೆಯಬೇಕೆಂದು ಸೂಚಿಸಿದರು. ಆದರೆ ವಿಚಿತ್ರ ಸ್ವಭಾವದ ನೆಲ್ಸನ್ ಮೇಲಧಿಕಾರಿಗಳ ಮಾತನ್ನು ಕೇಳದೆ ಯುದ್ಧ ಮುಂದುವರೆಸಿದ. ಸಾಕಷ್ಟು ಸಾವು ನೋವುಗಳು ಎರಡೂ ಕಡೆಯವರಿಗಾಯಿತು. ತನ್ನ ಒಂದೇ ಕಣ್ಣಿನಿಂದ ದೂರದರ್ಶಕವನ್ನುಪಯೋಗಿಸಿ, ಶತ್ರುಗಳ ಚಲನವಲನವನ್ನು ಗಮನಿಸಿ ಗೆಲ್ಲುವ ಕೆಚ್ಚಿನಲ್ಲಿ ನೆಲ್ಸನ್ ಪ್ರಾಣದ ಮೇಲಿನ ಹಂಗುತೊರೆದು ಹೋರಾಡಿದ ಫಲದಿಂದಾಗಿ ಜಯ ತಂದುಕೊಟ್ಟ. ಅಂದಿನಿಂದ To turn Nelson’s eye’ ಎಂಬ ನಾಣ್ಣುಡಿ ಬಳಕೆಗೆ ಬಂತು. ಅವನ ಜಯದ ಮುನ್ನೋಟ ಅಲ್ಲಿಗೇ ಮುಗಿಯಲಿಲ್ಲ. 1805 ರಲ್ಲಿ ನಡೆದ ಟ್ರಫಾಲ್ಗರ್ ಕಡಲ್ಗಾಳಗದಲ್ಲಿ ಫ್ರೆಂಚರ ಶಕ್ತಿಶಾಲಿ ನೌಕಾಪಡೆಯನ್ನು ಮಣ್ಣುಮುಕ್ಕಿಸಿ ರಾಷ್ಟ್ರೀಯ ವೀರ ಎನಿಸಿಕೊಂಡ. ಅವನು ತನ್ನ ದೇಶಕ್ಕೆ ತಂದುಕೊಟ್ಟ ಸ್ಮರಣೀಯ ವಿಜಯಕ್ಕಾಗಿ ಬ್ರಿಟನ್ ಆತನಿಗೆ ಚಿರರುಣಿಯಾಯಿತು. ಅವನ ಗೌರವಾರ್ಥ ಲಂಡನ್ನಿನ ಟ್ರಫಾಲ್ಗರ್ ವೃತ್ತದಲ್ಲಿ ಆಳೆತ್ತರದ ನೆಲ್ಸನ್‌ನ ಮೂರ್ತಿಯನ್ನು ಅಲ್ಲಿನ ಸರ್ಕಾರ ನಿರ್ಮಿಸಿದೆ.  

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com