ತಪ್ಪಾಯ್ತು ತಿದ್ಕೋತೀವಿ
ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಮುಖ್ಯ ಆಡಳಿತಾ ಧಿಕಾರಿಗಳಾಗಿರುವ ಎಸ್.ಎಲ್. ನಾಗರಾಜ ಅವರು ಬರೆಯುತ್ತಾರೆ- 'ಮೇ 11ರಂದು 'ಖುಷಿಬಂಧ' ತುಂಬಿಸಲು ಹರಸಾಹಸ ಪಡಬೇಕಾಯ್ತು. ಕಾರಣ ಅಂದಿನ ಖುಷಿಬಂಧದ ಅಂಕಣಗಳೊಳಗೆ ಅಂಕೆಗಳೇ ಮಾಯವಾಗಿತ್ತು. ಆದರೂ ನಾನೇ ಅಂಕೆಗಳನ್ನು ಬರೆದು ಖುಷಿಬಂಧ ಭೇದಿಸಬೇಕಾಯ್ತು' ಎಂದಿದ್ದಾರೆ.
'ಖುಷಿಬಂಧ' ಖುಷಿ ಕೊಡುವ ಬದಲು 'ಕಷ್ಟಬಂಧ'ವಾಗಿದ್ದರ ಬಗ್ಗೆ ವಿಷಾದವಿದೆ. ಕೆಲವು ಸಮಯದ ಹಿಂದೆ 'ಪದಯಾತ್ರೆ'ಯಲ್ಲಿ ಆಗಾಗ ಅಡಚಣೆಯಾಗುತ್ತಿತ್ತು. ಸಾಕಷ್ಟು ದೂರುಗಳ ನಂತರ ಅದು ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. 'ಖುಷಿಬಂಧ' ಇನ್ನು ಮುಂದೆ ಕಷ್ಟಬಂಧವಾಗದಂತೆ ಎಚ್ಚರವಹಿಸಲಾಗುವುದು.
ಸಾಗರದ ವಿಜಯನಗರದಿಂದ ಬೊ.ನಾ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- "ನಡ್ಕರ್ನಿ' ಎಂಬ ವ್ಯಕ್ತಿಯೊಬ್ಬರು ನಿಜವಾಗಿಯೂ ಇದ್ದರಾ? ನನಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರ ಮನೆತನಗಳ ಹೆಸರುಗಳ ಬಗ್ಗೆ ಒಂದಷ್ಟು ಮಾಹಿತಿಗಳು ದೊರೆತ ಎಷ್ಟೋ ವರ್ಷಗಳಲ್ಲಿ, 'ನಡ್ಕರ್ನಿ' ಎಂಬ ಹೆಸರು ಕೂಡಾ ಒಂದು ಮನೆತನದ ಹೆಸರು ಆಗಿದೆಯಾ ಎಂಬ ಅನುಮಾನ ಇವತ್ತು ಕಾಡತೊಡಗಿದೆ. ಅದು ಮನೆತನದ ಹೆಸರೋ ಅಥವಾ ನನ್ನ ಹೆಸರು ಇರುವಂತೆಯೇ ನಾಮಕರಣದ ದಿನ ತಂದೆ-ತಾಯಿ ಇಟ್ಟ ಹೆಸರೋ ಅದೂ ತಿಳಿಯುತ್ತಿಲ್ಲ.'
"ನಡ್ಕರ್ನಿ' ಎಂಬ ಹೆಸರನ್ನೂ ಮಕ್ಕಳಿಗೆ ಇಡುತ್ತಾರಾ? ಈಗಂತೂ ಶಿಶುಗಳಿಗೆ ಹೆಸರಿಡುವ ಸಂದರ್ಭಗಳಲ್ಲಿ, ಆ ಹೆಸರು ಹೇಗಿರಬೇಕು ಎಂದು ನಿರ್ಧರಿಸುವಾಗ- ಅದು ಎಷ್ಟು ಚಂದ ಅನ್ನಿಸುತ್ತೆ, ನಮಗೆ ಕರೆಯಲು ಎಷ್ಟು ಸುಲಭವಾಗುತ್ತೆ, ಕೇಳಲು ಎಷ್ಟು ಸೊಗಸು ಅನ್ನಿಸುತ್ತೆ, ಅದು ಎಷ್ಟು ನವೀನ ಇತ್ಯಾದಿ ವಿಚಾರಗಳದ್ದೇ ಮೇಲುಗೈ ಆಗುತ್ತಿರುವುದು ವಾಸ್ತವ.'
'ಹೀಗಿರುವಾಗ, ವಿಠಲನ ಪೂಜೆಗಿನ್ನು ರಾಧೆಯರಿಗೂ ಆಹ್ವಾನ (ಕನ್ನಡಪ್ರಭ-ಮುಖಪುಟ ಮೇ 11) ಎಂಬ ತಲೆಬರಹದಡಿಯ ಸುದ್ದಿಯಲ್ಲಿ ಪ್ರಸ್ತಾಪಗೊಂಡಿರುವ ವ್ಯಕ್ತಿ ಹುಟ್ಟಿದಾಗಲೂ, ಅವರ ತಂದೆ-ತಾಯಿ ತಮ್ಮ ಖುಶಿಗಾಗಿ ತಮ್ಮ ಮಗನಿಗೆ-ಮಗಳಿಗೆ 'ನಡ್ಕರ್ನಿ' ಎಂಬ ಹೆಸರನ್ನು ಅವರಿಗೆ ಇಟ್ಟಿರಬಾರದೇಕೆ ಎಂಬ ಅನುಮಾನವೂ ಕಾಡುತ್ತಿದೆ. (ನಡ್ಕರ್ನಿ ಪುರುಷರೋ ಮಹಿಳೆಯೋ ನನಗೆ ಗೊತ್ತಿಲ್ಲ).'
'ಆದರೆ, ನನ್ನ ಒಳ ಮನಸ್ಸು ಮಾತ್ರ ಈ ಅನುಮಾನವನ್ನು ಪೆದ್ದು ಎಂದೇ ಹೇಳುತ್ತಿದೆ. ಯಾಕೆ ಗೊತ್ತಾ? ಇಂಗ್ಲಿಷ್ ಭಾಷೆಯಲ್ಲಿ 'ನ-ಣ' ಎರಡೂ ಅಕ್ಷರಗಳನ್ನು ಬರೆಯಲು ಬಳಸುವ ರೋಮನ್ ಲಿಪಿ 'ಃ' ಒಂದೇ. ಹಾಗಾಗಿ ಕನ್ನಡ-ಮರಾಠಿ ಭಾಷೆಗಳ 'ಕುಲಕರ್ಣಿ' ಎಂಬ ಪದವನ್ನು (ಮನೆತನದ ಹೆಸರನ್ನು) ಇಂಗ್ಲಿಷ್ನಲ್ಲಿ ಬರೆಯುವಾಗ "KULKARNI' ಎಂದು ಬರೆಯುತ್ತೇವಲ್ಲಾ, ಹಾಗೆಯೇ 'ನಾಡಕರ್ಣಿ' ಎಂದಿರುವ ಒಂದು ಮನೆತನದ ಹೆಸರನ್ನೂ ಇಂಗ್ಲಿಷ್ನಲ್ಲಿ ರವಾನೆಯಾದ ಸುದ್ದಿಯಲ್ಲಿ "NADKARNI'' ಎಂದೇ ಬರೆಯಲಾಗಿದ್ದು, ಸುದ್ದಿಯನ್ನು ಕನ್ನಡಕ್ಕೆ ಅನುವಾದಿಸುವಾಗ ಬಹುಶಃ 'ನಾಡಕರ್ಣಿ' ಎಂಬ ಹೆಸರನ್ನು ಕೇಳಿಯೇ ಇರದ ಅನುವಾದಕರಿಗೆ ಇದು 'ನಡ್ಕರ್ನಿ' ಎಂದೇ ಅನ್ನಿಸಿ ಮುದ್ರಣದಲ್ಲಿ ಬಿ. ಡಿ. ನಾಡಕರ್ಣಿ, 'ನಡ್ಕರ್ನಿ' ಆಗಿಹೋಗಿದ್ದಾರೆ. ನನ್ನ ಅನ್ನಿಸಿಕೆಯೇ ಸತ್ಯ ಎಂದೂ ಹೇಳಲಾರೆ' ಎಂದಿದ್ದಾರೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

