ಸಂಪಾದಕೀಯ

ಕಾಲೇಜುಗಳ ಕಾಂಗ್ರೆಸೀಕರಣ!

Published On :

ಇತ್ತೀಚೆಗೆ ಧಾರವಾಡ ಬಳಿಯ ಐಟಿಐ ಕಾಲೇಜಿನಲ್ಲಿ ನಡೆದ ಪ್ರಬಂಧ ಸ್ಪರ್ಧೆಯೊಂದರಲ್ಲಿ ಗೆದ್ದವರಿಗೆ ಬಹುಮಾನವಾಗಿ ಕೆಲವು ಪುಸ್ತಕಗಳನ್ನು ನೀಡಲಾಗುತ್ತದೆ ಎಂದು ತಿಳಿದು ಖುಷಿಯಾಗಿತ್ತು. ಆದರೆ ಸ್ಪರ್ಧೆ ಮುಗಿದ ನಂತರ ಬಹುಮಾನ ವಿಜೇತರ ಕೈಗೆ ಸಿಕ್ಕ ಪುಸ್ತಕ ನೋಡಿದರೆ ಕೆಲವು ರಾಜಕೀಯ ವ್ಯಕ್ತಿಗಳ ವಿಕೃತ ಮನಸ್ಸುಗಳ ಅನಾವರಣವಾಗುತ್ತದೆ. ನನ್ನೊಬ್ಬ ಆತ್ಮೀಯರಿಗೆ ಸಿಕ್ಕ ಪುಸ್ತಕ, ಇನ್ನೊಬ್ಬರ ಏಳಿಗೆಯ ಕುರಿತಾದ ಅಸೂಯೆಯ ಪ್ರತೀಕವಾದ, ನಕಾರಾತ್ಮಕ ಮನೋಭಾವದ ಸುರೇಶ್ ಭಟ್ ಬಕ್ರಬೈಲ್ ಅವರು ಬರೆದ "ಮಂಕು ಬೂ(ಮೋ)ದಿ-ಹಿಟ್ಲರ್ ಹೆಜ್ಜೆ ಜಾಡುಗಳು"! ಆದರೆ ಇದನ್ನು ನೋಡಿ ಯಾರಿಗೂ ಇದರ ಹಿಂದಿನ ದುರುದ್ದೇಶ ಗೋಚರಿಸುವುದೇ ಇಲ್ಲ.  ತಾವೇನು ಜನರಿಗೆ ಒಳ್ಳೆಯದನ್ನು ಮಾಡಿದ್ದೇವೆ ಎನ್ನುವ ವಿಷಯವನ್ನು ಇಟ್ಟುಕೊಂಡು ಜನರ ಬಳಿಗೆ ಹೊಗಲು, ಮೋದಿಯ ಎದುರು ನಿಲ್ಲಲು ಹೆಚ್ಚಾಗಿ ಏನೂ ವಿಷಯವಿಲ್ಲ ಎಂದರಿತ ಕಾಂಗ್ರೆಸ್ಸಿಗರು, ಮೋದಿಯ ಕುರಿತಾಗಿ ಸಮಾಜದಲ್ಲಿ ದ್ವೇಷವನ್ನು, ಅಸಹನೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ತನಗೆ ಸಿಗದಿದ್ದರೂ ಇನ್ನೊಬ್ಬರಿಗೆ ಸಿಗುವುದನ್ನು ತಪ್ಪಿಸಲು ಹೊರಟರೆ ಕೊನೆಗೆ ಧುರ್ಯೋಧನನಿಗಾದ ಪರಿಸ್ಥಿತಿಯೇ ಇವರಿಗೆ ಕಟ್ಟಿಟ್ಟ ಬುತ್ತಿ ಎಂದು ಆದಷ್ಟು ಬೇಗ ಅರಿತರೆ ಭವಿಷ್ಯದ ಕನಸು ಕಾಣಬಹುದು.
ಶೈಕ್ಷಣಿಕ ಸಂಸ್ಥೆಗಳನ್ನು ತಮ್ಮ ರಾಜಕೀಯದ ಭವಿಷ್ಯದ ಓಟುಗಳನ್ನು ನಿರ್ಮಾಣ ಮಾಡುವ ಕೇಂದ್ರಗಳನ್ನಾಗಿಸುವಂಥ ಕೆಟ್ಟ ಮನಸ್ಸಿನ ಪುಢಾರಿಗಳು ಇರುವವರೆಗೂ ನಮ್ಮ ದೇಶದ ರಾಜಕೀಯ ವ್ಯವಸ್ಥೆ ಸರಿಯಾಗಲು ಸಾಧ್ಯವಿಲ್ಲ. ನಾನೂ ಸಹ ಕಾಂಗ್ರೆಸ್ ನಾಯಕರ ಕಾಲೇಜುಗಳಲ್ಲೇ ಓದಿದ್ದರೂ ಕಾಲೇಜಿನ ಆಡಳಿತ ಒಂದು ಬಾರಿಯೂ ನಕಾರಾತ್ಮಕ  ವಿಚಾರವನ್ನು ಬೆಳೆಸಲು ಪ್ರಯತ್ನಿಸುವುದನ್ನು ಕಂಡಿಲ್ಲ. ಆದರೆ ನನ್ನ ಕಾಲೇಜು ಬರೀ ಅಪವಾದವಾಗಿರಬಹುದಷ್ಟೇ!
-ಮತ್ತೂರು ರಘು, ಮತ್ತೂರು

ಸಚಿವರ ಸಾಧನೆಯ ಮೌಲ್ಯ ಮಾಪನ
ಸಚಿವರ ಕಾರ್ಯವೈಖರಿಯ ಮೌಲ್ಯಮಾಪನಕ್ಕೆ ಮುಖ್ಯಮಂತ್ರಿಗಳು ಮುಂದಾಗಿರುವುದು ಸಂತೋಷ. ಸಚಿವರ ಕಾರ್ಯವೈಖರಿಯೇನೇ ಇರಲಿ, ಬಸ್ ಪ್ರಯಾಣ ಶುಲ್ಕ, ವಿದ್ಯುತ್ ಶುಲ್ಕ ಮತ್ತು ಇತರ ಸೇವಾ ಶುಲ್ಕಗಳನ್ನು ಆಗಿಂದಾಗ್ಗೆ ಏರಿಸುತ್ತಿರುವ ಸಾಧನೆಗಳಿಗಂತೂ ಜನರಿಗೆ ಚೆನ್ನಾಗಿಯೇ ಅರ್ಥವಾಗಿದೆ. ಈ ವಿಚಾರದಲ್ಲಂತೂ ಸಂಬಂಧಪಟ್ಟ ಸಚಿವರು ಒಳ್ಳೆಯ ಸಾಧನೆಯನ್ನೇ ಮಾಡಿ ತೋರಿಸಿದ್ದಾರೆ. ಪದೇ ಪದೇ ಸೇವಾ ಶುಲ್ಕಗಳನ್ನು ಏರಿಸುವ ಪರಿಪಾಠ ಮೊದಲಿನಿಂದಲೂ ಬಂದಿದೆ. ಯಾವ ಪಕ್ಷದ ಸರ್ಕಾರ ಬಂದರೂ ಜನಸಾಮಾನ್ಯರಿಗೆ ಆರ್ಥಿಕ ಹೊರೆ ತಪ್ಪಿದ್ದಲ್ಲ.  
ಒಳ್ಳೆಯ ಸಾಧನೆಗಳನ್ನು ಜನರು ಸರ್ಕಾರದಿಂದ ನಿರೀಕ್ಷಿಸುವುದು ಉತ್ತಮವಾದ ರಸ್ತೆ, 24 ಗಂಟೆಗಳ ಕಾಲ ವಿದ್ಯುತ್, ಆರೋಗ್ಯ ಸೇವೆ, ಶಿಕ್ಷಣ ಮತ್ತು ಕಾನೂನು ಪರಿಪಾಲನೆಯಲ್ಲಿ. ಆದರೆ ದೊಡ್ಡ ಪಟ್ಟಣಗಳಲ್ಲೇ ರಸ್ತೆಗಳು ಹೀನಾಯ ಸ್ಥಿತಿಯಲ್ಲಿವೆ. ಹಳ್ಳಿಗಳಲ್ಲಿ ರಸ್ತೆಯಪಾಡು ಹೇಳ ತೀರದು. ಹಳ್ಳಿಗಳಲ್ಲಿ ವಿದ್ಯುತ್ ದಿನಕ್ಕೆ 3 ಅಥವಾ 4 ಗಂಟೆಗಳ ಕಾಲ ಇದ್ದರೆ ಅದೇ ಹೆಚ್ಚು. ವೈದ್ಯರಂತೂ ಹಳ್ಳಿಗಳಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಸಾರಿಗೆ ವ್ಯವಸ್ಥೆಯೂ ಅಷ್ಟಕ್ಕಷ್ಟೆ. ಹಳ್ಳಿಗಳಲ್ಲಿ ಶಾಲೆಗಳಿದ್ದರೂ ಅದಕ್ಕೆ ತಕ್ಕಂತೆ ಉಪಾಧ್ಯಾಯರಿರುವುದಿಲ್ಲ. ಇದ್ದರೂ ಶಾಲೆಗೆ ಯಾವಾಗ ಬೇಕಾದರೂ ಬರಬಹುದು ಅಥವಾ ಹೋಗಬಹುದು.
ಕೀಳು ಮಟ್ಟದ ಸೇವೆಯಿಂದ ಮತ್ತು ಹೆಚ್ಚುತ್ತಿರುವ ಸೇವಾ ಶುಲ್ಕ ಮತ್ತು ಅಗತ್ಯ ಪದಾರ್ಥಗಳ ಬೆಲೆಯಿಂದ ಕಾರ್ಮಿಕರ ಮತ್ತು ನೌಕರರ ಆದಾಯವನ್ನು ಹೆಚ್ಚಿಸುವಂತೆ ಬೇಡಿಕೆಗಳು ಹೆಚ್ಚಾಗುತ್ತಿವೆ. ಕಾರ್ಮಿಕರ ಮತ್ತು ನೌಕರರ ಆದಾಯ ಹೆಚ್ಚಾದಂತೆ ಮತ್ತೊಮ್ಮೆ ಅಗತ್ಯ ವಸ್ತುಗಳ ಬೆಲೆ ಮತ್ತು ಸೇವಾ ಶುಲ್ಕವನ್ನು ಏರಿಸುವುದಕ್ಕೆ ಬೇಡಿಕೆಗಳು ಬರುತ್ತವೆ. ಸರ್ಕಾರವು ಅಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಹೆಚ್ಚಾಗದಂತೆ ಕ್ರಮ ತೆಗೆದುಕೊಂಡರೆ ಜನರು ಅದಕ್ಕಿಂತ ಹೆಚ್ಚಿನ ಸೇವೆಯ ನಿರೀಕ್ಷೆಯನ್ನೇನೂ ಮಾಡುವುದಿಲ್ಲ. ಯಾವುದೇ ಸೇವಾ ಶುಲ್ಕ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಲೂ ಮುಖ್ಯ ಮಂತ್ರಿಗಳ ಒಪ್ಪಿಗೆಯಿಲ್ಲದೆ ಆಗಲಾರದು. ಈಗ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಸರ್ಕಾರವನ್ನು ನಡೆಸುತ್ತಿರುವ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಬಾರದಿದ್ದಲ್ಲಿ ವಿಶ್ರಾಂತಿ ಪಡೆಯಲು ಕಳುಹಿಸಲಾಗುವುದು ಎಂದು ಹೈ ಕಮಾಂಡ್‌ನಿಂದ ಎಚ್ಚರಿಕೆ ಬಂದಿರುವ ನಿಮಿತ್ತ ಮುಖ್ಯಮಂತ್ರಿಗಳು ತಮ್ಮ ಸಹೋದ್ಯೋಗಿಗಳ ಕಾರ್ಯವೈಖರಿಯ ಮೌಲ್ಯ ಮಾಪನಕ್ಕೆ ಮುಂದಾಗಿದ್ದಾರೆ ಎಂದು ಭಾವಿಸಬಹುದು.  ಒಂದು ವೇಳೆ ಅವರುಗಳ ಕೆಲಸ ತೃಪ್ತಿಕರವಾಗಿಲ್ಲದಿದ್ದಲ್ಲಿ ಏನು ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಕಷ್ಟ.  
-ಕೆ.ವಿ. ಸೀತಾರಾಮಯ್ಯ, ಹಾಸನ.



ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.