ದೇಶ

ಉ.ಪ್ರ. ಚಿತ್ರಣ ಬದಲಿಸುವ ಅಮಿತೋತ್ಸಾಹ

ಉ.ಪ್ರ. ಚಿತ್ರಣ ಬದಲಿಸುವ ಅಮಿತೋತ್ಸಾಹ
Published On :

ಕಳೆದ ಕೆಲವು ತಿಂಗಳಿಂದ ರಾಜಕೀಯ ವಲಯಗಳಲ್ಲಿ ಮೋದಿಯಷ್ಟೇ ಚರ್ಚಿತವಾಗುತ್ತಿರುವ ಇನ್ನೊಂದು ಹೆಸರು ಅಮಿತ್ ಷಾ ಅವರದ್ದು. ಅದರಲ್ಲೂ ಕೆಲವು ದಿನಗಳ ಹಿಂದೆ ಜಾಟ್ ಸಮುದಾಯವನ್ನುದ್ದೇಶಿಸಿ ಅವರು ಮಾಡಿದ ಭಾಷಣ ತೀವ್ರ ವಿವಾದಕ್ಕೆ ಈಡಾಗಿದೆ. ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್, 'ಕೂಡಲೇ ಅಮಿತ್ ಷಾ ವಿರುದ್ಧ ಕ್ರಮಕೈಗೊಳ್ಳಬೇಕು' ಎಂದು ಚುನಾವಣಾ ಆಯೋಗವನ್ನು ಕೇಳಿಕೊಳ್ಳುತ್ತಿದ್ದಾವಾದರೂ, ಅವುಗಳ ಸಿಟ್ಟಿನ ಹಿಂದೆ, ಅಮಿತ್ ಅವರ ಕರೆಗಿಂತ, ಅವರ ಸಂಘಟನಾ ಸಾಮರ್ಥ್ಯದ ಭಯವಿದೆ ಎನ್ನುವುದೇ ಸತ್ಯ....
----
ಒಂದು ಯೋಜನೆ, ಒಂದು ಕಾರ್ಯಕ್ರಮ, ಒಂದು ಸಂಸ್ಥೆ ಯಶಸ್ಸು ಕಾಣುತ್ತದೆಂದರೆ, ಅದರ ಹಿಂದೆ ಅದ್ಭುತ ಸಂಘಟನಾ ಸಾಮರ್ಥ್ಯವಿರುವ ವ್ಯಕ್ತಿಗಳು ಇದ್ದೇ ಇರುತ್ತಾರೆ. ಹಿನ್ನೆಲೆಯಲ್ಲಿದ್ದುಕೊಂಡೇ ಒಂದು ಉದ್ದೇಶದ ಯಶಸ್ಸಿಗೆ ತಂತ್ರಗಳನ್ನು ರಚಿಸುತ್ತಾ, ಪ್ರತಿಕೂಲ ಸನ್ನಿವೇಶಗಳನ್ನೂ ಲಾಭವಾಗಿ ಪರಿವರ್ತಿಸಿಕೊಳ್ಳುವ ವ್ಯಕ್ತಿತ್ವ ಅವರದ್ದಾಗಿರುತ್ತದೆ. ಈ ಮಾತು ನರೇಂದ್ರ ಮೋದಿಯವರ ಅತ್ಯಾಪ್ತ ಅಮಿತ್ ಷಾ ಅವರಿಗೆ ಸರಿಯಾಗಿ ಹೊಂದುತ್ತದೆ.
ಸೋಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಆಪಾದಿತರಾಗಿಯೇ ಹೆಚ್ಚು ಸುದ್ದಿ ಮಾಡಿದವರು ಅಮಿತ್ ಷಾ. ಆದರೆ ಇಂದು ನರೇಂದ್ರ ಮೋದಿ ಮತ್ತು ಗುಜರಾತ್‌ನ ಬಿಜೆಪಿ ಯಾವ ಯಶಸ್ಸನ್ನು ಸಾಧಿಸಿದೆಯೋ, ಅದರ ಹಿಂದೆ ಅಮಿತ್ ಷಾ ಅವರ ಕಳೆದೊಂದು ದಶಕದ ಶ್ರಮವಿದೆ.
ಮೋದಿ ಮತ್ತು ಅಮಿತ್ ಅವರ ಗೆಳೆತನ ಬಲಗೊಂಡಿದ್ದು 1997ರಲ್ಲಿ. ಅಂದಿನಿಂದ 2010ರವರೆಗೆ ಗುಜರಾತ್‌ನ ಆಂತರಿಕ ವ್ಯವಹಾರಗಳ ಸಚಿವರಾಗಿದ್ದ ಷಾ, ಅಗೋಚರವಾಗಿದ್ದುಕೊಂಡೇ ಮೋದಿ ಏಳ್ಗೆಗಾಗಿ ದುಡಿದವರು. ಪ್ರತಿಯೊಂದು ಪ್ರತಿಕೂಲ ಪರಿಣಾಮವನ್ನೂ ಲಾಭವಾಗಿ ಪರಿವರ್ತಿಸುವ ಅವರಲ್ಲಿನ ಕ್ಷಮತೆ ಮತ್ತು ಚುನಾವಣಾ ನಿರ್ವಹಣೆಯಲ್ಲಿ ಚಾಕಚಕ್ಯತೆಯ ಅರಿವು ಮೋದಿಯವರಿಗಿದೆ. ಈ ಗುಣವೇ ಅಮಿತ್ ಷಾಗೀಗ ಉತ್ತರಪ್ರದೇಶದಲ್ಲಿನ ಲೋಕಸಭಾ ಚುನಾವಣೆಯ ಕಾರ್ಯತಂತ್ರ ನಿರೂಪಣೆಯ ಜವಾಬ್ದಾರಿಯನ್ನು ತಂದುಕೊಟ್ಟಿದೆ.  ತಮ್ಮ ಅಜೆಂಡಾದಲ್ಲಿ ರಾಮಮಂದಿರದ ವಿಷಯ ಇಲ್ಲ ಎಂದು ರಾಜನಾಥ್ ಸಿಂಗ್ ಅವರು ಹೇಳಿದ ಸಮಯದಲ್ಲೇ, ಉತ್ತರಪ್ರದೇಶದ ಉಸ್ತುವಾರಿ ಅಮಿತ್ ಷಾ ಹೆಗಲೇರಿತ್ತು. ಆ ರಾಜ್ಯಕ್ಕೆ ತೆರಳುವ ಮುನ್ನ ಅವರು ಮಾಡಿದ ಮೊದಲ ಕೆಲಸವೆಂದರೆ ಅಯೋಧ್ಯೆಗೆ ತೆರಳಿ, ರಾಮನ ದರ್ಶನ ಪಡೆದದ್ದು! ಈ ವಿಷಯ ವಿವಾದಕ್ಕೀಡಾಯಿತಾದರೂ, ಬಿಜೆಪಿಯ ಆಂತರ್ಯದಲ್ಲಿನ ರಾಮನಾಮ ಪ್ರತಿಧ್ವನಿ ನಿಂತಿಲ್ಲ ಎನ್ನುವುದನ್ನು ಹಿಂದೂ ಮತದಾರರಿಗೆ ಸ್ಪಷ್ಟಪಡಿಸುವ ನಡೆಯಾಗಿತ್ತದು. ಈ ನಡೆಯ ಅವಶ್ಯಕತೆಯೂ ಬಿಜೆಪಿಗೆ ಇತ್ತೆನ್ನಿ, ಏಕೆಂದರೆ ಉತ್ತರಪ್ರದೇಶದ ಮತದಾರರು(ಅದರಲ್ಲೂ ಹಿಂದುಳಿದ ವರ್ಗಗಳು) ಬಿಜೆಪಿಯತ್ತ ಮೊದಲ ಬಾರಿಗೆ ಧ್ರುವೀಕರಣಗೊಂಡಿದ್ದು 1990ರ ರಾಮಜನ್ಮಭೂಮಿ ಚಳವಳಿಯಿಂದಾಗಿಯೇ. ರಾಮ ನಾಮ ಅಂದು ಮೇಲ್ವರ್ಗ ಮತ್ತು ಹಿಂದುಳಿದ ಜಾತಿಯ ಮತದಾರರನ್ನು ಒಗ್ಗೂಡಿಸಿ ಬಿಜೆಪಿಯತ್ತ ವಾಲಿಸಿತ್ತು.  ಕೇವಲ ಅಭಿವೃದ್ಧಿ ಮಂತ್ರವೊಂದನ್ನೇ ಜಪಿಸುತ್ತಾ ಉತ್ತರಪ್ರದೇಶದಲ್ಲಿ ತಮ್ಮ ಪಕ್ಷಕ್ಕೆ ಗೆಲ್ಲಲಾಗದು ಎನ್ನುವುದು ನರೇಂದ್ರ ಮೋದಿಯವರಿಗೂ ಗೊತ್ತಿದೆ. ಒಟ್ಟಾರೆ ಈ ಜಾತಿ ವಿಭಜನೆಯನ್ನು ತಡೆದು ಮತಗಳನ್ನು ತನ್ನತ್ತ ಸೆಳೆದುಕೊಳ್ಳಬೇಕೆಂದರೆ, ಪ್ರಬಲ ಹಿಂದುತ್ವದ ಬಲದಿಂದ ಮಾತ್ರ ಸಾಧ್ಯ. ಉತ್ತರಪ್ರದೇಶದ ರಾಜಕೀಯ ಜಾತಿ ಆಧಾರಿತವಾಗಿಯೇ ನಿಂತಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಹಿಡಿತದಲ್ಲೇ ಇರುವ ಹಿಂದುಳಿದ ವರ್ಗಗಳ ಮತ್ತು ಮುಸಲ್ಮಾನರ ಮತಗಳು ಬಿಜೆಪಿಗೆ ಬರಬೇಕೆಂದರೆ ಕ್ರಮವಾಗಿ ಹಿಂದುತ್ವ ಮತ್ತು ಅಭಿವೃದ್ಧಿಯ ಮಂತ್ರ ಪಠಿಸಲೇಬೇಕು.
ಏಕೆಂದರೆ ಕೇಂದ್ರದಲ್ಲಿ ಅಬ್ಕಿ ಬಾರ್ ಮೋದಿ ಸರ್ಕಾರ ಬರುತ್ತದೋ ಇಲ್ಲವೋ ಎನ್ನುವ ಪ್ರಶ್ನೆಗೆ ಉತ್ತರ ಉತ್ತರಪ್ರದೇಶದಲ್ಲೇ ಅಡಗಿದೆ! ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಆ ರಾಜ್ಯ, 80 ಲೋಕಸಭಾ ಸ್ಥಾನಗಳನ್ನೂ ಹೊಂದಿದೆ. ಈ ಬಾರಿ ಅಲ್ಲಿಂದ ಕನಿಷ್ಠ 40 ಸ್ಥಾನಗಳನ್ನಾದರೂ ಗೆಲ್ಲಬೇಕೆಂಬ ಮಹಾಗುರಿಯನ್ನು ಇಟ್ಟುಕೊಂಡಿದೆ ಬಿಜೆಪಿ. 15 ವರ್ಷಗಳಿಂದ ಆ ರಾಜ್ಯದಲ್ಲಿ ಹೇಳಹೆಸರಿಲ್ಲದಂತಾಗಿರುವ ಕಮಲ ಈಗ ಮತ್ತೆ ಕಂಗೊಳಿಸುತ್ತಿದೆ. ಬಿಜೆಪಿ ಹಿಂದೆ ಆ ರಾಜ್ಯದಲ್ಲಿ ಕಣ್ಣು ಕುಕ್ಕುವ ಹಾಗೆ ಮಿಂಚಿದ್ದು 1998ರಲ್ಲಿ. ಅಂದು ವಾಜಪೇಯಿ ನೇತೃತ್ವದ ಬಿಜೆಪಿ ಗಳಿಸಿದ್ದು 192 ಸ್ಥಾನಗಳನ್ನು, ಆದರೆ ಅದರಲ್ಲಿ 58 ಅಭ್ಯರ್ಥಿಗಳು ಉತ್ತರಪ್ರದೇಶದವರೇ ಆಗಿದ್ದರು. ಉತ್ತರಪ್ರದೇಶದಲ್ಲಿನ ಅಂದಿನ ದಿಗ್ವಿಜಯಕ್ಕೆ ಕಾರಣರಾದವರು, ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್. ಲೋಧ್ ಜಾತಿಗೆ ಸೇರಿದ ಕಲ್ಯಾಣ್ ಸಿಂಗ್ ರಾಮಜನ್ಮಭೂಮಿ ಚಳವಳಿಯಲ್ಲಿ ದೊಡ್ಡ ಪಾತ್ರ ವಹಿಸಿದವರು. ಅವರ ಹಿಂದೆ ಲೋಧ್ ಸಮುದಾಯದ್ದಷ್ಟೇ ಅಲ್ಲದೆ, ಯಾದವ ಮತ್ತು ಇತರೆ ಹಿಂದುಳಿದ ವರ್ಗಗಳ ಮತದಾರರೂ ಇದ್ದರು. ವಾಜಪೇಯಿಯವರೊಂದಿಗಿನ ಮುನಿಸು 1999ರಲ್ಲಿ ಕಲ್ಯಾಣ್ ಅವರನ್ನು ಬಿಜೆಪಿಯಿಂದ ದೂರವಾಗುವಂತೆ ಮಾಡಿತ್ತು. ಅವರ ಜೊತೆಗೆ ಅವರ ಬೆನ್ನಿಗಿದ್ದ ಮತಗಳೂ ಬಿಜೆಪಿಯಿಂದ ದೂರವಾದವು, ಈ ಕಾರಣಕ್ಕಾಗೇ ನಂತರದ ಚುನಾವಣೆಗಳಲ್ಲಿ ಬಿಜೆಪಿ ಉತ್ತರಪ್ರದೇಶದಲ್ಲಿ ನೆಲೆ ಕಳೆದುಕೊಳ್ಳತೊಡಗಿತು, 1999ರಲ್ಲಿ ಉತ್ತರಪ್ರದೇಶದಿಂದ ಕೇವಲ 29 ಸ್ಥಾನಗಳು, 2004 ಮತ್ತು 2009ರ ಚುನಾವಣೆಗಳಲ್ಲಿ 10 ಸ್ಥಾನಗಳನ್ನು ಪಡೆದು ಮೆತ್ತಗಾಗಿತ್ತು.  
ಉತ್ತರಪ್ರದೇಶದಲ್ಲಿ ಬಿಜೆಪಿಯ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಂತೆಯೇ ಅಮಿತ್ ಷಾ ಮಾಡಿದ ಮೊದಲ ಕೆಲಸವೆಂದರೆ ಕಲ್ಯಾಣ್ ಸಿಂಗ್ ಅವರನ್ನು ವಾಪಸ್ ಕರೆತಂದದ್ದು! ಕಲ್ಯಾಣ್ ಸಿಂಗ್ ಅವರ ಯಾವ ಬೇಡಿಕೆಯನ್ನೂ ನಿರಾಕರಿಸದ ಅಮಿತ್ ಷಾ, ಅವರು ತಮ್ಮ ಯಾವ ಅಭ್ಯರ್ಥಿಗಳನ್ನು ಎಲ್ಲೆಲ್ಲಿ ನಿಲ್ಲಿಸಬೇಕು ಎಂದರೋ ಅದಕ್ಕೆಲ್ಲ ಸುಮ್ಮನೆ ತಲೆಯಾಡಿಸಿದರು. ಇದರೊಂದಿಗೆ ಓಬಿಸಿ ಮತಗಳು ಮತ್ತೆ ಬಿಜೆಪಿಯತ್ತ ವಾಲುವ ಸಾಧ್ಯತೆಗಳು ಹೆಚ್ಚಾಗಿರುವುದಂತೂ ಸತ್ಯ. ಇನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಮೀಸಲಿರುವ 17 ಲೋಕಸಭಾ ಕ್ಷೇತ್ರಗಳ ಮೇಲೂ ಕಣ್ಣಿಟ್ಟಿರುವ ಷಾ ಅದರಲ್ಲಿ ಕನಿಷ್ಠ 15 ಸ್ಥಾನಗಳನ್ನಾದರೂ ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ. ಅವರ ಸಂದೇಶವಂತೂ ಸ್ಪಷ್ಟವಾಗಿದೆ- "ಹಿರಿಯ ನಾಯಕರ ಕಚೇರಿಗಳಿಗೆ ಅಲೆಯುವುದನ್ನು ಬಿಟ್ಟು ಹಳ್ಳಿಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಮಾತುಕತೆಯಾಡಿ". ಬೂತ್‌ಮಟ್ಟದ ಮತಗಳೇ ನಿರ್ಣಾಯಕವಾಗಿರಲಿವೆ ಎನ್ನುವುದನ್ನು ಅರಿತಿರುವ ಅವರು, ಕೆಳ ಹಂತದಿಂದಲೇ ಪಕ್ಷದ ಸೇನೆಯನ್ನು ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಪ್ರತಿ ಬೂತ್‌ನಲ್ಲೂ 11 ರಿಂದ 100 ನೂರು ಕೆಲಸಗಾರರಿದ್ದು, ಅವರೆಲ್ಲರ ಫೋನ್‌ನಂಬರ್‌ಗಳನ್ನು ಪಕ್ಷದ ಕಚೇರಿಯಲ್ಲಿ ನೊಂದಾಯಿಸಿಕೊಳ್ಳಲಾಗಿದೆ. ಇನ್ನು ಅಭ್ಯರ್ಥಿಗಳ ಆಯ್ಕೆಯಲ್ಲೂ ಅಮಿತ್ ಅವರದ್ದೇ ಕೊನೆಯ ಮಾತು. ಗೆಲ್ಲುವವರಿಗಷ್ಟೇ ಟಿಕೆಟ್ ಕೊಡುತ್ತಿರುವ ಷಾ, ಕಾಂಗ್ರೆಸ್‌ನ ಜಗದಂಬಿಕಾ ಪಾಲ್, ಬಿಎಸ್‌ಪಿಯ ಎಸ್.ಪಿ.ಸಿಂಗ್ ಮತ್ತು ರಾಜೇಶ್ ವರ್ಮಾ, ಎಸ್‌ಪಿಯ ಶಾಮ್ ಚರಣ್ ಅವರನ್ನು ಬಿಜೆಪಿಗೆ ಕರೆತಂದು ಟಿಕೆಟ್ ಕೊಟ್ಟಿರುವುದು ಕೆಲವರ ಅಸಮಾಧಾನಕ್ಕೆ ಗುರಿಯಾಗಿದೆಯಾದರೂ, ಅವರ ನಿರ್ಧಾರಗಳ ಮೇಲೆ ಬಿಜೆಪಿಯ ಹಿರಿಯ ನಾಯಕರಿಗೆ ನಂಬಿಕೆಯಿರುವುದರಿಂದ ಅದನ್ಯಾರೂ ಪ್ರಶ್ನಿಸುತ್ತಿಲ್ಲ.  ಮೋದಿ ಗುಜರಾತ್‌ನ ವಡೋದರಾದಿಂದ ಮತ್ತು ಉತ್ತರಪ್ರದೇಶದ ವಾರಾಣಸಿಯಿಂದ ಸ್ಪರ್ಧಿಸಬೇಕು ಎನ್ನುವುದರ ಕೊನೆಯ ನಿರ್ಧಾರಕ್ಕೆ ಮೊಹರು ಒತ್ತಿ, ಮುರಳಿ ಮನೋಹರ್ ಜೋಶಿಯವರನ್ನು ಒಪ್ಪಿಸಿದವರೇ ಅಮಿತ್ ಷಾ. ಇನ್ನು ಉತ್ತರಪ್ರದೇಶದ ಸ್ಥಳೀಯ ಪಕ್ಷವಾದ ಅಪ್ನಾ ದಳವನ್ನೂ ಬಿಜೆಪಿಯೊಂದಿಗೆ ಬಂಧಿಸಿದ್ದಾರವರು. ಕಡೆಗಣಿಸಲಾಗಿದ್ದ  ಜಿಲ್ಲಾ ಅಧ್ಯಕ್ಷರನ್ನು ಮೋದಿಯವರ ರ್ಯಾಲಿಗಳಿಗೆ ಸಂಯೋಜಕರಾಗಿ ನೇಮಿಸಿ, ಅವರಲ್ಲೂ ಹುರುಪು ತುಂಬುತ್ತಿರುವ ಅಮಿತ್ ಷಾ, ಓಂ ಪ್ರಕಾಶ್‌ರಂಥ ಹಿಂದುಳಿದ ವರ್ಗದ ನಾಯಕರಿಗೆ ಹೊಸ ಜವಾಬ್ದಾರಿಯನ್ನು(ಪಟೇಲ್ ಪುತ್ಥಳಿ ನಿರ್ಮಾಣಕ್ಕೆ ಉಕ್ಕು ಸಂಗ್ರಹಿಸುವ ಕೆಲಸ) ವಹಿಸಿ, ಅವರಿಗೂ ಮರು ಚೈತನ್ಯ ತುಂಬಿದ್ದಾರೆ. ಜುಲೈ 2013ರಲ್ಲಿ ಆರ್‌ಎಸ್‌ಎಸ್‌ನ ಅಂಗಗಳಾದ ಎಬಿವಿಪಿ, ವಿಎಚ್‌ಪಿ, ಹಿಂದು ಜಾಗರಣ ವೇದಿಗೆಗಳೊಂದಿಗೆ ಮಾತುಕತೆ ನಡೆಸಿ, ಸಂಘಪರಿವಾರ ಬಿಜೆಪಿಯನ್ನು ಬೆಂಬಲಿಸುವಲ್ಲಿ ಮನವೊಲಿಸಿದ್ದಾರೆ.  ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಹೆಸರು ಘೋಷಣೆಯಾದ ತಿಂಗಳೊಂದರಲ್ಲೇ, ಅಮಿತ್ ಷಾ ಉತ್ತರಪ್ರದೇಶದಲ್ಲಿ 8 ರ್ಯಾಲಿಗಳನ್ನು ಆಯೋಜಿಸಿ ದಂಗುಬಡಿಸಿದ್ದರು. ಸುಮಾರು 22 ಲಕ್ಷ ಜನರನ್ನು ಈ ರ್ಯಾಲಿಗಳು ಆಕರ್ಷಿಸಿದ್ದವು. ಇದಷ್ಟೇ ಅಲ್ಲದೆ ಪ್ರತಿಯೊಂದು ರ್ಯಾಲಿ ಎಲ್ಲಿ ಆಯೋಜನೆಯಾಗಬೇಕು ಎನ್ನುವುದನ್ನು ನಿರ್ಧರಿಸುವುದರಿಂದ ಹಿಡಿದು, ಸ್ಥಳೀಯ ಸಮಸ್ಯೆಗಳ ಬಗ್ಗೆ ಇಂಚಿಂಚು ಮಾಹಿತಿಯನ್ನು ಮೋದಿಗೆ ಒದಗಿಸುತ್ತಿದ್ದಾರೆ. ಇದುವರೆಗೆ ಅಲ್ಲಿ ನಡೆದ ಹಿರಿಯ ನಾಯಕರ 35-40 ಸಭೆಗಳನ್ನು ರೂಪುರೇಷೆಯನ್ನು ರಚಿಸಿದ್ದೂ ಇದೇ ವ್ಯಕ್ತಿಯೇ.  
ಗುಜರಾತ್ ಗಲಭೆಯ ಕರಿ ಛಾಯೆಯನ್ನು ದೂರವಿಟ್ಟು ಅಲ್ಪಸಂಖ್ಯಾತರನ್ನು ಸೆಳೆಯಲು ಮೋದಿಯವರ ಅಭಿವೃದ್ಧಿ ರಾಜಕಾರಣ ಸಹಕಾರಿಯಾದರೆ, ಹಿಂದುಳಿದ ಮತಗಳನ್ನು ಸೆಳೆಯಲು ಅವರ ಜಾತಿ ಹಿನ್ನೆಲೆ ಮತ್ತು ಹಿಂದುತ್ವದ ಬಲದ ಅಗತ್ಯವಂತೂ ಇದ್ದೇ ಇದೆ. ಈ ಸಮಯದಲ್ಲೇ ಅಮಿತ್ ಷಾ ಅವರ ರಂಗಪ್ರವೇಶ ಪ್ರಮುಖವಾಗಿ ಗೋಚರಿಸುತ್ತದೆ.

- ರಾಘವೇಂದ್ರ ಆಚಾರ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.