ದೇಶ

ತೆರಿಗೆ ಕ್ರಾಂತಿ ಮಾಡಲು ಮೋದಿ ಮುಂದಿರುವ ಮಾರ್ಗ

Published On :

ದೇಶದಲ್ಲಿನ ತೆರಿಗೆ ವ್ಯವಸ್ಥೆಯನ್ನು ಸಂಪೂರ್ಣ ಬದಲಾವಣೆ ಮಾಡಬೇಕೆಂಬ ಕೂಗು ಹೊಸತೇನಲ್ಲ. ಈ ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಇಂಥ ಒಂದು ಕ್ರಾಂತಿಕಾರಕ ಬದಲಾವಣೆ ಮಾಡಲೇಬೇಕೆಂಬ ಕೂಗು ಈಗ ಕೇಳಿ ಬರುತ್ತಿದೆ. ಪುಣೆ ಮೂಲದ ಅರ್ಥಕ್ರಾಂತಿ ಎಂಬ ಎನ್‌ಜಿಒ ಸದ್ಯ ಇರುವ ಎಲ್ಲ 56 ವಿವಿಧ ರೀತಿಯ ತೆರಿಗೆಗಳನ್ನು ತೆಗೆದು ಹಾಕಬೇಕು. ಅವುಗಳ ಸ್ಥಾನದಲ್ಲಿ ಏಕೀಕೃತ ಬ್ಯಾಂಕಿಂಗ್ ಶುಲ್ಕ ಜಾರಿಗೆ ತರಬೇಕು ಎಂಬ ವಾದವನ್ನು ಪ್ರತಿಪಾದಿಸಿದೆ.
ಈ ಸಂಘಟನೆಯ ವಾದವೇನೆಂದರೆ ಸದ್ಯ ಇರುವ ತೆರಿಗೆ ನೀತಿಯಿಂದಾಗಿ ದೇಶದ ಪ್ರಜೆಗಳಿಗೆ ನಿತ್ಯದ ಜೀವನಕ್ಕೆ ಕಷ್ಟವಾಗುತ್ತಿದೆ. ಅಬಕಾರಿ ಸುಂಕ, ಸೇವಾ ತೆರಿಗೆ, ಮೌಲ್ಯವರ್ಧಿತ ತೆರಿಗೆ ಸೇರಿದಂತೆ ಹಲವು ತೆರಿಗೆಯ ಹೊರೆ ದೇಶದ ಪ್ರಜೆಗಳ ಮೇಲೆ ಇದೆ.
ಯಾವುದೇ ಒಂದು ವಸ್ತು ಖರೀದಿಸಬೇಕಾಗಿದ್ದರೂ ಹಲವು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಕನಿಷ್ಠ ಅಂದರೂ ಶೇ.35ರಿಂದ 45ರಷ್ಟು ಮೊತ್ತವನ್ನು ತೆರಿಗೆ ರೂಪದಲ್ಲಿ ಪಾವತಿ ಮಾಡಬೇಕಾಗಿದೆ. ಇದರ ಜತೆಗೆ ನಿತ್ಯವೂ ಉಪಯೋಗಿಸಬೇಕಾಗಿರುವ ವಸ್ತುಗಳ ಬೆಲೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ದೇಶದ ತೆರಿಗೆ ನೀತಿ. ಸರ್ಕಾರಕ್ಕೆ ಇಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದರೂ ದೇಶದ ಅಭಿವೃದ್ಧಿಯಲ್ಲಿ ಹೆಚ್ಚಿನ ಸಾಧನೆ ಏನೂ ಆಗಿಲ್ಲ. ಈ ನಿಟ್ಟಿನಲ್ಲಿ ಪುಣೆಯಲ್ಲಿ ಹುಟ್ಟಿಕೊಂಡ ಒಂದು ಚಿಂತನೆಯಲ್ಲಿ ದೇಶದ ತೆರಿಗೆ ನೀತಿ ಹಾಗೂ ಅಭಿವೃದ್ಧಿಯ ದಿಕ್ಕನ್ನು ಬದಲಾಯಿಸಬೇಕು ಎಂಬ ಆಶಯ ಹೊಂದಲಾಗಿದೆ. ಅದರ ಪ್ರಕಾರ ಸರ್ಕಾರ ಸದ್ಯ ಜಾರಿಯಲ್ಲಿರುವ ಎಲ್ಲ ಮಾದರಿಯ ತೆರಿಗೆಗಳನ್ನು ರದ್ದು ಮಾಡಿ ಕೇವಲ ಏಕರೂಪ ತೆರಿಗೆ ಪದ್ಧತಿಯೊಂದನ್ನು ಜಾರಿ ಮಾಡಬೇಕಿದೆ.  ಈ ಪದ್ಧತಿ ಪ್ರಕಾರ ಬ್ಯಾಂಕ್‌ನಲ್ಲಿ ನಡೆಯುವ ಪ್ರತಿಯೊಂದು ವಹಿವಾಟಿಗೂ ಏಕರೂಪದ ತೆರಿಗೆ ದರವನ್ನು ನಿಗದಿ ಮಾಡಬೇಕು. ಅದರ ಪ್ರಮಾಣ ಶೇ.0.5ರಿಂದ ಶೇ.2ರ ವರೆಗೆ ಇರಬೇಕು.
ವ್ಯಕ್ತಿ ಬ್ಯಾಂಕ್‌ನಲ್ಲಿ ತಾನು ಮಾಡಿದ ವಹಿವಾಟು ಆದಾಯಕ್ಕೆ ಸಂಬಂಧಿಸಿದ್ದಲ್ಲ. ಅದು ಬರೀ ಸಾಲ ಎಂದು ಸರ್ಕಾರಕ್ಕೆ ಪ್ರಮಾಣೀಕರಿಸಿ ತೋರಿಸಿದರೆ ತೆರಿಗೆಯನ್ನು ಸರ್ಕಾರ ಹಿಂದಿರುಗಿಸಬೇಕು. ಈ ರೀತಿ ಮಾಡುವಾಗ  ಬ್ಯಾಂಕ್‌ನಲ್ಲಿ ಆದ ಪ್ರತಿಯೊಂದು ವಹಿವಾಟನ್ನು ಕೂಡ ಅಡಿಟ್ ಮಾಡಿಸಿ ಪ್ರತಿ ತಿಂಗಳೂ ಸರ್ಕಾರಕ್ಕೆ ವರದಿ ನೀಡಬೇಕು. ಈ ಸಂದರ್ಭದಲ್ಲಿ ಯಾವುದೇ ಲೋಪದೋಷಗಳು ಕಂಡುಬರುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಇದರ ಜತೆಗೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆದಾಯದ ಮೂಲದಲ್ಲಿ ವರ್ಷಕ್ಕೊಮ್ಮೆ ಸರ್ಕಾರಕ್ಕೆ ತೆರಿಗೆ ಸಲ್ಲಿಸಬೇಕು. ಇದನ್ನು ಕೂಡ ಅಡಿಟ್ ಮಾಡಿಸಿ ವರದಿ ಸಲ್ಲಿಸಬೇಕು. ಈ ರೀತಿ ಮಾಡಿದಾಗ ಸಮಾಜದ ಪ್ರಮುಖ ವ್ಯಕ್ತಿಗಳು, ಭ್ರಷ್ಟರು, ರಾಜಕಾರಣಿಗಳು ಸರಿಯಾಗಿ ತೆರಿಗೆ ಪಾವತಿ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸದ್ಯದ ತೆರಿಗೆ ಪದ್ಧತಿ ತುಂಬ ಕ್ಲಿಷ್ಟಕರವಾಗಿದ್ದು ಅದನ್ನು ತಿಳಿದುಕೊಳ್ಳುವುದೇ ದೊಡ್ಡ ಸವಾಲಾಗಿರುವಾಗ ಈ ಹೊಸ ನೀತಿ ತುಂಬ ಸರಳವಾಗಿದೆ.
ಇದೆಲ್ಲವೂ ಸರಿ. ಬ್ಯಾಂಕ್‌ಗೆ ಯಾರೂ ಹಣ ಜಮಾ ಮಾಡದೆ ಹೋದರೆ  ಏನು ಮಾಡಬಹುದು? ಆಗ ತೆರಿಗೆ ಸಂಗ್ರಹ ಆಗುವುದಿಲ್ಲವಲ್ಲ? ಇದಕ್ಕೂ ಒಂದು ಪರಿಹಾರವಿದೆ. ಸರ್ಕಾರ 1000, 500 ಮತ್ತು 100 ಮುಖ ಬೆಲೆಯ ನೋಟುಗಳನ್ನು ರದ್ದುಮಾಡಿಸಿ ಕೇವಲ 50 ಮುಖ ಬೆಲೆಯ ನೋಟನ್ನು ಅತ್ಯಂತ ಹೆಚ್ಚಿನ ಮೌಲ್ಯದ ನೋಟು ಎಂದು ಪರಿಗಣಿಸಬೇಕು. ಆಗ ಹೆಚ್ಚಿನ ಪ್ರಮಾಣದ ಹಣವನ್ನು ಮನೆಯಲ್ಲಿ ಇರಿಸಿಕೊಳ್ಳಲು ಆಗುವುದಿಲ್ಲ. ಇದರಿಂದಾಗಿ ಗತ್ಯಂತರವಿಲ್ಲದೆ ಬ್ಯಾಂಕ್‌ನಲ್ಲೇ ಹಣವನ್ನು ಇರಿಸಬೇಕಾದ ಪರಿಸ್ಥಿತಿ ಬರುತ್ತದೆ. ಇದರಿಂದ ಹಣ ಜಮಾ ಮಾಡಿದ ವ್ಯಕ್ತಿ ತೆರಿಗೆ ಕಟ್ಟಬೇಕು ಮತ್ತು ಅದರ ಮೂಲದ ವಿವರವನ್ನು ಸರ್ಕಾರಕ್ಕೆ ತಿಳಿಸಬೇಕು. ಇದರಿಂದ ಕಪ್ಪುಹಣಕ್ಕೆ ಕಡಿವಾಣ ಬೀಳುತ್ತದೆ. ಈ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತಂದರೆ ದೇಶದಲ್ಲಿ ಸದ್ಯ ಸಂಗ್ರಹವಾಗುವ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದ ತೆರಿಗೆ ಸಂಗ್ರಹವಾಗುತ್ತದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರದ ಬೊಕ್ಕಸ ತುಂಬಿದಂತಾಗುತ್ತದೆ.  ಜತೆಗೆ ದಿನನಿತ್ಯದ ವಸ್ತುಗಳ ಬೆಲೆ ಶೇ.35ರಿಂದ ಶೇ.40ರಷ್ಟು ಕಡಿಮೆಯಾಗಲಿದೆ. ಇದರಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ.
ಹೊಸ ತೆರಿಗೆ ನೀತಿಯಲ್ಲಿ ಅನುಕೂಲದ ಜತೆಗೆ ಅನಾನುಕೂಲಗಳೂ ಇವೆ.
    ದೇಶದಲ್ಲಿ ಹೆಚ್ಚಿನ ಜನರು ಬ್ಯಾಂಕ್ ಖಾತೆ ಹೊಂದಿಲ್ಲ. ಅದಕ್ಕೆ ಪೂರಕವಾಗಿ ಅನಕ್ಷರಸ್ಥರೂ ಹೌದು.  ಇದರಿಂದಾಗಿ ತೆರಿಗೆ ಸಂಗ್ರಹ ಪ್ರಮಾಣ ತಗ್ಗಬಹುದು. ಆದರೆ ಬ್ಯಾಂಕ್‌ಗಳು ಪ್ರತಿಯೊಂದು ತಾಲೂಕಿನಲ್ಲಿ ಶಾಖೆಗಳನ್ನು ತೆರೆದರೆ ಈ ತೊಂದರೆ ನಿವಾರಿಸಬಹುದು. ದೇಶದಲ್ಲಿನ ಪರಿಸ್ಥಿತಿಯನ್ನು ಬದಲಾವಣೆ ಮಾಡಲು ಅವಕಾಶ ಉಂಟು. ಅದಕ್ಕಾಗಿ ವಿನಿಮಯ ಪದ್ಧತಿ ಅನುಸರಿಸುವ ಮೂಲಕ ನಗದು ವಹಿವಾಟನ್ನು ಕೊಂಚ ತಗ್ಗಿಸಬಹುದು.  ಇದರಿಂದಾಗಿ ನೋಟುಗಳ ಬಳಕೆಯ ಬದಲಿಗೆ ವಸ್ತುಗಳ ಬಳಕೆ ಹೆಚ್ಚುತ್ತದೆ.  ಆದರೆ  ಒಬ್ಬೊಬ್ಬರ ಅಭಿರುಚಿಗಳು ಬೇರೆ ಬೇರೆ ಇರುವುದರಿಂದ ಈ ರೀತಿ ಆಗುವ ಸಾಧ್ಯತೆ ಕಡಿಮೆಯೇ ಇರುತ್ತದೆ.
    ತೆರಿಗೆ ಇಲಾಖೆಯ ವಿವಿಧ ಹಂತದಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳು ಮತ್ತು ಇತರ ನೌಕರರಿಗೆ ಕೆಲಸ ಇರುವುದಿಲ್ಲವೇ? ಹೊಸ ವ್ಯವಸ್ಥೆ ಜಾರಿಯಾದರೆ ಇಂಥ ಪ್ರಶ್ನೆ ಏಳುವುದು ಸಹಜ. ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಬ್ಯಾಂಕ್‌ಗಳಿಗೆ ವರ್ಗಾಯಿಸಬಹುದು.  ಏಕೆಂದರೆ ಬ್ಯಾಂಕುಗಳ ಶಾಖೆಗಳು ಹೆಚ್ಚಿದಂತೆ ಕೆಲಸ ಹೆಚ್ಚುತ್ತದೆ. ಹೆಚ್ಚು ಅಧಿಕಾರಿಗಳೂ ಬೇಕಾಗುತ್ತಾರೆ. ಇಲ್ಲದಿದ್ದರೆ ಅವರನ್ನು ಮೂಲಸೌಕರ್ಯ ಅಭಿವೃದ್ಧಿಗೆ ವರ್ಗಾಯಿಸಬಹುದು.
    ಸದ್ಯ ಇರುವ ತೆರಿಗೆ ನೀತಿಯಲ್ಲಿ ನಷ್ಟದಲ್ಲಿರುವ ಕಂಪನಿಗಳಿಗೆ ತೆರಿಗೆ ಇರುವುದಿಲ್ಲ.  ಆದರೆ ಹೊಸ ನೀತಿಯಲ್ಲಿ ಇಂಥ ಕಂಪನಿಗಳೂ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಈ ತೆರಿಗೆಯೇ ಅವುಗಳಿಗೆ ಹೊರೆಯಾಗಬಹುದು. ಅದನ್ನು ಪರಿಹರಿಸಲು ಸರ್ಕಾರವು ಸಬ್ಸಿಡಿ ರೂಪದಲ್ಲಿ ನಷ್ಟದಲ್ಲಿರುವ ಕಂಪನಿಗಳಿಗೆ ತೆರಿಗೆ ಹಿಂತಿರುಗಿಸಬಹುದು.
    ಹೊಸ ತೆರಿಗೆ ನೀತಿ ಜಾರಿ ಮಾಡುವ ಮುನ್ನ ನಮ್ಮ ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಸಂವಿಧಾನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರತ್ಯೇಕವಾಗಿ ತೆರಿಗೆ ವಿಧಿಸಲು ಅಧಿಕಾರ ನೀಡಲಾಗಿದೆ.  ಸಂವಿಧಾನದ ವಿಧಿ 246 ರಲ್ಲಿ ಅದನ್ನು ಕಾಣಬಹುದು. ಈ ರೀತಿ ದೇಶದ ತೆರಿಗೆ ನೀತಿ ನಿರ್ಧರಿಸುವ ಅಧಿಕಾರವನ್ನು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಿದಾಗ ಏಕರೂಪದ ನೂತನ ತೆರಿಗೆ ನೀತಿ ಜಾರಿ ಮಾಡಿದರೆ ಕೇಂದ್ರ, ರಾಜ್ಯ ಸರ್ಕಾರಗಳ ನಡುವೆ ತಗಾದೆ ಉಂಟಾಗಬಹುದು. ಇದರಿಂದ ಹೊರ ಬರಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಾಗುತ್ತದೆ.
    ಹೊಸ ತೆರಿಗೆ ನೀತಿಯಿಂದ ಸಂಗ್ರಹವಾದ ಮೊತ್ತವನ್ನು ರಾಜ್ಯ ಮತ್ತು ಕೇಂದ್ರಗಳ ನಡುವೆ ಎಷ್ಟು ಪ್ರಮಾಣದಲ್ಲಿ ಹಂಚಬೇಕು ಎಂಬ ಜಿಜ್ಞಾಸೆ ಕಾಡುತ್ತದೆ. ಇಲ್ಲಿಯೂ ಎಲ್ಲ ರಾಜ್ಯ ಸರ್ಕಾರಗಳನ್ನು ಒಪ್ಪಿಸುವುದು ಕಷ್ಟ. ಹೀಗಾಗಿ ಇಲ್ಲಿಯೂ ಸಂವಿಧಾನದ ತಿದ್ದುಪಡಿ ಅಗತ್ಯವಿದೆ. ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಭಾಗ ತಲುಪುವಂತೆ ಮಾಡಿ ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಯಾಗುವಂತೆ ಮಾಡಬಹುದು. ಉದಾಹರಣೆಗೆ ಗೋವಾಕ್ಕೆ ಹೆಚ್ಚಿನ ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ. ಅದಕ್ಕೆ ಇತರ ಹೆಚ್ಚಿನ ಆದಾಯದ ಅಗತ್ಯ ಇರುವುದಿಲ್ಲ. ಆದರೆ ಹಿಂದುಳಿದ ರಾಜ್ಯಗಳಾದ ಬಿಹಾರ ಅಥವಾ ಹೊಸತಾಗಿ ರಚನೆಯಾಗುತ್ತಿರುವ ತೆಲಂಗಾಣಕ್ಕೆ ಹೆಚ್ಚಿನ ಪಾಲು ನೀಡುವುದರಿಂದ ಅವುಗಳು ಅಭಿವೃದ್ಧಿಯಾಗುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು.
    ಹೊಸ ನೀತಿಯನ್ನು ಜಾರಿಗೆ ತರಬೇಕಾದ ಹೊಣೆ ಜನಪ್ರತಿನಿಧಿಗಳದ್ದು. ಆದರೆ ಅವರೇ ಭ್ರಷ್ಟರಾಗಿರುವಾಗ ಅದನ್ನು ಜಾರಿಯಾಗಲು ಬಿಡುವರೇ?


- ಮೋಹನ್‌ಕುಮಾರ್ ಬಿ. ಎ.ಚಾರ್ಟೆಡ್ ಅಕೌಂಟೆಂಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.