ಅಮಿತ್, ಅಜಂಗೆ ನಿಷೇಧ

ನವದೆಹಲಿ: ಬಿಜೆಪಿ ನಾಯಕ ಅಮಿತ್ ಶಾ ಮತ್ತು ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಇನ್ನು ಮುಂದೆ ಸಾರ್ವಜನಿಕ ಸಭೆ ನಡೆಸುವಂತಿಲ್ಲ. ಇಬ್ಬರು ಮುಖಂಡರ ವಿರುದ್ಧವೂ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ. - ಹೀಗೆಂದು ಚುನಾವಣಾ ಆಯೋಗ ಆದೇಶ ನೀಡಿದೆ. ಉತ್ತರಪ್ರದೇಶ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ 'ಅಮಿತ್ ಶಾ ಮತ್ತು ಅಜಮ್ ಖಾನ್ ಅವರಿಬ್ಬರಿಗೂ ಸಾರ್ವಜನಿಕ ರ್ಯಾಲಿ, ಮೆರವಣಿಗೆ ಮತ್ತು ರೋಡ್ ಶೋ ನಡೆಸಲು ಅನುಮತಿ ನೀಡಲೇಬಾರದು ಎಂದಿದೆ.
ಹೌದು, ನಮ್ಮಿಂದ ತಪ್ಪಾಗಿದೆ...
ನವದೆಹಲಿ: ದಿಢೀರ್ ಆಗಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಿರ್ಧಾರ ತಪ್ಪು ಎಂಬುದನ್ನು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಬೆಂಬಲ ಪಡೆದು ಸರ್ಕಾರ ರಚಿಸಿದ್ದು ಹಾಗೂ ರಾಜಿನಾಮೆ ನೀಡಿದ್ದಕ್ಕೆ ತಾತ್ವಿಕವಾಗಿ ಯಾವುದೇ ಪಶ್ಚಾತ್ತಾಪ ಇಲ್ಲ. ಈ ನಿರ್ಧಾರ ತಾತ್ವಿಕವಾಗಿ ಸರಿಯಾಗಿಯೇ ಇದ್ದವು. ಹಾಗಾಗಿ ಇದನ್ನು ಜನ ಸ್ವಾಗತಿಸುತ್ತಾರೆ ಎಂದು ನಾವು ತಿಳಿದುಕೊಂಡಿದ್ದೆವು. ಆದರೆ, ಅದು ಸುಳ್ಳಾಯ್ತು. ಜನ ಮತ್ತು ನಮ್ಮ ನಡುವೆ ಸಂವಹನ ಕೊರತೆ ಸೃಷ್ಟಿಯಾಗಿತ್ತು. ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೇ ಕಾರಣ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಸಿಬ್ಬಂದಿ ಮೇಲೆ ಹಲ್ಲೆ: 4 ಸೆರೆ
ಮಾಲ್ಡಾ: ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವೆ ಸಾವಿತ್ರಿ ಮಿತ್ರಾರ ಅಳಿಯ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲ್ಡಾ ಜಿಲ್ಲಾಡಳಿತ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಗುರುವಾರ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ರ್ಯಾಲಿಯೊಂದನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ವಿಡಿಯೋ ತೆಗೆಯುತ್ತಿದ್ದ ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿತ್ತು.
ಇಬ್ಬರು ಯೋಧರಿಗೆ ಗಾಯ
ರಾಯ್‌ಪುರ: ಛತ್ತೀಸ್‌ಗಡದ ಬಿಜಾಪುರದಲ್ಲಿ ನಕ್ಸಲೀಯರ ಹಾವಳಿ ನಿಂತಿಲ್ಲ. ಶುಕ್ರವಾರ ನಡೆದ ಮತ್ತೊಂದು ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಬಸ್ತಾರ್ ಕ್ಷೇತ್ರದ ವ್ಯಾಪ್ತಿಯ ದುಬೈಗುಡ ಅರಣ್ಯ ವಲಯದಲ್ಲಿ ರಸ್ತೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಗಸ್ತು ಕಾರ್ಯ ನಡೆಸುತ್ತಿದ್ದ ವೇಳೆ ನಕ್ಸಲೀಯರು ಬಾಂಬ್ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮೋದಿ ಮಾತು ಬೇಡ
ಕಾರಂದಿಗಿ (ಪ.ಬಂ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರಕ್ತಸಿಕ್ತ ಇತಿಹಾಸ ಹೊಂದಿದ್ದಾರೆ. ಅಂಥ ವ್ಯಕ್ತಿ ದೇಶದ ಬಗ್ಗೆ ಮಾತನಾಡುವುದು ಅಗತ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಪಶ್ಚಿಮ ಬಂಗಾಳದ ಕಾರಂದಿಗಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಅವರು ಮಾತನಾಡಿದರು. ತಾವು ತಮ್ಮ ಜೀವ ಬಲಿಕೊಡಲು ಸಿದ್ಧ. ಆದರೆ ಹಿಂದು ಮತ್ತು ಮುಸ್ಲಿಮರ ನಡುವೆ ವಿಭಜನೆ ಉಂಟಾಗಲು ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮಿಜೋರಾಂ ಶೇ.60 ಮತ
ಐಜ್ವಾಲ್: ಮಿಜೋರಾಂನ ಒಂದು ಲೋಕಸಭಾ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ.60ರಷ್ಟು ಮತದಾನ ದಾಖಲಾಗಿದೆ. ತ್ರಿಪುರಾ ನಿರಾಶ್ರಿತರ ಶಿಬಿರಗಳಲ್ಲಿದ್ದ 11 ಸಾವಿರ ಮತದಾರರು ಅಂಚೆ ಮೂಲಕ ಮತದಾನ ಮಾಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣ ಹೆಚ್ಚಿದೆ. 2009ರಲ್ಲಿ ಶೇ.50.93ರಷ್ಟು ಮತದಾನ ದಾಖಲಾಗಿತ್ತು. ಸಣ್ಣ ಪುಟ್ಟ ತಾಂತ್ರಿಕ ದೋಷ ಹೊರತುಪಡಿಸಿದರೆ ರಾಜ್ಯಾದ್ಯಂತ ಮತದಾನ ಶಾಂತಿಯುತವಾಗಿತ್ತು.
ಎಲ್ಲವೂ ಜಾಹೀರಾತಾಗಲ್ಲ
ಕೋಲ್ಕತಾ: ಸಂದೇಶ, ಕಮೆಂಟ್, ಫೋಟೋ, ಬ್ಲಾಗ್, ಸಾಮಾಜಿಕ ತಾಣಗಳಲ್ಲಿರುವ ವಿಡಿಯೋಗಳನ್ನು ರಾಜಕೀಯ ಜಾಹೀರಾತುಗಳೆಂದು ಪರಿಗಣಿಸಲಾಗದು ಎಂದು ಚುನಾವಣಾ ಆಯೋಗ ಹೇಳಿದೆ. ಹಾಗಾಗಿ ಇವುಗಳಿಗಾಗಿ ಯಾವುದೇ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ ಎಂದೂ ತಿಳಿಸಿದೆ. ಇವುಗಳು ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳಿಗೆ ಸಂಬಂಧಿಸಿದ್ದರೂ ಅವುಗಳನ್ನು ಜಾಹೀರಾತು ಎನ್ನುವಂತಿಲ್ಲ ಎಂದಿದೆ.
ಎಸ್‌ಐಟಿ ರಚನೆ ಅರ್ಜಿ ವಜಾ
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ನಿರಾಳರಾಗಿದ್ದಾರೆ. ಗೋಧ್ರೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎಸ್‌ಐಟಿಯನ್ನು ಪುನರ್ ರಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಗುಜರಾತ್ ಗಲಭೆಗೆ ಸಂಬಂಧಿಸಿ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸಿದ್ದ ಎಸ್‌ಐಟಿ ತನಿಖೆಗೆ ಸಂಬಂಧಿಸಿ ತೃಪ್ತಿ ವ್ಯಕ್ತಪಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


